ಕೇರಳದಲ್ಲಿ ಮತ್ತಿಬ್ಬರಿಗೆ ಝಿಕಾ ವೈರಸ್ ಸೋಕು, ಸೋಂಕಿತರ ಒಟ್ಟು ಸಂಖ್ಯೆ 48ಕ್ಕೆ ಏರಿಕೆ
Zika Virus: ಕೇರಳದಲ್ಲಿ ಝಿಕಾ ಸೋಂಕಿತರ ಒಟ್ಟು ಸಂಖ್ಯೆಯು 48ಕ್ಕೆ ಏರಿಕೆಯಾಗಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದರು.
ತಿರುವನಂತಪುರ: ಕೇರಳದಲ್ಲಿ ಭಾನುವಾರ ಮತ್ತಿಬ್ಬರಲ್ಲಿ ಝಿಕಾ ವೈರಸ್ ಸೋಂಕು ದೃಢಪಟ್ಟಿದೆ. ಕೇರಳದಲ್ಲಿ ಝಿಕಾ ಸೋಂಕಿತರ ಒಟ್ಟು ಸಂಖ್ಯೆಯು 48ಕ್ಕೆ ಏರಿಕೆಯಾಗಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದರು. ಶನಿವಾರವೂ ರಾಜ್ಯದಲ್ಲಿ ಎರಡು ಪ್ರಕರಣಗಳು ವರದಿಯಾಗಿದ್ದವು. ಶನಿವಾರ ರಾತ್ರಿಯವರೆಗೆ ರಾಜ್ಯದಲ್ಲಿ ಐದು ಸಕ್ರಿಯ ಪ್ರಕರಣಗಳಿದ್ದವು. ತಿರುವನಂತಪುರದ ಕುಮಾರಪುರಂನ 42 ವರ್ಷದ ಮಹಿಳೆಯಲ್ಲಿ ಝಿಕಾ ದೃಢಪಟ್ಟಿತ್ತು. ಕೊಲ್ಲಂನ 30 ವರ್ಷದ ಮಹಿಳೆಯೂ ಝಿಕಾ ಪಾಸಿಟಿವ್ ಆಗಿದ್ದರು.
ತಿರುವನಂತಪುರ ವೈದ್ಯಕೀಯ ಕಾಲೇಜಿನ ವೈರಾಲಜಿ ಪ್ರಯೋಗಾಲಯಗಳಲ್ಲಿ ನಡೆಸಿದ್ದ ಪ್ರಯೋಗಗಳಲ್ಲಿ ಇವರಿಗೆ ಸೋಂಕು ದೃಢಪಟ್ಟಿತ್ತು. ಸೋಂಕಿತರ ಪೈಕಿ ಯಾರೊಬ್ಬರೂ ಆಸ್ಪತ್ರೆಗಳಿಗೆ ದಾಖಲಾಗಿಲ್ಲ. ಅವರೆಲ್ಲರ ದೇಹಸ್ಥಿತಿ ಸದೃಢವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ. ಮೂರು ಝಿಕಾ ವೈರಸ್ ಪ್ರಕರಣಗಳು ದೃಢಪಟ್ಟ ಬಗ್ಗೆ ಜುಲೈ 22ರಂದು ರಾಜ್ಯ ಸರ್ಕಾರವು ಮಾಹಿತಿ ನೀಡಿತ್ತು.
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸೊಳ್ಳೆಗಳ ನಿವಾರಣೆಗೆ ಫಾಗಿಂಗ್ ಹೆಚ್ಚಿಸಲಾಗುವುದು. ತಿರುವನಂತಪುರ ಜಿಲ್ಲಾಡಳಿತವೂ ಇತರೆಲ್ಲ ಇಲಾಖೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ 7 ದಿನಗಳವರೆಗೆ ಪ್ರತಿದಿನ ಫಾಗಿಂಗ್ ಇರುತ್ತದೆ ಎಂದು ವೀಣಾ ಜಾರ್ಜ್ ಹೇಳಿದರು.
ಜಿಲ್ಲಾ ವೈದ್ಯಾಧಿಕಾರಿ ಕಚೇರಿ ಆವರಣದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಝಿಕಾ ವೈರಾಣು ಕುರಿತ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಕರೆ ಮಾಡಬಹುದು ಎಂದು ಹೇಳಿದರು. ಕೇರಳದಲ್ಲಿ ಜುಲೈ 9ರಂದು ಝಿಕಾ ವೈರಾಣುವಿನ ಮೊದಲ ಪ್ರಕರಣ ದೃಢಪಟ್ಟಿತ್ತು.
(Zika virus confirmed in 2 people in Kerala total tally rises to 48)
ಇದನ್ನೂ ಓದಿ: Explainer ಕೊರೊನಾ ಸಂಕಷ್ಟದ ಮಧ್ಯೆಯೇ ಬಂತು ಝಿಕಾ ವೈರಸ್ ಸೋಂಕು; ಈ ಸೋಂಕು ತಡೆಗಟ್ಟುವುದು ಹೇಗೆ?
ಇದನ್ನೂ ಓದಿ: ಕೇರಳದಲ್ಲಿ ಒಟ್ಟು 15 ಝಿಕಾ ವೈರಸ್ ಕೇಸ್ ಪತ್ತೆ.. ಕರ್ನಾಟಕ-ಕೇರಳ ಗಡಿ ಚೆಕ್‌ಪೋಸ್ಟ್‌ನಲ್ಲಿ ಅಲರ್ಟ್