ದೆಹಲಿ: ವಾಟ್ಸ್ಆ್ಯಪ್ ತನ್ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ವಿಚಾರವಾಗಿ, ಭಾರತೀಯ ಬಳಕೆದಾರರನ್ನು ಯುರೋಪಿಯನ್ ಬಳಕೆದಾರರಿಗಿಂತ ಭಿನ್ನವಾಗಿ ಕಾಣುತ್ತಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಭಾರತೀಯ ವಾಟ್ಸ್ಆ್ಯಪ್ ಬಳಕೆದಾರರು ಸಾಮಾಜಿಕ ಜಾಲತಾಣದ ಹೊಸ ಪ್ರೈವೆಸಿ ಪಾಲಿಸಿ ವಿಚಾರದಲ್ಲಿ, ಏಕಪಕ್ಷೀಯವಾಗಿ ಬದಲಾವಣೆಗೆ ಒಳಗಾಗಿದ್ದಾರೆ. ಕೇವಲ ಭಾರತೀಯ ಬಳಕೆದಾರರನ್ನು ಕೇಂದ್ರೀಕರಿಸಿ, ಫೇಸ್ಬುಕ್ ಈ ರೀತಿ ವರ್ತಿಸಿರುವುದು ನಮ್ಮ ಕಾಳಜಿಗೆ ಕಾರಣ ಎಂದು ಸರ್ಕಾರ ಹೈಕೋರ್ಟ್ಗೆ ಹೇಳಿಕೆ ನೀಡಿದೆ.
ಈ ಕುರಿತಾಗಿ, ನ್ಯಾಯಮೂರ್ತಿ ಸಂಜೀವ್ ಸಚ್ದೇವ ಮುಂದೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹೇಳಿಕೆ ನೀಡಿದ್ದಾರೆ. ಫೇಸ್ಬುಕ್ ಒಡೆತನದ, ವಾಟ್ಸ್ಆ್ಯಪ್ನ ಹೊಸ ಗೌಪ್ಯತಾ ನೀತಿಗಳ ಬಗ್ಗೆ ವಿಚಾರಣೆ ನಡೆಸುವ ವೇಳೆ ಈ ಮಾಹಿತಿ ನೀಡಲಾಗಿದೆ.
ಭಾರತೀಯ ವಾಟ್ಸ್ಆ್ಯಪ್ ಬಳಕೆದಾರರಿಗೆ, ತಮ್ಮ ಮಾಹಿತಿಯನ್ನು (ಡಾಟಾ) ಫೇಸ್ಬುಕ್ನ ಇತರ ಕಂಪೆನಿಗಳೊಂದಿಗೆ ಹಂಚಿಕೊಳ್ಳುವ ವಿಚಾರದಲ್ಲಿ ಆಯ್ಕೆ ನೀಡಿಲ್ಲ. ವಾಟ್ಸ್ಆ್ಯಪ್ ನೀತಿಯನ್ನು ಒಪ್ಪಿಕೊಳ್ಳಬೇಕು ಅಥವಾ ಬಳಕೆ ನಿಲ್ಲಿಸಬೇಕು ಎಂಬ ಎರಡೇ ಆಯ್ಕೆಗಳು ಬಳಕೆದಾರರ ಎದುರು ಇದೆ. ಇದು ಸರಿಯಲ್ಲ ಎಂದು ವಿಚಾರಣೆಯ ವೇಳೆ ಚೇತನ್ ಶರ್ಮಾ ಹೇಳಿದ್ದಾರೆ. ಈ ನೀತಿಯು, ಬಳಕೆದಾರರ ಮಾಹಿತಿ ಗೌಪ್ಯತೆ ಹಾಗೂ ಮಾಹಿತಿ ಸುರಕ್ಷತೆಯನ್ನು ಉಲ್ಲಂಘಿಸಿದಂತೆ ಎಂದು ಶರ್ಮಾ ಕೋರ್ಟ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ ಹಾಗೂ ಈ ವಿಚಾರವನ್ನು ಈಗಾಗಲೇ ಪರಿಶೀಲನೆ ನಡೆಸುತ್ತಿದೆ. ಹೆಚ್ಚಿನ ಮತ್ತು ಸೂಕ್ತ ಮಾಹಿತಿಗಳಿಗಾಗಿ ಸರ್ಕಾರ, ಫೇಸ್ಬುಕ್ ಜೊತೆ ಸಂವಹನ ನಡೆಸಿರುವುದಾಗಿ ಶರ್ಮಾ ಮಾಹಿತಿ ನೀಡಿದ್ದಾರೆ. ಫೇಸ್ಬುಕ್ ಪರ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಸಂವಹನ ಸಂದೇಶವನ್ನು ಸ್ವೀಕರಿಸಿದ್ದೇವೆ ಮತ್ತು ಪ್ರತಿಕ್ರಿಯಿಸುತ್ತೇವೆ ಎಂದು ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ. ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 1ಕ್ಕೆ ಮುಂದೂಡಿದೆ.
ವಾಟ್ಸ್ಆ್ಯಪ್ ಹೊಸ ನೀತಿಯಿಂದ ಸಂವಿಧಾನದ ಆಶಯ ಉಲ್ಲಂಘನೆ: ದೆಹಲಿ ಹೈಕೋರ್ಟ್ಗೆ ಅರ್ಜಿ
ವಾಟ್ಸಾಪ್-ಟೆಲಿಗ್ರಾಂ-ಸಿಗ್ನಲ್: ಯಾವ ಆ್ಯಪ್ ಹೆಚ್ಚು ಸೇಫ್? ಇಲ್ಲಿದೆ ವಿವರ
Published On - 4:03 pm, Mon, 25 January 21