ನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತಪರಾಕಿ
‘ನೀವು ಭಿಕ್ಷೆ ಬೇಡುತ್ತೀರೋ, ಕದಿಯುತ್ತೀರೋ, ಸಾಲ ತರುತ್ತೀರೋ. ಜನರನ್ನು ಬದುಕಿಸುವುದು ನಿಮ್ಮ ಹೊಣೆ. ನೀವೀಗ ಎಚ್ಚೆತ್ತುಕೊಳ್ಳದಿದ್ದರೆ ಭೂಮಿಯ ಮೇಲಿನ ನರಕ ಇಲ್ಲಿ ಸೃಷ್ಟಿಯಾಗುತ್ತೆ’. ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಹೇಳಿದ ಕಟು ನುಡಿಗಳಿವು.
ದೆಹಲಿ: ನಗರ ಮತ್ತು ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಬುಧವಾರ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಕಟುನುಡಿಗಳಲ್ಲಿ ವಿಮರ್ಶಿಸಿತು. ‘ವಾಸ್ತವ ಅರ್ಥ ಮಾಡಿಕೊಳ್ಳಲು ನಿಮಗೇಕೆ ಸಾಧ್ಯವಾಗ್ತಿಲ್ಲ. ಆಮ್ಲಜನಕ ಇಲ್ಲದ ಕಾರಣ ಜನರು ಸಾಯುವಂಥ ಪರಿಸ್ಥಿತಿ ಬರಬಾರದಿತ್ತು’ ಎಂದು ಮ್ಯಾಕ್ಸ್ ಗ್ರೂಪ್ನ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ನಿನ್ನೆಯ ತೀರ್ಪಿನ ನಂತರವೂ ಆಮ್ಲಜನಕವನ್ನು ಕೈಗಾರಿಕೆಗಳಿಗೆ ಬಳಸಲು ಅವಕಾಶ ನೀಡಿರುವುದು ತಿಳಿದು ಕೋರ್ಟ್ ಕೆಂಡಾಮಂಡಲವಾಯಿತು. ‘ಇದು ನಿಜಕ್ಕೂ ಖೇದದ ವಿಷಯ. ಜನರು ಸಾಯುತ್ತಿದ್ದರೂ ನಿಮಗೆ ಕೈಗಾರಿಕೆಗಳದ್ದೇ ಚಿಂತೆ ಅಲ್ಲವೇ? ಜನರ ಜೀವಗಳಿಗೆ ನಿಮ್ಮ ಬಳಿ ಬೆಲೆಯೇ ಇಲ್ಲವೇ? ನೀವು ದೊಡ್ಡ ದುರಂತದತ್ತ ಸಾಗುತ್ತಿದ್ದೀರಿ’ ಎಂದು ನ್ಯಾಯಾಧೀಶರು ಕಟುವಾಗಿ ನುಡಿದರು.
ಕಳೆದ 24 ಗಂಟೆಗಳಲ್ಲಿ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ನಿಮಗೆ ನಿನ್ನೆ ನಾವು ಏನು ಹೇಳಿದ್ದೆವು ನೆನಪಿದೆಯೇ? ಪೆಟ್ರೋಲಿಯಂ ಮತ್ತು ಉಕ್ಕಿನ ಕಾರ್ಖಾನೆಗಳ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಕಳುಹಿಸಿಕೊಡಲು ನಿರ್ದೇಶನ ನೀಡಿದ್ದೆವು. ಆದರೆ ನೀವು ಮಾಡಿದ್ದೇನು’ ಎಂದು ನ್ಯಾಯಾಲಯ ಕಠಿಣವಾಗಿ ಪ್ರಶ್ನಿಸಿತು.
‘ಮ್ಯಾಕ್ಸ್ ಗ್ರೂಪ್ ಆಸ್ಪತ್ರೆಯ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ಅರ್ಜಿ ಹಾಕಿರುವುದರಿಂದ ಆಶ್ಚರ್ಯವಾಗಿದೆ’ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದ್ದು ನ್ಯಾಯಾಧೀಶರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿತು. ‘ನಿಮಗೆ ಈಗ ಆಶ್ಚರ್ಯವಾಗಬೇಕಿರಲಿಲ್ಲ. ವಾಸ್ತವ ಪರಿಸ್ಥಿತಿ ಏನು ಎಂಬುದರ ಅರಿವಿರಬೇಕಿತ್ತು’ ಎಂದು ವಿಮರ್ಶಿಸಿತು. ‘ಸರ್ಕಾರದ ಹಂತದಲ್ಲಿ ಕಡತಗಳ ಚಲನೆ ಆರಂಭವಾಗಿದೆ’ ಎಂದು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಸಮಜಾಯಿಷಿಯೂ ನ್ಯಾಯಾಧೀಶರ ಕೋಪ ತಣಿಸಲಿಲ್ಲ.
‘ಅದರಿಂದ ಪ್ರಯೋಜನವೇನಾಯ್ತು? ನಿಮ್ಮ ಕಡತಗಳ ಚಲನೆ ಕಟ್ಟಿಕೊಂಡು ನಮಗೇನಾಗಬೇಕು’ ಎಂದು ಪ್ರತಿಕ್ರಿಯಿಸಿತು. ‘ನಿಮ್ಮ ಬಳಿ (ಆಮ್ಲಜನಕ ನೀಡಲು) ಸ್ವಂತ ಪೆಟ್ರೋಲಿಯಂ ಕಂಪನಿಗಳಿವೆ. (ಆಮ್ಲಜನಕ ಸಾಗಿಸಲು) ವಾಯುಪಡೆಯ ವಿಮಾನಗಳಿವೆ. ನಿನ್ನೆ ನಾವೂ ಹಲವು ಆದೇಶಗಳನ್ನು ನೀಡಿದ್ದೇವೆ. ಇಡೀ ದಿನ ನೀವು ಮಾಡಿದ್ದಾದರೂ ಏನು’ ಎಂದು ನ್ಯಾಯಾಧೀಶರು ವಿವರಣೆ ಬಯಸಿದರು.
‘ಆಮ್ಲಜನಕ ಆಮದು ಮಾಡಿಕೊಳ್ಳಲು ಟೆಂಡರ್ ಕರೆದಿದ್ದೇವೆ’ ಎಂಬ ಕೇಂದ್ರ ಸರ್ಕಾರದ ಮಾತು ನ್ಯಾಯಾಧೀಶರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿತು. ‘ನೀವು ನಿಮ್ಮದೇ ಆದ ರೀತಿಯಲ್ಲಿ ಸಿಹಿ ಸಮಯ ಕಳೆಯಿರಿ. ಜನರು ಸಾಯುತ್ತಾರೆ. ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನೀವು ಏನಾದರೂ ಮಾಡಿಕೊಳ್ಳಿ, ಜನರಿಗೆ ಸಂವಿಧಾನ ಕೊಟ್ಟಿರುವ ಬದುಕುವ ಹಕ್ಕನ್ನು ಕಾಪಾಡಿ. ಅಗತ್ಯಬಿದ್ದರೆ ಕೈಗಾರಿಕೆಗಳ ಆಮ್ಲಜನಕವನ್ನು ವೈದ್ಯಕೀಯ ಕ್ಷೇತ್ರಕ್ಕೆ ಒದಗಿಸಿ’ ಎಂದು ನ್ಯಾಯಾಲಯವು ಮತ್ತೊಮ್ಮೆ ಕಠಿಣ ನಿರ್ದೇಶನ ನೀಡಿತು.
Delhi High Court hearing on shortage of oxygen https://t.co/sRNKM857JY pic.twitter.com/kZy1wqhdsf
— Bar & Bench (@barandbench) April 21, 2021
ಆಮ್ಲಜನಕ ಒದಗಿಸುವ ಬಗ್ಗೆ ನ್ಯಾಯಾಲಯ ಹೇಳಿದ ಮಾತುಗಳಿವು.. 1) ಆಳುವ ಸರ್ಕಾರಕ್ಕೆ ವಾಸ್ತವದ ಅರಿವಿಲ್ಲ ಎಂದರೆ ಹೇಗೆ? ಆಮ್ಲಜನಕ ಇಲ್ಲವೆಂಬ ಕಾರಣಕ್ಕೆ ಜನರನ್ನು ಸಾಯಲು ಬಿಡಬಾರದು. 2) ಜನರು ಸರ್ಕಾರದ ಮೇಲೆ ಅವಲಂಬಿತರಾಗಿದ್ದಾರೆ. ನೀವು ಭಿಕ್ಷೆ ಬೇಡುತ್ತೀರೋ, ಕದಿಯುತ್ತೀರೋ, ಸಾಲ ತರುತ್ತೀರೋ. ಜನರನ್ನು ಬದುಕಿಸುವುದು ನಿಮ್ಮ ಹೊಣೆ. 3) ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಿದೆ. ನಮಗೆ ಕೇವಲ ದೆಹಲಿಯೊಂದೇ ಕಾಳಜಿಯಲ್ಲ. ಇಡೀ ದೇಶದಲ್ಲಿ ಆಮ್ಲಜನಕ ಸರಬರಾಜು ಉತ್ತಮ ಪಡಿಸಲು ಏನು ಮಾಡಿದ್ದೀರಿ ತಿಳಿಸಿ. 4) ವೈದ್ಯಕೀಯ ಆಮ್ಲಜನಕದ ಬೇಡಿಕೆ ಹಲವು ಪಟ್ಟು ಹೆಚ್ಚಾಗಿದೆ. ಅದೇನು ಮಾಡ್ತೀರೋ ಮಾಡಿ. ಜನರ ಬದುಕುವ ಹಕ್ಕು ಕಾಪಾಡಿ. 5) ಟಾಟಾ ಕಂಪನಿಯು ತಮ್ಮ ಉಕ್ಕು ಘಟಕಗಳಿಂದ ಆಮ್ಲಜನಕವನ್ನು ಬೇರೆಡೆಗೆ ರವಾನಿಸಲು ಮುಂದೆ ಬರಲು ಸಾಧ್ಯವಾಗುತ್ತದೆ ಎಂದಾದರೆ ಉಳಿದವರಿಗೆ ಏಕೆ ಆಗುವುದಿಲ್ಲ? ಇದು ಮನುಷ್ಯತ್ವದ ಪ್ರಶ್ನೆ ಅಲ್ಲವೇ? 6) ಕೈಗಾರಿಕೆಗಳು ಸಹಾಯ ಮಾಡಲು ಸಿದ್ಧವಾಗಿವೆ. ನೀವೊಂದು ಆದೇಶ ಹೊರಡಿಸಿ, ಅವರ ಸಹಾಯ ಕೇಳಿ. ನಿಮಗೆ (ಸರ್ಕಾರಕ್ಕೆ) ನಿಮ್ಮದೇ ಆದ ಎಷ್ಟೋ ಕೈಗಾರಿಕೆಗಳಿವೆ. ಅವನ್ನು ಬಳಸಿಕೊಳ್ಳಿ. 7) ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿ ಏಕೆ ಅರ್ಥವಾಗುತ್ತಿಲ್ಲ? ನೀವೀಗ ಎಚ್ಚೆತ್ತುಕೊಳ್ಳದಿದ್ದರೆ ಭೂಮಿಯ ಮೇಲಿನ ನರಕ ಇಲ್ಲಿ ಸೃಷ್ಟಿಯಾಗುತ್ತೆ.
(You take your sweet time people will die Delhi high court to centre on oxygen crisis)
ಇದನ್ನೂ ಓದಿ: ದೇಶವ್ಯಾಪಿ ಕೊರೊನಾ 2ನೇ ಅಲೆ, ಸತ್ತವರಲ್ಲಿ ವೃದ್ಧರೇ ಹೆಚ್ಚು: ಐಸಿಎಂಆರ್
ಇದನ್ನೂ ಓದಿ: Covid-19 Karnataka Numbers: ದಾಖಲೆ ಬರೆದ ಕೊರೊನಾ ಸೋಂಕಿತರ ಸಂಖ್ಯೆ; ಬೆಂಗಳೂರು, ತುಮಕೂರಿನಲ್ಲಿ ತೀವ್ರ ಹೆಚ್ಚಳ
Published On - 10:26 pm, Wed, 21 April 21