ಸೋನಿಯಾಗೆ ಕ್ಷಮಾಪಣಪತ್ರ ನೀಡಿ ಅಧ್ಯಕ್ಷ ಚುನಾವಣೆ ಅಖಾಡದಿಂದ ಹಿಂದೆ ಸರಿದ ಗೆಹ್ಲೋಟ್
ರಾಜಸ್ಥಾನ ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಕ ಸೃಷ್ಟಿಸಿದ್ದ ಎಐಸಿಸಿ ಅಧ್ಯಕ್ಷ ಚುನಾವಣೆಗೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಅಶೋಕ್ ಗೆಹ್ಲೋಟ್ ನಡೆಯಿಂದ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಿದೆ.
ನವದೆಹಲಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ನಡೆಯುತ್ತಿರುವ ಜಗಳದ ನಡುವೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಸ್ಪಷ್ಟಪಡಿಸಿದ್ದಾರೆ.
ಇಂದು(ಸೆಪ್ಟೆಂಬರ್.29) ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಅಶೋಕ್ ಗೆಹ್ಲೋಟ್ ಕ್ಷಮಾಪಣಪತ್ರ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಶಾಸಕರ ನಡೆ ಬಗ್ಗೆ ಸೋನಿಯಾ ಗಾಂಧಿ ಬಳಿ ಕ್ಷಮೆಯಾಚಿಸಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವೆ. ರಾಜಸ್ಥಾನ ಶಾಸಕರ ನಡೆಯಿಂದ ಸೋನಿಯಾ ಗಾಂಧಿಗೆ ಬೇಸರವಾಗಿದೆ. ಭೇಟಿ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.ರಾಜಸ್ಥಾನದಲ್ಲಿ ಭಾನುವಾರ ನಡೆದ ಘಟನೆಗೆ ಕ್ಷಮೆಯಾಚಿಸಿದ್ದೇನೆ ಎಂದರು.
ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕನ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದ ಸಭೆಯಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಬಹಿರಂಗ ಬಂಡಾಯವೆದ್ದಿದ್ದರು.
ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ಅವರ ಕುರ್ಚಿಯಲ್ಲಿ ಸಚಿನ್ ಪೈಲಟ್ ಕೂರಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರಾಜಸ್ಥಾನದಲ್ಲಿ 90ಕ್ಕೂ ಹೆಚ್ಚು ಶಾಸಕರು ಭಾನುವಾರ ರಾಜೀನಾಮೆ ಬೆದರಿಕೆ ಒಡ್ಡಿದ್ದರು.
ಅಧ್ಯಕ್ಷ ರೇಸ್ನಲ್ಲಿ ದಿಗ್ವಿಜಯ ಸಿಂಗ್ ಎಂಟ್ರಿ
ರಾಜಸ್ಥಾನದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ದಿಗ್ವಿಜಯ ಸಿಂಗ್ ಘೋಷಿಸಿದ್ದಾರೆ . ಇಂದು (ಗುರುವಾರ) ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ ಸಿಂಗ್, ನಾನು ನಾಮಪತ್ರ ಪಡೆದುಕೊಳ್ಳಲಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ನನ್ನದೇ. ಈ ಬಗ್ಗೆ ಗಾಂಧಿ ಕುಟುಂಬ ಜತೆ ಮಾತನಾಡಿಲ್ಲ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.ಆದಾಗ್ಯೂ ಈ ಬಾರಿಯ ಚುನಾವಣೆ ತ್ರಿಕೋನ ಸ್ಪರ್ಧೆ ಆಗಲಿದೆಯೇ ಎಂದು ಕೇಳಿದಾಗ ಅಕ್ಟೋಬರ್ 8ರವರೆಗೆ ನಾಮಪತ್ರ ಹಿಂಪಡೆಯಬಹುದು. ಅಲ್ಲಿಯವರೆಗೆ ಕಾದು ನೋಡಿ ಎಂದಿದ್ದಾರೆ. ನಾನು ನಾಮಪತ್ರ ಪಡೆದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ. ಅಕ್ಟೋಬರ್17ರಂದು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಶಶಿತರೂರ್ ಕೂಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದು, ನಾಳೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Thu, 29 September 22