
ನವದೆಹಲಿ, ಮಾರ್ಚ್ 23: ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit- 2026) ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದರು. ಈ ಬಾರಿಯ ಶೃಂಗಸಭೆಯ ವಿಷಯ ಭಾರತ ಮತ್ತು ಜಗತ್ತು ಎಂಬುದಾಗಿರುವುದರಿಂದ ಜಾಗತಿಕ ವಿಚಾರಗಳ ಬಗ್ಗೆಯೂ ಪ್ರಧಾನಿ ಮೋದಿ ಬೆಳಕು ಚೆಲ್ಲಿದರು. “ಜಾಗತಿಕ ಸಂಘರ್ಷದಲ್ಲಿ ನಾವು ಯಾರ ಪರವಾಗಿರುತ್ತೇವೆ?” ಎಂದು ಕೇಳುವವರಿಗೆ ನಮ್ಮ ಉತ್ತರ ಒಂದೇ. ನಾವು ದೇಶದ ಪರವಾಗಿರುತ್ತೇವೆ, ನಮಗೆ ಭಾರತೀಯರ ಅಭಿವೃದ್ಧಿಯೊಂದೇ ಮುಖ್ಯ” ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು.
“ಯುದ್ಧದಿಂದಾಗಿ ವಿಶ್ವದ ಹಲವು ಏಳುಬೀಳುಗಳ ನಡುವೆಯೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ದೇಶದಲ್ಲಿ ಹೊಸ ಏರ್‌ಪೋರ್ಟ್ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಯುವಕರಿಗೆ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 18 ಸಾವಿರ ಕೋಟಿ ರೂ. ಸಂದಾಯವಾಗಿದೆ. 2014ರ ಹಿಂದಿನ 10 ವರ್ಷಗಳು ಹಾಗೂ 2014ರ ನಂತರ 10 ವರ್ಷಗಳ ಅಭಿವೃದ್ಧಿ ಕೆಲಸಗಳನ್ನು ಹೋಲಿಕೆ ಮಾಡಿ ನೋಡಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: PM Modi in WITT Summit 2026: ಕಾಂಗ್ರೆಸ್ನ ಪಾಪದ ಹೊರೆಯನ್ನು ನಾವು ಹೊತ್ತಿದ್ದೇವೆ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ಪ್ರತಿ ಯಶಸ್ಸನ್ನು ಪ್ರಶ್ನಿಸುವುದು ಕಾಂಗ್ರೆಸ್ಸಿನ ಕೆಲಸ ಎಂದು ಪ್ರಧಾನಿ ಮೋದಿ ಹೇಳಿದರು. “ಕೋವಿಡ್ ಲಸಿಕೆ ಬಗ್ಗೆಯೂ ಪ್ರಶ್ನೆಗಳು ಎದ್ದವು. ಭಾರತವು ಸವಾಲನ್ನು ಯಶಸ್ಸಾಗಿ ಪರಿವರ್ತಿಸಿದ್ದು ಕಾಂಗ್ರೆಸ್ಸಿನ ದುರದೃಷ್ಟ ಮತ್ತು ಭಾರತದ ಅದೃಷ್ಟ. ಡಿಜಿಟಲ್ ಪಾವತಿಗಳಲ್ಲಿ ಭಾರತವು ಮುಂಚೂಣಿಯಲ್ಲಿರುವ ದೇಶ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಗತ್ಯ. ಆದರೆ ಪ್ರತಿಭಟನೆ ಮತ್ತು ದ್ವೇಷದ ನಡುವೆ ಒಂದು ಗೆರೆ ಇದೆ. ದೇಶವನ್ನು ಕೆಣಕುವುದು ಕಾಂಗ್ರೆಸ್ಸಿನ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದರು.
“ಭಾರತವು ಪ್ರತಿಯೊಂದು ವಲಯವನ್ನೂ ಪರಿವರ್ತಿಸಿದೆ. ಇಂದು ಭಾರತ ದೇಶವು 160ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿದೆ. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ವೇಗ ನಿಧಾನವಾಗಿತ್ತು, ಆದರೆ ಇಂದು ಭಾರತವು ವೇಗದ ಹಾದಿಯಲ್ಲಿದೆ. ಇಂದು, ನಿರ್ಣಯಗಳು ಸಾಧನೆಗಳಾಗಿ ಬದಲಾಗುತ್ತಿವೆ. ಇದು ಹೊಸ ಭಾರತ ಎಂಬ ಸಂದೇಶವನ್ನು ಜಗತ್ತಿಗೆ ನೀಡಲಾಗುತ್ತಿದೆ. ಈ ಭಾರತವು ತನ್ನ ಅಭಿವೃದ್ಧಿಗಾಗಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಜಗತ್ತಿಗೆ ತಿಳಿದಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: PM Modi Speech in WITT Live: ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
“ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಅದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಆದರೆ ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತರಾದ ಕೆಲವರು ತಮಗಾಗಿ ರಾಜಕೀಯ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ, ಇದು ಸಂಯಮ ಮತ್ತು ಸೂಕ್ಷ್ಮತೆಯ ಸಮಯ ಎಂದು ನಾನು ಟಿವಿ9 ವೇದಿಕೆಯಿಂದ ಪುನರುಚ್ಚರಿಸುತ್ತೇನೆ. COVID-19 ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಇಡೀ ರಾಷ್ಟ್ರವು ಒಟ್ಟಾಗಿ ಕೆಲಸ ಮಾಡಿದಾಗ ಫಲಿತಾಂಶಗಳು ಸಕಾರಾತ್ಮಕವಾಗಿತ್ತು. ನಾವು ಈಗಿನ ಪರಿಸ್ಥಿತಿಯನ್ನು ಅದೇ ರೀತಿಯಲ್ಲಿ ಸವಾಲನ್ನು ಎದುರಿಸಬೇಕು” ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Mon, 23 March 26