18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ; ಕೆಲವು ರಾಜ್ಯಗಳಲ್ಲಿ ಉಚಿತ, ಇನ್ನು ಕೆಲವೆಡೆ ಕೊರತೆ

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ; ಕೆಲವು ರಾಜ್ಯಗಳಲ್ಲಿ ಉಚಿತ, ಇನ್ನು ಕೆಲವೆಡೆ ಕೊರತೆ
ಕೊವಿಡ್ ಲಸಿಕೆ (ಸಾಂದರ್ಭಿಕ ಚಿತ್ರ)

COVID-19 Vaccine: ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದಾಗ್ಯೂ, ಲಸಿಕೆಯ ಬೆಲೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ಪಷ್ಟ ಉತ್ತರ ಸಿಗಲು ಇವರು ಕಾಯುತ್ತಿದ್ದಾರೆ. ಆದಾಗ್ಯೂ, ಲಸಿಕೆ ಪೂರೈಕೆ ಜೂನ್‌ನಿಂದ ಹೆಚ್ಚಾಗುವ ನಿರೀಕ್ಷೆಯಿದೆ.

Rashmi Kallakatta

|

Apr 21, 2021 | 8:51 PM

ದೆಹಲಿ: ಮೇ 1ರಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಏಪ್ರಿಲ್ 19ಕ್ಕೆ ಘೋಷಿಸಿತ್ತು. ಇದಕ್ಕಾಗಿ ಖಾಸಗಿ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರ ಗಳು ಲಸಿಕೆ ಉತ್ಪಾದಕರಿಂದ ಅವರು ನಿಗದಿ ಪಡಿಸಿದ ಬೆಲೆಗೆ ಲಸಿಕೆಗಳನ್ನು ಖರೀದಿ ಮಾಡಬೇಕು ಎಂದು ಹೇಳಿತ್ತು. ಈ ಬೆಳವಣಿಗೆಗಳ ನಡುವೆಯೇ ಕೆಲವು ರಾಜ್ಯಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ  ಉಚಿತ ಕೊವಿಡ್ ಲಸಿಕೆ ನೀಡುವುದಾಗಿ ಹೇಳಿವೆ. ಲಸಿಕಾ ಅಭಿಯಾನದ ಮೂರನೇ ಹಂತದ ಅಡಿಯಲ್ಲಿ, ಲಸಿಕೆ ತಯಾರಕರು  ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ಯ ಶೇ 50ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರಕ್ಕೆ ಪೂರೈಸುತ್ತಾರೆ. ಉಳಿದ ಶೇ 50ರಷ್ಟು ಪ್ರಮಾಣ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗೆ ಪೂರೈಸಬಹುದಾಗಿದೆ.

2021ರ ಮೇ 1 ರ ಮೊದಲು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವ ಶೇ 50 ರಷ್ಟು ಪೂರೈಕೆಗೆ ತಯಾರಕರು ಮುಂಗಡ ದರ ಘೋಷಣೆ ಮಾಡಬೇಕಾಗುತ್ತದೆ. ಈ ಬೆಲೆಯ ಆಧಾರದ ಮೇಲೆ, ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

18ರಿಂದ ಮೇಲ್ಪಟ್ಟವರಿಗೆ  ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಿದ ಮರುದಿನವೇ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಮ್ಮ ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಿದ್ದು ಇದರ ಖರ್ಚನ್ನು ಸರ್ಕಾರವೇ ಭರಿಸಲಿದೆ. ನಮ್ಮ ರಾಜ್ಯದ ನಾಗರಿಕರನ್ನು ರಕ್ಷಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಗತ್ಯವಾದ ಲಸಿಕೆಗಳು ಇವೆ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತೇನೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಬಘೇಲ್ ಟ್ವೀಟ್ ಮಾಡಿದ್ದಾರೆ.

ಒಂದು ದಿನದ ಹಿಂದೆ ಅಸ್ಸಾಂನ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ರಾಜ್ಯದಲ್ಲಿ 18-45 ನಡುವಿನ ಎಲ್ಲ ನಾಗರಿಕರಿಗೆ ಮೇ 1ರಿಂದ ಉಚಿತ ಲಸಿಕೆ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಕೊವಿಡ್ ನಿರ್ವಹಣೆಗಾಗಿ ಆರಂಭಿಸಿದ್ದ ಅಸ್ಸಾಂ ಆರೋಗ್ಯ ನಿಧಿಗೆ ಲಭಿಸಿದ ದೇಣಿಗೆಯನ್ನು ಬಳಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಅಸ್ಸಾಂನ ಆರೋಗ್ಯ ಇಲಾಖೆಈಗಾಗಲೇ ಕೊವ್ಯಾಕ್ಸಿನ್ ತಯಾರಕರಾದ ಭಾರತ್ ಬಯೋಟೆಕ್ ಗೆ ಪತ್ರ ಬರೆದು 1ಕೋಟಿ ಲಸಿಕೆಗೆ ಬೇಡಿಕೆಯನ್ನಿಟ್ಟಿದೆ.

ಉತ್ತರ ಪ್ರದೇಶ ಸರ್ಕಾರ ಕೂಡಾ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಹೇಳಿದೆ. ಇತ್ತ ಬಿಹಾರದಲ್ಲಿ ಬಿಜೆಪಿ-ಜನತಾ ದಳ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಹೇಳಿದೆ.

ಲಸಿಕೆ ವಿತರಣೆಗಿಲ್ಲ ಸೌಲಭ್ಯ ಎರಡನೇ ಹಂತದ ಲಸಿಕೆ ವಿತರಣೆ ಆರಂಭವಾಗಿ ಇನ್ನೂ ಎರಡು ವಾರಗಳಾಗಿಲ್ಲ.ಈಗಾಗಲೇ ಹಲವಾರು ರಾಜ್ಯಗಳಲ್ಲಿ ಲಸಿಕೆ ಕೊರತೆ ಇದ್ದು ಹೆಚ್ಚುವರಿ ಲಸಿಕೆ ನೀಡುವಂತೆ ಇವು ಕೇಂದ್ರ ಸರ್ಕಾರದ ಮೊರೆ ಹೋಗಿವೆ. ಸರ್ಕಾರದ CoWIN ಪೋರ್ಟಲ್ ಮಾಹಿತಿ ಪ್ರಕಾರ 13 ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 10 ಕ್ಕಿಂತ ಕಡಿಮೆ ಖಾಸಗಿ ಸೌಲಭ್ಯಗಳನ್ನು ಹೊಂದಿವೆ. ಇಲ್ಲಿಯೂ ಲಸಿಕೆ ವಿತರಣೆ ನಡೆಸಲಾಗುತ್ತದೆ. ಈ ಪೈಕಿ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಮಾಡಲು ಯಾವುದೇ ಖಾಸಗಿ ಸೌಲಭ್ಯಗಳಿಲ್ಲ.

ಲಸಿಕೆ ವಿತರಣೆ ಮಾಡಲು 10 ಕ್ಕಿಂತ ಕಡಿಮೆ ಖಾಸಗಿ ಸೌಲಭ್ಯಗಳನ್ನು ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಕೋವಿನ್ ಪೋರ್ಟಲ್‌ ಪ್ರಕಾರ) – ಅಂಡಮಾನ್ ಮತ್ತು ನಿಕೋಬಾರ್ (0 ಖಾಸಗಿ ಸೌಲಭ್ಯ), ಅರುಣಾಚಲ ಪ್ರದೇಶ (0), ದಾದ್ರಾ ಮತ್ತು ನಗರ ಹವೇಲಿ (2), ದಮನ್ ಮತ್ತು ದಿಯು (0), ಲಡಾಖ್ (0) ಲಕ್ಷದ್ವೀಪ (0), ಮಣಿಪುರ (3), ಮೇಘಾಲಯ (7), ನಾಗಾಲ್ಯಾಂಡ್ (4), ಪುದುಚೇರಿ (7), ಸಿಕ್ಕಿಂ (1), ತ್ರಿಪುರ (1) ಮತ್ತು ಮಿಜೋರಾಂ (2).

ರಾಜ್ಯಗಳಲ್ಲಿ ಲಸಿಕೆ ಕೊರತೆ ಲಸಿಕೆಗಳ ಬೆಲೆಯನ್ನು ತಯಾರಕರಿಗೆ ಬಿಡುವ ನಿರ್ಧಾರವು ಎರಡು ಆತಂಕಕಾರಿ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಛತ್ತೀಸಗಡದ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೊ ಹೇಳಿದ್ದಾರೆ. ಈ ಬಗ್ಗೆ ಸ್ಕ್ರಾಲ್ ಡಾಟ್ ಇನ್ ಜತೆ ಮಾತನಾಡಿದ ಅವರು, ಮೊದಲನೆಯದಾಗಿ, ಇದು ಲಸಿಕೆಗಳ ಬೆಲೆಯನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ ಮತ್ತು ರಾಜ್ಯ ಸರ್ಕಾರಗಳ ಹಣಕಾಸಿನ ಮೇಲೆ ಹೆಚ್ಚಿನ ಹೊರೆ ಬೀರುತ್ತದೆ. ಎರಡನೆಯದಾಗಿ, ಲಸಿಕೆಗಳನ್ನು ಸಂಗ್ರಹಿಸಲು ರಾಜ್ಯಗಳು ಮಾರುಕಟ್ಟೆಯಲ್ಲಿ ಪರಸ್ಪರ ಪೈಪೋಟಿ ನಡೆಸಬೇಕಾಗುತ್ತದೆ. ಇದರಿಂದ ಶ್ರೀಮಂತ ಮತ್ತು ಉದ್ಯಮಶೀಲ ರಾಜ್ಯಗಳಿಗೆ ಹೆಚ್ಚು ಡೋಸ್ ಸಿಗುತ್ತದೆ ಎಂದು ಹೇಳಿದ್ದಾರೆ.

ಇದು ಸರಿಯಾದ ನಿರ್ಧಾರ ಎಂದು ಅನಿಸುವುದಿಲ್ಲ ಲಸಿಕೆಗಳನ್ನು ನೀಡುವ ಜವಾಬ್ದಾರಿಯನ್ನು ಕೇಂದ್ರ ನುಣುಚಿಕೊಳ್ಳುತ್ತಿದೆ. ಲಸಿಕೆಗಾಗಿ ಕೇಂದ್ರ ಸರ್ಕಾರ 30,000 ಕೋಟಿ ರೂ ಅನುದಾನ ನೀಡಿತ್ತು. ಮುಖ್ಯವಾಗಿ ಈ ನೀತಿಯನ್ನು ಪ್ರಕಟಿಸುವ ಮೊದಲು ರಾಜ್ಯಗಳನ್ನು ಸಂಪರ್ಕಿಸಿಲ್ಲ ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಲಸಿಕಾ ಅಭಿಯಾನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದಿದ್ದಾರೆ ಡಿಯೊ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ರಾಜ್ಯಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಬಿಡುವುದಿಲ್ಲ ಎಂಬ ಭರವಸೆ ಬೇಕು ಎಂದು ಹೇಳಿದ್ದು ರಾಜ್ಯಗಳಿಗೆ ಲಸಿಕೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ, ಉಚಿತವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.

ಒಡಿಶಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಪ್ರದೀಪ್ತ ಕುಮಾರ್ ಮೊಹಾಪಾತ್ರ ಅವರು, ಕೇಂದ್ರವು ನಿರ್ಧರಿಸಿದ ರಾಜ್ಯಗಳಿಗೆ ಲಭ್ಯವಿರುವ ಡೋಸ್‌ಗಳ ಬೆಲೆಗಳನ್ನು ರಾಜ್ಯ ಸರ್ಕಾರ ಬಯಸುತ್ತಿದ್ದು ಮುಕ್ತ ಮಾರುಕಟ್ಟೆಯಲ್ಲಿನ ವೆಚ್ಚವು ತುಂಬಾ ಹೆಚ್ಚು ಎಂದಿದ್ದಾರೆ.

ಹೆಚ್ಚಲಿದೆ ಲಸಿಕೆ ಉತ್ಪಾದನೆ ಲಸಿಕೆ ಉತ್ಪಾದನೆಯು ವೇಗವಾಗಿ ಹೆಚ್ಚಾಗಲಿದೆ. ಹಣಕಾಸು ಸಚಿವಾಲಯವು ಹೆಚ್ಚಿನ ಲಸಿಕೆ ತಯಾರಿಕೆಗೆ ತಯಾರಕರು ಎಲ್ಲಾ ಸಂಪನ್ಮೂಲಗಳನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿದೆ. ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ತಜ್ಞರು ಅನುಮೋದಿಸಿರುವ ಲಸಿಕೆಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದಲ್ಲದೆ, ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು, ಅಂತರರಾಷ್ಟ್ರೀಯ ತಯಾರಕರೊಂದಿಗೆ ಸಹಭಾಗಿತ್ವವನ್ನು ಮತ್ತು ಆಮದು ಮಾಡಿಕೊಳ್ಳುವುದರಿಂದ ಲಸಿಕೆ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಫ್ರೊಫೆಸರ್ ರಾಘವನ್ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಸರ್ಕಾರ ಯಾವಾಗಲೂ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಸ್ಪಂದಿಸುತ್ತಿದೆ. ದೇಶದ ಎಲ್ಲ 44,000 ಲಸಿಕೆ ಕೇಂದ್ರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವುದಾದರೆ ಹೆಚ್ಚುತ್ತಿರುವ ಸೋಂಕು ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಇಟಿ ನೌ ಜತೆ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದಾಗ್ಯೂ, ಲಸಿಕೆಯ ಬೆಲೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ಪಷ್ಟ ಉತ್ತರ ಸಿಗಲು ಇವರು ಕಾಯುತ್ತಿದ್ದಾರೆ. ಆದಾಗ್ಯೂ, ಲಸಿಕೆ ಪೂರೈಕೆ ಜೂನ್‌ನಿಂದ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಾಮರ್ಥ್ಯವು ಮೇ ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಸೀರಮ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಪ್ರಸ್ತುತ ಲಭ್ಯವಿರುವ ಲಸಿಕೆಗಳಾಗಿವೆ. ಮುಂಬರುವ ದಿನಗಳಲ್ಲಿ Sputnik V ಆಮದು ಆಗಲಿದ್ದು ಜೂನ್ ತಿಂಗಳಲ್ಲಿ 200 ದಶ ಲಕ್ಷ ಡೋಸ್ ಲಸಿಕೆ ಪೂರೈಕೆಯಾಗಲಿದೆ. ದಿ ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಪ್ರಸ್ತುತ ದೇಶದಲ್ಲಿ 70 ದಶ ಲಕ್ಷ ಡೋಸ್ ಲಸಿಕೆ ಸರಬರಾಜು ಮಾಡಲಾಗುತ್ತಿದೆ.

ವರ್ಷಕ್ಕೆ 700 ದಶಲಕ್ಷ ಡೋಸ್ ಕೋವಾಕ್ಸಿನ್ ತಯಾರಿಸುವುದಾಗಿ ಘೋಷಿಸಿದ ಭಾರತ್ ಬಯೋಟೆಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿ ಡೋಸ್‌ಗೆ 15-20 ಡಾಲರ್ ನಿಗದಿತ ಬೆಲೆಯನ್ನು ಹೊಂದಿದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಲಸಿಕೆಯನ್ನು ಪ್ರತಿ ಡೋಸ್‌ಗೆ 10 ಡಾಲರ್ ರಂತೆ ನೀಡಬಹುದು ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ಅದೇ ವೇಳೆ ಡಾ ರೆಡ್ಡೀಸ್ ಕಂಪನಿ ಮೇ ಮತ್ತು ಜೂನ್ ವೇಳೆಗೆ 50 ದಶಲಕ್ಷ ಡೋಸ್ ಸ್ಪುಟ್ನಿಕ್ ವಿ ಆಮದು ಮಾಡಿಕೊಳ್ಳಲು ಚಿಂತನೆ ನಡೆಸಿದೆ. ರಷ್ಯಾದ ಈ ಲಸಿಕೆಯನ್ನು ಪ್ರತಿ ಡೋಸ್‌ಗೆ 9 ಡಾಲರ್ ನಂತೆ ಮಾರಾಟ ಮಾಡಲಾಗುತ್ತದೆ. ರಷ್ಯಾದ ಈ ಲಸಿಕೆಯ ಪೂರೈಕೆ ಜೂನ್‌ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Explainer: ಲಸಿಕೆ ವಿಚಾರದಲ್ಲಿ ಡಬ್ಲ್ಯೂಎಚ್​ಓ ನಿಯಮ ಪಾಲನೆಯಲ್ಲಿ ಮೊದಲ ಸ್ಥಾನದಲ್ಲಿ ಭಾರತ, ಶ್ರೀಮಂತ ರಾಷ್ಟ್ರಗಳ ಸಣ್ಣತನ ಬಯಲು

(Coronavirus Vaccinations to all Adults above the age of 18 Vaccine capacity is set to increase rapidly)

Follow us on

Related Stories

Most Read Stories

Click on your DTH Provider to Add TV9 Kannada