
ನವದೆಹಲಿ, ಏಪ್ರಿಲ್ 15: ಕ್ಷೇತ್ರ ಪುನರ್ ವಿಂಗಡಣೆ (delimitation) ನಿಯಮಗಳಿಗೆ ಪ್ರಮುಖ ಬದಲಾವಣೆಗಳೊಂದಿಗೆ ಲೋಕಸಭಾ ಸದಸ್ಯರ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಗ್ಗಟ್ಟಿನ ವಿರೋಧ ವ್ಯಕ್ತವಾಗಿದೆ. ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳ ರಾಜಕೀಯ ನಾಯಕರು ಮತ್ತು ಪಕ್ಷಗಳು ಈ ಸೀಮಾ ನಿರ್ಣಯವನ್ನು ವಿರೋಧಿಸಿವೆ.
ತೆಲಂಗಾಣದ ವಿರೋಧ
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಕೇಂದ್ರ ಸರ್ಕಾರದ ಪ್ರಕ್ರಿಯೆಯ ವಿರುದ್ಧ ರಾಜಕೀಯ ಪ್ರತಿಭಟನೆಗೆ ಕರೆ ನೀಡಿದ್ದಾರೆ. ರೇವಂತ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಈ ಕ್ರಮವು ನಮ್ಮ ಪ್ರಜಾಪ್ರಭುತ್ವ ಮತ್ತು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. “ನಿಜವಾದ ವಿವಾದಾತ್ಮಕ ವಿಷಯವೆಂದರೆ ಸೀಟುಗಳನ್ನು ಅನುಪಾತದ ಆಧಾರದ ಮೇಲೆ 850ಕ್ಕೆ ಹೆಚ್ಚಿಸುವುದು. ಇದು ರಾಜಕೀಯ ಶಕ್ತಿಯನ್ನು ಬದಲಾಯಿಸಬಹುದು ಮತ್ತು ದಕ್ಷಿಣ ರಾಜ್ಯಗಳಲ್ಲಿ ಅಸಮತೋಲನವನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: 25 ವರ್ಷ ಸಂಸದೀಯ ಕ್ಷೇತ್ರ ಪುನಾರಚನೆ ಮಾಡಬೇಡಿ; ಸ್ಟಾಲಿನ್ ನೇತೃತ್ವದ ಸಮಿತಿಯಿಂದ ನಿರ್ಣಯ ಅಂಗೀಕಾರ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 50% ಸ್ಥಾನಗಳನ್ನು ಹೆಚ್ಚಿಸುವ ನೆಪದಲ್ಲಿ ಸಂಸತ್ತಿನಲ್ಲಿ ದಕ್ಷಿಣದ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಕೇಂದ್ರದ ಪ್ರಸ್ತಾವಿತ ಕ್ರಮವು ದಕ್ಷಿಣ ರಾಜ್ಯಗಳಲ್ಲಿನ ಮಹಿಳೆಯರು ಮತ್ತು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ತೀವ್ರ ಅನ್ಯಾಯವನ್ನುಂಟುಮಾಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಪ್ರಸ್ತಾವಿತ ಕ್ರಮದ ವಿರುದ್ಧ ಬೆಂಬಲ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪತ್ರ ಬರೆದಿದ್ದಾರೆ.
ಹಾಗೇ, ಸಿಎಂ ಸಿದ್ದರಾಮಯ್ಯನವರಿಗೆ ಕೂಡ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪತ್ರ ಬರೆದಿದ್ದು, ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಅನುಪಾತ ಆಧಾರಿತ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡೋಣ, ಮಹಿಳಾ ಮೀಸಲಾತಿ ಮಸೂದೆ ಮತ್ತು ಗಡಿಗಳನ್ನು ಮಾತ್ರ ಮರುರೂಪಿಸುವ ಮಿತಿಗೆ ಬೆಂಬಲ ನೀಡೋಣ. ಆದರೆ, ಲೋಕಸಭಾ ಸ್ಥಾನಗಳನ್ನು ಹೆಚ್ಚಳ ಮಾಡುವುದಕ್ಕೆ ವಿರೋಧಿಸೋಣ. ಜನಸಂಖ್ಯೆ ಆಧಾರಿತ ಅನುಪಾತ ಮಾದರಿಯಲ್ಲಿ ಲೋಕಸಭಾ ಸ್ಥಾನಗಳನ್ನು 543 ರಿಂದ ಸುಮಾರು 850 ಕ್ಕೆ ಹೆಚ್ಚಿಸುವುದರಿಂದ ದಕ್ಷಿಣ ರಾಜ್ಯಗಳು ಮತ್ತು ಉತ್ತರ ಪ್ರದೇಶದ ನಡುವಿನ ಸ್ಥಾನ ಅಂತರವು ಬೃಹತ್ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಸಿಎಂ ರೇವಂತ್ ರೆಡ್ಡಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ನಿಲುವೇನು?
“ಸೀಮಾ ನಿರ್ಣಯ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಪ್ರಾತಿನಿಧ್ಯವನ್ನು ಮರುರೂಪಿಸುವ ಸಾಧನವಾಗಬಾರದು” ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಆದ್ಯತೆಯ ಜನಸಂಖ್ಯಾ ನಿಯಂತ್ರಣವನ್ನು ಹೊಂದಿರುವ ರಾಜ್ಯಗಳು ಕೇಂದ್ರ ಸರ್ಕಾರದ ಈ ಪ್ರಸ್ತಾಪದ ಅಡಿಯಲ್ಲಿ ಅನ್ಯಾಯವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಧ್ವನಿ ದುರ್ಬಲವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆಯಿಂದ ಒಂದು ಸ್ಥಾನವೂ ನಷ್ಟವಾಗುವುದಿಲ್ಲ; ತಮಿಳುನಾಡಿನಲ್ಲಿ ಅಮಿತ್ ಶಾ ಭರವಸೆ
ತಮಿಳುನಾಡು ಸರ್ಕಾರ ಏನು ಹೇಳುತ್ತದೆ?
ಕ್ಷೇತ್ರ ವಿಂಗಡಣೆಗೆ ಸಂಬಂಧಿಸಿದಂತೆ ತಮಿಳುನಾಡು ಎದುರಿಸಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಡಿಎಂಕೆ ಸಂಸದರ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯ ನಂತರ ಅವರು, “ನಮ್ಮ ತಲೆಯ ಮೇಲೆ ನೇತಾಡುತ್ತಿದ್ದ ಕತ್ತಿ ಈಗ ನಮ್ಮ ಕುತ್ತಿಗೆಯ ಮೇಲೆ ಬಿದ್ದಿದೆ. ನಮ್ಮ ಡಿಎಂಕೆ ಸಂಸದರೊಂದಿಗೆ ಸಮಾಲೋಚಿಸಿ, ನಾವು ರಾಜ್ಯಗಳಾದ್ಯಂತದ ಸಂಸತ್ ಸದಸ್ಯರನ್ನು ಸಂಪರ್ಕಿಸುತ್ತಿದ್ದೇವೆ. ಈ ನಿರ್ಧಾರದಿಂದ ಆಗುವ ಗಂಭೀರ ಅಪಾಯವನ್ನು ಎದುರಿಸಲು ಸಂಘಟಿತ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಇದು ಪಕ್ಷಗಳು ಅಥವಾ ವ್ಯಕ್ತಿಗಳ ಬಗ್ಗೆ ಅಲ್ಲ. ಇದು ನಮ್ಮ ಜನರ ಹಕ್ಕುಗಳನ್ನು ರಕ್ಷಿಸುವ ಬಗೆಗಿನ ಹೋರಾಟವಾಗಿದೆ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಭಾರತದಾದ್ಯಂತ ಎಲ್ಲಾ ಪಕ್ಷಗಳು ಮತ್ತು ಸಂಸದರು ಒಂದಾಗಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Wed, 15 April 26