West Bengal Assembly Elections 2021: ಟಿಎಂಸಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗುತ್ತದೆ: ಸುವೇಂದು ಅಧಿಕಾರಿ
West Bengal Assembly Elections 2021: ನನಗೆ ನೀಡಿರುವ ಜವಾಬ್ದಾರಿಗಾಗಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಂದಿಗ್ರಾಮ ಮತ್ತು ಪಶ್ಚಿಮ ಬಂಗಾಳದಲ್ಲಿ ತಾವರೆ ಅರಳುವಂತೆ ಮಾಡುತ್ತೇನೆ.
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಕಾಶ್ಮೀರದಂತಾಗುತ್ತದೆ ಎಂದು ರಾಜ್ಯ ಬಿಜೆಪಿ ನಾಯಕ, ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಮುಚಿಪರದಲ್ಲಿ ನಿನ್ನೆ (ಮಾರ್ಚ್ 6) ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ನನಗೆ ಸವಾಲು ಏನಲ್ಲ. ನಾನು ನಂದಿಗ್ರಾಮಕ್ಕೆ ಮಮತಾ ಬ್ಯಾನರ್ಜಿಯನ್ನು ಸೋಲಿಸಲು ಹೋಗುತ್ತಿದ್ದೇನೆ. ಮಮತಾರನ್ನು ಮತ್ತೆ ಕೋಲ್ಕತ್ತಾಗೆ ಹಿಂದೆ ಕಳಿಸುತ್ತೇನೆ ಎಂದು ಸುವೇಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಬಳಿಕ ಸುವೇಂದು ಅಧಿಕಾರಿ ಮಾತನಾಡಿದ್ದಾರೆ. ನನಗೆ ನೀಡಿರುವ ಜವಾಬ್ದಾರಿಗಾಗಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಂದಿಗ್ರಾಮ ಮತ್ತು ಪಶ್ಚಿಮ ಬಂಗಾಳದಲ್ಲಿ ತಾವರೆ ಅರಳುವಂತೆ ಮಾಡುತ್ತೇನೆ. ಮಮತಾ ಬ್ಯಾನರ್ಜಿ ಈ ಚುನಾವಣೆಯನ್ನು 50 ಸಾವಿರ ಮತಗಳಿಂದ ಸೋಲುತ್ತಾರೆ ಎಂದು ಅಧಿಕಾರಿ ಭವಿಷ್ಯ ನುಡಿದಿದ್ದಾರೆ.
ಬಿಜೆಪಿಯಲ್ಲಿ ತೀರ್ಮಾನಗಳನ್ನು ಒಬ್ಬರೇ ಕೈಗೊಳ್ಳಲಾಗುವುದಿಲ್ಲ. ಈ ಪಕ್ಷದ ಬಗ್ಗೆ ಅಭಿಮಾನವಿದೆ. ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸುವೇಂದು ಹೀಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಇಂದು ಮೋದಿ ಭೇಟಿ ಪ್ರಧಾನಿ ನರೇಂದ್ರ ಮೋದಿ ಇಂದು (ಮಾರ್ಚ್ 7) ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬ್ರಿಗೇಡ್ ಗ್ರೌಂಡ್ನ ಪಕ್ಷದ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳ ಪ್ರಚಾರ ಭರ್ರಜರಿಯಾಗಿ ಸಾಗುತ್ತಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯಲಿರುವುದು ಖಚಿತವಾಗಿದೆ. ಶತಾಯಗತಾಯ ಬಂಗಾಳ ವಶಪಡಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸೋನಾರ್ ಬಾಂಗ್ಲಾ (ಚಿನ್ನದ ಬಾಂಗ್ಲಾ) ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
Kolkata: People have started arriving at Brigade Parade Ground for Prime Minister Narendra Modi’s rally today pic.twitter.com/uVnJBb8bvt
— ANI (@ANI) March 7, 2021
ಎಲ್ಪಿಜಿ ಬೆಲೆ ಏರಿಕೆ ವಿರುದ್ಧ ದೀದೀ ಪಾದಯಾತ್ರೆ ಬೆಲೆ ಏರಿಕೆ ವಿರುದ್ಧ ಪಶ್ಚಿಮ ಬಂಗಾಳ ಹಾಲಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಇಂದು (ಮಾರ್ಚ್ 7) ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಗ್ಯಾಸ್ ಸಿಲಿಂಡರ್ (LPG) ಬೆಲೆ ಏರಿಕೆ ವಿರುದ್ಧ ಅವರು ಪಾದಯಾತ್ರೆಯ ಸಮರ ಸಾರಿದ್ದಾರೆ. ಒಂದೆಡೆ, ಬಿಜೆಪಿ ಪ್ರಚಾರ ಸಭೆ ಕೈಗೊಂಡಿದ್ದು, ಮೋದಿ ಭೇಟಿ ನೀಡುವ ಕಾರ್ಯಕ್ರಮವಿದ್ದರೆ, ಬಂಗಾಳದಲ್ಲಿ ಮತ್ತೊಂದೆಡೆ ದೀದಿ ಪಾದಯಾತ್ರೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಕಣ ರಂಗೇರಿದೆ.
West Bengal: Chief Minister Mamata Banerjee will hold ‘Padyatra’ against the LPG price hike in Siliguri today pic.twitter.com/DBWCM6bcsw
— ANI (@ANI) March 7, 2021
Published On - 11:18 am, Sun, 7 March 21