
ನವದೆಹಲಿ, ಅಕ್ಟೋಬರ್ 14: ಅಮೆರಿಕ ಮತ್ತು ಭಾರತ ನಡುವಿನ ಕಾರ್ಯತಂತ್ರದ ಪಾಲುದಾರಿಕೆ, ಜಾಗತಿಕ ರಾಜತಾಂತ್ರಿಕ ಸಮೀಕರಣಗಳು ಹಾಗೂ ಇಂಧನ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಅಕ್ಟೋಬರ್ 17 ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದು, 22 ರವರೆಗೆ ಇರಲಿದ್ದಾರೆ. ತಮ್ಮ ಈ ಪ್ರವಾಸದಲ್ಲಿ ಅವರು ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಗುಜರಾತ್ನ ಕೈಗಾರಿಕಾ ಕೇಂದ್ರ ಜಾಮ್ನಗರಕ್ಕೆ ತೆರಳಿ ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಮುಖ ಉದ್ಯಮ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಮೇ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ, ರೂಬಿಯೊ ಅವರ ಎರಡನೇ ಪ್ರಮುಖ ಭಾರತ ಭೇಟಿ ಇದಾಗಿದೆ. ವಾಷಿಂಗ್ಟನ್ನ ಅಧಿಕೃತ ಪ್ರಕಟಣೆಯಂತೆ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿ, ಇಂಡೋ-ಪೆಸಿಫಿಕ್ ವಲಯದ ಪ್ರಾದೇಶಿಕ ಭದ್ರತೆ ಹಾಗೂ ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
ವಾಣಿಜ್ಯ ಹೂಡಿಕೆ ವಿಸ್ತರಣೆ: ಭಾರತ ಮತ್ತು ಅಮೆರಿಕದ ನಡುವಿನ ಆರ್ಥಿಕ ಬಾಂಧವ್ಯವನ್ನು ವಿಸ್ತರಿಸಲು ಹಾಗೂ ಉಭಯ ದೇಶಗಳಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಭಾರತೀಯ ಉದ್ಯಮ ದಿಗ್ಗಜರನ್ನು ರೂಬಿಯೊ ಭೇಟಿಯಾಗಲಿದ್ದಾರೆ.
ಇಂಧನ ಪಾಲುದಾರಿಕೆ: ಜಾಗತಿಕ ಕಚ್ಚಾ ತೈಲ ಪೂರೈಕೆ, ಪೆಟ್ರೋಕೆಮಿಕಲ್ ಸಹಕಾರ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳನ್ನು ರೂಪಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.
ಮಧ್ಯ ಏಷ್ಯಾ ನಾಯಕರ ಭೇಟಿ: ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯದ ಸಚಿವರೊಂದಿಗೆ ಅವರು ಸಮಾಲೋಚನೆ ನಡೆಸಲಿದ್ದಾರೆ. ಅಮೆರಿಕ ಮತ್ತು ಮಧ್ಯ ಏಷ್ಯಾದ ನಡುವೆ ವಾಣಿಜ್ಯ ಪಾಲುದಾರಿಕೆಯನ್ನು ವಿಸ್ತರಿಸಲು 200ಕ್ಕೂ ಹೆಚ್ಚು ಅಮೆರಿಕನ್ ಉದ್ಯಮಿಗಳ ಬೃಹತ್ ವಾಣಿಜ್ಯ ನಿಯೋಗವೂ ರೂಬಿಯೊ ಜೊತೆಗಿರಲಿದೆ.
ಮತ್ತಷ್ಟು ಓದಿ: ಅಮೆರಿಕದ ಪರ್ಮ್ ನಿರ್ಬಂಧಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ; ಈ ಕ್ರಮದಿಂದ ಎರಡೂ ದೇಶಕ್ಕೆ ಒಳಿತಲ್ಲ- ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆ
ತೈಲ ಮಾರುಕಟ್ಟೆ ಸ್ಥಿರತೆ: ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣ ಮತ್ತು ತೈಲ ನೆಲೆಗಳ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ತೀವ್ರಗೊಳಿಸಿರುವ ಬೆನ್ನಲ್ಲೇ, ಜಾಗತಿಕ ಇಂಧನ ಪೂರೈಕೆ ಸರಪಳಿಯನ್ನು ಸುರಕ್ಷಿತವಾಗಿರಿಸಲು ಅಮೆರಿಕವು ಭಾರತದಂತಹ ಪ್ರಮುಖ ಸಂಸ್ಕರಣಾ ಪಾಲುದಾರರೊಂದಿಗೆ ನಿಕಟ ಸಹಕಾರವನ್ನು ಬಯಸುತ್ತಿದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇತ್ತೀಚೆಗಷ್ಟೇ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳು ಅಂತಿಮ ಘಟ್ಟವನ್ನು ಸಮೀಪಿಸುತ್ತಿವೆ ಎಂದು ತಿಳಿಸಿದ್ದು, ರೂಬಿಯೊ ಅವರ ಈ ಭೇಟಿಯು ಮುಂಬರುವ ಒಪ್ಪಂದಗಳಿಗೆ ಮಹತ್ವದ ವೇದಿಕೆಯಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ