Explainer | ಇನ್ಸ್ಟಂಟ್ ಲೋನ್ ಕರ್ಮಕಾಂಡ: ಸ್ವಲ್ಪ ಯಾಮಾರಿದ್ರೂ ಕಿರುಕುಳ ಗ್ಯಾರಂಟಿ!
ಹೆಚ್ಚಿನ ಬಡ್ಡಿಯೊಂದಿಗೆ ನಿಮಗೆ ಸಾಲವೇನೋ ಸಿಗುತ್ತದೆ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. 5 ಸಾವಿರ ರೂಪಾಯಿ ಸಾಲ ಪಡೆದರೆ ಕಂಪೆನಿ ಪ್ರೊಸೆಸಿಂಗ್ ಶುಲ್ಕ ಹಾಗೂ ಜಿಎಸ್ಟಿ ಎಂದು 1,180 ರೂಪಾಯಿ ಕಟ್ ಮಾಡಿಕೊಳ್ಳುತ್ತದೆ. ಹೀಗಾಗಿ, ಕೊನೆಗೆ ನಿಮ್ಮ ಖಾತೆಗೆ ಬೀಳೋದು ಕೇವಲ 3,820 ರೂಪಾಯಿ ಮಾತ್ರ!
ಬ್ಯಾಂಕ್ನಲ್ಲಿ ಸಾಲ ಪಡೆಯೋದು ಈಗ ಮೊದಲಿನಷ್ಟು ಸುಲಭವಿಲ್ಲ. ಸೂಕ್ತ ದಾಖಲೆ ಇಲ್ಲದೆ ಬ್ಯಾಂಕ್ನಲ್ಲಿ ನಿಮಗೆ ಒಂದು ರೂಪಾಯಿ ಸಾಲ ಕೂಡ ಸಿಗುವುದಿಲ್ಲ. ಒಂದೊಮ್ಮೆ ನಿಮಗೆ ಸಾಲ ಸಿಗುತ್ತದೆ ಎಂದಾದರೂ ಅದಕ್ಕೆ ಸ್ವಲ್ಪ ಸಮಯ ಕಾಯಲೇಬೇಕು. ಇದೇ ಕಾರಣಕ್ಕೆ ಸಾಕಷ್ಟು ಜನ ತಕ್ಷಣಕ್ಕೆ ಸಾಲ ನೀಡುವ ಆ್ಯಪ್ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಈ ರೀತಿ ಇನ್ಸ್ಟಂಟ್ ಸಾಲ ಪಡೆಯುವ ಮುನ್ನ ಕೊಂಚ ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ, ಈ ರೀತಿ ಸಾಲ ಪಡೆದು ನೀವು ನಂತರ ಕಿರುಕುಳಕ್ಕೆ ತುತ್ತಾಗಬಹುದು! ಹೀಗೆ ಆ್ಯಪ್ಗಳ ಮೂಲಕ ಸಾಲ ನೀಡಿ ಟಾರ್ಚರ್ ನೀಡುತ್ತಿದ್ದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಏನಿದು ಇನ್ಸ್ಟಂಟ್ ಸಾಲ ಪ್ರಕರಣ? ಆ ಬಗ್ಗೆ ಇಲ್ಲಿದೆ ಮಾಹಿತಿ.
ಆತ್ಮಹತ್ಯೆಗೆ ಶರಣಾಗಿದ್ದ ಸಾಲಗಾರರು ತೆಲಂಗಾಣ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಖಾಸಗಿ ಕಂಪೆನಿಯ ಟೆಕ್ಕಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಕಾರಣಕ್ಕೆ ಮಾಡಿಕೊಂಡ ಆತ್ಮಹತ್ಯೆ ಇರಬಹುದು ಎನ್ನಿಸಿದರೂ ಪೊಲೀಸರಿಗೆ ಆ ಬಗ್ಗೆ ಅನುಮಾನ ಇತ್ತು. ಅನುಮಾನದ ಬೆನ್ನು ಹತ್ತಿ ಹೋದಾಗ ಆತ್ಮಹತ್ಯೆಯ ನಿಜವಾದ ಕಾರಣ ಬಯಲಾಗಿತ್ತು. ಅವರಿಬ್ಬರೂ ಇನ್ಸ್ಟಂಟ್ ಆ್ಯಪ್ ಮೂಲಕ ಸಾಲ ಪಡೆದಿದ್ದರು. ಆದರೆ, ಸಾಲ ಪಡೆದ ನಂತರ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಟಿಲಿ ಕಾಲರ್ಗಳು ಹಾಗೂ ರಿಕವರಿ ಏಜೆಂಟ್ಗಳು ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಅಷ್ಟೇ ಅಲ್ಲ ಅವರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾಲಗಾರರು ಎನ್ನುವ ಹಣೆಪಟ್ಟಿ ಹಚ್ಚಿದ್ದರು. ಇಷ್ಟಕ್ಕೇ ಟಾರ್ಚರ್ ನಿಲ್ಲಿಸದೇ, ಸಾಲಗಾರರು ಹಾಗೂ ಅವರ ಕುಟುಂಬದವರಿಗೆ ಅಶ್ಲೀಲ ಶಬ್ದಗಳಲ್ಲಿ ಬೈದಿದ್ದರು. ಇದರಿಂದಾಗಿ ಸಾಲಪಡೆದವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದರು.
ಇನ್ಸ್ಟಂಟ್ ಲೋನ್ ಆ್ಯಪ್ ಕೇಸ್ ಏನು? ಅನಧಿಕೃತ ಸಾಲದಾತರು ಅತಿಯಾದ ಬಡ್ಡಿದರದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತ್ವರಿತವಾಗಿ ವೈಯಕ್ತಿಕ ಸಾಲಗಳನ್ನು ನೀಡುತ್ತಾರೆ. ಗೂಗಲ್ ಪ್ಲೇಸ್ಟೋರ್ನಲ್ಲಿ ಈ ಆ್ಯಪ್ಗಳು ಲಭ್ಯ ಇವೆ. ಆದರೆ, ಇವರಿಗೂ ಬ್ಯಾಂಕ್ಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ನಿಮ್ಮ ವೈಯಕ್ತಿಕ ಮಾಹಿತಿ, ಆಧಾರ್ ಕಾರ್ಡ್ ಕಾಪಿ ಹಾಗೂ ಪಾನ್ ಕಾರ್ಡ್ ಕಾಪಿಯನ್ನು ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು. ಇದಾದ ನಂತರ ತಕ್ಷಣಕ್ಕೆ ₹1,000 ದಿಂದ ₹50 ಸಾವಿರ ತನಕ ನಿಮಗೆ ಸಾಲ ಸಿಗುತ್ತದೆ. ಅದೂ ಕಣ್ಮುಚ್ಚಿ ಬಿಡುವುದರೊಳಗೆ. ಇಲ್ಲಿರುವ ಏಕೈಕ ಷರತ್ತು ಅಂದರೆ ಏಳು ದಿನಗಳಲ್ಲಿ ನೀವು ಸಾಲ ಹಿಂದಿರುಗಿಸಲೇಬೇಕು!
ಹೆಚ್ಚಿನ ಬಡ್ಡಿಯೊಂದಿಗೆ ನಿಮಗೆ ಸಾಲವೇನೋ ಸಿಗುತ್ತದೆ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. 5 ಸಾವಿರ ರೂಪಾಯಿ ಸಾಲ ಪಡೆದರೆ ಕಂಪೆನಿ ಪ್ರೊಸೆಸಿಂಗ್ ಶುಲ್ಕ ಹಾಗೂ ಜಿಎಸ್ಟಿ ಎಂದು 1,180 ರೂಪಾಯಿ ಕಟ್ ಮಾಡಿಕೊಳ್ಳುತ್ತದೆ. ಹೀಗಾಗಿ, ಕೊನೆಗೆ ನಿಮ್ಮ ಖಾತೆಗೆ ಬೀಳೋದು ಕೇವಲ 3,820 ರೂಪಾಯಿ ಮಾತ್ರ!
ಸಾಲ ಪಡೆದ ನಂತರ ನೀವು ಅದನ್ನು ವಾಪಾಸು ಮಾಡದಿದ್ದರೆ, ಕಾಲ್ ಸೆಂಟರ್ನಿಂದ ನಿಮಗೆ ಕರೆ ಬರಲಿದೆ. ಒಂದೊಮ್ಮೆ ನೀವು ನಂಬರ್ ಬದಲಿಸಿ ಹೊಸ ನಂಬರ್ ಪಡೆದರೂ ಅವರು ನಿಮ್ಮನ್ನು ಟ್ರ್ಯಾಕ್ ಮಾಡಿ ಬಿಡುತ್ತಾರೆ. ಕೊನೆಗೆ ನೀವು ಟ್ರ್ಯಾಪ್ನಲ್ಲಿ ಸಿಕ್ಕಿ ಬಿದ್ದಂತೆಯೇ.
ಈ ಆ್ಯಪ್ಗಳು ಯಾವುವು? ಇವುಗಳನ್ನು ನಡೆಸೋರು ಯಾರು? ಈ ರೀತಿ ಇನ್ಸ್ಟಂಟ್ ಸಾಲ ನೀಡುವ ಸುಮಾರು 30 ಆ್ಯಪ್ಗಳನ್ನು ತೆಲಂಗಾಣ ಪೊಲೀಸರು ಗುರುತಿಸಿದ್ದಾರೆ. ಕ್ಯಾಶ್ ಮಾಮಾ, ಲೋನ್ ಜೋನ್, ಧನ ಧನ ಲೋನ್, ಕ್ಯಾಶ್ ಅಪ್, ಕ್ಯಾಶ್ ಬಸ್, ಮೆರಾ ಲೋನ್, ಹೇ ಫಿಶ್, ಮಂಕಿ ಕ್ಯಾಶ್, ಕ್ಯಾಶ್ ಎಲಿಫಂಟ್, ವಾಟರ್ ಎಲಿಫಂಟ್, ಕ್ವಿಕ್ ಕ್ಯಾಶ್, ಕಿಶತ್, ಲೋನ್ ಕ್ಲೌಡ್, ಇನ್ಸ್ಟಾ ರುಪೀ ಲೋನ್, ಫ್ಲಾಶ್ ರುಪೋಸ್ ಕ್ಯಾಶ್ ಲೋನ್, ಮಾಸ್ಟರ್ ಮೆಲನ್ ಕ್ಯಾಶ್ಟ್ರೈನ್, ಗೆಟ್ ರುಪೀ, ಇಬೆ ಲೋನ್, ಪಂಡಾ ಐ ಕ್ರೆಡಿಟ್, ಈಸಿ ಲೋನ್, ರುಪೀ ಕ್ಲಿಕ್, ಒಕ್ಯಾಶ್, ಕ್ಯಾಶ್ಮ್ಯಾಪ್, ಸ್ನಾಪಿಟ್, ರಾಪಿಡ್ ರುಪೀ, ರೆಡಿ ಕ್ಯಾಶ್, ಲೋನ್ ಬಜಾರ್, ಲೋನ್ಬ್ರೊಮ ಕ್ಯಾಶ್ ಪೋಸ್ಟ್, ರುಪೀಗೋ, ಕ್ಯಾಶ್ ಪೋರ್ಟ್, ಆರ್ಎಸ್ ರಶ್, ಪ್ರೋ ಫಾರ್ಚೂನ್ ಬ್ಯಾಗ್, ರೋಬೋ ಕ್ಯಾಶ್, ಕ್ಯಾಶ್ಟಿಎಂ, ಉಧಾರ್ ಲೋನ್, ಕ್ರೆಡಿಟ್ ಫ್ರೀ ಹೆಸರಿನ ಆ್ಯಪ್ಗಳು ಇನ್ಸ್ಟಂಟ್ ಸಾಲ ನೀಡುತ್ತಿದ್ದವು.
ಆನಿಯನ್ ಕ್ರೆಡಿಟ್ ಮತ್ತು ಕ್ರೆಡ್ ಬಾಕ್ಸ್ ಟೆಕ್ನಾಲಜಿ ಸಂಸ್ಥೆಗಳು ಕ್ಯಾಶ್ ಮಾಮಾ, ಲೋನ್ ಜೋನ್, ಧನ ಧನ ಲೋನ್, ಕ್ಯಾಶ್ ಅಪ್, ಕ್ಯಾಶ್ ಬಸ್, ಮೆರಾ ಲೋನ್ ಮತ್ತು ಕ್ಯಾಶ್ ಜೋನ್ ನಡೆಸುತ್ತಿದ್ದರು. ಕೆ.ಶರತ್ ಚಂದ್ರ ಇದರ ಮುಖ್ಯಸ್ಥ ಹಾಗೂ ಪುಷ್ಪಲತಾ ಎಂಬಾಕೆ ಇದರ ನಿರ್ದೇಶಕಿ. ಸದ್ಯ ತೆಲಂಗಾಣ ಪೊಲೀಸರು ಈ ಆ್ಯಪ್ಗಳ ಮೇಲೆ ದಾಳಿ ನಡೆಸಿದ್ದಾರೆ.
ಫಟಾಫಟ್ ಸಾಲಕ್ಕೆ ಶೇ.35ರಷ್ಟು ಬಡ್ಡಿ! ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಲ್ಲದೇ, ನಿಮ್ಮ ಕುಟುಂಬದ ಮಾಹಿತಿ ಮತ್ತು ಅವರ ಮೊಬೈಲ್ ಸಂಖ್ಯೆ ನೀಡೋದು ಕೂಡ ಇಲ್ಲಿ ಕಡ್ಡಾಯ. ಮೊದಲ ಬಾರಿ ಸಾಲ ಪಡೆದುಕೊಂಡು ಅದನ್ನು ಹಿಂದಿರುಗಿಸಿದ ನಂತರ ನಿಮಗೆ ಕಸ್ಟಮರ್ ಕೇರ್ನಿಂದ ಕಾಲ್ ಬರುತ್ತದೆ. ಇದೇ ರೀತಿ ಸಾಲ ನೀಡುವ ಸಾಕಷ್ಟು ಆ್ಯಪ್ಗಳ ಬಗ್ಗೆ ನಿಮಗೆ ಅವರು ಮಾಹಿತಿ ನೀಡುತ್ತಾರೆ. ಅಷ್ಟೇ ಅಲ್ಲ, ನೀವು ಹೆಚ್ಚಿನ ಸಾಲ ಪಡೆಯಲು ಅರ್ಹರು ಎಂದು ಬೆಣ್ಣೆ ಹಚ್ಚುತ್ತಾರೆ. ಸುಲಭವಾಗಿ ಸಾಲ ಸಿಗುವ ಆಸೆಗೆ ಬಿದ್ದು ನೀವು 50 ಸಾವಿರ ರೂಪಾಯಿ ಲೋನ್ ಪಡೆದಿರಿ ಎಂದಿಟ್ಟುಕೊಳ್ಳಿ. ನಿಮ್ಮ ಕತೆ ಮುಗಿದಂತೆ. ಏಕೆಂದರೆ ಈ ಆ್ಯಪ್ಗಳಲ್ಲಿ ₹50 ಸಾವಿರ ಸಾಲಕ್ಕೆ ಶೇ. 35 ಬಡ್ಡಿದರ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಹಣ ಹಿಂದಿರುಗಿಸಲು ವಿಫಲರಾದರೆ ದಿನಕ್ಕೆ 3 ಸಾವಿರ ರೂಪಾಯಿಯಂತೆ ದಂಡವನ್ನೂ ಕಟ್ಟಬೇಕಾಗುತ್ತದೆ.
ಇಲಿ ಕತ್ತರಿಯಲ್ಲಿ ಸಿಕ್ಕಂತಾಗುತ್ತದೆ ಸಾಲಗಾರರ ಬಾಳು ನೀವು ಸಾಲ ಪಡೆದು 7 ದಿನದಲ್ಲಿ ವಾಪಾಸ್ ಮಾಡಿಲ್ಲ ಎಂದರೆ ನಿಮಗೆ ಕಸ್ಟಮರ್ ಕೇರ್ನಿಂದ ಕಾಲ್ ಬರುತ್ತದೆ. ಸಾಲ ನೀಡುವಾಗ ಮಧುರ ಧ್ವನಿಯಲ್ಲಿ ಮಾತನಾಡಿಸಿದವರೇ ಈಗ ನಿಮಗೆ ಧಮ್ಕಿ ಹಾಕುತ್ತಾರೆ. ಬ್ಲಾಕ್ ಮೇಲ್ ಮಾಡುತ್ತಾರೆ. ಹಣ ಹಿಂದಿರುಗಿಸದಿದ್ದರೆ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಕಿರುಕುಳ ನೀಡುತ್ತಾರೆ! ಅಲ್ಲಿಗೆ ಸಾಲ ಪಡೆದವನ ಎದೆಯಲ್ಲಿ ಢವಢವ ಶುರುವಾಗುತ್ತದೆ.
ಇಲ್ಲಿ ಮೂರು ವಿಧಗಳಲ್ಲಿ ಸಾಲಗಾರರನ್ನು ವಿಂಗಡನೆ ಮಾಡಲಾಗುತ್ತದೆ. ಅವಧಿ ಮುಗಿದ 1-3 ದಿನಗಳವರೆಗೆ ಸಾಲ ಹಿಂದಿರುಗಿಸದಿದ್ದರೆ ಅವರನ್ನು ಎಸ್1 ಸಾಲಿಗೆ, 4-10 ದಿನಗಳವರೆಗೆ ಸಾಲ ಹಿಂದಿರುಗಿಸದಿದ್ದರೆ ಎಸ್2, ಹಾಗೂ 10-30 ದಿನಗಳವರೆಗೆ ಸಾಲ ಹಿಂದಿರುಗಿಸದಿದ್ದರೆ ಎಸ್3 ಬಕೆಟ್ ಸಾಲಿಗೆ ಸೇರಿಸಲಾಗುತ್ತದೆ. ನೀವು ಯಾವ ಸಾಲಿನಲ್ಲಿದ್ದೀರಾ ಎನ್ನುವುದನ್ನು ಆಧರಿಸಿ ನಿಮಗೆ ನೀಡಬೇಕಾದ ಕಿರುಕುಳದ ಹಂತ ನಿರ್ಧಾರವಾಗುತ್ತದೆ.
ಆ್ಯಪ್ ಮೂಲಕ ನೀಡುತ್ತಿದ್ದ ಸಾಲಕ್ಕೆ ಶೇ 35 ಬಡ್ಡಿ! ರೈಡ್ ವೇಳೆ ಹೊರಬಿತ್ತು ಭಯಾನಕ ಸತ್ಯ
ಮೈಕ್ರೊ ಫೈನಾನ್ಸ್ ಕಂಪನಿಗಳ ಮೇಲೆ ಸಿಐಡಿ ದಾಳಿ: ಆರ್ಬಿಐ ನಿಯಮ ಉಲ್ಲಂಘನೆ ಆರೋಪ