ಮಹಾರಾಷ್ಟ್ರ ರಾಜಕೀಯದಲ್ಲೀಗ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಸಚಿವ ನವಾಬ್ ಮಲ್ಲಿಕ್ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ದೇವೇಂದ್ರ ಫಡ್ನವೀಸ್ಗೆ ಮಾದಕ ದ್ರವ್ಯ ಪೆಡ್ಲರ್ಗಳ ಜತೆ ಲಿಂಕ್ ಇದೆ ಎಂದು ಆರೋಪ ಮಾಡಿದ್ದ ನವಾಬ್ ಮಲ್ಲಿಕ್ಗೆ ಇಂದು ಫಡ್ನವೀಸ್ ಶಾಕ್ ಕೊಟ್ಟಿದ್ದಾರೆ. ದೇವೇಂದ್ರ ಫಡ್ನವೀಸ್ಗೆ ಭೂಗತ ಲೋಕದ ನಂಟಿದೆ ಎಂದು ಹೇಳಿ, ಅವರು ಮುಂಬೈ ಸ್ಫೋಟದ ಆರೋಪಿಗಳೊಟ್ಟಿಗೆ ಆಸ್ತಿ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕೆಲವು ಸಾಕ್ಷಿಗಳನ್ನೂ ಪ್ರಸ್ತುತಪಡಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ನವಾಬ್ ಮಲ್ಲಿಕ್, ಮಹಾರಾಷ್ಟ್ರ ಪ್ರತಿಪಕ್ಷ ನಾಯಕರಾಗಿರುವ ದೇವೇಂದ್ರ ಫಡ್ನವೀಸ್ಗೆ ಕೂಡ ಭೂಗತ ಜಗತ್ತಿನ ನಂಟು ಇದೆ ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ. ಈ ಸಂಬಂಧ ಹೈಡ್ರೋಜನ್ ಬಾಂಬ್ ಸ್ಫೋಟಿಸುತ್ತೇನೆ ಎಂದು ಹೇಳಿದ್ದಾರೆ. ಫಡ್ನವೀಸ್ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಫಡ್ನವೀಸ್ಗೆ ಅಂಡರ್ವರ್ಲ್ಡ್ ಲಿಂಕ್ ಇರುವುದನ್ನು ನಾನೂ ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ್ದ ದೇವೇಂದ್ರ ಫಡ್ನವೀಸ್, ನವಾಬ್ ಮಲ್ಲಿಕ್ಗೆ ಭೂಗತ ಪಾತಕಿಗಳ ಸಂಪರ್ಕವಿದೆ. 1993ರಲ್ಲಿ ನಡೆದ ಮುಂಬೈ ಸ್ಫೋಟದ ಆರೋಪಿಗಳಾದ ಸಲೀಂ ಪಟೇಲ್ ಮತ್ತು ಸರ್ದಾರ್ ಖಾನ್ ಎಂಬುವರಿಂದ ಅವರು ಕುರ್ಲಾದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಅದಕ್ಕೆ ಗೌವಾಲಾ ಕಾಂಪೌಂಡ್ ಎಂದು ಹೆಸರಿಡಲಾಗಿದೆ. 30 ಲಕ್ಷ ರೂಪಾಯಿ ಆಸ್ತಿಗೆ 20 ಲಕ್ಷ ರೂಪಾಯಿ ಪಾವತಿಸಲಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಬ್ಬರು ನವಾಬ್ ಮಲ್ಲಿಕ್ ಪುತ್ರ ಎಂದು ಆರೋಪಿಸಿದ್ದರು. ಈ ಸಲೀಂ ಪಟೇಲ್ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂನ ಸಹಾಯಕನೇ ಆಗಿದ್ದಾನೆ. ದಾವೂಬ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕಾರ್ ಕಾರಿನ ಡ್ರೈವರ್ ಆಗಿದ್ದ. 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ದಾವೂದ್ ಇಬ್ರಾಹಿಂ ಆಪ್ತ ಸಲೀಂ ಪಟೇಲ್ ಕೂಡ ಭೂಗತ ಜಗತ್ತಿನಲ್ಲಿ ಇದ್ದವನೇ ಆಗಿದ್ದಾನೆ. ಈ ಸಲೀಂ ಪಟೇಲ್ ಮತ್ತು ಹಸೀನಾ ಇಬ್ಬರೂ ಸೇರಿ ಭೂ ಮಾಫಿಯಾ ನಡೆಸುತ್ತಿದ್ದರು. ಭೂಮಿ ಕಬಳಿಸುವುದೇ ಅವರ ಕಾಯಕವಾಗಿತ್ತು ಎಂದೂ ಹೇಳಿದ್ದರು.