ಕುದುರೆ ಏರಿ ಬಂದ ವಧು, ನಡೆದಿದ್ದು ಕನ್ಯಾದಾನವಲ್ಲ, ವರ್ದಾನ, ಕಣ್ಣೀರಿಡುತ್ತಾ ಅತ್ತೆ ಮನೆಗೆ ಹೋದ ವರ, ಇದೇನಿದು ವಿಚಿತ್ರ ವಿವಾಹ!

ಸುರ್ಗುಜಾದಲ್ಲಿ ನಡೆದ ಒಂದು ವಿಶಿಷ್ಟ ವಿವಾಹದ ಕುರಿತು ಈ ಲೇಖನ ವಿವರಿಸುತ್ತದೆ. ಇಲ್ಲಿ ವಧು ಕುದುರೆ ಏರಿ ಬಂದಳು. ಕನ್ಯಾದಾನದ ಬದಲು 'ವರ್ದಾನ' ಸಮಾರಂಭದಲ್ಲಿ ವರನನ್ನು ವಧುವಿನ ಮನೆಗೆ ದಾನವಾಗಿ ನೀಡಲಾಯಿತು. ವರ ಕಣ್ಣೀರಿಡುತ್ತಾ ಅತ್ತೆ ಮನೆಗೆ ಹೋದನು. ವಧುವಿನ ತಂದೆ ತಮ್ಮ ಕೃಷಿ ನೋಡಿಕೊಳ್ಳಲು ಮಗನನ್ನು ಬಯಸಿದ್ದರಿಂದ, ಈ ಮದುವೆಯು ಸಾಮಾಜಿಕ ರೂಢಿಗಳನ್ನು ಪ್ರಶ್ನಿಸಿ, ಲಿಂಗ ಸಮಾನತೆಯನ್ನು ಸಾರಿದೆ.

ಕುದುರೆ ಏರಿ ಬಂದ ವಧು, ನಡೆದಿದ್ದು ಕನ್ಯಾದಾನವಲ್ಲ, ವರ್ದಾನ, ಕಣ್ಣೀರಿಡುತ್ತಾ ಅತ್ತೆ ಮನೆಗೆ ಹೋದ ವರ, ಇದೇನಿದು ವಿಚಿತ್ರ ವಿವಾಹ!
ಮದುವೆ
Image Credit source: Google Gemini

Updated on: Apr 17, 2026 | 10:17 AM

ಸುರ್ಗುಜಾ , ಏಪ್ರಿಲ್ 17: ಸಾಮಾನ್ಯವಾಗಿ ಮದುವೆ(Marriage) ಅಂದಮೇಲೆ ವರ ಕುದುರೆ ಏರಿ ಬರುತ್ತಾನೆ, ಮದುವೆಯ ನಂತರ ವಧು ಕಣ್ಣೀರಿಡುತ್ತಾ ತನ್ನ ತಂದೆ-ತಾಯಿಯನ್ನು ಬಿಟ್ಟು ಗಂಡನ ಮನೆಗೆ ಹೋಗುತ್ತಾಳೆ. ಆದರೆ ಸುಲ್ಪಾಗಾ ಗ್ರಾಮದಲ್ಲಿ ನಡೆದ ಈ ಮದುವೆಯಲ್ಲಿ ಎಲ್ಲವೂ ಉಲ್ಟಾ, ಇಲ್ಲಿ ವಧುವೇ ದಿಬ್ಬಣದೊಂದಿಗೆ ವರನ ಮನೆಗೆ ಬಂದಿದ್ದಾಳೆ, ಮದುವೆಯ ನಂತರ ವರನೇ ಅಳುತ್ತಾ ತನ್ನ ಅತ್ತೆಯ ಮನೆಗೆ (ವಧುವಿನ ಮನೆಗೆ) ಪ್ರವೇಶ ಮಾಡಿದ್ದಾನೆ.

ಅಳಿಯನಲ್ಲ, ಮಗ ಬೇಕು: ತಂದೆಯ ಛಲ
ವಧು ದೇವಮುನಿ ಎಕ್ಕಾ ಅವರ ತಂದೆ ಮೋಹನ್ ಎಕ್ಕಾ ಅವರು ವೃತ್ತಿಯಲ್ಲಿ ಒಬ್ಬ ಸಾಮಾನ್ಯ ರೈತ. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಆದರೆ ಮಗನಿಲ್ಲ. ನನ್ನ ಕಾಲಾನಂತರ ನನ್ನ ಹೆಣ್ಣು ಮಕ್ಕಳ ಗತಿಯೇನು? ನನ್ನ ಕೃಷಿಯನ್ನು ಯಾರು ನೋಡಿಕೊಳ್ಳುತ್ತಾರೆ?” ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆಗ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು. ತನ್ನ ಅಳಿಯನನ್ನು ಅಳಿಯನಂತೆ ನೋಡುವ ಬದಲು, ಮಗನಂತೆ ಮನೆಗೆ ಬರಮಾಡಿಕೊಳ್ಳಲು ನಿರ್ಧರಿಸಿದರು.

ವರ ಬಿಲಾಸಸ್ ಬರ್ವಾ ಅವರ ಕುಟುಂಬ ಕೂಡ ಈ ಮಾತಿಗೆ ಒಪ್ಪಿಗೆ ನೀಡಿತು. ಸಂಪ್ರದಾಯದ ಹಾದಿಯನ್ನೇ ಬದಲಿಸಿದ ಈ ವಿವಾಹಕ್ಕೆ ‘ಮಾಸಿ’ ಪದ್ಧತಿಯಂತೆ ಮದುವೆ ನಡೆಯಿತು.

‘ಕನ್ಯಾದಾನ’ ಇಲ್ಲ, ಇಲ್ಲಿ ನಡೆದದ್ದು ವರ್ದಾನ
ಈ ಮದುವೆಯ ಅತ್ಯಂತ ಸುಂದರ ಕ್ಷಣವೆಂದರೆ ಇಲ್ಲಿ ಕನ್ಯಾದಾನ ನಡೆಯಲಿಲ್ಲ. ಬದಲಾಗಿ, ವರನ ಪೋಷಕರು ತಮ್ಮ ಮಗನನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರಿಸುವ ವರ್ದಾನ ಸಮಾರಂಭ ನಡೆಯಿತು. ಅಂದರೆ, ಮಗನನ್ನು ವಧುವಿನ ಮನೆಗೆ ದಾನವಾಗಿ ನೀಡಲಾಯಿತು.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ವಿವಾಹದ ವಿಧಿವಿಧಾನ ಮುಗಿದು ಬಿಲಾಸಸ್ ತನ್ನ ಮನೆಯನ್ನು ಬಿಟ್ಟು ಹೆಂಡತಿಯ ಮನೆಗೆ ಹೊರಡುವಾಗ, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪಡುವ ನೋವು ಆತನ ಕಣ್ಣಾಲಿಗಳಲ್ಲಿ ಕಂಡಿತು. ಇಡೀ ಗ್ರಾಮಸ್ಥರು ವರನ ಕಣ್ಣೀರು ಕಂಡು ಭಾವುಕರಾದರು.

ವರದಕ್ಷಿಣೆ ಮುಕ್ತ, ಸರಳ ವಿವಾಹ
ಈ ವಿವಾಹದಲ್ಲಿ ವರದಕ್ಷಿಣೆಯ ಹಾವಳಿ ಇರಲಿಲ್ಲ. ವಧುವಿನ ಕಡೆಯವರೇ ಮೆರವಣಿಗೆಯನ್ನು ವರನ ಮನೆಗೆ ಕರೆತಂದಿದ್ದರು. ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು, ಒಬ್ಬ ಹುಡುಗಿ ಮೆರವಣಿಗೆ ತಂದಿರುವುದನ್ನು ನಾವೇ ಮೊದಲ ಬಾರಿ ನೋಡುತ್ತಿರುವುದು ಎಂದು ಅಚ್ಚರಿ ವ್ಯಕ್ತಪಡಿಸಿದರು. ವರನ ಕಡೆಯವರು ಕೂಡ ಈ ಹೊಸ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.

ಸಮಾಜಕ್ಕೆ ಹೊಸ ದಿಕ್ಸೂಚಿ
ಗ್ರಾಮಸ್ಥರಾದ ಸಾಧು ರಾಮ್ ಮತ್ತು ಮಹೇಶ್ ತಿರ್ಕಿ ಹೇಳುವಂತೆ, ಈ ಮದುವೆಯು ಕೇವಲ ಒಂದು ಕುಟುಂಬದ ನಿರ್ಧಾರವಲ್ಲ, ಇದು ಇಡೀ ಸಮಾಜಕ್ಕೆ ಒಂದು ಪಾಠ. ಗಂಡು ಮಕ್ಕಳಿಲ್ಲದ ತಂದೆ-ತಾಯಿಯರಿಗೆ ಈ ಮದುವೆ ಒಂದು ಭರವಸೆ ನೀಡಿದೆ. ಹೆಣ್ಣು ಮಕ್ಕಳು ಕೂಡ ಹೆತ್ತವರನ್ನು ಮಗನಂತೆ ಸಾಕಿ ಸಲಹಬಲ್ಲರು ಎಂಬ ಸತ್ಯ ಇಲ್ಲಿ ಸಾಬೀತಾಗಿದೆ.

ಪ್ರೀತಿ ಮತ್ತು ಸಮಾನತೆ ಇದ್ದರೆ ಸಂಪ್ರದಾಯಗಳು ಕೂಡ ಬದಲಾಗಬಲ್ಲವು ಎಂಬುದಕ್ಕೆ ಸುಲ್ಪಾಗಾ ಗ್ರಾಮದ ಈ ವಿವಾಹವೇ ಸಾಕ್ಷಿ. ಇಂದು ಆ ರೈತ ಮೋಹನ್ ಎಕ್ಕಾ ಅವರಿಗೆ ಅಳಿಯ ಸಿಕ್ಕಿಲ್ಲ, ಬದಲಿಗೆ ಅವರ ಕೃಷಿ ಮತ್ತು ಕುಟುಂಬವನ್ನು ಕಾಪಾಡಲು ಒಬ್ಬ ಮಗ ಸಿಕ್ಕಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us