ರಕ್ಷಣಾ ವಿದ್ಯಮಾನ: ಹಗುರ ಯುದ್ಧವಿಮಾನ ತೇಜಸ್​ಗೆ ಶಕ್ತಿ ತುಂಬುವ ಕಾವೇರಿ ಸುಧಾರಣೆ ಈ ಕ್ಷಣದ ತುರ್ತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 19, 2021 | 6:40 PM

LCA Tejas: ಹತ್ತಾರು ವರ್ಷಗಳಿಂದ ಸಾಗುತ್ತಿರುವ ಕಾವೇರಿ ಎಂಜಿನ್ ಅಭಿವೃದ್ಧಿಪಡಿಸುವ ಯೋಜನೆ ಇಂದಿಗೂ ಪೂರ್ಣಗೊಂಡಿಲ್ಲ. ಏನಿದು ಕಾವೇರಿ ಯೋಜನೆ? ತಡವಾಗಲು ಏನು ಕಾರಣ?

ರಕ್ಷಣಾ ವಿದ್ಯಮಾನ: ಹಗುರ ಯುದ್ಧವಿಮಾನ ತೇಜಸ್​ಗೆ ಶಕ್ತಿ ತುಂಬುವ ಕಾವೇರಿ ಸುಧಾರಣೆ ಈ ಕ್ಷಣದ ತುರ್ತು
ವಿಮಾನವಾಹಕ ಯುದ್ಧನೌಕೆ ಐಎನ್​ಎಸ್ ವಿಕ್ರಮಾದಿತ್ಯದಿಂದ ಹಾರುತ್ತಿರುವ ತೇಜಸ್ ಲಘು ಯುದ್ಧವಿಮಾನ
Follow us on

ವಾಯುಪಡೆಯ ಆಶಾಕಿರಣ ಎಂದೇ ವಿಶ್ಲೇಷಿಸಲಾಗಿರುವ ಸ್ವದೇಶಿ ನಿರ್ಮಿತ ಯುದ್ಧವಿಮಾನ ತೇಜಸ್​ಗೆ ಬಲ ನೀಡುತ್ತಿರುವುದು ಕಾವೇರಿ ಎಂಜಿನ್. ಹತ್ತಾರು ವರ್ಷಗಳಿಂದ ಸಾಗುತ್ತಿರುವ ಕಾವೇರಿ ಎಂಜಿನ್ ಅಭಿವೃದ್ಧಿಪಡಿಸುವ ಯೋಜನೆ ಇಂದಿಗೂ ಪೂರ್ಣಗೊಂಡಿಲ್ಲ. ಏನಿದು ಕಾವೇರಿ ಯೋಜನೆ? ತಡವಾಗಲು ಏನು ಕಾರಣ? ಈ ಲೇಖನದಲ್ಲಿ ಉತ್ತರಿಸಲು ಯತ್ನಿಸಿದ್ದಾರೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಉತ್ಪನ್ನಗಳನ್ನು ನಿರ್ಮಿಸುವ ಉದ್ಯಮಿ ಗಿರೀಶ್ ಲಿಂಗಣ್ಣ.

ವಿಮಾನಗಳಿಗೆ ಜೆಟ್ ಎಂಜಿನ್ ಅಭಿವೃದ್ಧಿಪಡಿಸುವುದು ವಾಯುಯಾನ ಕ್ಷೇತ್ರದ ಇತಿಹಾಸದಲ್ಲಿ ಬಹುದೊಡ್ಡ ಮೈಲಿಗಲ್ಲು. ಇದೀಗ ಭಾರತದಲ್ಲಿ ಕಾವೇರಿ ಎಂಜಿನ್ ಯೋಜನೆಗೆ ಸ್ಪಷ್ಟ ಚಿತ್ರಣ ದೊರೆಯಲಾರಂಭಿಸಿದೆ. ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ ತುಂಬಲೆಂದು ಇದನ್ನು ಆರಂಭಿಸಲಾಗಿತ್ತು. ಆದರೆ, ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ತೇಜಸ್​ಗೆ ಜಿಇ ಎಂಜಿನ್​ಗಳನ್ನು ಬಳಸಿ ಹಾರಾಟ ನಡೆಸಲಾಯಿತು. ಇಂದಿಗೂ ಅದೇ ಎಂಜಿನ್ ಬಳಕೆಯಾಗುತ್ತಿದೆ.

1985ರಲ್ಲಿ ದೇಸಿ ವಿಮಾನ ಎಂಜಿನ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್​ಡಿಒ) ಈ ಕೆಲಸವನ್ನು ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್​ಮೆಂಟ್​ಗೆ ವಹಿಸಿತ್ತು. ಆದರೆ, ಆ ಸಂಸ್ಥೆಗೆ ಎಂಜಿನ್ ತಯಾರಿಕೆಯಲ್ಲಿ ಸ್ವಲ್ಪಮಟ್ಟಿನ ಅನುಭವ ಇತ್ತು. ವಿಳಂಬದ ಹಿನ್ನೆಲೆಯಲ್ಲಿ ತೇಜಸ್ ಮೂರು ದಶಕಗಳ ನಂತರ ಹಾರಾಟ ನಡೆಸಿತು. ತೇಜಸ್ ಅನ್ನು ವಿಶ್ವದ ಅತ್ಯಂತ ಹಗುರ ಯುದ್ಧ ವಿಮಾನ ಎಂದು ಪರಿಗಣಿಸಲಾಗಿದೆ. ಇದನ್ನು ಭಾರತೀಯ ವಾಯುಸೇನೆಯ ಭವಿಷ್ಯವೆಂದೇ ಹೇಳಲಾಗುತ್ತಿದೆ. ಆದರೆ, ಉದ್ದೇಶಿತ ವಿಮಾನ ಎಂಜಿನ್​ ಉತ್ತಮ ಗುಣಮಟ್ಟದ್ದು ಅಲ್ಲ. ಈ ಹಿನ್ನೆಲೆಯಲ್ಲಿ ಭಾರತವು ಈಗ ತೇಜಸ್​ಗೆ ಶಕ್ತಿ ತುಂಬಲು ಅಂದರೆ ಎಂಜಿನ್​ಗಾಗಿ ವಿದೇಶಿ ಉತ್ಪಾದಕರನ್ನು ಅವಲಂಬಿಸುತ್ತಿದೆ.

ಆರಂಭದಿಂದಲೂ ಕಾವೇರಿ ಎಂಜಿನ್ ಯೋಜನೆಯು ಹಲವು ಹಿನ್ನಡೆಗಳನ್ನು ಅನುಭವಿಸಿತು. ಈ ಹಿನ್ನಡೆ ಪಟ್ಟಿಯಲ್ಲಿ ಸರ್ಕಾರದಿಂದ ಸಿಗಬೇಕಿದ್ದ ಆರ್ಥಿಕ ಬೆಂಬಲವು ಪ್ರಮುಖವಾಗಿದೆ. 1985ರಲ್ಲಿ ಕಾವೇರಿ ಎಂಜಿನ್ ಯೋಜನೆ ಆರಂಭವಾಯಿತಾದರೂ ಇಂದಿಗೂ ಅದರಿಂದ ಯಾವುದೇ ಫಲಿತಾಂಶ ಬಂದಿಲ್ಲ. ಇದರ ವೈಫಲ್ಯಕ್ಕೆ ಕಾರಣಗಳನ್ನು ಹುಡುಕುವ ಮುನ್ನ ನಾವು ಜೆಟ್ ಎಂಜಿನ್​ನ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕು.

ಜೆಟ್ ಎಂಜಿನ್ ಒಂದು ಕಾಂಪ್ಯಾಕ್ಟ್ ಗ್ಯಾಸ್ ಟರ್ಬೈನ್ ಆಗಿದ್ದು ವಿಮಾನ ಮೇಲಕ್ಕೆ ಹಾರಲು ಬೇಕಾದ ಶಕ್ತಿಯನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಐದು ನಿರ್ಣಾಯಕವಾದ ಭಾಗಗಳಿಂದ ತಯಾರಿಸಲಾಗುತ್ತದೆ. ಅವುಗಳೆಂದರೆ ಫ್ಯಾನ್, ಕಂಪ್ರೆಷರ್, ಕಂಬಶನ್, ಟರ್ಬೈನ್, ಮಿಕ್ಸರ್ ಮತ್ತು ನಾಝಲ್. ಫ್ಯಾನ್ ಗಾಳಿಯನ್ನು ಹೀರಿಕೊಂಡಾಗ ಗಾಳಿಯು ಸಂಕುಚಿತಗೊಳ್ಳುತ್ತದೆ. ಇಂಧನ ಹಾಗೂ ವಿದ್ಯುತ್ ಸ್ಪಾರ್ಕ್ ಸಹಾಯದಿಂದ ಟರ್ಬೈನ್ ಮೂಲಕ ಹರಡುತ್ತದೆ. ಇದಾದ ಬಳಿಕ ಟರ್ಬೈನ್ ಮೂಲಕ ಹರಿಯುತ್ತದೆ ಮತ್ತು ನಾಝಲ್ ಅಂದರೆ ಕೊಳವೆ ಮೂಲಕ ಸ್ಫೋಟಗೊಳ್ಳುತ್ತದೆ. ಉತ್ಪಾದನೆಯಾದ ಶಕ್ತಿಯ ಒತ್ತಡವನ್ನು ಹಿಂದಕ್ಕೆ ತಳ್ಳಲಾಗುತ್ತದೆ. ಇದು ಮುಂದಕ್ಕೆ ಹೋಗುವ ಚಲನಶಕ್ತಿಯನ್ನು ವಿಮಾನಕ್ಕೆ ನೀಡುತ್ತದೆ.

ಇಲ್ಲಿ ಉತ್ಪತ್ತಿಯಾಗುವ ಒತ್ತಡವು ತುಂಬಾ ಶಕ್ತಿಯುತವಾಗಿದ್ದು, ಸಾಮಾನ್ಯ ಲೋಹಗಳು ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದೂರನ್ನು ಎಂಜಿನ್ ಅಭಿವೃದ್ಧಿಪಡಿಸುವ ಆರಂಭದ ದಿನಗಳಲ್ಲಿ ದಾಖಲಿಸಲಾಗುತ್ತದೆ. ಸುಮಾರು 6000 ಗಂಟೆಗಳವರೆಗೆ ಶಾಖವನ್ನು ತಡೆದುಕೊಳ್ಳುವ ವಿಶೇಷವಾದ ಲೋಹದ ಬಳಕೆ ಇಲ್ಲಿ ಅಗತ್ಯವಿರುತ್ತದೆ.

ಇದನ್ನೂ ಓದಿ: HAL ನಿರ್ಮಿತ 83 ತೇಜಸ್ ಲಘು ಯುದ್ಧವಿಮಾನ ಖರೀದಿಗೆ ಕೇಂದ್ರದ ಅನುಮೋದನೆ

ತೇಜಸ್ ಯುದ್ಧವಿಮಾನ

ಕಾವೇರಿ ಎಂಜಿನ್ ನಡೆದುಬಂದ ಹಾದಿ
ಯುದ್ಧವಿಮಾನಗಳಿಗೆ ದೇಸಿ ಎಂಜಿನ್ ರೂಪಿಸಲು ಡಿಆರ್​ಡಿಒ 17 ಮಾದರಿಗಳ ರೂಪುರೇಷೆ ಸಿದ್ಧಪಡಿಸಿತ್ತು. ಕಾವೇರಿ ಮಾದರಿಯ ಮೊದಲ ಪರೀಕ್ಷೆಯನ್ನು 1996ರಲ್ಲಿ ಕೈಗೊಳ್ಳಲಾಯಿತು ಮತ್ತು 1998ರಲ್ಲಿ ಗ್ರೌಂಡ್ ಟೆಸ್ಟ್​ಗಳನ್ನು ನಡೆಸಲಾಯಿತು. ನಂತರ 1999ರಲ್ಲಿ ಪರೀಕ್ಷಾರ್ಥ ಹಾರಾಟಕ್ಕೆ ಸಮಯ ನಿಗದಿಯಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಪರೀಕ್ಷೆ ಸಾಧ್ಯವಾಗಲಿಲ್ಲ. 2003ರಲ್ಲಿ ಏರೊನಾಟಿಕಲ್ ಡೆವಲಪ್​ಮೆಂಟ್ ಏಜೆನ್ಸಿ ಲಘು ಯುದ್ಧ ವಿಮಾನಗಳಿಗೆ 17 F404-IN20 ಎಂಜಿನ್ ಪೂರೈಸಲು ಜಿಇಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಕಾವೇರಿ ಎಂಜಿನ್ ರಷ್ಯಾದಲ್ಲಿ ನಡೆದ ಹೈ-ಆಲ್ಟಿಟ್ಯೂಡ್ ಪರೀಕ್ಷೆಯಲ್ಲಿ ವಿಫಲವಾಯಿತು. ಇದರ ಮೂಲಕ ತೇಜಸ್​ಗೆ ಸ್ವದೇಶಿ ಉತ್ಪಾದನೆಯ ಮೊದಲ ಎಂಜಿನ್ ಮೇಲೆ ಇಟ್ಟಿದ್ದ ನಿರೀಕ್ಷೆಗಳು ಅಂತ್ಯಗೊಂಡಂತೆ ಆಗಿತ್ತು.

ಯಶಸ್ಸು
ಕಾವೇರಿ ಎಂಜಿನ್ ಯೋಜನೆ ಸಂಪೂರ್ಣ ವಿಫಲವಾಗಲಿಲ್ಲ. ಜಿಟಿಆರ್​ಇ ಎಂಟು ಮಾದರಿಯ ನಾಲ್ಕು ಕೋರ್ ಎಂಜಿನ್​ಗಳನ್ನು ಅಭಿವೃದ್ಧಿಪಡಿಸಿತು. ರಷ್ಯನ್ ಸೆಂಟ್ರಲ್ ಇನ್​ಸ್ಟಿಟ್ಯೂಟ್​ ಆಫ್ ಏವಿಯೇಷನ್ ಮೋಟರ್ಸ್ (ಸಿಐಎಎಂ) ನೆರವಿನಿಂದ 2010ರಲ್ಲಿ ಆಲ್ಟಿಟ್ಯೂಡ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಪ್ರಮುಖವಾದ ಮೈಲಿಗಲ್ಲು ಸ್ಥಾಪಿಸಿತು. ಡಿಆರ್​ಡಿಒ ಪ್ರಕಾರ ಕಾವೇರಿ ಎಂಜಿನ್ ಕಾರ್ಯಕ್ಷಮತೆಯನ್ನು ವಿವಿಧ ಆಲ್ಟಿಟ್ಯೂಡ್​ಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಡಿಆರ್​ಡಿಒ ಪ್ರಕಾರ, ರಷ್ಯಾದ ಗ್ರೊಮೊವ್​ದಲ್ಲಿ ಈ ಎಂಜಿನ್​ನೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯದವರೆಗೆ 6000 ಮೀಟರ್​ಗಳ (20,000 ಅಡಿಗಳು) ಎತ್ತರದಲ್ಲಿ ಹಾರಾಟ ಪರೀಕ್ಷೆಯನ್ನು ನಡೆಸಲಾಗಿದೆ. 2021ರಲ್ಲಿ ಡಿಆರ್​ಡಿಒ ಸಿಂಗಲ್ ಕ್ರಿಸ್ಟಲ್ ಬ್ಲೇಡ್​ಗಳು ಮತ್ತು ಅಗತ್ಯವಾದ ಘಟಕಗಳನ್ನು ಅಭಿವೃದ್ಧಿಪಡಿಸಿತು. ಈ ಯಶಸ್ಸಿನೊಂದಿಗೆ ಇಂತಹ ಸಾಧನೆ ಮಾಡಿದ ಕೆಲವೇ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಯಿತು.

ಇದನ್ನೂ ಓದಿ: ಭಾರತೀಯ ಸೇನೆಗೆ ಬಂತು ಆನೆ ಬಲ, ಗಡಿಯಲ್ಲಿ LCA ತೇಜಸ್‌ ಯುದ್ಧವಿಮಾನ ನಿಯೋಜನೆ

ತೇಜಸ್​ ಲಘು ಯುದ್ಧವಿಮಾನ

ಎಂಜಿನ್ ಅಭಿವೃದ್ಧಿ ತಡವಾಗಲು ಏನು ಕಾರಣ?
36 ವರ್ಷಗಳ ನಂತರವೂ, ದೇಸಿ ಎಂಜಿನ್ ಅಭಿವೃದ್ಧಿಗೆ ಹಲವು ಹಿನ್ನಡೆಗಳು ಕಂಡುಬರುತ್ತಿವೆ. ಇದಕ್ಕೆ ಯೋಜನೆ ರೂಪಿಸುವಲ್ಲಿ ಡಿಆರ್​ಡಿಒ ಮಾಡುತ್ತಿರುವ ತಪ್ಪುಗಳು ಪ್ರಮುಖ ಕಾರಣವಾಗಿದೆ. ಎಂಜಿನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಒಪ್ಪಿಕೊಳ್ಳಲು ಇದಕ್ಕೆ ಇಷ್ಟವಿರಲಿಲ್ಲ. ಆದರೆ, ಇದಕ್ಕೆ ಬಲಿಯಾಗುತ್ತಿರುವುದು ಮಾತ್ರ ಎಲ್​ಸಿಎ ತೇಜಸ್. ಸಮಸ್ಯೆ ಉಲ್ಬಣಗೊಳ್ಳುವವರೆಗೆ ಯಾವುದೇ ವಿದೇಶಿ ಕಂಪನಿಯನ್ನು ಯೋಜನೆಯ ಭಾಗವಾಗಿಸಿಕೊಳ್ಳಲು ಡಿಆರ್​ಡಿಒ ಹಿಂಜರಿಯುತ್ತಿತ್ತು.

ನಿರ್ಣಾಯಕ ಯಂತ್ರೋಪಕರಣಗಳು ಮತ್ತು ಉತ್ಪನ್ನಗಳ ಲಭ್ಯತೆಯ ಕೊರತೆ, ತಂತ್ರಜ್ಞಾನದ ಸಂಕೀರ್ಣತೆ, ಶೂನ್ಯ ಪರೀಕ್ಷಾ ಸೌಲಭ್ಯಗಳು ಮತ್ತು ಕೌಶಲ್ಯಾಧಾರಿತ ಸಿಬ್ಬಂದಿ ಕೊರತೆ ಈ ವಿಳಂಬಕ್ಕೆ ಪ್ರಮುಖ ಕಾರಣ ಎಂದು 2010ರಲ್ಲಿ ರಕ್ಷಣಾ ಸಚಿವಾಲಯ ಸ್ಪಷ್ಟೀಕರಣ ನೀಡಿತ್ತು. ತಂತ್ರಜ್ಞಾನವನ್ನು ಹೊಂದಿರುವ ದೇಶಗಳು ಡಿಆರ್​ಡಿಒದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಡಿಆರ್​ಡಿಒ ಕತ್ತಲೆಯಲ್ಲಿ ತಡಕಾಡುತ್ತಿದ್ದುದನ್ನು ಸಚಿವಾಲಯ ಗಮನಿಸಿದೆ. ಈ ವಿಳಂಬವು ಇಂದಿಗೂ ದೇಶಕ್ಕೆ ನಷ್ಟವಾಗುವಂತೆ ಮಾಡುತ್ತಿದೆ. ತೇಜಸ್​ಗಾಗಿ 99 ಜಿಇ ಎಂಜಿನ್​ಗಳನ್ನು ಖರೀದಿಸಲು ಎಚ್ಎಎಲ್ 716 ಮಿಲಿಯನ್ ಡಾಲರ್ (5000 ಕೋಟಿ ರೂಪಾಯಿಗಳನ್ನು) ಒಪ್ಪಂದ ಮಾಡಿಕೊಂಡಿದೆ.

ಭಾರತದ ಮಹಾಲೇಖಪಾಲರ ವರದಿಯ ಪ್ರಕಾರ (ಕಂಟ್ರೋಲರ್ ಆಡಿಟರ್ ಜನರಲ್ ಆಫ್ ಇಂಡಿಯಾ) 2010-11ರಲ್ಲಿ 265.3 ಮಿಲಿಯನ್ ಡಾಲರ್ ಖರ್ಚಾಗಿದೆ. ಆದರೆ, ಯೋಜನೆ ಮಾತ್ರ ವಿಫಲವಾಗಿದೆ. ಎಂಜಿನ್ ತೂಕ 1100 ಕೆಜಿ ಇರಬೇಕು ಎಂದು ನಿರ್ದಿಷ್ಟಪಡಿಸಲಾಗಿತ್ತು. ಆದರೆ ಈಗ ರೂಪುಗೊಂಡಿರುವ ಎಂಜಿನ್ 1235 ಕೆಜಿ ಇದೆ.

ಇದನ್ನೂ ಓದಿ: HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಜೆಟ್​ ಎಂಜಿನ್ ಹೀಗಿರುತ್ತೆ

ಕಾವೇರಿ ಕನಸಿಗೆ ಪುನರುಜ್ಜೀವನ
ಹಲವಾರು ಟೀಕೆಗಳು ವ್ಯಕ್ತವಾದ ನಂತರ ಡಿಆರ್​ಡಿಒ ನವೆಂಬರ್ 2014ರಲ್ಲಿ ಯೋಜನೆಯನ್ನು ಕೈಬಿಟ್ಟಿತ್ತು. ಭಾರತದ ಸಹಯೋಗದಲ್ಲಿ ಫ್ರಾನ್ಸ್ ಜಂಟಿಯಾಗಿ ಎಂಜಿನ್ ಅಭಿವೃದ್ಧಿಪಡಿಸಲು ಮುಂದಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಪುನಶ್ಚೇತನಗೊಳಿಸಲಾಯಿತು. ಆದರೆ, ತಂತ್ರಜ್ಞಾನವನ್ನು ವರ್ಗಾವಣೆ ಮಾಡಲು ಫ್ರಾನ್ಸ್​ ನಿರಾಕರಿಸಿದ್ದರಿಂದ ಈ ಪ್ರಸ್ತಾವಕ್ಕೆ ಹಿನ್ನಡೆ ಉಂಟಾಯಿತು. ಭಾರತೀಯ ವಾಯುಪಡೆಯಿಂದ ಎಂಎಂಆರ್​ಸಿಎ ಅಡಿಯಲ್ಲಿ ಹೆಚ್ಚಿನ ಯುದ್ಧ ವಿಮಾನಗಳನ್ನು ಖರೀದಿಸಲು ಆಸಕ್ತಿ ತೋರಿದ್ದರ ಫಲವಾಗಿ ಹಲವಾರು ದೇಶಗಳು ಭಾರತದೊಂದಿಗೆ ಜೆಟ್ ಎಂಜಿನ್ ಅಭಿವೃದ್ಧಿಪಡಿಸಲು ಮುಂದೆ ಬಂದಿವೆ.

ಐಎಎಫ್ ಸ್ಥಳೀಯವಾದ ಸ್ಟೆಲ್ತ್ ವಿಮಾನವಾದ ಎಎಂಸಿಎ ಮೇಲೆ ವೇಗವಾಗಿ ಒತ್ತು ನೀಡುತ್ತಿದೆ. ಡಿಆರ್​ಡಿಒ ತನ್ನ ಹಿಂದಿನ ತಪ್ಪನ್ನು ಪುನರಾವರ್ತಿಸಲು ಬಯಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಎಂಜಿನ್​ನೊಂದಿಗೆ ಎಎಂಸಿಎಗೆ ಶಕ್ತಿಯನ್ನು ನೀಡಲು ಆಸಕ್ತಿ ತೋರಿದೆ. ಇದರ ಪರಿಣಾಮ ಸಂಸ್ಥೆಯು ಇದೀಗ ವಿದೇಶಿ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ. ಪಾಲುದಾರಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಏವಿಯೇಷನ್ ಜೈಂಟ್ ರೋಲ್ಸ್ ರಾಯ್ಸ್ ಮುಂಚೂಣಿಯಲ್ಲಿದೆ. ರಷ್ಯನ್ನರು ಸಹ ಆಸಕ್ತಿ ತೋರಿದ್ದಾರೆ.

ಜೆಟ್ ಎಂಜಿನ್ ಅಭಿವೃದ್ಧಿ ಒಂದು ಸಂಕೀರ್ಣವಾದ ತಂತ್ರಜ್ಞಾನ. ಚೀನಾ, ಕೊರಿಯಾ ಮತ್ತು ಇರಾನ್​ನಂತಹ ದೇಶಗಳು ಮಹತ್ವಾಕಾಂಕ್ಷೆಯಿಂದ ಯೋಜನೆಯನ್ನು ಕೈಗೆತ್ತಿಕೊಂಡರೂ ಹೆಣಗಾಡುತ್ತಿವೆ. ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಅತ್ಯಾಧುನಿಕ ಸಂಶೋಧನಾ ತಂಡ, ಹಣ, ನುರಿತ ಮಾನವ ಶಕ್ತಿಯ ಬೆಂಬಲ ಅಗತ್ಯವಾಗಿರುತ್ತದೆ.

ಇದನ್ನೂ ಓದಿ: ರಫೇಲ್​ ತಯಾರಿಸುವ ತಾಕತ್ತು HALಗೆ ಇದೆ, ಆದರೆ..

ವಿಮಾನದ ಎಂಜಿನ್ ಮತ್ತು ಲೇಖಕರಾದ ಗಿರೀಶ್ ಲಿಂಗಣ್ಣ

ಬೆಳ್ಳಿ ರೇಖೆ
ನಿರಂತರ ಪ್ರಯತ್ನದ ನಂತರ, ಭಾರತದ ಜೆಟ್ ಎಂಜಿನ್ ಯೋಜನೆಯು ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಿದೆ. ಈಗ ಅಭಿವೃದ್ಧಿಪಡಿಸಿರುವ ಎಂಜಿನ್ 75 ಕೆ ನ್ಯೂಟನ್ ಥ್ರಸ್ಟ್ ಉತ್ಪಾದಿಸಲು ಸಮರ್ಥವಾಗಿದೆ. ಆದರೆ, ಎಲ್​ಸಿಎಗೆ 90ಕೆ ಮತ್ತು ಎಎಂಸಿಎಗೆ 110ಕೆ ಥ್ರಸ್ಟ್​ ಅಗತ್ಯವಿದೆ. ರೋಲ್ಸ್ ರಾಯ್ಸ್ ಜೊತೆಗಿನ ಯೋಜನೆಯು ಇವುಗಳನ್ನು ಪೂರೈಸುವ ಭರವಸೆಯನ್ನು ಮೂಡಿಸಿದೆ.

ರಕ್ಷಣಾ ವಾಯುಯಾನ ಕ್ಷೇತ್ರದಲ್ಲಿ ಭಾರತ ದೇಶ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಸ್ವದೇಶಿ ಜೆಟ್ ಇಂಜಿನ್ ಅಭಿವೃದ್ಧಿಗೆ ಮಹತ್ವ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳು ಸಕಾರಾತ್ಮಕ ಪರಿಣಾಮವನ್ನು ಬೀರಬಹುದಾಗಿದೆ.

ಈ ಬರಹದ ಲೇಖಕರಾದ ಗಿರೀಶ್ ಲಿಂಗಣ್ಣ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರು. ಈ ಸಂಸ್ಥೆಯು ರಕ್ಷಣಾ ಉದ್ಯಮಗಳಿಗೆ ಅಗತ್ಯ ಬಿಡಿಭಾಗಗಳನ್ನು ಪೂರೈಸುತ್ತದೆ.

(Defence Analysis Its High Time to Give Priority for Completions of Cauvery Engine of Tejas LCA)

ಇದನ್ನೂ ಓದಿ: Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಕೇಂದ್ರ ಸಚಿವರಿದ್ದ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ; ವಿಡಿಯೋ ಇಲ್ಲಿದೆ

Published On - 6:39 pm, Sun, 19 September 21