ಪೈಲಟ್ ಆಗಬೇಕೆಂಬ ಕನಸು ಹೊತ್ತ ಕೇರಳದ ಬಾಲಕನನ್ನು ಕಾಕ್ಪಿಟ್ಗೆ ಕರೆದೊಯ್ದು ವಿಮಾನ ಚಾಲನೆ ಬಗ್ಗೆ ವಿವರಿಸಿದ ರಾಹುಲ್ ಗಾಂಧಿ; ವಿಡಿಯೊ ವೈರಲ್
Rahul Gandhi Viral Video: ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ರಾಹುಲ್ ಗಾಂಧಿ , ಅದ್ವೈತ್ನ ಕನಸು ನನಸಾಗಿಸಲಿರುವ ಮೊದಲ ಹೆಜ್ಜೆಯನ್ನು ನಾವಿಟ್ಟಿದ್ದೇವೆ. ಆತನಿಗೆ ಹಾರಾಡಲು ಅವಕಾಶ ಕಲ್ಪಿಸುವ ಸಮಾಜ ಮತ್ತು ಮೂಲಸೌಕರ್ಯವನ್ನು ಒದಗಿಸುವುದು ನಮ್ಮ ಕರ್ತವ್ಯ ಎಂದು ಬರೆದಿದ್ದಾರೆ.

ಕಣ್ಣೂರ್: ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಹೋಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 9 ಹರೆಯದ ಬಾಲಕನಿಗೆ ಕಾಕ್ಪಿಟ್ ನಲ್ಲಿ ಕುಳಿತು ವಿಮಾನ ಚಾಲನೆ ಬಗ್ಗೆ ಮಾಹಿತಿ ನೀಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೇರಳದ ಕಣ್ಣೂರ್ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಎರಡು ದಿನಗಳ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿನ ಕೀಳೂರ್ಕುನ್ನು ಎಂಬಲ್ಲಿರುವ ಟೀ ಅಂಗಡಿಯೊಂದಲ್ಲಿ ಬಾಲಕನೊಬ್ಬನ ಪರಿಚಯವಾಗಿತ್ತು.
ಮಲಯಾಳ ಮನೋರಮಾ ವರದಿ ಪ್ರಕಾರ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಬಲ್ಲ ಆ ಬಾಲಕ ರಾಹುಲ್ ಗಾಂಧಿ ಜತೆ ಮಾತನಾಡುತ್ತಾ, ತನ್ನ ಕನಸಿನ ಬಗ್ಗೆ ಹೇಳಿದ್ದನು. ನನಗೆ ಹಾರಾಡಬೇಕು, ಪೈಲಟ್ ಆಗಬೇಕು ಎಂಬುದು ನನ್ನ ಕನಸು ಎಂದು ಬಾಲಕ ರಾಹುಲ್ ಗಾಂಧಿಯವರಲ್ಲಿ ಹೇಳಿದ್ದಾನೆ.
ಮರುದಿನವೇ ರಾಹುಲ್ ಗಾಂಧಿ ಆ ಬಾಲಕ ಮತ್ತು ಆತನ ಅಪ್ಪನನ್ನು ತಮ್ಮ ಚಾರ್ಟರ್ ವಿಮಾನದ ಕಾಕ್ಪಿಟ್ ಗೆ ಕರೆದೊಯ್ದು, ಬಾಲಕನಿಗೆ ವಿಮಾನ ಚಾಲನೆ ಬಗ್ಗೆ ಹೇಳಿಕೊಟ್ಟಿದ್ದಾರೆ.
View this post on Instagram
ವಿಮಾನ ಯಾವ ರೀತಿ ಚಲಿಸುತ್ತದೆ ಎಂದು ಮಹಿಳಾ ಪೈಲಟ್ ಮತ್ತು ರಾಹುಲ್ ಗಾಂಧಿ ಹೇಳಿಕೊಡುತ್ತಿದ್ದರೆ ಬಾಲಕ ಅದನ್ನು ಶ್ರದ್ಧೆಯಿಂದ ಕೇಳುತ್ತಿರುವುದು ವಿಡಿಯೊದಲ್ಲಿದೆ. ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ರಾಹುಲ್ ಗಾಂಧಿ , ಅದ್ವೈತ್ನ ಕನಸು ನನಸಾಗಿಸಲಿರುವ ಮೊದಲ ಹೆಜ್ಜೆಯನ್ನು ನಾವಿಟ್ಟಿದ್ದೇವೆ. ಆತನಿಗೆ ಹಾರಾಡಲು ಅವಕಾಶ ಕಲ್ಪಿಸುವ ಸಮಾಜ ಮತ್ತು ಮೂಲಸೌಕರ್ಯವನ್ನು ಒದಗಿಸುವುದು ನಮ್ಮ ಕರ್ತವ್ಯ ಎಂದು ಬರೆದಿದ್ದಾರೆ. ರಾಹುಲ್ ಅವರ ಈ ಕಾರ್ಯವನ್ನು ಹಲವಾರು ನೆಟ್ಟಿಗರು ಶ್ಲಾಘಿಸಿದ್ದಾರೆ.
View this post on Instagram
ಭಾನುವಾರ ವಯನಾಡಿಗೆ ಭೇಟಿ ನೀಡಿದ್ದ ರಾಹುಲ್, ಕಲ್ಪೆಟ್ಟದಲ್ಲಿರುವ ಜೀವನ್ ಜ್ಯೋತಿ ಚಿಲ್ಡ್ರನ್ಸ್ ಹೋಮ್ನ ಮಕ್ಕಳೊಂದಿಗೆ ಈಸ್ಟರ್ ಹಬ್ಬ ದೂಟ ಸವಿದಿದ್ದರು. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, ಜೀವನ್ ಜ್ಯೋತಿ ಚಿಲ್ಡ್ರನ್ಸ್ ಹೋಮ್ನ ಹೊಸ ಸ್ನೇಹಿತರೊಂದಿಗೆ ವಿಶೇಷ ಈಸ್ಟರ್ ಲಂಚ್ ಎಂದು ಒಕ್ಕಣೆ ಬರೆದು ವಿಡಿಯೊ ಪೋಸ್ಟ್ ಮಾಡಿದ್ದರು. ಪ್ರಿಯಾಂಕಾ ಗಾಂಧಿ ವಿಡಿಯೊ ಕರೆ ಮಾಡಿ ಅಲ್ಲಿನ ಮಕ್ಕಳಿಗೆ ಶುಭ ಹಾರೈಸಿದ್ದರು.
ಕಲ್ಪೆಟ್ಟದಲ್ಲಿರುವ ಹೆಲಿಪ್ಯಾಡ್ ಗೆ ತಲುಪಲು ರಾಹುಲ್ ಆಟೋದಲ್ಲಿ ಸಂಚರಿಸಿದ್ದರು. ರಾಹುಲ್ ಅವರ ಆಟೋ ಪ್ರಯಾಣದ ವಿಡಿಯೊ ಕೂಡಾ ವೈರಲ್ ಆಗಿತ್ತು. ಅಂದಹಾಗೆ ಕೇರಳದಲ್ಲಿ ರಾಹುಲ್ ಆಟೋದಲ್ಲಿ ಸಂಚರಿಸಿದ್ದು ಇದು ಮೊದಲೇನೂ ಅಲ್ಲ . ಚುನಾವಣಾ ಪ್ರಚಾರಕ್ಕಾಗಿ ನೇಮಂಗೆ ಬರುವಾಗಲೂ ಆಟೋದಲ್ಲೇ ಬಂದಿದ್ದ ರಾಹುಲ್ ಗಾಂಧಿ, ರೋಡ್ ಶೋ ನಡೆಸಿದ ಬಳಿಕ ಮಾತನಾಡಿ, ನಾನು ಬಂದ ಆಟೋ ಚಾಲಕನನ್ನು ಮಾತನಾಡಿಸಿದೆ. ಅವರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಸಂಕಷ್ಟಪಡುತ್ತಿರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದಿದ್ದರು.
ಇದನ್ನೂ ಓದಿ: ಅನಾಥಾಶ್ರಮ ಮಕ್ಕಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದು ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ
( Rahul Gandhi explaining complex mechanism of a flight cockpit to Kerala boy video goes viral)
Published On - 1:10 pm, Tue, 6 April 21