ಮಿತಿ ಮೀರಿ ಟಿಕೆಟ್ ಮಾರಾಟ ಮಾಡಿದ್ದೇಕೆ?; ದೆಹಲಿ ಕಾಲ್ತುಳಿತದ ಬಗ್ಗೆ ರೈಲ್ವೆ ಇಲಾಖೆಗೆ ಹೈಕೋರ್ಟ್ ತರಾಟೆ
ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತದ ಬಗ್ಗೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ‘ನೀವು ಹೆಚ್ಚುವರಿ ಟಿಕೆಟ್‌ಗಳನ್ನು ಏಕೆ ಮಾರಾಟ ಮಾಡಿದ್ದೀರಿ?’ ಎಂದು ರೈಲ್ವೆ ಇಲಾಖೆಯನ್ನು ಪ್ರಶ್ನಿಸಿದೆ. ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ಪರಿಶೀಲಿಸಲು ದೆಹಲಿ ಹೈಕೋರ್ಟ್ ರೈಲ್ವೆ ಇಲಾಖೆಗೆ ಆದೇಶಿಸಿದೆ. ಫೆಬ್ರವರಿ 15ರಂದು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ ನಂತರ ಈ ಬೆಳವಣಿಗೆ ನಡೆದಿದೆ.

ನವದೆಹಲಿ: ನವದೆಹಲಿಯ ರೈಲು ನಿಲ್ದಾಣದಲ್ಲಿ 18 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಹೈಕೋರ್ಟ್ ರೈಲ್ವೆ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ‘ರೈಲ್ವೆ ಇಲಾಖೆ ರೈಲಿನ ಸಾಮರ್ಥ್ಯಕ್ಕಿಂತ ಹೆಚ್ಚಿನ ಟಿಕೆಟ್‌ಗಳನ್ನು ಏಕೆ ಮಾರಾಟ ಮಾಡಿದೆ?’ ಎಂದು ದೆಹಲಿ ಹೈಕೋರ್ಟ್ ಇಂದು ಪ್ರಶ್ನಿಸಿದೆ. ಇದು ರೈಲ್ವೆ ಕಾಯ್ದೆಯ ಸೆಕ್ಷನ್ 57ರ ಉಲ್ಲಂಘನೆಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದೆ. ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಫೆ. 15ರಂದು ನಡೆದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ ನಂತರ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ಭಾರತೀಯ ರೈಲ್ವೆ ಮತ್ತು ರೈಲ್ವೆ ಮಂಡಳಿಯಿಂದ ಪ್ರತಿಕ್ರಿಯೆಗಳನ್ನು ಕೋರಿದೆ.
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಭಾಗವಹಿಸಲು ಜನರು ರೈಲಿನಲ್ಲಿ ನುಗ್ಗುತ್ತಿದ್ದಾಗ ಕಾಲ್ತುಳಿತ ಉಂಟಾಗಿ ಈ ದುರಂತ ಸಂಭವಿಸಿತ್ತು. ‘ರೈಲ್ವೆ ಇಲಾಖೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಟಿಕೆಟ್‌ಗಳನ್ನು ಏಕೆ ಮಾರಾಟ ಮಾಡಿದೆ?’ ಎಂದು ನ್ಯಾಯಾಲಯ ಪ್ರಶ್ನಿಸಿದೆ. ರೈಲ್ವೆಯ ನಿರ್ಲಕ್ಷ್ಯವು ಈ ದುರಂತಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ರೈಲ್ವೆ ಕಾಯ್ದೆಯಡಿಯಲ್ಲಿ ಕಾನೂನು ನಿಬಂಧನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
VIDEO | On a PIL filed before Delhi High Court regarding the stampede at New Delhi Railway Station, advocate Aditya Trivedi, representing the petitioner, said: “The PIL focused on stricter implementation of Section 57 and Section 147 of Railways Act. We have seen unfortunate… pic.twitter.com/SNalNXdqU8
— Press Trust of India (@PTI_News) February 19, 2025
ಇದನ್ನೂ ಓದಿ: Video: ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ ನೋಡಿ
“ಒಂದು ಬೋಗಿಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಿರುವಾಗ ನೀವು ಏಕೆ ಹೆಚ್ಚುವರಿ ಟಿಕೆಟ್ ಮಾರಾಟ ಮಾಡುತ್ತೀರಿ? ಟಿಕೆಟ್‌ಗಳ ಸಂಖ್ಯೆ ಆ ಸಂಖ್ಯೆಯನ್ನು ಏಕೆ ಮೀರುತ್ತದೆ? ಇದು ಕೂಡ ಒಂದು ಸಮಸ್ಯೆ. ಆ ದಿನ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಎಷ್ಟು ಲಕ್ಷ ಜನರಿದ್ದರು ಎಂದು ನಿಮಗೆ ತಿಳಿದಿದೆಯೇ?” ಎಂದು ದೆಹಲಿ ಹೈಕೋರ್ಟ್ ರೈಲ್ವೆ ಇಲಾಖೆಯನ್ನು ತರಾಟೆ ತೆಗೆದುಕೊಂಡಿದೆ.
ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ನಿಗದಿಪಡಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ