ಗಂಡನ ಕಿರಿಕಿರಿಗೆ ಬೇಸತ್ತು ಐವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ

ಗಂಡನ ಕಿರಿಕಿರಿಗೆ ಬೇಸತ್ತ ಮಹಿಳೆಯೊಬ್ಬರು ಐವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿದ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ.

ಗಂಡನ ಕಿರಿಕಿರಿಗೆ ಬೇಸತ್ತು ಐವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ
ಪ್ರಾತಿನಿಧಿಕ ಚಿತ್ರ

ಕೋಟಾ: ಗಂಡನ ಕಿರಿಕಿರಿಗೆ ಬೇಸತ್ತ ಮಹಿಳೆಯೊಬ್ಬರು ಐವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿದ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ. ಮಹಿಳೆಯ ಪತಿ ಸಂಬಂಧಿಯೊಬ್ಬರ ಅಪರಕ್ರಿಯೆಗೆ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಇವರೆಲ್ಲರೂ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಭಾನುವಾರ ಮುಂಜಾನೆ ಮೃತದೇಹಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು.

ಮೃತ ಮಹಿಳೆಯನ್ನು ಬಾದಾಮಿ ದೇವಿ ಎಂದು ಗುರುತಿಸಲಾಗಿದೆ. ಶಿವಲಾಲ್ ಬಂಜಾರಾ ಎಂಬಾತನ ಪತ್ನಿಯಾದ ಈಕೆ ಏಳು ಮಕ್ಕಳ ತಾಯಿಯೂ ಹೌದು. ಮೃತ ಬಾಲಕಿಯರನ್ನು ಸಾವಿತ್ರಿ (14), ಅಂಕಲಿ (8), ಕಾಜಲ್ (6), ಗುಂಜನ್ (4) ಮತ್ತು ಒಂದು ವರ್ಷದ ಮಗು ಅರ್ಚನಾ ಎಂದು ಗುರುತಿಸಲಾಗಿದೆ. ಇನ್ನೆಬ್ಬರು ಮಕ್ಕಳಾದ ಗಾಯತ್ರಿ (15) ಮತ್ತು ಪೂನಮ್ (7) ನಿದ್ದೆಗೆ ಜಾರಿದ್ದರಿಂದ ಬದುಕುಳಿದಿದ್ದಾರೆ.

ಪ್ರತಿದಿನ ಇವರಿಬ್ಬರೂ ಜಗಳವಾಡುತ್ತಿದ್ದರು. ಮಹಿಳೆಯು ಇಂಥ ನಿರ್ಧಾರ ತೆಗೆದುಕೊಳ್ಳಲು ಇದೇ ಮುಖ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ಮಹಿಳೆಯ ಪತಿ ಶಿವಲಾಲ್ ಬ್ಲಾಂಕೆಟ್ ಮತ್ತು ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದಿನ ಶಿವಲಾಲ್ ಮನೆಯಲ್ಲಿ ಇರಲಿಲ್ಲ. ಮತ್ತೊಂದು ಗ್ರಾಮದಲ್ಲಿ ನಡೆಯುತ್ತಿದ್ದ ತನ್ನ ಸಂಬಂಧಿಕರ ತಿಥಿಗೆ ಹೋಗಿದ್ದ.

ಸಾವಿನ ವಿಷಯ ತಿಳಿದ ನಂತರ ಅಂದರೆ ಭಾನುವಾರ ಮುಂಜಾನೆ ಗ್ರಾಮಕ್ಕೆ ಹಿಂದಿರುಗಿದ್ದಾನೆ. ಮಕ್ಕಳು ನೀರಿನಲ್ಲಿ ಮುಳುಗಿದ್ದ ಬಾವಿಯು ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿದೆ. ಮಹಿಳೆಯು ಇಂಥ ನಿರ್ಧಾರಕ್ಕೆ ಬರಲು ಏನು ಕಾರಣ ಎಂದು ಪೊಲೀಸರು ಪ್ರಶ್ನಿಸಿದರೂ ಶಿವಲಾಲ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಿಆರ್​ಪಿಸಿ 174ರ ಅನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Suicide: ಪ್ರೀತಿಸಿದವನ ಬಿಟ್ಟು ಬೇರೆಯವನ ಜೊತೆ ಮದುವೆ, ಕೆಆರ್‌ಎಸ್‌ ಹಿನ್ನೀರಿಗೆ ಹಾರಿ ನೊಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಇದನ್ನೂ ಓದಿ: Covid 19 Karnataka Update: ಒಂದೇ ಶಾಲೆಯ 63 ವಿದ್ಯಾರ್ಥಿಗಳು ಸೇರಿ ಕರ್ನಾಟಕದ 456 ಮಂದಿಗೆ ಕೊರೊನಾ ಸೋಂಕು

Click on your DTH Provider to Add TV9 Kannada