ಚುನಾವಣಾ ಆಯುಕ್ತರ ನೇಮಕಾತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ
ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಖಾರವಾಗಿ ಉತ್ತರಿಸಿದೆ. ಲೋಕಪಾಲ್ ಹಾಗೂ ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಗಳಲ್ಲಿ ಸಿಜೆಐ ಭಾಗವಾಗಿದ್ದಾರೆ. ಹಾಗಿರುವಾಗ, ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಹುದ್ದೆಗಳಾದ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯಿಂದ ಸಿಜೆಐ ಅವರನ್ನು ಹೊರಗಿಡಲು ಸಂಸತ್ತು ಕಾನೂನು ರೂಪಿಸುವಾಗ ನಿರ್ಧರಿಸಿದ್ದೇಕೆ ಎಂದು ಸುಪ್ರೀಂ ಕೋರ್ಟ್ ಸವಾಲೆಸೆಯಿತು.

ನವದೆಹಲಿ, ಜುಲೈ 31: ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ, ಕೇಂದ್ರ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯ ಪ್ರಸ್ತುತ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನಮಂತ್ರಿಯವರ ಪಾತ್ರವನ್ನು ಶಂಕಿಸಲು ಯಾವುದೇ ಕಾರಣವಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.
“ಪ್ರಧಾನಮಂತ್ರಿಯವರ ಹುದ್ದೆಗೆ ತನ್ನದೇ ಆದ ಸಾಂವಿಧಾನಿಕ ಪವಿತ್ರತೆ ಇದೆ. ಒಂದು ವೇಳೆ ಪ್ರಧಾನಿಯವರ ನಿರ್ಧಾರವನ್ನೇ ನಂಬಲು ಸಾಧ್ಯವಿಲ್ಲ ಮತ್ತು ಅದನ್ನು ದುರುದ್ದೇಶಪೂರಿತ ಎಂದು ಪರಿಗಣಿಸುವುದಾದರೆ, ಅವರು ತಮ್ಮ ಸಚಿವ ಸಂಪುಟವನ್ನು ಆಯ್ಕೆ ಮಾಡುವಾಗಲೂ ಯಾವುದೋ ಮಾಜಿ ನ್ಯಾಯಮೂರ್ತಿ ಅಥವಾ ಹೊರಗಿನವರನ್ನು ಸಂಪರ್ಕಿಸಬೇಕು ಎಂಬ ನಿಯಮವನ್ನೂ ರೂಪಿಸಬೇಕಾಗುತ್ತದೆ ಅಲ್ಲವೇ?” ಎಂದು ತುಷಾರ್ ಮೆಹ್ತಾ ಕೋರ್ಟ್‌ಗೆ ಪ್ರಶ್ನಿಸಿದರು.
ಕಾರ್ಯಾಂಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತದೆ ಎಂಬ ಪೂರ್ವಾಗ್ರಹ ಪೀಡಿತ ಕಲ್ಪನೆಯೊಂದಿಗೆ ಸಾಂವಿಧಾನಿಕ ನ್ಯಾಯಾಲಯಗಳು ವ್ಯವಹರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ವಾದಿಸಿದೆ. ಆಯ್ಕೆ ಸಮಿತಿಯನ್ನು ಪ್ರಶ್ನಿಸುವುದು ಸಂಸತ್ತಿನ ಶಾಸಕಾಂಗ ವಿವೇಚನೆ ಮತ್ತು ಸಾಂಸ್ಥಿಕ ನಂಬಿಕೆ ಎರಡನ್ನೂ ಅನುಮಾನಿಸಿದಂತೆ ಎಂದು ಪ್ರತಿಪಾದಿಸಿದೆ.
ಇದನ್ನೂ ಓದಿ: ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್
2023ರ ಈ ಕಾಯ್ದೆಯು ಆಯ್ಕೆ ಸಮಿತಿಯಲ್ಲಿದ್ದ ಭಾರತದ ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕೇಂದ್ರ ಸಂಪುಟ ಸಚಿವರೊಬ್ಬರನ್ನು ಸೇರಿಸುವ ಮೂಲಕ, ನೇಮಕಾತಿ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಮೂರನೇ ಎರಡರಷ್ಟು ಸ್ಪಷ್ಟ ಬಹುಮತವನ್ನು ನೀಡಿದೆ.
2023ರ ಸುಪ್ರೀಂ ಕೋರ್ಟ್ ತೀರ್ಪು ಕೇವಲ ಒಂದು ಮಧ್ಯಂತರ ವ್ಯವಸ್ಥೆಯಾಗಿತ್ತು. ಮುಖ್ಯ ನ್ಯಾಯಮೂರ್ತಿಗಳು ಆಯ್ಕೆ ಸಮಿತಿಯಲ್ಲಿ ಇರಲೇಬೇಕು ಎಂಬುದು ಕಡ್ಡಾಯ ಸಾಂವಿಧಾನಿಕ ನಿಯಮವಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.
ಇದನ್ನೂ ಓದಿ: ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠದ ಮುಂದೆ ಈ ವಾದ ಮಂಡಿಸಲಾಯಿತು. ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023’ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಏನಿದು ಪ್ರಕರಣ?:
2023ರ ಕಾಯ್ದೆಯಡಿ, ಆಯ್ಕೆ ಸಮಿತಿಯು ಪ್ರಧಾನಮಂತ್ರಿ, ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುತ್ತದೆ. ಈ ಪ್ಯಾನೆಲ್‌ನಿಂದ ಸಿಜೆಐ ಅವರನ್ನು ಹೊರಗಿಟ್ಟಿರುವುದು ನೇಮಕಾತಿ ಪ್ರಕ್ರಿಯೆಯ ಸ್ವಾಯತ್ತತೆಯನ್ನು ಧಕ್ಕೆಗೊಳಿಸುತ್ತದೆ ಎಂದು ಪಿಐಎಲ್‌ಗಳಲ್ಲಿ ಆಕ್ಷೇಪಿಸಲಾಗಿದೆ. 2023ರ ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಒಳಗೊಂಡ ಸಮಿತಿಯು ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ಆದೇಶಿಸಿತ್ತು. ಆದರೆ ಡಿಸೆಂಬರ್ 2023ರಲ್ಲಿ ಸಂಸತ್ತು ಹೊಸ ಕಾನೂನು ತಂದು ಸಿಜೆಐ ಅವರನ್ನು ಸಮಿತಿಯಿಂದ ಹೊರಗಿಟ್ಟಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




