West Bengal:ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ: 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ

ಪಶ್ಚಿಮ ಬಂಗಾಳದ ಜನಪ್ರಿಯ 'ಲಕ್ಷ್ಮಿ ಭಂಡಾರ್' ಯೋಜನೆಯ 30 ಲಕ್ಷ ಫಲಾನುಭವಿಗಳು ಅನರ್ಹರೆಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ. ಇವರು ಭಾರತೀಯ ನಾಗರಿಕರಲ್ಲ ಅಥವಾ ಮತದಾರರ ಪಟ್ಟಿಯಿಂದ ಹೊರಗಿದ್ದಾರೆ. ಇದಕ್ಕೆ ಪರ್ಯಾಯವಾಗಿ, ಬಿಜೆಪಿಯ ಪ್ರಸ್ತಾವಿತ 'ಅನ್ನಪೂರ್ಣ ಭಂಡಾರ್' ಯೋಜನೆಯನ್ನು ಪ್ರಕಟಿಸಲಾಗಿದ್ದು, ಅರ್ಹ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ. ನೀಡಲಾಗುತ್ತದೆ. ಪೌರತ್ವ ದಾಖಲೆಗಳುಳ್ಳವರಿಗೆ ಮಾತ್ರ ಹೊಸ ಯೋಜನೆಯಡಿ ಅರ್ಹತೆ ಎಂದು ಸ್ಪಷ್ಟಪಡಿಸಿದ್ದಾರೆ.

West Bengal:ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ: 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ
ಸುವೇಂದು ಅಧಿಕಾರಿ
Image Credit source: BBC

Updated on: May 28, 2026 | 10:58 AM

ಕೋಲ್ಕತ್ತಾ, ಮೇ 28: ಪಶ್ಚಿಮ ಬಂಗಾಳ(West Bengal) ರಾಜಕೀಯದಲ್ಲಿ ಮಹಿಳಾ ಕಲ್ಯಾಣ ಯೋಜನೆಗಳ ಕುರಿತು ಮತ್ತೊಮ್ಮೆ ಭಾರಿ ವಿವಾದ ಸೃಷ್ಟಿಯಾಗಿದೆ. ರಾಜ್ಯದ ಜನಪ್ರಿಯ ‘ಲಕ್ಷ್ಮಿ ಭಂಡಾರ್’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸುಮಾರು 3 ಮಿಲಿಯನ್ (30 ಲಕ್ಷ) ಫಲಾನುಭವಿಗಳು ಈ ಯೋಜನೆಗೆ ಸಂಪೂರ್ಣ ಅನರ್ಹರಾಗಿದ್ದಾರೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ  ಹೇಳಿದ್ದಾರೆ.

ಅನರ್ಹರಾಗಲು ಕಾರಣವೇನು?

ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಈ 30 ಲಕ್ಷ ಫಲಾನುಭವಿಗಳು ಭಾರತೀಯ ನಾಗರಿಕರಲ್ಲ ಅಥವಾ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ನಿಯಮಗಳ ಪ್ರಕಾರ ಇವರು ಯೋಜನೆಗೆ ಅರ್ಹರಲ್ಲದಿದ್ದರೂ, ಸೌಲಭ್ಯ ಪಡೆಯುತ್ತಿದ್ದಾರೆ. ಕೆಲವರು ಅಗತ್ಯ ಪೌರತ್ವ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹೊಸ ‘ಅನ್ನಪೂರ್ಣ ಭಂಡಾರ್’ ಯೋಜನೆ ಘೋಷಣೆ

ಮಮತಾ ಬ್ಯಾನರ್ಜಿ ಸರ್ಕಾರ ಆರಂಭಿಸಿದ್ದ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪರ್ಯಾಯವಾಗಿ, ಬಿಜೆಪಿಯ ಪ್ರಸ್ತಾವಿತ ಹೊಸ ಯೋಜನೆ ‘ಅನ್ನಪೂರ್ಣ ಭಂಡಾರ್’ ನಮೂನೆಯನ್ನು (ಫಾರ್ಮ್) ಮುಖ್ಯಮಂತ್ರಿ ಪ್ರಸ್ತುತಪಡಿಸಿದರು. ಚುನಾವಣಾ ಭರವಸೆಯಂತೆ ಈ ಹೊಸ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ. ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತದೆ.

ಮತ್ತಷ್ಟು ಓದಿ: ಬಂಗಾಳದ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ

ಪ್ರಸ್ತುತ ಇರುವ ಲಕ್ಷ್ಮಿ ಭಂಡಾರ್ ಯೋಜನೆಯಡಿ ಸಾಮಾನ್ಯ ವರ್ಗದ ಮಹಿಳೆಯರಿಗೆ ತಿಂಗಳಿಗೆ 1,500 ರೂ.. ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ಮಹಿಳೆಯರಿಗೆ 1700 ರೂ. ನೀಡಲಾಗುತ್ತಿದೆ. ಹೊಸ ಯೋಜನೆಗೆ ಸರಿಯಾದ ದಾಖಲೆಗಳಿದ್ದವರು ಮಾತ್ರ ಅರ್ಹರಾಗಿರುತ್ತಾರೆ. ಪೌರತ್ವ ಕಾಯ್ದೆಗೆ (CAA) ಸಂಬಂಧಿಸಿದ ಅರ್ಜಿ ಸಲ್ಲಿಸಿದವರು ಅಥವಾ ವಿಶೇಷ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದವರನ್ನು ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಅರ್ಜಿ ನಮೂನೆಯ ಮೂಲಕ ಇನ್ನು ಮುಂದೆ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮಹಿಳಾ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಈ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪರಿಶೀಲನಾ ಪ್ರಕ್ರಿಯೆ ಮುಗಿಯಲು ಸಮಯ ತೆಗೆದುಕೊಳ್ಳುವುದರಿಂದ, ಅಲ್ಲಿಯವರೆಗೆ ಸದ್ಯದ ಫಲಾನುಭವಿಗಳಿಗೆ ಹಳೆಯ ಯೋಜನೆಯಡಿ ಹಣಕಾಸಿನ ನೆರವು ಸಿಗುತ್ತಲೇ ಇರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us