ನಗರ ಸಮಸ್ಯೆಗಳ ಪರಿಹಾರ: ಕೌನ್ಸಿಲರ್, ವಾರ್ಡ್ ಸಮಿತಿ ಮತ್ತು ನಿಮ್ಮ ಜವಾಬ್ದಾರಿಗಳು

Santosh Nair's article in 'Your India' series: ನಿಮ್ಮ ಸ್ಥಳೀಯ ರಸ್ತೆ, ಕಸ, ಬೀದಿ ದೀಪ ಸಮಸ್ಯೆಗಳಿಗೆ ಕೌನ್ಸಿಲರ್/ಕಾರ್ಪೊರೇಟರ್ ನೇರ ಜವಾಬ್ದಾರರು. ಶಾಸಕರು, ಸಂಸದರಲ್ಲ. ವಾರ್ಡ್ ಸಮಿತಿ ಮೂಲಕ ಕೌನ್ಸಿಲರ್‌ಗಳು ಅಧಿಕಾರಿಗಳೊಂದಿಗೆ ಸಮಸ್ಯೆ ಪ್ರಸ್ತಾಪಿಸುತ್ತಾರೆ. ಆದರೆ, ಅನುಷ್ಠಾನ ಪಾಲಿಕೆ ಆಯುಕ್ತರ ಕೈಯಲ್ಲಿದ್ದು, ಅವರು ಕೌನ್ಸಿಲರ್‌ಗೆ ಉತ್ತರದಾಯಿಯಲ್ಲ. ಈ ಮೂರು ಕೊಂಡಿಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಕೌನ್ಸಿಲರ್‌ರನ್ನು ಸಂಪರ್ಕಿಸಿ.

ನಗರ ಸಮಸ್ಯೆಗಳ ಪರಿಹಾರ: ಕೌನ್ಸಿಲರ್, ವಾರ್ಡ್ ಸಮಿತಿ ಮತ್ತು ನಿಮ್ಮ ಜವಾಬ್ದಾರಿಗಳು
ರಸ್ತೆಗುಂಡಿಗಳು
Image Credit source: PTI
Edited By:

Updated on: Sep 30, 2026 | 2:29 PM

ನಿಮ್ಮ ಹಾಳಾದ ರಸ್ತೆಯ ಸಮಸ್ಯೆಗೆ ಯಾರು ಕಾರಣ ಎಂದು ನೀವು ಭಾವಿಸಿದ್ದಿರೋ ಅದು ತಪ್ಪು ಎಂಬುದನ್ನು ಕಳೆದ ಎರಡು ಲೇಖನದಲ್ಲಿ ಕಂಡುಕೊಂಡಿದ್ದೇವೆ. ರಸ್ತೆ ಸಮಸ್ಯೆಗೆ ನಿಮ್ಮ ಸಂಸದರನ್ನಾಗಲೀ, ಶಾಸಕರನ್ನಾಗಲೀ ದೂಷಿಸಲು ಸಾಧ್ಯವಿಲ್ಲ. ಹಾಗಾದರೆ ಈ ಸಮಸ್ಯೆಗೆ ಹೊಣೆಗಾರರು ಯಾರು?

ಅವರೇ ನಿಮ್ಮ ಕೌನ್ಸಿಲರ್ (Councillor). ಅವರನ್ನು ಕಾರ್ಪೊರೇಟರ್ (Corporator) ಎಂದೂ ಕರೆಯಲಾಗುತ್ತದೆ.

ನಿಮ್ಮ ನಗರವು ಒಂದೇ ಒಂದು ಘಟಕವಲ್ಲ. ಅದನ್ನು ‘ವಾರ್ಡ್‌ಗಳಾಗಿ’ ವಿಂಗಡಿಸಲಾಗಿದೆ. ಪ್ರತಿಯೊಂದು ವಾರ್ಡ್ ಸುಮಾರು 30,000 ದಿಂದ 40,000 ಜನಸಂಖ್ಯೆಯನ್ನು ಹೊಂದಿರುತ್ತದೆ ಮತ್ತು ಪ್ರತಿಯೊಂದು ವಾರ್ಡ್ ತನ್ನದೇ ಆದ ಕೌನ್ಸಿಲರ್ ಅನ್ನು ಆಯ್ಕೆ ಮಾಡುತ್ತದೆ. ಭಾರತದ ನಗರ ಆಡಳಿತ ವ್ಯವಸ್ಥೆಯಲ್ಲಿ ಇದು ಅತ್ಯಂತ ಸಣ್ಣ ಹಾಗೂ ಸ್ಥಳೀಯ ಜನಪ್ರತಿನಿಧಿ ಹುದ್ದೆಯಾಗಿದೆ. ಇದು ಮೇಯರ್, ಅಥವಾ ಶಾಸಕರು ಹಾಗೂ ಸಂಸದರ ಕ್ಷೇತ್ರಗಳಿಗಿಂತ ಸಣ್ಣದಾದ ವ್ಯಾಪ್ತಿಯನ್ನು ಹೊಂದಿರುತ್ತದೆ. ನಿಮ್ಮ ನಿರ್ದಿಷ್ಟ ರಸ್ತೆಯ ಸಮಸ್ಯೆಯನ್ನು ತಿಳಿಯಲು ಯಾರು ಶಕ್ತರು ಎಂದು ನೀವು ಎಂದಾದರೂ ಯೋಚಿಸಿದ್ದರೆ, ಅದು ಖಂಡಿತವಾಗಿಯೂ ಈ ವ್ಯಕ್ತಿಯೇ ಆಗಿದ್ದಾರೆ.

ತಮ್ಮ ನಗರದ ಸಣ್ಣ ಭಾಗಕ್ಕಾಗಿ ಗಟ್ಟಿಯಾಗಿ ಧ್ವನಿ ಎತ್ತುವುದೇ ಕೌನ್ಸಿಲರ್ ಅವರ ನಿಜವಾದ ಕೆಲಸವಾಗಿದೆ. ಕಸ ಸಂಗ್ರಹಣೆಯಾಗದಿರುವುದು, ವಾರಗಟ್ಟಲೆ ಬೀದಿ ದೀಪ ಉರಿಯದಿರುವುದು, ಅಥವಾ ಪ್ರತಿ ಮುಂಗಾರಿನಲ್ಲಿಯೂ ಚರಂಡಿ ಉಕ್ಕಿ ಹರಿಯುವುದು — ಇವೇ ರೀತಿಯ ಸಮಸ್ಯೆಗಳನ್ನು ಆಯಾ ವಿಭಾಗಗಳನ್ನು ನಡೆಸುವ ಪೌರಾಡಳಿತ ಅಧಿಕಾರಿಗಳ ಬಳಿ ನೇರವಾಗಿ ಪ್ರಸ್ತಾಪಿಸುವುದು ಕೌನ್ಸಿಲರ್ ಅವರ ಪ್ರಮುಖ ಜವಾಬ್ದಾರಿಯಾಗಿದೆ.

ಕೌನ್ಸಿಲರ್‌ಗಳು ರಚನಾತ್ಮಕವಾಗಿ ಮತ್ತೊಂದು ಪ್ರಮುಖ ಕಾರ್ಯವನ್ನು ಮಾಡುತ್ತಾರೆ: ಅವರೆಲ್ಲರೂ ಸೇರಿ ಮೇಯರ್ ಅನ್ನು ಆಯ್ಕೆ ಮಾಡುತ್ತಾರೆ. ನಾವು ಕೆಲವು ಲೇಖನಗಳ ಹಿಂದೆ ತಿಳಿದುಕೊಂಡಂತೆ, ಹೆಚ್ಚಿನ ಭಾರತೀಯ ನಗರಗಳಲ್ಲಿ ಮೇಯರ್ ಹುದ್ದೆಯು ಕೇವಲ ಸಾಂಕೇತಿಕವಾಗಿರುತ್ತದೆ. ಮಹಾನಗರ ಪಾಲಿಕೆ ಅಥವಾ ಸಭೆಯ ಒಳಗಡೆ ತಮ್ಮ ಮತಗಳ ಮೂಲಕ ಮೇಯರ್ ಅವರನ್ನು ಆ ಕುರ್ಚಿಯಲ್ಲಿ ಕೂರಿಸುವವರೇ ಈ ಕೌನ್ಸಿಲರ್‌ಗಳು.

ಇದನ್ನೂ ಓದಿ: ನಿಮ್ಮ ದೈನಂದಿನ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ ಶಾಸಕರು; ಇವರ ಅಧಿಕಾರ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ಮಾಹಿತಿ

ದೊಡ್ಡ ನಗರಗಳಲ್ಲಿ ಮತ್ತೊಂದು ಹಂತದ ವ್ಯವಸ್ಥೆಯಿದೆ. 1992ರ ಸಾಂವಿಧಾನಿಕ ನಿಯಮದ ಪ್ರಕಾರ (74ನೇ ತಿದ್ದುಪಡಿ), ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಯಾವುದೇ ನಗರವು ‘ವಾರ್ಡ್ ಸಮಿತಿಗಳನ್ನು’ (Ward Committees) ರಚಿಸುವುದು ಕಡ್ಡಾಯವಾಗಿದೆ ಮತ್ತು ನಿಮ್ಮ ಸ್ಥಳೀಯ ಕೌನ್ಸಿಲರ್ ಸಾಮಾನ್ಯವಾಗಿ ಅದರ ಅಧ್ಯಕ್ಷತೆಯನ್ನು ವಹಿಸುತ್ತಾರೆ. ವಾರ್ಡ್ ಸಮಿತಿಯು ನಾಗರಿಕರು ಮತ್ತು ಆಡಳಿತ ಯಂತ್ರದ ನಡುವಿನ ನೇರ ಕೊಂಡಿಯಾಗಿದ್ದು, ಸ್ಥಳೀಯ ಸಮಸ್ಯೆಗಳು ಬೃಹತ್ ಸರ್ಕಾರಿ ಅಧಿಕಾರಶಾಹಿಯಲ್ಲಿ ಕಳೆದುಹೋಗುವ ಮುನ್ನ ಅವುಗಳನ್ನು ಪ್ರಸ್ತಾಪಿಸುವ ಮತ್ತು ಪರಿಹರಿಸುವ ವೇದಿಕೆಯಾಗಿದೆ.

ಹಾಗಾದರೆ, ಸಮಸ್ಯೆ ಬಗೆಹರಿದಂತೆಯೇ ಆಯಿತು. ನಿಮ್ಮ ದೂರುಗಳನ್ನು ಸಲ್ಲಿಸಲು ನಿಮ್ಮ ಕೌನ್ಸಿಲರ್ ಸೂಕ್ತ ವ್ಯಕ್ತಿ ಎಂಬುದು ಸ್ಪಷ್ಟವಾಯಿತು.

ಆದರೆ, ನಗರಗಳ ಕುರಿತಾದ ನಮ್ಮ ಲೇಖನದಲ್ಲಿದ್ದ ಆ ಮುಖ್ಯ ಟ್ವಿಸ್ಟ್ ಅನ್ನು ನೆನಪಿಸಿಕೊಳ್ಳಿ! ಮೇಯರ್ ಎದುರಿಸುವ ಅದೇ ಅಡೆತಡೆಯನ್ನು ಕೌನ್ಸಿಲರ್ ಕೂಡ ಎದುರಿಸಬೇಕಾಗುತ್ತದೆ. ಈ ಹೆಚ್ಚಿನ ಕೆಲಸಗಳನ್ನು ದಿನನಿತ್ಯ ಅನುಷ್ಠಾನಗೊಳಿಸುವ ವ್ಯಕ್ತಿ ‘ಪಾಲಿಕೆ ಆಯುಕ್ತರು’ (Municipal Commissioner). ಇವರು ರಾಜ್ಯ ಸರ್ಕಾರದಿಂದ ನೇಮಕಗೊಂಡ ಅಧಿಕಾರಿಯಾಗಿದ್ದು, ನಿಮ್ಮ ಕೌನ್ಸಿಲರ್‌ಗೆ ಯಾವುದೇ ರೀತಿಯಲ್ಲೂ ಉತ್ತರದಾಯಿಯಾಗಿರುವುದಿಲ್ಲ. ಒಬ್ಬ ಕೌನ್ಸಿಲರ್ ನಿಮ್ಮ ಕಸದ ಸಮಸ್ಯೆಯ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಬಹುದು, ವಾರ್ಡ್ ಸಮಿತಿಯಲ್ಲಿ ಅದಕ್ಕಾಗಿ ಒತ್ತಾಯಿಸಬಹುದು, ಪತ್ರಗಳನ್ನು ಬರೆಯಬಹುದು ಮತ್ತು ನಿರಂತರವಾಗಿ ಬೆನ್ನತ್ತಬಹುದು. ಆದರೆ ಆ ಕೆಲಸ ಸರಿಹೋಗಬೇಕಾದರೆ ಸಂಪೂರ್ಣವಾಗಿ ಬೇರೆಯವರಿಗೆ ರಿಪೋರ್ಟ್ ಮಾಡಿಕೊಳ್ಳುವ ಅಧಿಕಾರಿಯನ್ನೇ ಅವರೂ ಕಾಯಬೇಕಾಗುತ್ತದೆ.

ಆದ್ದರಿಂದ ನಿಮ್ಮ ರಸ್ತೆಯ ನಿಜವಾದ ಆಡಳಿತ ಶ್ರೇಣಿಯ ಪೂರ್ಣ ಚಿತ್ರಣ ಇಲ್ಲಿದೆ: ನಿಮ್ಮ ಪ್ರದೇಶದ ಸಮಸ್ಯೆಯನ್ನು ಅತ್ಯಂತ ಹತ್ತಿರದಿಂದ ಕಾಣುವವರು ಕೌನ್ಸಿಲರ್ ಆದ್ದರೆ, ಅದನ್ನು ಅವರು ಗುರುತಿಸಿ ಪ್ರಸ್ತಾಪಿಸಬೇಕು. ಪಾಲಿಕೆ ಆಯುಕ್ತರ ವಿಭಾಗವು ಅದನ್ನು ಸರಿಪಡಿಸಬೇಕು. ಇವರಿಬ್ಬರ ಹಿಂದೆ ರಾಜ್ಯ ಸರ್ಕಾರವಿರುತ್ತದೆ; ಅದು ಸಾಮಾನ್ಯವಾಗಿ ಹಣಕಾಸು ಮತ್ತು ಪ್ರಮುಖ ನಿರ್ಧಾರಗಳನ್ನು ನಿಯಂತ್ರಿಸುತ್ತದೆ, ಹಾಗೂ ಇಬ್ಬರಿಗೂ ಕಾರ್ಯನಿರ್ವಹಿಸಲು ಅಗತ್ಯ ಸಂಪನ್ಮೂಲಗಳು ಸಿಗುತ್ತವೆಯೇ ಎಂಬುದನ್ನು ನಿರ್ಧರಿಸುತ್ತದೆ.

ಇಲ್ಲಿ ಮೂರು ಪ್ರತ್ಯೇಕ ಕೊಂಡಿಗಳಿವೆ. ಇದರಲ್ಲಿ ಯಾವುದಾದರೂ ಒಂದು ಕೊಂಡಿ ಸದ್ದು ಮಾಡದೆ ಮುರಿದುಬಿದ್ದರೆ, ನಮ್ಮಲ್ಲಿ ಹೆಚ್ಚಿನವರು ಅನುಭವಿಸಿದ ಪರಿಸ್ಥಿತಿಯೇ ಎದುರಾಗುತ್ತದೆ: ಸಮಸ್ಯೆ ನೈಜವಾಗಿರುತ್ತದೆ, ಅದರ ಬಗ್ಗೆ ತಿಳಿದಿರುವ ಜನಪ್ರತಿನಿಧಿ ಇರುತ್ತಾರೆ, ಆದರೂ ತಿಂಗಳುಗಟ್ಟಲೆ ಏನೂ ಬದಲಾಗುವುದಿಲ್ಲ.

ಇದನ್ನೂ ಓದಿ: ನಿಮ್ಮ ಏರಿಯಾದ ರಸ್ತೆ ಗುಂಡಿ ಸಮಸ್ಯೆಗೆ ಎಂಪಿಗೆ ಶಾಪ ಹಾಕ್ತೀರಾ? ಸಂಸದರ ವ್ಯಾಪ್ತಿ, ಜವಾಬ್ದಾರಿಗಳೇನು ಎಂದು ತಿಳಿದಿರಿ

ಕಳೆದ ಐದು ಲೇಖನಗಳ ಒಟ್ಟಾರೆ ಸಾರಾಂಶವೇ ಇದು. ಭಾರತೀಯ ಪ್ರಜಾಪ್ರಭುತ್ವವು ನಿಮಗೆ ಒಬ್ಬನೇ ಒಬ್ಬ ಪ್ರತಿನಿಧಿಯನ್ನು ನೀಡುವುದಿಲ್ಲ; ಬದಲಿಗೆ ವಿವಿಧ ಹಂತಗಳಲ್ಲಿ ಪ್ರತ್ಯೇಕ ಜವಾಬ್ದಾರಿಗಳನ್ನು ಹೊಂದಿರುವ ಹಲವು ಜನಪ್ರತಿನಿಧಿಗಳನ್ನು ನೀಡುತ್ತದೆ. ಹಳ್ಳಿ ಅಥವಾ ವಾರ್ಡ್, ನಗರ ಅಥವಾ ಜಿಲ್ಲೆ, ರಾಜ್ಯ ಮತ್ತು ದೇಶ. ನಿಮ್ಮ ನಿರ್ದಿಷ್ಟ ಸಮಸ್ಯೆಗೆ ಯಾರು ಹೊಣೆಗಾರರು ಎಂದು ತಿಳಿದುಕೊಳ್ಳುವುದು ಕೇವಲ ಒಂದು ಸಣ್ಣ ಅಥವಾ ನೀರಸ ತಾಂತ್ರಿಕ ವಿಷಯವಲ್ಲ. ಸುಮ್ಮನೆ ಕೂಗಾಡುವುದಕ್ಕೂ ಮತ್ತು ಸರಿಯಾದ ಕದ ತಟ್ಟುವುದಕ್ಕೂ ಇರುವ ವ್ಯತ್ಯಾಸವೇ ಅದು.

ಆದ್ದರಿಂದ, ಮುಂದಿನ ಬಾರಿ ಸ್ಥಳೀಯವಾಗಿ ಏನಾದರೂ ನಿಮ್ಮನ್ನು ತೀವ್ರವಾಗಿ ಬಾಧಿಸಿದರೆ, ಸುಮ್ಮನೆ ಗಾಳಿಯಲ್ಲಿ ದೂರು ನೀಡುವ ಬದಲು ಇದನ್ನು ಪ್ರಯತ್ನಿಸಿ: ನಿಮ್ಮ ಕೌನ್ಸಿಲರ್ ಹೆಸರು ತಿಳಿದುಕೊಳ್ಳಿ. ನಿಮ್ಮ ನಗರದಲ್ಲಿ ವಾರ್ಡ್ ಸಮಿತಿ ಸಭೆ ನಡೆದರೆ ಅದರಲ್ಲಿ ಭಾಗವಹಿಸಿ. ನಿಮ್ಮ ರಸ್ತೆಯ ಪರವಾಗಿ ಅವರು ಆಡಳಿತದ ಮುಂದೆ ಏನನ್ನು ಪ್ರಸ್ತಾಪಿಸಿದ್ದಾರೆ ಮತ್ತು ಅವರಿಗೆ ಏನು ಉತ್ತರ ಬಂದಿದೆ ಎಂದು ನೇರವಾಗಿ ಕೇಳಿ.

ಇಂಥ ಪ್ರಶ್ನೆಗಳನ್ನು ಜನರು ಕೇಳಲಿ ಎಂದು ಅದೆಷ್ಟು ಮಂದಿ ಕಾಯುತ್ತಿರುತ್ತಾರೆ ಎಂಬುದನ್ನು ತಿಳಿದರೆ ಆಶ್ಚರ್ಯವಾದೀತು!

ಆಧಾರಗಳು: ಭಾರತದ ಸಂವಿಧಾನ, ವಿಧಿ 243S (74ನೇ ತಿದ್ದುಪಡಿ ಕಾಯ್ದೆ, 1992); ವಿಕಿಪೀಡಿಯಾ, “ಮ್ಯುನಿಸಿಪಲ್ ಕೌನ್ಸಿಲರ್ (ಇಂಡಿಯಾ)”; ಸಿಟಿಜನ್ ಮ್ಯಾಟರ್ಸ್, “ಬಿಬಿಎಂಪಿ ಕಾರ್ಪೊರೇಟರ್ಸ್ ‘ಸಪೋರ್ಟ್’ ವಾರ್ಡ್ ಕಮಿಟೀಸ್ ಇನ್ ದೇರ್ ಓನ್ ವೇ”; ಪರಿಸರ (Parisar), ವಾರ್ಡ್ ಸಮಿತಿಗಳ ಪಾತ್ರ ಮತ್ತು ರಚನೆಯ ಕುರಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us