Kerala Assembly Elections 2021: ನಟ ಮಮ್ಮೂಟ್ಟಿಗೆ ಕೋಡು ಇದೆಯಾ; ಮತಗಟ್ಟೆಯಲ್ಲಿ ಬಿಜೆಪಿ ಪ್ರತಿಭಟನೆ
ಮಧ್ಯಾಹ್ನ 1ಗಂಟೆಯ ಹೊತ್ತಿಗೆ ಶೇ 47.28 ಮತದಾನ ವರದಿ ಆಗಿದೆ. ಕೇರಳದಲ್ಲಿ ಇಂದು 140 ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಮತ್ತು ಮಲಪ್ಪುರಂ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆಗೆ ತೃಕ್ಕಾಕ್ಕರ ವಿಧಾನಸಭಾಕ್ಷೇತ್ರದ ಪುನ್ನುರುಣ್ಣಿ ಕ್ರೈಸ್ಟ್ ಕಿಂಗ್ ಕಾನ್ವೆಂಟ್ ಶಾಲೆಯಲ್ಲಿ ಮತದಾನ ಮಾಡಲು ಬಂದ ಮಲಯಾಳಂನ ಖ್ಯಾತ ನಟ ಮಮ್ಮೂಟ್ಟಿ ವಿರುದ್ಧ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮಮ್ಮೂಟ್ಟಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ವೇಳೆ ವಿಡಿಯೊ ಸೆರೆ ಹಿಡಿದದ್ದನ್ನು ಪ್ರತಿಭಟಿಸ ತೃಕ್ಕಾಕ್ಕರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸಜಿ ಎಂಬವರ ಪತ್ನಿಯ ನೇತೃತ್ವದಲ್ಲಿ ಬಿಜೆಪಿ ಬೆಂಬಲಿಗರು ಪ್ರತಿಭಟಿಸಿದ್ದಾರೆ. ಮಂಗಳವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಎಸ್.ಸಜಿ ಮತದಾನ ಮಾಡಲು ಬಂದು ವಿಡಿಯೊ ಚಿತ್ರೀಕರಿಸಲು ಮುಂದಾದಾಗ ಚುನಾವಣಾ ಅಧಿಕಾರಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಪ್ರಶ್ನಿಸಿದ ಸಜಿ ಅವರ ಪತ್ನಿ ಮಮ್ಮೂಟ್ಟಿಗೆ ಏನು ಕೋಡು ಇದೆಯಾ ಎಂದು ಕೇಳಿ ಚುನಾವಣಾ ಅಧಿಕಾರಿ ವಿರುದ್ಧ ಘೋಷಣೆ ಕೂಗಿದ್ದಾರೆ.
ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇರಲಿಲ್ಲ. ಸಜಿ ಅವರ ಪತ್ನಿ ಪ್ರತಿಭಟಿಸಿದಾಗ ಅವರು ಚುನಾವಣಾ ಸಿಬ್ಬಂದಿಯೇ ಆಗಿರಬೇಕು ಎಂಬು ಭಾವಿಸಿ ಪೊಲೀಸರು ಪತ್ರಕರ್ತರನ್ನು ತಡೆದಿದ್ದರು. ಆ ಹೊತ್ತಿಗೆ ಮತಗಟ್ಟೆಯಲ್ಲಿ ವಾಗ್ವಾದ ನಡೆದಿದೆ. ಈ ನಡುವೆ ಮಮ್ಮೂಟ್ಟಿ ಬಂದು ಮತದಾನ ಮಾಡಿ ಹೋಗಿದ್ದಾರೆ . ಕೋವಿಡ್ ಸಂಕಷ್ಟ ಕಾಲದಲ್ಲಿ ಅತೀವ ಜಾಗ್ರತೆಯಿಂದ ಇರಿ, ಮತದಾನ ಮಾಡಿ ಎಂಬ ಸಂದೇಶವನ್ನು ಮಮ್ಮೂಟ್ಟಿ ನೀಡಿದ್ದಾರೆ ಎಂದು ಮಲಯಾಳ ಮನೋರಮ ವರದಿ ಮಾಡಿದೆ.
ಮಧ್ಯಾಹ್ನ 1ಗಂಟೆಯ ಹೊತ್ತಿಗೆ ಶೇ 47.28 ಮತದಾನ ವರದಿ ಆಗಿದೆ. ಕೇರಳದಲ್ಲಿ ಇಂದು 140 ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಮತ್ತು ಮಲಪ್ಪುರಂ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಕಳಕ್ಕೂಟ್ಟಂನಲ್ಲಿ ಸಿಪಿಎಂ- ಬಿಜೆಪಿ ಸಂಘರ್ಷ ಇಲ್ಲಿನ ಕಾಟ್ಟಾಯಿಕೋಣದಲ್ಲಿ ಸಿಪಿಎಂ ಕಾರ್ಯಕರ್ತರು ಮತಗಟ್ಟೆ ವಶಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಸಿಪಿಎಂ- ಬಿಜೆಪಿ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿವ. ವಿಷಯ ತಿಳಿಯುತ್ತಿದ್ದಂತೆ ಕಳಕ್ಕೂಟ್ಟಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ ಸ್ಥಳಕ್ಕೆ ಆಗಮಿಸಿದ್ದಾರೆ. ಮತಗಟ್ಟೆ ಕಚೇರಿಯಲ್ಲಿದ್ದ ಪಕ್ಷದ ಕಾರ್ಯಕರ್ತರ ನಡುವೆ ಈ ಜಗಳ ನಡೆದಿದೆ.
ತಳಿಪರಂಬದಲ್ಲಿ ನಕಲಿ ಮತದಾನಕ್ಕೆ ಯತ್ನ ತಳಿಪರಂಬದ ಮತಗಟ್ಟೆ ಸಂಖ್ಯೆ 110ರಲ್ಲಿ ನಕಲಿ ಮತದಾನಕ್ಕೆ ಪ್ರಯತ್ನ ನಡೆದಿದೆ ಎಂದು ಚುನಾವಣಾ ಅಧಕಾರಿ ಹೇಳಿದ್ದಾರೆ.ನಕಲಿ ಮತದಾನ ಮಾಡಲು ಯತ್ನಿಸಿದವರು ಸಿಪಿಎಂ ಕಾರ್ಯಕರ್ತರು ಎಂದು ಯುಡಿಎಫ್ ಆರೋಪಿಸಿದ್ದು, ಅವರನ್ನು ಬಂಧಿಸಬೇಕು ಎಂಬ ಒತ್ತಾಯವನ್ನು ಪೊಲೀಸ್ ನಿರಾಕರಿಸಿದೆ.
ಇವಿಎಂನಲ್ಲಿ ಕಾಂಗ್ರೆಸ್ ಚಿಹ್ನೆಯ ಬಟನ್ ಒತ್ತಿದರೆ ಬಿಜೆಪಿಗೆ ಮತ? ವಯನಾಡ್ ಜಿಲ್ಲೆಯ ಕಲ್ಪಟ್ಟ ವಿಧಾನಸಭಾ ಕ್ಷೇತ್ರದ ಕಣಿಯಾಬಟ್ಟ ಪಂಚಾಯತ್ ನ ಅನ್ಸಾರಿಯಾ ಕಾಂಪ್ಲೆಕ್ಸ್ ನಲ್ಲಿ 54ನೇ ಸಂಖ್ಯೆ ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತದ ಮುಂದೆ ಇವಿಎಂಂ ಬಟನ್ ಒತ್ತಿದರೆ ಬಿಜೆಪಿಗೆ ಮತ ದಾಖಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆರೋಪದ ಹಿನ್ನಲೆಯಲ್ಲಿ ಕೆಲವು ಗಂಟೆಗಳ ಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಜಿಲ್ಲಾಧಿಕಾರಿಯವರ ಕಚೇರಿಯಿಂದ ಚುನಾವಣಾ ವಿಭಾಗದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮೂವರು ಮತದಾರರು ಮತದಾನ ಮಾಡಿದ್ದು ಇದರಲ್ಲಿ ಎರಡು ಮತ ಬಿಜೆಪಿಗೆ ಮತ್ತು ಒಂದು ಮತ ಆನೆ ಚಿಹ್ನೆಗೆ ದಾಖಲಾಗಿರುವುದಾಗಿ ವಿವಿಪ್ಯಾಟ್ ತೋರಿಸಿತ್ತು.
ಆಂತೂರ್ನಲ್ಲಿ ಯುಡಿಎಫ್ ಅಭ್ಯರ್ಥಿ ಮೇಲೆ ಹಲ್ಲೆ ಆರೋಪ ಕಣ್ಣೂರ್ ಜಿಲ್ಲೆಯ ಆಂತೂರ್ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪ ಕೇಳಿ ಬಂದಿದೆ. ಚುನಾವಣಾ ಅಧಿಕಾರಿ ತಾರತಮ್ಯ ಮಾಡುತ್ತಿದ್ದಾರೆ, ಮತದಾರರನ್ನು ಗುರುತಿಸುವ ಪ್ರಕ್ರಿಯೆ ಸರಿಯಾಗಿ ಮಾಡುತ್ತಿಲ್ಲ ಎಂದು ಯುಡಿಎಫ್ ಆರೋಪಿಸಿತ್ತು. ಚುನಾವಣಾ ಅಧಿಕಾರಿಯನ್ನು ಯುಡಿಎಫ್ ಪ್ರಶ್ನಿಸಿದ್ದಕ್ಕೆ ಎಲ್ಡಿಎಫ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಯುಡಿಎಫ್ ಅಭ್ಯರ್ಥಿ ವಿ.ಪಿ. ಅಬ್ದುಲ್ ರಶೀದ್ ದೂರಿದ್ದಾರೆ.
(Voting for 140 assembly seats in Kerala is under way State records 47.28 percent till 1pm)
Published On - 2:21 pm, Tue, 6 April 21