ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಬಿಜೆಪಿ ದಾಳಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ವಿಪಕ್ಷ ನಾಯಕರಿಗೆ ಪತ್ರ ಬರೆದು ಕರೆ ನೀಡಿದ ಮಮತಾ ಬ್ಯಾನರ್ಜಿ
West Bengal Assembly Elections 2021: ಮಮತಾ ಬ್ಯಾನರ್ಜಿ ಅವರು ಬುಧವಾರ ಸೋನಿಯಾ ಗಾಂಧಿ, ಶರದ್ ಪವಾರ್, ಎಂ.ಕೆ ಸ್ಟಾಲಿನ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ, ಅರವಿಂದ್ ಕೇಜ್ರಿವಾಲ್ ಮತ್ತು ನವೀನ್ ಪಟ್ನಾಯಿಕ್ ಅವರಿಗೆ ಪತ್ರ ಬರೆದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಕರೆ ನೀಡಿದ್ದಾರೆ.
ಕೊಲ್ಕತ್ತಾ : ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿ ವಿರುದ್ಧ ಒಗ್ಗಟ್ಟಾಗಿ ಮತ್ತು ಪರಿಣಾಮಕಾರಿ ಹೋರಾಡಲು ಸಮಯ ಸನ್ನಿಹಿತವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿಪಕ್ಷ ನಾಯಕರಿಗೆ ಪತ್ರ ಬರೆದು ಕರೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಬುಧವಾರ ಸೋನಿಯಾ ಗಾಂಧಿ, ಶರದ್ ಪವಾರ್, ಎಂ.ಕೆ ಸ್ಟಾಲಿನ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ, ಅರವಿಂದ್ ಕೇಜ್ರಿವಾಲ್ ಮತ್ತು ನವೀನ್ ಪಟ್ನಾಯಿಕ್ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಪಾಲರ ಕಚೇರಿಯನ್ನು ಬಳಸಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಮಮತಾ ಹೇಳದ್ದಾರೆ .
ರಾಷ್ಟ್ರೀಯ ರಾಜಧಾನಿ ತಿದ್ದುಪಡಿ (GNCTD) ಮಸೂದೆಯನ್ನು ಅಂಗೀಕರಿಸಿರುವುದು ಗಂಭೀರ ಬೆಳವಣಿಗೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಎಲ್ಲಾ ಅಧಿಕಾರಗಳನ್ನು ಬಿಜೆಪಿ ಕಸಿದುಕೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ. ಜಿಎನ್‌ಸಿಟಿಡಿ ಮಸೂದೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ, ದೆಹಲಿಯ ಆಮ್ ಆದ್ಮಿ ಪಾರ್ಟಿ (AAP) ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಯನ್ನು ಪಡೆಯುವಂತೆ ಮಾಡುತ್ತದೆ.
ಲೆಫ್ಟಿನೆಂಟ್ ಗವರ್ನರ್ ಅವರನ್ನು ದೆಹಲಿಯ ಅಘೋಷಿತ ವೈಸರಾಯ್ ಆಗಿ ಮಾಡಲಾಗಿದ್ದು, ಅವರು ಗೃಹ ಸಚಿವ ಮತ್ತು ಪ್ರಧಾನಿಯವರ ಬದಲಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಮತಾ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ದೂರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಬೆಂಬಲಿಗರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಟಿಎಂಸಿ ನಾಯಕಿಯ ಹೇಳಿಕೆಗಳಿಂದಾಗಿ ಕಳೆದ ಕೆಲವು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರಗಳು ನಡೆದಿವೆ ಎಂದು ಬಿಜೆಪಿ ಹೇಳಿದೆ.
ಈ ಆರೋಪಕ್ಕೆ ಸಾಕ್ಷಿ ಎಂಬಂತೆ ಮಾರ್ಚ್ 29ರಂದು ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ನಡೆಸಿದ ಸಭೆಯ ವಿಡಿಯೊವೊಂದನ್ನು ನೀಡಲಾಗಿದೆ. ಈ ಸಭೆಯಲ್ಲಿ ಮಮತಾ ಅವರು ಕೇಂದ್ರ ಅರೆಸೇನಾ ಪಡೆ ಒಂದು ದಿನ ಹೋಗಬಹುದು. ಆದರೆ ನಾನು ಬಂಗಾಳದಲ್ಲಿಯೇ ಇರುತ್ತೇನೆ. ಆಗ ನನ್ನ ವಿಪಕ್ಷದವರನ್ನು ಕಾಪಾಡುವವರು ಯಾರು ಎಂದು ಮಮತಾ ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಮತಾ ಬ್ಯಾನರ್ಜಿ ಅವರ ಹೇಳಿಕೆ ವಿರೋಧಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಬಿಜೆಪಿ ದೂರಿನ ಪ್ರತಿಗೆ ಬಿಜೆಪಿ ನಾಯಕ ಶಿಶಿರ್ ಬಜೋರಿಯಾ, ಅರುಣ್ ಸಿಂಗ್ ಮತ್ತು ಪ್ರತಾಪ್ ಬ್ಯಾನರ್ಜಿ ಸಹಿ ಹಾಕಿದ್ದಾರೆ. ಮಮತಾ ಅವರ ಹೇಳಿಕೆಯು ಶಾಂತಿಯುತ ಚುನಾವಣೆಗೆ ಬೆದರಿಕೆಯನ್ನೊಡ್ಡುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಇತರ ರಾಜ್ಯಗಳ ಗೂಂಡಾಗಳು ನಂದಿಗ್ರಾಮಕ್ಕೆ ಬಂದಿದ್ದಾರೆ: ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮಮತಾ ಮನವಿ
ನಂದಿಗ್ರಾಮದಲ್ಲಿ ಸಮಸ್ಯೆ ಸೃಷ್ಟಿಸುವುದಕ್ಕಾಗಿ ಇತರ ರಾಜ್ಯಗಳಿಂದ ಗೂಂಡಾಗಳು ಪ್ರವೇಶಿಸಿದ್ದಾರೆ. ಅವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಪೂರ್ವ ಮೇದಿನಿಪುರ್ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಮತಾ, ನಂದಿಗ್ರಾಮದಲ್ಲಿರುವ ಮತದಾರರ ಮೇಲೆ ಪ್ರಭಾವ ಬೀರಲು ಇತರ ರಾಜ್ಯಗಳಿಂದ ಗೂಂಡಾಗಳು ಬಂದಿದ್ದಾರೆ. ಬಲರಾಮಪುರ್ ಮತ್ತು ಇತರ ಪ್ರದೇಶದ ಗ್ರಾಮಗಳಲ್ಲಿ ಅವರು ಅಡ್ಡಾಡುತ್ತಿದ್ದಾರೆ. ಅವರು ಮತದಾರರ ಮೇಲೆ ಭಯ ಹುಟ್ಟಿಸುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ .
ಇದನ್ನೂ ಓದಿ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಳ್ಳಲಿದ್ದಾರೆ ಎಂಬ ನಕಲಿ ಸಮೀಕ್ಷೆ ವೈರಲ್; ಬಿಜೆಪಿ ವಿರುದ್ದ ಕಿಡಿಕಾರಿದ ಟಿಎಂಸಿ
Published On - 6:35 pm, Wed, 31 March 21