ತಿರುವನಂತಪುರಂ: ದೇವಾಲಯಕ್ಕೆ ಹೋಗಬೇಕೆಂಬ ಕಾರಣಕ್ಕೆ ಮಲಯಾಳಿ ಸೀರೆಯನ್ನು ಖರೀದಿ ಮಾಡಿದ್ದ ವಿದೇಶಿ ಮಹಿಳೆಯೊಬ್ಬರು ಸ್ಥಳೀಯರ ಸಹಾಯದಿಂದ ಅದನ್ನು ಉಟ್ಟುಕೊಂಡು, ಅತ್ಯುತ್ಸಾಹದಿಂದ ದೇವಸ್ಥಾನಕ್ಕೆ ತೆರಳಿದ್ದರು. ಆದರೆ, ಆಕೆ ವಿದೇಶಿ ಮಹಿಳೆ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ. ಈ ಬಗ್ಗೆ ಬೇಸರದಿಂದ ಆ ಮಹಿಳೆ ವಿಡಿಯೋ ಮಾಡಿದ್ದಾರೆ.
ಈ ದೇವಾಲಯವನ್ನು ಪ್ರವೇಶಿಸಬೇಕೆಂದೇ ಸೀರೆಯನ್ನು ಖರೀದಿಸಿ ಧರಿಸಿದ್ದೇನೆ. ಇದಕ್ಕೆಂದೇ ನಮ್ಮ ಪ್ರವಾಸವನ್ನು ಒಂದು ದಿನ ವಿಸ್ತರಿಸಿದ್ದೇನೆ. ಆದರೆ ಅಧಿಕಾರಿಗಳು ನನ್ನ ಮತ್ತು ದೇವರ ನಡುವೆ ಬರುತ್ತಿದ್ದಾರೆ ಎಂದು ಆ ಮಹಿಳೆ ವೀಡಿಯೊದಲ್ಲಿ ಹೇಳಿದ್ದಾರೆ.
Why should anyone be barred from a place worship they want to visit? https://t.co/Y6LrCCJUwV
— Karti P Chidambaram (@KartiPC) July 16, 2024
2021ರಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ವೀಡಿಯೊದಲ್ಲಿ ಸೀರೆಯನ್ನು ಉಟ್ಟ ವಿದೇಶಿ ಮಹಿಳೆ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಈ ದೇವಸ್ಥಾನದಲ್ಲಿ ಭಾರತೀಯರಿಗೆ ಮಾತ್ರ ಪ್ರವೇಶವಿದೆ ಎಂದು ಆಕೆಗೆ ತಿಳಿಸಲಾಗಿದೆ.
ಇದನ್ನೂ ಓದಿ: Kedarnath Temple: ಕೇದಾರನಾಥ ದೇವಸ್ಥಾನದಲ್ಲಿ 228 ಕೆಜಿ ಚಿನ್ನ ನಾಪತ್ತೆ; ಜ್ಯೋತಿರ್ಮಠ ಶಂಕರಾಚಾರ್ಯ ಆರೋಪ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಪ್ರತಿಕ್ರಿಯಿಸಿದ್ದು, ವಿದೇಶಿ ಮಹಿಳೆಯೊಬ್ಬರಿಗೆ ಅವರ ರಾಷ್ಟ್ರೀಯತೆಯ ಕಾರಣದಿಂದ ಕೇರಳದ ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿ ನೀಡಲಿಲ್ಲ ಎಂದು ಹೇಳಿದ್ದಾರೆ.
ಆಕೆ ವಿದೇಶಿಯರಾಗಿದ್ದರೂ ಆಕೆಯ ಭಾವಿ ಪತಿ ಭಾರತದವರಾಗಿದ್ದು, ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ, ನಾನು ಸದ್ಯದಲ್ಲೇ ಮದುವೆಯಾಗಿ ಭಾರತೀಯಳಾಗುತ್ತೇನೆ ಎಂದು ದೇವಸ್ಥಾನದ ಅಧಿಕಾರಿಗಳಿಗೆ ಆಕೆ ತಿಳಿಸಿದಾಗ ಅವರನ್ನು ದೇವಾಲಯದ ಕಚೇರಿಗೆ ಕಳುಹಿಸಲಾಯಿತು. ಆಗ ಅಲ್ಲಿ ಅವರು ದೇವಾಲಯದೊಳಗೆ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: Uma Bhagwati Temple: 30 ವರ್ಷಗಳ ಬಳಿಕ ತೆರೆಯಿತು ಪುರಾತನ ಕಾಲದ ಉಮಾ ಭಗವತಿ ದೇವಸ್ಥಾನ; ಏನಿದರ ವಿಶೇಷ?
ಅದಕ್ಕೆ ಆ ಮಹಿಳೆ ತಾನು ಕೂಡ ಹಿಂದೂ ಎಂದು ಅಧಿಕಾರಿಗಳಿಗೆ ತಿಳಿಸಿದಾಗ, ಅವರು ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಕೇಳಿದರು. “ಯಾರು ಎಲ್ಲಾ ಸಮಯದಲ್ಲೂ ಪ್ರಮಾಣಪತ್ರವನ್ನು ತೆಗೆದುಕೊಂಡು ಹೋಗುತ್ತಾರೆ?” ಎಂದು ಮಹಿಳೆ ಕೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ದೇವಾಲಯದ ಅಧಿಕಾರಿಗಳನ್ನು ಜನಾಂಗೀಯ ಎಂದು ಕರೆದ ದಂಪತಿಗಳು, ಈ ನಿಯಮಗಳನ್ನು 90ರ ದಶಕದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ. ನಂತರ ಅದನ್ನು ಬದಲಾಯಿಸಲಾಗಿಲ್ಲ ಎಂದು ಹೇಳಿದ್ದಾರೆ. “ದೇವರ ಮುಂದೆ ಕುಳಿತು ನಾವು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ಈ ವ್ಯಕ್ತಿ ಯಾರು?” ಎಂದು ಆಕೆ ಬೇಸರ ಹೊರಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ