
ನವದೆಹಲಿ, ನವೆಂಬರ್ 25: ದೆಹಲಿಯ ಪ್ರೀತ್ ವಿಹಾರದಲ್ಲಿರುವ ಕೆಫೆಯಲ್ಲಿ ಯುವತಿ ಮೇಲೆ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಇಬ್ಬರು ಮಹಿಳೆಯರು ಸೇರಿ ಮೂವರನ್ನು ಬಂಧಿಸಲಾಗಿದೆ. ಮೂವರು ತಲೆಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂತ್ರಸ್ತೆ ಅದೇ ಕೆಫೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆರೋಪಿಗಳೆಲ್ಲರೂ ಕೂಡ ಆಕೆಯ ಸಹೋದ್ಯೋಗಿಗಳೇ ಆಗಿದ್ದಾರೆ. ಕೆಲಸದ ಸ್ಥಳದಲ್ಲಿ ಹೆಣ್ಣುಮಕ್ಕಳ ನೆರಳಾಗಿ ನಿಲ್ಲಬೇಕಿದ್ದ ಸಹೋದ್ಯೋಗಿಗಳೇ ಇಂಥಾ ದುಷ್ಕೃತ್ಯವೆಸಗಿದ್ದು ಆತಂಕ ಮೂಡಿಸಿದೆ.
ಪಾರ್ಟಿ ವೇಳೆ ಇಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಉಳಿದವರು ಆರೋಪಿಗಳಿಗೆ ಸಹಾಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಇಬ್ಬರು ಮಹಿಳೆಯರ ಮೇಲೆ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ ಮೂವರನ್ನು ಬಂಧಿಸಲಾಗಿದೆ.
ಸಂತ್ರಸ್ತ ಯುವತಿ ಮತ್ತು ಆರೋಪಿಗಳು ಒಂದೇ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಎಲ್ಲರೂ ಸೇರಿ ಪ್ರೀತ್ ವಿಹಾರ್‌ನಲ್ಲಿರುವ ‘ಸಲ್ತನತ್ ಕೆಫೆ’ಯಲ್ಲಿ ಪಾರ್ಟಿ ಆಯೋಜಿಸಿದ್ದರು. ರಾತ್ರಿ 11.30ಕ್ಕೆ ಕೆಫೆ ಮುಚ್ಚಿದರೂ, ಗುಂಪಿನಲ್ಲಿದ್ದ ಒಬ್ಬರ ಬಳಿ ಕೆಫೆಯ ಕೀ ಇದ್ದ ಕಾರಣ ಪಾರ್ಟಿ ಮುಂದುವರೆದಿತ್ತು. ಮದ್ಯಪಾನ ಮತ್ತು ನೃತ್ಯದಲ್ಲಿ ತೊಡಗಿದ್ದ ಗುಂಪು ಮಂಗಳವಾರ ಬೆಳಗಿನ ಜಾವ ಸುಮಾರು 3.30ಕ್ಕೆ ಕೆಫೆಯಿಂದ ಹೊರಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ತನಿಖೆಗಾಗಿ ಎಸ್ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪಾತ್ರ, ಘಟನೆಯ ಸಂಪೂರ್ಣ ವಿವರ ಮತ್ತು ಕೆಫೆಯಲ್ಲಿ ನಡೆದ ಘಟನೆಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪ ಸಾಬೀತಾಗುವವರೆಗೆ ಬಂಧಿತರು ಸೇರಿದಂತೆ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಪರಿಗಣಿಸಲಾಗುತ್ತದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, 22 ವರ್ಷದ ಯುವತಿ ಪೂರ್ವ ದೆಹಲಿಯ ಕರ್ಕರ್ಡೂಮಾದ ಕ್ರಾಸ್ ರಿವರ್ ಮಾಲ್‌ನಲ್ಲಿರುವ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿಗಳೂ ಅದೇ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲವು ವರದಿಗಳ ಪ್ರಕಾರ, ಕೆಫೆಯಿಂದ ಹೊರಬಂದ ಬಳಿಕ ಈ ಘಟನೆ ನಡೆದಿದೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಇತರ ವರದಿಗಳಲ್ಲಿ ಪಾರ್ಟಿಯ ಸಂದರ್ಭದಲ್ಲೇ ಘಟನೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ನಿಖರವಾಗಿ ಯಾವ ಸ್ಥಳದಲ್ಲಿ ಮತ್ತು ಯಾವ ಸಮಯದಲ್ಲಿ ಘಟನೆ ನಡೆದಿದೆ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕಿದೆ.
ಘಟನೆ ನಡೆದ ತಕ್ಷಣ ಯುವತಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿರಲಿಲ್ಲ. ಸಿಸಿಟಿವಿ ದೃಶ್ಯಗಳಲ್ಲಿ ಆಕೆ ಒಬ್ಬ ಪುರುಷ ಸ್ನೇಹಿತ ಮತ್ತು ಇಬ್ಬರು ಮಹಿಳೆಯರೊಂದಿಗೆ ವಾಹನದಲ್ಲಿ ತೆರಳಿರುವುದು ಕಂಡುಬಂದಿದೆ ಎನ್ನಲಾಗಿದೆ. ಪೊಲೀಸರು ಸಂತ್ರಸ್ತೆಯ ಹೇಳಿಕೆ, ಸಿಸಿಟಿವಿ ದೃಶ್ಯಗಳು ಮತ್ತು ಪಾರ್ಟಿಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ಪಾತ್ರವನ್ನು ಪರಿಶೀಲಿಸುತ್ತಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆಹಚ್ಚುವುದು ಮತ್ತು ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ