ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಗಲ್ಲ ಮಂಡಿಗಳನ್ನಾಗಿ ಪರಿವರ್ತಿಸುವ ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್
ಬಿಜೆಪಿ ಅತ್ಯಂತ ಅಪಾಯಕಾರಿ ಪಕ್ಷ. ನಮ್ಮ ಮಾತನ್ನು ಕೇಳಿ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ ಇದ್ದರೆ ಅದರ ವಿರುದ್ಧ ಹೋರಾಟ ನಿರಂತರವಾಗಿ ಮುಂದುವರಿಸುತ್ತೇವೆ. ನಾವು ಯಾವುದೇ ರಾಜಕೀಯ ಪಕ್ಷಗಳ ಜತೆಗೂ ಇಲ್ಲ. ಆದರೆ ಬಿಜೆಪಿಯನ್ನು ಖಂಡಿತ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ದೆಹಲಿ: ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬಲವಂತವಾಗಿ ಅಲ್ಲಿಂದ ಕಳಿಸಿದರೆ, ನಾವು ಸುಮ್ಮನೆ ಇರುವುದಿಲ್ಲ. ದೇಶಾದ್ಯಂತ ಇರುವ ಎಲ್ಲ ಸರ್ಕಾರಿ ಕಚೇರಿಗಳನ್ನೂ ಗಲ್ಲ ಮಂಡಿ (ಕಾಳುಕಡಿ ಮಾರುಕಟ್ಟೆ)ಯನ್ನಾಗಿ ಪರಿವರ್ತಿಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾಗಿ ರೈತರು ಸಂಸತ್ತಿನ ಎದುರು ಕೃಷಿ ಉತ್ಪನ್ನಗಳ ಮಾರಾಟ ಮಾಡಲು ಇಚ್ಛಿಸುತ್ತಿದ್ದಾರೆ ಎಂದೂ ತಿಳಿಸಿದರು.
ಅದಕ್ಕೂ ಮೊದಲು ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ಟಿಕ್ರಿ ಹಾಗೂ ಘಾಜಿಯಾಬಾದ್ ಗಡಿಭಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ತೆಗೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಕೇಶ್ ಟಿಕಾಯತ್, ಅದೆಲ್ಲ ಸುಳ್ಳು..ಅಲ್ಲಿನ್ನೂ ಬ್ಯಾರಿಕೇಡ್ಗಳು ಹಾಗೇ ಇವೆ ಎಂದು ಹೇಳಿದ್ದಾರೆ. ಹಾಗೇ, ಈ ದೀಪಾವಳಿ ರೈತರ ಪಾಲಿಗೆ ಕರಾಳ ದೀಪಾವಳಿಯಾಗಿದೆ. ನಾವು ಪ್ರತಿಭಟನೆ ನಡೆಸುತ್ತಿರುವ ದೆಹಲಿ ಗಡಿಗಳಲ್ಲೇ ಹಬ್ಬ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗಳಲ್ಲಿ ನಾವು ಬಿಜೆಪಿಗೆ ಸರಿಯಾದ ಔಷಧಿ ನೀಡುತ್ತೇವೆ. ಪಶ್ಚಿಮ ಬಂಗಾಳದ ಕಳೆದ ವಿಧಾನಸಭೆ ಚುನಾವಣೆಯ ಸೋಲು ಬಿಜೆಪಿಗೆ ಮರೆಯಲಿಕ್ಕಿಲ್ಲ. ಅದೊಂದು ಅತ್ಯಂತ ಅಪಾಯಕಾರಿ ಪಕ್ಷ. ನಮ್ಮ ಮಾತನ್ನು ಕೇಳಿ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದೆ ಇದ್ದರೆ ಅದರ ವಿರುದ್ಧ ಹೋರಾಟ ನಿರಂತರವಾಗಿ ಮುಂದುವರಿಸುತ್ತೇವೆ. ನಾವು ಯಾವುದೇ ರಾಜಕೀಯ ಪಕ್ಷಗಳ ಜತೆಗೂ ಇಲ್ಲ. ಆದರೆ ಬಿಜೆಪಿಯನ್ನು ಖಂಡಿತ ವಿರೋಧಿಸುತ್ತೇವೆ ಎಂದಿದ್ದಾರೆ. ಈ ದೇಶದಲ್ಲಿ ರೈತರು ಮತ್ತು ಯುವಜನರ ಜೀವನವನ್ನು ಹಾಳು ಮಾಡಲಾಗುತ್ತಿದೆ. ರೈತರ ಬೆಳೆಗಳಿಗೆ ಬೆಲೆ ಇಲ್ಲ. ಯುವಜನರಿಗೆ ಉದ್ಯೋಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಕೇಶ್ ಟಿಕಾಯತ್, ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆಯೂ ಮಾತನಾಡಿದರು. ಯಾರು ದೇಶದೊಳಗೆ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ತರುತ್ತಿದ್ದಾರೋ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಇಂಥವರನ್ನು ಹಿಡಿದು ಸತಾಯಿಸುತ್ತಾರೆ ಎಂದು ಹೇಳಿದರು.
ಆರ್ಎಸ್ಎಸ್ ವಿರುದ್ಧವೂ ಕಿಡಿ ಕಾರಿದ ರೈತ ಮುಖಂಡ, ಈ ದೇಶದಲ್ಲಿ ಹಿಂದು ಎನ್ನಿಸಿಕೊಳ್ಳಲು ಆರ್ಎಸ್ಎಸ್ನಿಂದ ಸರ್ಟಿಫಿಕೆಟ್ ಪಡೆದಿರಬೇಕಾ? ಎಂದು ಪ್ರಶ್ನಿಸಿದರು. ಈ ದೇಶದಲ್ಲಿ ಎರಡು ವಿಧದ ಹಿಂದುಗಳಿದ್ದಾರೆ. ಒಂದು ವರ್ಗದವರ ಬಳಿ ಪ್ರಮಾಣ ಪತ್ರ ಇಲ್ಲ..ಇನ್ನೊಂದು ವರ್ಗದ ಬಳಿ ಸರ್ಟಿಫಿಕೇಟ್ ಇದೆ. ನಾನು ಸರ್ಟಿಫಿಕೆಟ್ ಇಲ್ಲದ ಹಿಂದುಗಳ ಸಾಲಿಗೆ ಸೇರುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: Puneeth Rajkumar: ಅಭಿಮಾನಿಗಳು ದುಡುಕಬೇಡಿ, ನಿಮ್ಮ ಕುಟುಂಬ ನೋಡಿಕೊಳ್ಳಿ: ಶಿವರಾಜ್ ಕುಮಾರ್ ಕಿವಿಮಾತು
ಡಾ ರಾಜ್ ಕನಸಿನ ಕೂಸಾಗಿರುವ ಮೈಸೂರಿನ ಶಕ್ತಿಧಾಮ ಆಶ್ರಮಕ್ಕೆ ಪುನೀತ್ ರಾಜ್ ಕುಮಾರ್ ಎಲ್ಲವೂ ಆಗಿದ್ದರು