Menstrual blood investigations: ಕೊನೆಗೂ ನಡೆದಿದೆ ಮುಟ್ಟಿನ ರಕ್ತ ಪರೀಕ್ಷೆ -ವೈದ್ಯಲೋಕ ನಡೆಸುತ್ತಿದೆ ಋತುಚಕ್ರದ ಆಳವಾದ ಅಧ್ಯಯನ! ಮಹತ್ವದ ಆ ಮೆಡಿಕಲ್ ರಿಪೋರ್ಟ್ ಇಲ್ಲಿದೆ

Menstrual blood sample investigations: ತಡವಾಗಿಯಾದರೂ ನಡೆಯುತ್ತಿದೆ ಮುಟ್ಟಿನ ರಕ್ತದ ಪರೀಕ್ಷೆ: ಸದ್ಯಕ್ಕೆ ಟೈಪ್​ 2 ಮಧುಮೇಹ ಪತ್ತೆಹಚ್ಚಲು ಬಳಸುವ ಬಯೋಮಾರ್ಕರ್ ಆಗಿ ಮುಟ್ಟಿನ ರಕ್ತವನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಕಾರಣವಾಗಿರುವ HPV ಸೋಂಕಿನ ಅಧ್ಯಯನ, ಸಂತಾನೋತ್ಪತ್ತಿ ಅಂಗಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮತ್ತು ಫಲವತ್ತತೆಯ ಹಾರ್ಮೋನ್‌ಗಳ ಅಧ್ಯಯನ ಮತ್ತಿತರ ಪರೀಕ್ಷೆಗಳ ನಡೆಯಲಿದೆ.

Menstrual blood investigations: ಕೊನೆಗೂ ನಡೆದಿದೆ ಮುಟ್ಟಿನ ರಕ್ತ ಪರೀಕ್ಷೆ -ವೈದ್ಯಲೋಕ ನಡೆಸುತ್ತಿದೆ ಋತುಚಕ್ರದ ಆಳವಾದ ಅಧ್ಯಯನ! ಮಹತ್ವದ ಆ ಮೆಡಿಕಲ್ ರಿಪೋರ್ಟ್ ಇಲ್ಲಿದೆ
ಮುಟ್ಟಿನ ರಕ್ತ ಪರೀಕ್ಷೆಯು ಮಹಿಳೆಯ ಆರೋಗ್ಯದ ಬಗ್ಗೆ ಈಗ ಏನೆಲ್ಲಾ ಮಾಹಿತಿ ನೀಡ್ತಿದೆ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on:Jul 19, 2024 | 6:50 PM

Menstrual blood samples investigation: ಮುಟ್ಟಿನ ರಕ್ತ – ಮೊದಲೇ ಹೇಳಿಬಿಡೋಣ. ಇದು ಕ್ಷುಲ್ಲಕ ಅಥವಾ ಮುಜುಗರದ ವಿಷಯ ಅಲ್ಲ. ಇನ್ನು, ಹೆಣ್ಣು ಮಕ್ಕಳು ಬೇಸರ ಪಟ್ಟಿಕೊಳ್ಳುವ ವಿಷಯವೂ ಅಲ್ಲ. ಅನಗತ್ಯವಾಗಿ ಬೇರೆ ಯಾರೋ ಇದರಲ್ಲಿ ಮೂಗು ತೂರಿಸುವ ಅಗತ್ಯವೂ ಇಲ್ಲ. ಆದರೆ ಇದು ಸಾವಿರಾರು ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿದೆ. ದುರಂತ ಅಂದರೆ ವಿಜ್ಞಾನ ಮತ್ತು ಔಷಧ ಉದ್ಯಮವಾದರೂ ಇದರ ಮೇಲೆ ಸಾಕಷ್ಟು ಬೆಳಕು ಚೆಲ್ಲಬೇಕಿತ್ತು. ತಡವಾಗಿಯಾದರೂ ಎಚ್ಚೆತ್ತಿರುವ ವೈದ್ಯಲೋಕ ದೇಹದಿಂದ ಹೊರಬರುವ ಈ ರಕ್ತ ಅಗಾಧ ಮಾಹಿತಿಯ ಗಣಿಯಾಗಿದೆ ಎಂಬುದನ್ನು ಇದೀಗ ಒಪ್ಪುತ್ತಿದೆ. ಸಂತಾನೋತ್ಪತ್ತಿ ಸೇರಿದಂತೆ ಸ್ತ್ರೀಯರ ಅನೇಕ ಸಂಕೀರ್ಣ ಆರೋಗ್ಯ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲಬಲ್ಲದು. ಈ ರಕ್ತದ ಕೋಶಗಳಲ್ಲಿ ಅಡಗಿರುವ ಡೇಟಾವನ್ನು ಈಗ ವಿಜ್ಞಾನಿಗಳು ವಿಂಗಡಿಸುತ್ತಿದ್ದಾರೆ/ ವಿಶ್ಲೇಷಿಸುತ್ತಿದ್ದಾರೆ. ​​ ಸಂತಾನೋತ್ಪತ್ತಿ ಕಾಯಿಲೆಗಳು ಸೇರಿದಂತೆ ಅನೇಕ ಗುಪ್ತ್​ ಗುಪ್ತ್​ ವಿಷಯಗಳನ್ನು ಡಿಕೋಡ್ (ಭೇದಿಸಲು) ಮಾಡಲು ಬೆವರು ಸುರಿಸುತ್ತಿದ್ದಾರೆ.

ಮನುಷ್ಯನನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ಸೂಕ್ತ ಫಲಿತಾಂಶಗಳು, ನಿರ್ಧಾರಗಳನ್ನು ಕೈಗೊಳ್ಳಲು ದೇಹದಲ್ಲಿನ ರಕ್ತವನ್ನು ವೈದ್ಯರು ಬಹಳಷ್ಟು ಧಾರಾಳವಾಗಿ ಬಳಸುತ್ತಾರೆ! ಹಾಗಾದರೆ ಮಹಿಳೆಯರು ಪ್ರತಿ ತಿಂಗಳು ರಕ್ತಸ್ರಾವವಾಗುತ್ತಾರೆ. ಯಾರೂ ಈ ರಕ್ತವನ್ನು ಆರೋಗ್ಯ ಪರೀಕ್ಷೆಯ ಉದ್ದೇಶಗಳಿಗಾಗಿ ಏಕೆ ಬಳಸಿಲ್ಲ? ಎಂಬುದು ನಿಜಕ್ಕೂ ಸೋಜಿಗದ ಬಿಲಿಯನ್ ಡಾಲರ್​ ಪ್ರಶ್ನೆಯಾಗಿದೆ. ಬದಲಿಗೆ ಅದರ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ಶತಮಾನಗಳಿಂದಲೂ ಹಾಗೆಯೇ ಉಳಿದುಬಿಟ್ಟಿದೆ. ವೈದ್ಯ ಲೋಕ ಹಾಗಿರಲಿ ಸ್ವತಃ ಮಹಿಳಾ ಲೋಕವೂ ಅದರ ಬಗ್ಗೆ ಪ್ರಯೋಗಶೀಲವಾಗಿಲ್ಲ ಎಂದು ಟಿವಿ9 ಪ್ರೀಮಿಯಂ ಆಪ್​ ಜೊತೆ ಮಾತನಾಡುತ್ತಾ ಹಿರಿಯ ಮಹಿಳಾ ವೈದ್ಯರೊಬ್ಬರು ದೀರ್ಘ ನಿಟ್ಟುಸಿರುಬಿಟ್ಟು, ಶೂನ್ಯದಲ್ಲಿ ನೋಟ ನೆಟ್ಟರು.

ಮುಟ್ಟಿನ ಕುರಿತಾದ ಸಂಶೋಧನೆಯು ಇದುವರೆಗೆ ಸೀಮಿತವಾಗಿದ್ದವು. ಆದರೆ ಈಗ ಕ್ರಾಂತಿಕಾರಿ ಪ್ರಯೋಗಗಳು ಅಮೆರಿಕದಲ್ಲಿ ನಡೆದಿವೆ. ಡಯಾಬಿಟೀಸ್ ಪ್ರಮಾಣ ಪತ್ತೆ ಹಚ್ಚಲು ಬೆರಳ ತುದಿಯಿಂದ ಅಥವಾ ರಕ್ತ ನಾಳದಿಂದ ರಕ್ತ ಹೀರುವುದು ಇದುವರೆಗೂ ನಡೆದುಬಂದಿರುವ ಅತ್ಯಂತ ಸಾಮಾನ್ಯ ಪದ್ಧತಿಯಾಗಿದೆ. ಲೇಟೆಸ್ಟ್​ ಏನೆಂದರೆ ಮಹಿಳೆಯರು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಸ್ರವಿಸುವ ರಕ್ತವನ್ನು ಮಾದರಿಯಾಗಿ ತೆಗೆದುಕೊಂಡು ರಕ್ತದಲ್ಲಿನ ಗ್ಲುಕೋಸ್​ ಮಟ್ಟವನ್ನು ಪತ್ತೆ ಹಚ್ಚಲಾಗುತ್ತಿದೆ. ಅಮೆರಿಕದ FDA ಇದಕ್ಕೆ ಅನುಮೋದನೆ ನೀಡಿದೆ.

ಮಾಸಿಕ ಹರಿವನ್ನು ಹೀಗೆ ಪರೀಕ್ಷೆಗಳಿಗೆ ಒಳಪಡಿಸುವುದು ಅಸಾಮಾನ್ಯ, ಆಶ್ಚರ್ಯಕರ, ಬಹುಶಃ ಕ್ರಾಂತಿಕಾರಿ ಸಂಗತಿಯಾಗಬಲ್ಲದು. ಇದರಿಂದ ಮಹಿಳೆಯರು ನಿಜಕ್ಕೂ ತಮ್ಮ ಅನೇಕ ಆರೋಗ್ಯ ಸಮಸ್ಯೆಗಳ ಬಗ್ಗೆ ದೊಡ್ಡ ತಲೆನೋವು ಕಡಿಮೆಯಾಯಿತು ಎಂದು ನಿಟ್ಟುಸಿರುಬಿಡಬಹುದು. ಗಮನಿಸಿ, ವೈದ್ಯಕೀಯ ಸಂಶೋಧನೆಯಲ್ಲಿ ಋತುಚಕ್ರ ರಕ್ತವು ಅತ್ಯಂತ ಕಡೆಗಣಿಸಲ್ಪಡುವ ವಿಷಯವಾಗಿತ್ತು. ಆದರೆ ಈಗ ಮುಟ್ಟಿನ ರಕ್ತವು ಒಂದು ತ್ಯಾಜ್ಯವಷ್ಟೆ ಎಂದು ಪರಿಗಣಿಸದೆ, ಮಹಿಳೆಯ ದೇಹ ಸ್ರವಿಸುವ ಪ್ರಮುಖ ಮಾಹಿತಿಯ ಕಣಜ ಎಂದು ಪರಿಗಣಿಸಲಾಗುತ್ತಿದೆ.

ಇದರ ಸಮ್ಮುಖದಲ್ಲಿ, ಸದ್ಯಕ್ಕೆ ಟೈಪ್​ 2 ಮಧುಮೇಹವನ್ನು ಪತ್ತೆಹಚ್ಚಲು ಬಳಸುವ ಬಯೋಮಾರ್ಕರ್ ಆಗಿ ಮುಟ್ಟಿನ ರಕ್ತವನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ, ಶೇ. 95 ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಕಾರಣವಾಗಿರುವ Human papillomavirus infection – HPV ಅಧ್ಯಯನ, ಸಂತಾನೋತ್ಪತ್ತಿ ಅಂಗಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮತ್ತು ಫಲವತ್ತತೆಯ ಹಾರ್ಮೋನ್‌ಗಳ ಅಧ್ಯಯನ ಒಳಗೊಂಡಂತೆ ಇತರ ಪರೀಕ್ಷೆಗಳನ್ನು ನಡೆಸುವ ಪ್ರಯತ್ನ ನಡೆಯಲಿದೆ.

ಅವುಗಳಲ್ಲಿ ಒಂದು ಎಂಡೊಮೆಟ್ರಿಯೊಸಿಸ್ endometriosis, ಇದರಲ್ಲಿ ಗರ್ಭಾಶಯದ ರೇಖೆಯನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗಿನ ಪ್ರದೇಶಗಳನ್ನು ಆಕ್ರಮಿಸುತ್ತದೆ. ಅದರ ಸಂಕೀರ್ಣತೆ, ಆಗಾಗ್ಗೆ ನೋವು, ನಿಗೂಢ ಎಟಿಯಾಲಜಿ ಮತ್ತು ಚಿಕಿತ್ಸೆಯ ಕೊರತೆಯನ್ನು ಗಮನಿಸಿದರೆ, ಈ ರೋಗ ವಿಷಯವು ಬಿಳಿಯಾನೆಯಂತಿದೆ. ಆದರೂ ಈ ಅಧ್ಯಯನವು ಮಹಿಳೆಯ ಸಂತಾನೋತ್ಪತ್ತಿ ಅಂಗಗಳಿಗೆ ಹೆಬ್ಬಾಗಿಲು ತೆರೆದಂತೆ ಎಂದು ಪರಿಗಣಿಸಲಾಗಿದೆ. ಇದು ಒಂದು ರೀತಿ ಪರೀಕ್ಷೆಗಾಗಿ ಅಂಗಾಂಶ ಪಡೆಯುವ ಬದಲು ಎಂಡೊಮೆಟ್ರಿಯಂ ಬಯಾಪ್ಸಿ biopsy of the endometrium ಮಾಡಿದಂತೆ ಎಂದು ವೈದ್ಯರು ಹೇಳುತ್ತಾರೆ.

ಇನ್ನೂ ಅನೇಕ ಸಂಶೋಧಕರು ಮಹಿಳೆಯರ ನಾನಾ ರೋಗಗಳಿಗೆ ಚಿಕಿತ್ಸೆ ನೀಡಲು ಮುಟ್ಟಿನ ರಕ್ತದ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾರೆ. ಗರ್ಭಾಶಯವು ಅನೇಕ ಕಾರಣಗಳಿಗಾಗಿ ಅಸಾಧಾರಣ ಅಂಗವಾಗಿದೆ, ಅದರಲ್ಲಿ ಮುಖ್ಯವಾದುದೆಂದರೆ, ಮಹಿಳೆಯ ಸಂತಾನೋತ್ಪತ್ತಿ ಅವಧಿಯಲ್ಲಿ ಅದು ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ! ಹೆಚ್ಚು ಗಾಯಗೊಳಿಸುವುದಿಲ್ಲ/ ಘಾಸಿಗೊಳಿಸುವುದಿಲ್ಲ. ಅದು ಕಾಂಡಕೋಶಗಳ ಸಹಾಯದಿಂದ ಹೀಗೆ ಮಾಡುತ್ತದೆ. ಮುಟ್ಟಿನ ಹೊರಸೂಸುವಿಕೆಯಲ್ಲೂ ಈ ಕಾಂಡಕೋಶಗಳ ಅಂಶವಿದ್ದು, ಅದನ್ನು ಸಾಧ್ಯವಾಗಿಸುತ್ತದೆ.

ಬಂಜೆತನ ಮತ್ತು ತೀವ್ರವಾದ ಕೋವಿಡ್‌ನಂತಹ ಪರಿಸ್ಥಿತಿಗಳಿಗೆ ಈ ಕಾಂಡಕೋಶಗಳ ಬಳಕೆಯನ್ನು ಪರೀಕ್ಷಿಸುವ ಕ್ಲಿನಿಕಲ್ ಪ್ರಯೋಗಗಳು ಇತ್ತೀಚೆಗೆ ನಡೆದಿವೆ. ದೇಹದ ಮೇಲಿನ ಗಾಯಗಳನ್ನು ಗುಣಪಡಿಸಲು ಇದು ಪ್ರಯೋಜನಕಾರಿಯಾಗಿದೆ. ಮತ್ತು ಮಧುಮೇಹ ಪೀಡಿತ ಪ್ರಯೋಗಾಲಯ ಇಲಿಗಳಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ ಎಂದೂ ಅಧ್ಯಯನಗಳು ಈಗಾಗಲೇ ತೋರಿಸಿವೆ.

Also Read: No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಹಾಗಿದ್ದರೂ, ಮುಟ್ಟಿನ ರಕ್ತವನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಮುಟ್ಟಿನ ಬಗ್ಗೆ ಸಾಮಾಜಿಕ -ಸಾಂಸ್ಕೃತಿಕ ನಿಷೇಧಗಳಲ್ಲಿ ಬೇರೂರಿರುವ ಹಿಂಜರಿಕೆಯನ್ನು ಎದುರಿಸುತ್ತಿದ್ದಾರೆ. ಈ ತರಹದ ಹಿಂಜರಿಕೆಯು ಸಂಶೋಧನೆಗೆ ಅಡ್ಡಿಯಾಗುತ್ತಲೇ ಇದೆ, ಇದು ಆವಿಷ್ಕಾರಗಳನ್ನು ಮರೆಮಾಚುತ್ತದೆ ಎನ್ನಬಹುದು. ಪ್ರತಿ ದಿನದ ಲೆಕ್ಕದಲ್ಲಿ ಪರಿಗಣಿಸಿದರೆ, ಪ್ರಪಂಚದಾದ್ಯಂತ ಲಕ್ಷಾಂತರ ಮಿಲಿಯನ್ ಮಹಿಳೆಯರು ಋತುಮತಿಯಾಗುತ್ತಿದ್ದಾರೆ ಎಂಬುದನ್ನು ಮಹತ್ವವಾಗಿ ಪರಿಗಣಿಸಬೇಕಾಗುತ್ತದೆ.

2014 ರಲ್ಲಿ ಅಮೆರಿಕದಲ್ಲಿ ಮಹಿಳೆಯೊಬ್ಬರು ಸ್ವಯಂಪ್ರೇರಿತರಾಗಿ ತಮ್ಮನ್ನು ಕಾಡುತ್ತಿರುವ ರೋಗವನ್ನು ಪತ್ತೆಹಚ್ಚಲು ತಮ್ಮ ಮುಟ್ಟಿನ ರಕ್ತವನ್ನು ಬಳಸುವ ಸಾಧ್ಯತೆಯನ್ನು ಅನ್ವೇಷಿಸಲು ಮುಂದಾದರು. ಅವರು ದೊಡ್ಡ ವಿಶ್ವವಿದ್ಯಾಲಯವೊಂದರ ಆಸ್ಪತ್ರೆಯಲ್ಲಿ ಲ್ಯಾಬ್ ನಿರ್ದೇಶಕರನ್ನು ಸಂಪರ್ಕಿಸಿದರು. ಈ ಸಂಬಂಧ ಕೆಲವು ಪ್ರಯೋಗಗಳನ್ನು ನಡೆಸಬಹುದೇ ಎಂದು ಆ ಮಹಿಳೆ ನಿರ್ದೇಶಕನನ್ನು ಕೇಳಿದರು. ಆದರೆ ಅವರು ಅದಕ್ಕೆ ಸುತರಾಂ ಒಪ್ಪಲಿಲ್ಲ.

“ಇಲ್ಲ, ಇಲ್ಲ, ಇಲ್ಲ, ಅದು ಆಗುವುದಿಲ್ಲ” ಎಂದು ಮಹಿಳೆಯನ್ನು ವಾಪಸ್ ಕಳಿಸಿದ್ದರು. ನನ್ನ ಪ್ರಯೋಗಾಲಯದ ಯಂತ್ರದಲ್ಲಿ ಮುಟ್ಟಿನ ರಕ್ತವನ್ನು ಹಾಕಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಗದರಿಸಿ ಕಳಿಸಿದರು ಎಂದು ಮಹಿಳೆಯೊಬ್ಬರು ಅಂದಿನ ತಮ್ಮ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ. ಅದನ್ನು ಗಮನಿಸಿದರೆ ಮುಂದುವರಿದ ರಾಷ್ಟ್ರದಲ್ಲಿ ಮುಟ್ಟಿನ ಬಗ್ಗೆ ಇದ್ದ ಅಜ್ಞಾನವನ್ನು ಎತ್ತಿ ತೋರಿಸುತ್ತದೆ.

ಪ್ರಯೋಗಾಲಯದ ನಿರ್ದೇಶಕರು ಮುಟ್ಟಿನ ರಕ್ತದ ಬಗ್ಗೆ ಅಂದು ಅಸಹ್ಯ ಪಟ್ಟಿಕೊಂಡಿದ್ದನ್ನು ನೋಡಿದರೆ ಖೇದವಾಗುತ್ತದೆ. ಊಟದ ಮೇಜಿನಲ್ಲಿ ಚರ್ಚಿಸುವ ವಿಷಯ ಅದಲ್ಲ; ಮುಟ್ಟಿನ ರಕ್ತವು ಒಂದು ರೀತಿಯ ಕೊಳಕು ಎಂಬ ಆಳವಾದ ಗ್ರಹಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಇತ್ತೀಚೆಗೆ ಸಂಶೋಧಕರೊಬ್ಬರು ವ್ಯಾಖ್ಯಾನಿಸಿದ್ದಾರೆ. ಈ ಮಧ್ಯೆ , ಅವರು ಹೇಳುವಂತೆ ವಿಜ್ಞಾನಕ್ಕೆ ಮುಟ್ಟಿನ ರಕ್ತದ ಉಪಯುಕ್ತತೆ ಏನೆಂಬುದು ಅರಿವಾಗಿದೆ. ಅದನ್ನು ಮರುಬ್ರಾಂಡ್ ಮಾಡಲು ಅವಕಾಶ ನೀಡಿದೆ.

ಮುಟ್ಟಿನ ರಕ್ತವು ವಾಸ್ತವವಾಗಿ ನಿಜವಾದ ಮೌಲ್ಯವನ್ನು ಹೊಂದಿದೆ. ಮುಟ್ಟಿನ ರಕ್ತವು ದೇಹದ ಮೇಲಿನ ಗಾಯಗಳು ಅಥವಾ ರಕ್ತನಾಳಗಳಿಂದ ಉತ್ಪತ್ತಿಯಾಗುವ ವ್ಯವಸ್ಥಿತ ರಕ್ತಕ್ಕಿಂತ ಭಿನ್ನವಾಗಿರುತ್ತದೆ. ಅದು ಮಹಿಳೆಗೆ ಕಳಂಕವನ್ನು ಉಂಟುಮಾಡುವುದಲ್ಲ; ಬದಲಿಗೆ ಪ್ರಯೋಜನಕಾರಿ ಎಂದು ಈಗಿನ ಕಾಲಘಟ್ಟದಲ್ಲಿ ವಿಮರ್ಷಿಸಬಹುದಾಗಿದೆ.

ಮುಟ್ಟಿನ ರಕ್ತವನ್ನು ವಿವಿಧ ಆರೋಗ್ಯ ಸ್ಥಿತಿಗತಿಗಳನ್ನು ಪತ್ತೆಹಚ್ಚಲು ಸಂಭಾವ್ಯ ಮೂಲವಾಗಿ ಪರಿಶೋಧಿಸಲಾಗಿದೆ, ಅವುಗಳೆಂದರೆ:

1. ಎಂಡೊಮೆಟ್ರಿಯೊಸಿಸ್: ಎಂಡೊಮೆಟ್ರಿಯೊಸಿಸ್ Endometriosis ಅನ್ನು ಪತ್ತೆಹಚ್ಚಲು ಸಹಾಯ ಮಾಡುವ ಮುಟ್ಟಿನ ರಕ್ತದಲ್ಲಿನ ಬಯೋಮಾರ್ಕರ್‌ಗಳನ್ನು ಸಂಶೋಧಕರು ಗುರುತಿಸಿದ್ದಾರೆ. 2. ಕ್ಯಾನ್ಸರ್: ಗರ್ಭಕಂಠ, ಅಂಡಾಶಯ ಮತ್ತು ಗರ್ಭಾಶಯದ ಕ್ಯಾನ್ಸರ್‌ಗಳಿಗೆ ಬಯೋಮಾರ್ಕರ್‌ಗಳನ್ನು ಪತ್ತೆಹಚ್ಚಲು ಮುಟ್ಟಿನ ರಕ್ತವನ್ನು ಸಂಭಾವ್ಯ ಮೂಲವಾಗಿ ಬಳಸಲಾಗಿದೆ. 3. ಸಂತಾನೋತ್ಪತ್ತಿ ಆರೋಗ್ಯ: ಮುಟ್ಟಿನ ರಕ್ತ ಪರೀಕ್ಷೆಗಳು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಥೈರಾಯ್ಡ್ ಅಸ್ವಸ್ಥತೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡಬಹುದು. 4. ಸೋಂಕುಗಳು: ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಸೋಂಕುಗಳನ್ನು ಪತ್ತೆಹಚ್ಚಲು ಮುಟ್ಟಿನ ರಕ್ತವನ್ನು ಬಳಸಬಹುದು. 5. ಹಾರ್ಮೋನ್ ಮಟ್ಟಗಳು: ಹಾರ್ಮೋನ್ ಮಟ್ಟವನ್ನು ಅಳೆಯಲು ಮುಟ್ಟಿನ ರಕ್ತವನ್ನು ಬಳಸಬಹುದು. ಉದಾಹರಣೆಗೆ ಎಸ್ಟ್ರಾಡಿಯೋಲ್ ಮತ್ತು ಪ್ರೊಜೆಸ್ಟರಾನ್ – ಇದು ಹಾರ್ಮೋನುಗಳ ಅಸಮತೋಲನವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಕೆಲವು ಕಂಪನಿಗಳು ಮುಟ್ಟಿನ ರಕ್ತವನ್ನು ಬಳಸುವ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಿವೆ, ಅವುಗಳೆಂದರೆ:

1. ನೆಕ್ಸ್ಟ್‌ಜೆನ್ ಜೇನ್: ಅಮೆರಿಕದ NextGen Jane ಕಂಪನಿಯು ಎಂಡೊಮೆಟ್ರಿಯೊಸಿಸ್ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಮುಟ್ಟಿನ ರಕ್ತ ಪರೀಕ್ಷೆಯನ್ನು ಮಾಡುತ್ತದೆ. 2. ಈವ್ ಟೆಕ್ನಾಲಜೀಸ್: ಕೆನಡಾದ Eve Technologies ಕಂಪನಿಯು ಹಾರ್ಮೋನ್ ಮಟ್ಟಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಮುಟ್ಟಿನ ರಕ್ತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದೆ. 3. ಮೆಡಿಬ್ರಾಂಡ್‌ಗಳು: ಸೋಂಕುಗಳು ಮತ್ತು ಲೈಂಗಿಕವಾಗಿ ಹರಡುವ (ಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ) ಸೋಂಕುಗಳಿಗೆ (STI) ಮುಟ್ಟಿನ ರಕ್ತ ಪರೀಕ್ಷೆಯನ್ನು ಮಾಡುತ್ತದೆ.

ಈ ಪ್ರಗತಿಗಳು ಭರವಸೆ ಮೂಡಿಸಿದ್ದರೂ, ಮುಟ್ಟಿನ ರಕ್ತ ಪರೀಕ್ಷೆಯು ಇನ್ನೂ ಹೊಸ ಮತ್ತು ವಿಕಸನಗೊಳ್ಳುತ್ತಿರುವ ಕ್ಷೇತ್ರವಾಗಿದೆ ಮತ್ತು ಅದರ ಸಾಮರ್ಥ್ಯ ಮತ್ತು ಮಿತಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂಬುದನ್ನು ಗಮನಿಸುವುದು ಸೂಕ್ತ.

ಮುಟ್ಟಿನ ಬಗ್ಗೆ ಮೂಢನಂಬಿಕೆಗಳು ಮತ್ತು ವಿರೋಧಗಳು ಇರುವುದು ಪ್ರಾಚೀನವಾದುದು:

ಆದರೆ ಮುಟ್ಟಿನ ಬಗ್ಗೆ ಸಾಂಸ್ಕೃತಿಕ ವಿರೋಧ ಇರುವುದು ಪ್ರಾಚೀನವಾದುದು. ರೋಮ್‌ನ ಪ್ಲಿನಿ ದಿ ಎಲ್ಡರ್ ನ್ಯಾಚುರಲ್ ಹಿಸ್ಟರಿಯಲ್ಲಿ ಹೇಳುವಂತೆ ಋತುಚಕ್ರದ ಮಹಿಳೆ ಅನುಭವಿಸುವುದನ್ನು ನೋಡಿದರೆ ಅದು ಭೀಭತ್ಸ ಸ್ಥಿತಿ ಎನ್ನಬಹುದು. ಅನೇಕ ಧರ್ಮಗಳು, ಧಾರ್ಮಿಕ ಗ್ರಂಥಗಳು ಮಾಸಿಕ ಚಕ್ರದಲ್ಲಿರುವ ಮಹಿಳೆಯರನ್ನು ಪ್ರತ್ಯೇಕಿಸಿವೆ. ಕೆಲ ಧರ್ಮಗಳಲ್ಲಿ ಮುಟ್ಟಿನ ರಕ್ತ ಮತ್ತು ಅದರ ಕಾಂಡಕೋಶಗಳು ಅತ್ಯಂತ ವಿಷಕಾರಿ ಎನ್ನಲಾಗಿದೆ. ಮತ್ತು ಕೆಲವು ಸಂಸ್ಕೃತಿಗಳಲ್ಲಿ ಮಹಿಳೆಯರು ತಮ್ಮ ಗಂಡನನ್ನು ಕೊಲ್ಲಲು ಮುಟ್ಟಿನ ರಕ್ತದ ಹನಿಗಳನ್ನು ಬಳಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಲವು ವಿಜ್ಞಾನಿಗಳು ಆಳವಾದ ಅಧ್ಯಯನಗಳೊಂದಿಗೆ ಇಂತಹ ಮೂಢನಂಬಿಕೆಗಳಿಗೆ ತಿಲಾಂಜಲಿಯಿಡಲು ಮುಂದಾಗಿದ್ದಾರೆ. ಇತ್ತೀಚೆಗೆ ಮುಟ್ಟಿನ ಶಿಕ್ಷಣ ಎಷ್ಟು ಅಗತ್ಯ ಎಂಬುದರ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.

ಇದೇ ವೇಳೆ, ಸಂತಾನೋತ್ಪತ್ತಿ ವ್ಯವಸ್ಥೆಯ ಬಗ್ಗೆ ಇನ್ನೂ ಸಾಕಷ್ಟು ಬೆಳಕು ಚೆಲ್ಲಬೇಕಿದೆ. ಅಂಗಾಂಶ-ಲೇಪಿತ ರಕ್ತವು ಗರ್ಭಾಶಯದ ಒಳಪದರದ ನಿಯಮಿತ ಚೆಲ್ಲುವಿಕೆಯಾಗಿದೆ. ಇದನ್ನು ಎಂಡೊಮೆಟ್ರಿಯಮ್ ಎಂದೂ ಕರೆಯುತ್ತಾರೆ. ಮಹಿಳೆಯರು ಪ್ರತಿ ತಿಂಗಳೂ ರಕ್ತಸ್ರಾವವಾಗುತ್ತಾರೆ. ಆದರೆ ಯಾರೂ ಏಕೆ ಅದನ್ನು ಪರೀಕ್ಷೆಗೆ ಒಡ್ಡಲಿಲ್ಲ? ಎಂಬುದು ವೈದ್ಯಲೋಕದ ಸೋಜಿಗವೇ ಸರಿ. ಇನ್ನು ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಳು ನಿಜವಾಗಿಯೂ ಅಲ್ಪ ಪ್ರಮಾಣದಲ್ಲಿದೆ ಎಂಬುದ ಖೇದಕರ ಸಂಗತಿಯಾಗಿದೆ ಎಂದು ಎಂದು ಅಮೆರಿಕದ ಡಾ. ಜೆನ್ ಗುಂಟರ್ ಅವರು ಬ್ಲಡ್: ದಿ ಸೈನ್ಸ್, ಮೆಡಿಸಿನ್ ಮತ್ತು ಮಿಥಾಲಜಿ ಆಫ್ ಮೆನ್​ಸ್ಟ್ರುಯೇಷನ್​​​ ಎಂಬ ತಮ್ಮ ಪುಸ್ತಕದಲ್ಲಿ (Blood: The Science, Medicine, and Mythology of Menstruation) ಇತ್ತೀಚೆಗೆ ವಿವರಿಸಿದ್ದಾರೆ.

Also Read: Registered Vehicle Scrapping Policy -ಸರ್ಕಾರದ ಅಸಡ್ಡೆ – ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?

ಮುಟ್ಟಿನ ರಕ್ತವು ಗರ್ಭಾಶಯದಲ್ಲಿ ಒಂದಷ್ಟು ಸಮಯ ಕಳೆದಿರುವುದರಿಂದ, ಇದು ಸೈಟೊಕಿನ್‌ಗಳಿಗಾಗಿ ಪರೀಕ್ಷಿಸಲ್ಪಡುತ್ತದೆ. ಹಾಗೆಯೇ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ರಾಸಾಯನಿಕ ಸಂದೇಶವಾಹಕಗಳಾಗಿ ಕಾರ್ಯನಿರ್ವಹಿಸುವ ಪ್ರೊಟೀನ್‌ಗಳು ಗರ್ಭಾಶಯದಲ್ಲಿನ ಉರಿಯೂತ ಮತ್ತು ರೋಗದ ಲಕ್ಷಣದ ಬಗ್ಗೆ ಬೆಳಕು ಚೆಲ್ಲಬಲ್ಲದು. ಮುಟ್ಟಿನ ರಕ್ತದ ಸಂದೇಶಗಳನ್ನು ಅರ್ಥಮಾಡಿಕೊಳ್ಳುವ ಪ್ರಮುಖ ಅಂಶವೆಂದರೆ ಅದನ್ನು ಸಂಗ್ರಹಿಸುವ ಮಾರ್ಗವನ್ನು ಸರಿಯಾಗಿ ಕಂಡುಕೊಳ್ಳುವುದು. ವೈದ್ಯಕೀಯ ಅಧ್ಯಯನಕ್ಕಾಗಿ ಮುಟ್ಟಿನ ಕಪ್‌ಗಳೊಂದಿಗೆ ದ್ರವವನ್ನು ಸಂಗ್ರಹಿಸಬಹುದಾಗಿದೆ. ಆದರೆ ಕಪ್‌ನಲ್ಲಿ ತುಂಬಾ ಹೊತ್ತು ಬಿಟ್ಟ ನಂತರ ರಕ್ತದ ಗುಣಮಟ್ಟ ಕ್ಷೀಣಿಸಲು ಪ್ರಾರಂಭಿಸುತ್ತದೆ.

ಹಾಗಾಗಿ ಯಾವುದರಲ್ಲಿ ಸಂಗ್ರಹಿಸಿಡಬೇಕು ಎಂಬುದರ ಬಗ್ಗೆ ಹೆಚ್ಚುವರಿ ಕಾಳಜಿ ವಹಿಸಬೇಕು. ಋತುಚಕ್ರದ ವಿಜ್ಞಾನ ಅರಿಯಲು ಯಾವುದೇ ರೋಗನಿರ್ಣಯ ಉತ್ಪನ್ನಗಳು ಮಾರುಕಟ್ಟೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ. ಗರ್ಭಾಶಯ ಮತ್ತು ಮುಟ್ಟಿನ ಬಗ್ಗೆ ಸಾಕಷ್ಟು ಅರ್ಥ ಮಾಡಿಕೊಳ್ಳಲು ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಮಹಿಳೆಯರು ಮತ್ತು ಲಿಂಗ ಅಲ್ಪಸಂಖ್ಯಾತರ ಮೇಲೆ ಪರಿಸರದ ಒತ್ತಡಗಳ ಪ್ರಭಾವವನ್ನು ಅಧ್ಯಯನ ಮಾಡುವ ಪ್ರಯೋಗಾಲಯವನ್ನು ನಡೆಸುತ್ತಿರುವ ಅಮೆರಿಕದ ಕ್ಲಾನ್ಸಿ ಮಾರ್ಮಿಕವಾಗಿ ಹೇಳುತ್ತಾರೆ.

ವೈದ್ಯ ಲೋಕ ಬಹಳ ಹಿಂದೆಯೇ ಮುಟ್ಟಿನ ರಕ್ತದಲ್ಲಿ ಆಸಕ್ತಿ ತೋರಿಸಿದ್ದರೆ ಅದರೊಳಗಿನ ಮರ್ಮವನ್ನು ಇನ್ನೂ ಅರ್ಥಪೂರ್ಣವಾಗಿ ಅರಿಯಬಹುದಾಗಿತ್ತು, ಹೆಚ್ಚು ಜ್ಞಾನವನ್ನು ಹೊಂದಬಹುದಿತ್ತು. ಈಗಿನ ವೈದ್ಯರು ಮಹಿಳಾ ರೋಗ ಸಮಸ್ಯೆಗಳ ಬಗ್ಗೆ ವಿಭಿನ್ನ ವಿಧಾನವನ್ನು ಅನುಸರಿಸಬಹುದಿತ್ತು. ರೋಗ/ ಸಮಸ್ಯೆಗಳು ಉದ್ಭವಿಸಲು ಅಥವಾ ಉಲ್ಬಣಗೊಳ್ಳಲು ಕಾಯುವ ಬದಲು ಚಿಕ್ಕ ವಯಸ್ಸಿನಿಂದಲೇ ಮಹಿಳೆಯರ ಹಾರ್ಮೋನ್ ಮತ್ತು ಸೆಲ್ಯುಲಾರ್ ಪರಿಸರ ವ್ಯವಸ್ಥೆಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ಬಳಸಬಹುದಿತ್ತು ಎಂದು ಅವರು ವಿಷಾದದ ದನಿಯಲ್ಲಿ ಹೇಳುತ್ತಾರೆ.

ಸ್ತ್ರೀ ಜೀವಶಾಸ್ತ್ರದ ಸಂಕೀರ್ಣತೆಗಳ ಬಗ್ಗೆ ಹೊಸ ಆವಿಷ್ಕಾರಗಳು ಈಗಾಗಲೇ ರೋಗ, ಔಷಧ ಮತ್ತು ಮಾನವ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಉಪಯೋಗಕಾರಿಯಾಗುತ್ತಿವೆ. ಹೆಣ್ತನದ ವಿಜ್ಞಾನದಲ್ಲಿ ಶಾಂತವಾದ ಕ್ರಾಂತಿ ನಡೆದಿದೆ. ಇದು ಆರಂಭಿಕ ದಿನಗಳು. ನಾವಿನ್ನೂ ಮೇಲ್ಮೈಯನ್ನು ಮಾತ್ರವೇ ಮುಟ್ಟುತ್ತಿದ್ದೇವೆ. ಇನ್ನೂ ಆಳವಾದ ಅಧ್ಯಯನಗಳು ನಡೆಯಲಿ ಎಂದು ಅವರು ಆಶಿಸುತ್ತಾರೆ.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Fri, 19 July 24

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ