ವಿಜಯ್ ಮಲ್ಯ ನಮ್ಮ ಸಂಪರ್ಕದಲ್ಲಿಲ್ಲ, ಈ ಕೇಸ್​ನಿಂದ ಬಿಡುಗಡೆ ನೀಡಿ; ವಕೀಲರಿಂದ ಸುಪ್ರೀಂ ಕೋರ್ಟ್​ಗೆ ಮನವಿ

| Updated By: ಸುಷ್ಮಾ ಚಕ್ರೆ

Updated on: Nov 04, 2022 | 10:15 AM

ಉದ್ಯಮಿ ವಿಜಯ್ ಮಲ್ಯ ಅಜ್ಞಾತವಾಗಿದ್ದಾರೆ. ನಮ್ಮ ಜೊತೆಗೆ ಯಾವುದೇ ಸಂವಹನಕ್ಕೆ ಪ್ರತಿಕ್ರಿಯಿಸದ ಕಾರಣ ಈ ಪ್ರಕರಣದ ವಾದದಿಂದ ನಮ್ಮನ್ನು ಮುಕ್ತಗೊಳಿಸಬೇಕೆಂದು ವಿಜಯ್ ಮಲ್ಯ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ವಿಜಯ್ ಮಲ್ಯ ನಮ್ಮ ಸಂಪರ್ಕದಲ್ಲಿಲ್ಲ, ಈ ಕೇಸ್​ನಿಂದ ಬಿಡುಗಡೆ ನೀಡಿ; ವಕೀಲರಿಂದ ಸುಪ್ರೀಂ ಕೋರ್ಟ್​ಗೆ ಮನವಿ
ವಿಜಯ್ ಮಲ್ಯ
Image Credit source: India Today
Follow us on

ನವದೆಹಲಿ: ಭಾರತದ ಬ್ಯಾಂಕ್​ಗಳಿಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ಹಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ನಮ್ಮ ಜೊತೆ ಸಹಕರಿಸುತ್ತಿಲ್ಲ. ಹೀಗಾಗಿ, ಅವರಿಗೆ ಯಾವ ಸೂಚನೆಗಳನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಜಯ್ ಮಲ್ಯ ಅವರ ಪರ ವಕಾಲತ್ತು ವಹಿಸಲು ಸಾಧ್ಯವಿಲ್ಲ ಎಂದು ವಿಜಯ್ ಮಲ್ಯ ಪರ ವಕೀಲರು ಸುಪ್ರೀಂ ಕೋರ್ಟ್​ (Supreme Court) ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಹಲವು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರು ಅಜ್ಞಾತವಾಗಿದ್ದಾರೆ. ನಮ್ಮ ಜೊತೆಗೆ ಯಾವುದೇ ಸಂವಹನಕ್ಕೆ ಪ್ರತಿಕ್ರಿಯಿಸದ ಕಾರಣ ಈ ಪ್ರಕರಣದ ವಾದದಿಂದ ನಮ್ಮನ್ನು ಮುಕ್ತಗೊಳಿಸಬೇಕೆಂದು ವಿಜಯ್ ಮಲ್ಯ ಪರ ವಕೀಲರು ಗುರುವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಜಯ್ ಮಲ್ಯ ಪರ ವಕೀಲರಾದ ಇಸಿ ಅಗರ್‌ವಾಲಾ ಅವರು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ನಮಗೆ ಇರುವ ಮಾಹಿತಿಯ ಪ್ರಕಾರ, ವಿಜಯ್ ಮಲ್ಯ ಇಂಗ್ಲೆಂಡ್​​ನಲ್ಲಿ ನೆಲೆಸಿದ್ದಾರೆ. ಆದರೆ ಅವರು ಈಗ ನನ್ನೊಂದಿಗೆ ಸಂವಹನ ನಡೆಸುತ್ತಿಲ್ಲ. ನನ್ನ ಬಳಿ ಅವರ ಇಮೇಲ್ ವಿಳಾಸವಿದೆ. ಆದರೆ, ಅವರು ನನಗೆ ಅವರ ಕೇಸಿನ ಬಗ್ಗೆ ಯಾವುದೇ ಸೂಚನೆಗಳನ್ನೂ ನೀಡುತ್ತಿಲ್ಲ. ಅವರನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಮತ್ತು ಅವರು ಭಾರತದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ನಾನು ಅವನನ್ನು ಪ್ರತಿನಿಧಿಸಲು ಇನ್ನುಮುಂದೆ ಸಾಧ್ಯವಿಲ್ಲ. ಈ ಪ್ರಕರಣದ ವಕಾಲತಿನಿಂದ ನನ್ನನ್ನು ಮುಕ್ತನನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Vijay Mallya: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಪ್ರಕರಣ -ಜುಲೈ 11 ರಂದು ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗಿನ ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ಮಲ್ಯ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ನ್ಯಾಯಪೀಠವು ಈ ಪ್ರಕರಣದಿಂದ ವಕೀಲರ ಬಿಡುಗಡೆಗೆ ಪ್ರಕ್ರಿಯೆಯನ್ನು ಅನುಸರಿಸಲು ವಕೀಲರಿಗೆ ಅವಕಾಶ ಮಾಡಿಕೊಟ್ಟಿತು. ವಿಜಯ್ ಮಲ್ಯ ಅವರ ಇ-ಮೇಲ್ ಐಡಿ ಮತ್ತು ಪ್ರಸ್ತುತ ನಿವಾಸದ ವಿಳಾಸದ ಬಗ್ಗೆ ನ್ಯಾಯಾಲಯದ ನೋಂದಾವಣೆಗೆ ತಿಳಿಸುವಂತೆ ಸೂಚಿಸಿತು. ಮುಂದಿನ ವರ್ಷದ ಜನವರಿಗೆ ಈ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ.

ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆಗಾಗಿ ಮಲ್ಯ ಅವರಿಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಮಲ್ಯ ಭಾರತದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿತ್ತು. ಲಂಡನ್ ಹೈಕೋರ್ಟ್​ ಕೂಡ ವಿಜಯ್ ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿತ್ತು. ಇದರಿಂದ ವಿಜಯ್ ಮಲ್ಯಗೆ ತೀವ್ರ ಹಿನ್ನಡೆಯಾಗಿತ್ತು.

ಇದನ್ನೂ ಓದಿ: Vijay Mallya: ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ದಂಡ, 4 ಕೋಟಿ ಡಾಲರ್ ಹಿಂದಿರುಗಿಸಲು ಸೂಚನೆ

ಇಂಗ್ಲೆಂಡ್​ನಿಂದ ವಿಜಯ್ ಮಲ್ಯ ಅವರನ್ನು ಹಸ್ತಾಂತರ ಮಾಡಲು ಭಾರತ ಸರ್ಕಾರ ಪ್ರಯತ್ನ ಮುಂದುವರೆಸಿದೆ ಯುಕೆ ಹೈಕೋರ್ಟ್ ಏಪ್ರಿಲ್ 2020ರಲ್ಲಿ ಮಲ್ಯ ಅವರ ಹಸ್ತಾಂತರವನ್ನು ತೆರವುಗೊಳಿಸಿತು. ಆದರೆ ಈ ವಿಷಯವನ್ನು ಈಗ ಎರಡೂವರೆ ವರ್ಷಗಳಿಂದ ತಡೆಹಿಡಿಯಲಾಗಿದೆ.

2016ರ ಮಾರ್ಚ್ ತಿಂಗಳಿಂದ ವಿಜಯ್ ಮಲ್ಯ ಇಂಗ್ಲೆಂಡ್​​ನಲ್ಲಿ ನೆಲೆಸಿದ್ದಾರೆ. 2017ರ ಏಪ್ರಿಲ್ 18ರಂದು, ಸ್ಕಾಟ್ಲೆಂಡ್ ಯಾರ್ಡ್ ಹಸ್ತಾಂತರದ ವಾರಂಟ್ ಅನ್ನು ಜಾರಿಗೊಳಿಸಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸಾಲ ನೀಡುವ ಸಂಸ್ಥೆಗಳ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆ ಸಮಯದಲ್ಲಿ 9,000 ಕೋಟಿ ರೂ.ಗಿಂತ ಹೆಚ್ಚಿನ ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ವಿಜಯ್ ಮಲ್ಯ ಅವರು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 am, Fri, 4 November 22