ತೆಲಂಗಾಣ: ತಬ್ಲಿಘಿ ಜಮಾತ್ ಸಮಾವೇಶಕ್ಕೆ ಸರ್ಕಾರದ ಹಣ; ಸಭೆ ನಿಲ್ಲಿಸಲು ವಿಎಚ್‌ಪಿ, ಬಜರಂಗದಳ ಕರೆ
ಡಿಸೆಂಬರ್ 13 ರಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸರ್ಕಾರಿ ಆದೇಶವನ್ನು ಹಂಚಿಕೊಂಡ ಬಂಡಿ ಸಂಜಯ್, 2020 ರಲ್ಲಿ ಕೋವಿಡ್-19 ಹರಡವಿಕೆಗೆ ತಬ್ಲಿಘಿ ಜಮಾತ್ ಅನ್ನು ದೂಷಿಸಿದ್ದಾರೆ.ರಾಜ್ಯವು ದಿವಾಳಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ, ಆದರೆ ಭಯೋತ್ಪಾದನೆ ಮತ್ತು ಇಸ್ಲಾಂನ ಹರಡುವಿಕೆಯನ್ನು ಉತ್ತೇಜಿಸುವ ತಬ್ಲಿಘಿ ಜಮಾತ್ ಆಯೋಜಿಸಿದ ಕಾರ್ಯಕ್ರಮಕ್ಕೆ ಹಣ ನೀಡುತ್ತಿದೆ ಎಂದು ಕರೀಂನಗರ ಸಂಸದರು ಆರೋಪಿಸಿದ್ದಾರೆ.
ಹೈದರಾಬಾದ್ ಡಿಸೆಂಬರ್ 22: ತೆಲಂಗಾಣದ ವಿಕಾರಾಬಾದ್ (Vikarabad) ಜಿಲ್ಲೆಯಲ್ಲಿ ಜನವರಿ 6-8 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ತಬ್ಲಿಘಿ ಜಮಾತ್ ಸಮಾವೇಶವನ್ನು (Tablighi Jamaat congregation) ಕಾನೂನುಬಾಹಿರ ಎಂದು ಹೇಳಿರುವ ರಾಜ್ಯದ ವಿಶ್ವ ಹಿಂದೂ ಪರಿಷತ್ (VHP) ಈ ಸಭೆಯನ್ನು ನಿಲ್ಲಿಸಲು ಕರೆ ನೀಡಿದೆ. ತೆಲಂಗಾಣ ಸರ್ಕಾರವು ಡಿಸೆಂಬರ್ 3 ರಂದು ಅಧಿಕಾರಕ್ಕೆ ಬಂದ ನಂತರ, ಮುಂಬರುವ ಮೂರು ದಿನಗಳ ತಬ್ಲಿಘಿ ಜಮಾತ್ ಸಭೆಗಾಗಿ 2,45,93,847 ರೂಗಳ ಬಜೆಟ್ ಅನ್ನು ಅನುಮೋದಿಸಿತು.
ಡಿಸೆಂಬರ್ 21, ಗುರುವಾರದಂದು ವಿಎಚ್‌ಪಿ ತಮ್ಮ ಹೇಳಿಕೆಯಲ್ಲಿ, ಬಲವಂತದ ಧಾರ್ಮಿಕ ಮತಾಂತರ, ಲವ್ ಜಿಹಾದ್ ಮತ್ತು ಸಮಾಜದಲ್ಲಿ ವಿಧ್ವಂಸಕತೆಯನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದು ನಿಧಿಯನ್ನು ಮಂಜೂರು ಮಾಡುವ ರಾಜ್ಯ ಸರ್ಕಾರದ “ದೇಶದ್ರೋಹಿ ಕೃತ್ಯ” ವನ್ನು ಟೀಕಿಸಿದೆ.
ವಿಎಚ್‌ಪಿ ರಾಜ್ಯಾಧ್ಯಕ್ಷ ಕಾರ್ಯದರ್ಶಿಗಳಾದ ಸುರೇಂದರ್ ರೆಡ್ಡಿ, ಪಂಡರಿನಾಥ್, ಪ್ರಚಾರ ಪ್ರಮುಖ ಪಗುಡಕುಲ ಬಾಲಸ್ವಾಮಿ ಹಾಗೂ ಬಜರಂಗದಳ ರಾಜ್ಯ ಸಂಚಾಲಕ ಶಿವ ರಾಮುಲು ಗುರುವಾರ ಹೇಳಿಕೆ ನೀಡಿದ್ದಾರೆ. ”ಪೊಲೀಸ್ ಅಧಿಕಾರಿಗಳು ಸ್ಪಂದಿಸಿ ಸಭೆಯ ಅನುಮತಿಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ದೊಡ್ಡ ಮಟ್ಟದಲ್ಲಿ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ವಿಎಚ್‌ಪಿ ಎಚ್ಚರಿಸಿದೆ.
ಕಾರ್ಯಕ್ರಮಕ್ಕೆ ರೇವಂತ್ ರೆಡ್ಡಿ ಸಹಾನುಭೂತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ವಿಎಚ್‌ಪಿ, ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ವಿಸ್ತರಿಸುತ್ತಿವೆ ಎಂದು ಆರೋಪಿಸಿದೆ. ಭಯೋತ್ಪಾದನೆ, ಇಸ್ಲಾಂ ಧರ್ಮ ಪ್ರಚಾರ, ಮತಾಂತರದಂತಹ ಕಾರ್ಯಕ್ರಮಗಳಿಗೆ ತರಬೇತಿ ನೀಡುವ ತಬ್ಲೀಘಿ ಜಮಾತ್ ಸಂಘಟನೆಗೆ ರಾಜ್ಯ ಸರ್ಕಾರ ಮೂರು ಕೋಟಿ ರೂಪಾಯಿ ಮಂಜೂರು ಮಾಡುವುದು ಸೂಕ್ತವಲ್ಲ ಎಂದು ವಿಎಚ್‌ಪಿ ಮತ್ತು ಬಜರಂಗದಳ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಅನುದಾನದ ವಿರುದ್ಧ ರಾಜ್ಯಪಾಲರು, ಹೈಕೋರ್ಟ್, ಡಿಜಿಪಿ ಅವರನ್ನು ಭೇಟಿ ಮಾಡುವುದಾಗಿ ವಿಎಚ್‌ಪಿ ಮುಖಂಡರು, ರಾಜ್ಯಾಧ್ಯಕ್ಷ ಕಾರ್ಯದರ್ಶಿಗಳಾದ ಸುರೇಂದರ್ ರೆಡ್ಡಿ, ಪಂಡರಿನಾಥ್, ಪ್ರಚಾರ ಪ್ರಮಿಕ ಪಗುಡಕುಲ ಬಾಲಸ್ವಾಮಿ ತಿಳಿಸಿದ್ದಾರೆ.
ತಬ್ಲಿಘಿ ಜಮಾತ್‌ನ ಚಟುವಟಿಕೆಗಳನ್ನು ನಿಷೇಧಿಸುವ ಕಾನೂನುಗಳನ್ನು ಮುಸ್ಲಿಂ ರಾಷ್ಟ್ರಗಳು ಮಾಡುತ್ತಿವೆ. ಆದರೆ ಕಾಂಗ್ರೆಸ್ ಸರ್ಕಾರವು ಭಾರತದಲ್ಲಿ ಇಸ್ಲಾಂ ಧರ್ಮದ ಹರಡುವಿಕೆಗೆ ಹಣವನ್ನು ಮಂಜೂರು ಮಾಡುವುದರ ಉದ್ದೇಶವೇನು ಎಂದು ವಿಎಚ್‌ಪಿ ಕೇಳಿದ್ದು, ಕಾಂಗ್ರೆಸ್ ಅನ್ನು “ಹಿಂದೂ ವಿರೋಧಿ ಕ್ರಮ” ಎಂದು ಆರೋಪಿಸಿದೆ. ಕಾಂಗ್ರೆಸ್ ಭಾರತದ ಸಂಪ್ರದಾಯ ಮತ್ತು ಅಸ್ತಿತ್ವದ ಮೇಲೆ ದಾಳಿ ಮಾಡುವ ಭಯೋತ್ಪಾದಕ ಗುಂಪುಗಳನ್ನು ಪೋಷಿಸಿದ್ದಾರೆ ಎಂದು ವಿಹಿಂಪ ಹೇಳಿದೆ. ಕಾಂಗ್ರೆಸ್ ರಕ್ತದಲ್ಲಿ ಮುಸ್ಲಿಂ ಡಿಎನ್‌ಎ ಅಡಗಿದೆ. ಅದು ಇಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಎಚ್‌ಪಿ ಹೇಳಿದೆ.
ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಡಿಸೆಂಬರ್ 21 ರಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಜನವರಿ 6 ರಿಂದ 8 ರವರೆಗೆ ವಿಕಾರಾಬಾದ್ ಜಿಲ್ಲೆಯ ಪರಿಗಿ ಮಂಡಲದಲ್ಲಿ ನಡೆಯಲಿರುವ ತಬ್ಲಿಘಿ ಜಮಾತ್ ಸಮಾವೇಶಕ್ಕೆ ಧನಸಹಾಯ ನೀಡಿರುವುದನ್ನು ಟೀಕಿಸಿದ್ದು ತೆಲಂಗಾಣ ಸರ್ಕಾರ ತನ್ನ ನಿಧಿಯನ್ನು ರದ್ದುಗೊಳಿಸಬೇಕು ಮತ್ತು ಸಭೆಗೆ 2.45 ಕೋಟಿ ಮಂಜೂರು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಭಾರತೀಯ ಸಮಾಜ ಯಾವುದೇ ಧಾರ್ಮಿಕ ತಾರತಮ್ಯವನ್ನು ಹೊಂದಿಲ್ಲ: ಪ್ರಧಾನಿ ಮೋದಿ
ಡಿಸೆಂಬರ್ 13 ರಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸರ್ಕಾರಿ ಆದೇಶವನ್ನು ಹಂಚಿಕೊಂಡ ಬಂಡಿ ಸಂಜಯ್, 2020 ರಲ್ಲಿ ಕೋವಿಡ್-19 ಹರಡವಿಕೆಗೆ ತಬ್ಲಿಘಿ ಜಮಾತ್ ಅನ್ನು ದೂಷಿಸಿದ್ದಾರೆ. ಏಪ್ರಿಲ್ 2020 ರಲ್ಲಿ, ಸಾಂಕ್ರಾಮಿಕ ರೋಗಗಳ ಕಾಯಿದೆ, 1897 ಮತ್ತು ವಿದೇಶಿಯರ ಕಾಯಿದೆ, 1946 ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅವಿಧೇಯತೆ), 269 ಮತ್ತು 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಸಾಧ್ಯತೆಯ ಕಾಯಿದೆಗಳು) ಅಡಿಯಲ್ಲಿ ಹೈದರಾಬಾದ್ ಪೊಲೀಸರು ಎಂಟು ವಿದೇಶಿಯರನ್ನು ಒಳಗೊಂಡಂತೆ ಜಮಾತ್‌ನ 11 ಸದಸ್ಯರನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿ ಕೋವಿಡ್-19 ಹರಡಲು ತಬ್ಲಿಘಿ ಜಮಾತ್ ಕಾರಣ ಎಂದು ಬಿಜೆಪಿ ಪದೇ ಪದೇ ಆರೋಪಿಸಿದೆ.
ರಾಜ್ಯವು ದಿವಾಳಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ, ಆದರೆ ಭಯೋತ್ಪಾದನೆ ಮತ್ತು ಇಸ್ಲಾಂನ ಹರಡುವಿಕೆಯನ್ನು ಉತ್ತೇಜಿಸುವ ತಬ್ಲಿಘಿ ಜಮಾತ್ ಆಯೋಜಿಸಿದ ಕಾರ್ಯಕ್ರಮಕ್ಕೆ ಹಣ ನೀಡುತ್ತಿದೆ ಎಂದು ಕರೀಂನಗರ ಸಂಸದರು ಆರೋಪಿಸಿದ್ದಾರೆ. ಯಾವ ಆಧಾರದ ಮೇಲೆ ಹಣ ಮಂಜೂರಾಗಿದೆ ಎಂದು ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಪ್ರಶ್ನಿಸಿದ್ದು, ಸಿಎಂ ರೇವಂತ್ ರೆಡ್ಡಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ. ತಬ್ಲಿಘಿ ಜಮಾತ್‌ನ ಹೆಸರು ಹಲವಾರು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್ ತನ್ನ ನಿಜವಾದ ಮುಖವನ್ನು ತೋರಿಸಿದೆ. 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರದಿದ್ದರೆ, ಕಾಂಗ್ರೆಸ್ ಪ್ರತಿ ಜಿಲ್ಲೆಯನ್ನು ತಬ್ಲಿಘಿ ಜಮಾತ್ ಕೈಗೆ ನೀಡುತ್ತದೆ ಮತ್ತು ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ