ವಿಶ್ಲೇಷಣೆ: ಸಂಸದರು ತಮ್ಮ ಕೆಲಸ ಸರಿಯಾಗಿ ಮಾಡಲು ಜನರು ಬೀದಿಗಿಳಿದು ಹೋರಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆಯೇ: ವಿಜಯ್ ತ್ರಿವೇದಿ ಬರಹ
ನಮ್ಮ ಸಂಸದರು ತಾವು ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡಲು ಜನರು ಬೀದಿಗಿಳಿದು ಹೋರಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆಯೇ? ಇದಕ್ಕಿರುವ ಮತ್ತೊಂದು ಪರಿಹಾರವೆಂದರೆ ಚುನಾವಣೆಗಳು. ಆದರೆ ನೆನಪಿರಲಿ, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.
ಬಿಜೆಪಿ ನಾಯಕ ಭೈರಾನ್ ಸಿಂಗ್ ಶೇಖಾವತ್ ರಾಜಸ್ಥಾನದ ಮುಖ್ಯವಾಗಿದ್ದ ಕಾಲದ ನೆನಪು ಇದು. ಸದನದಲ್ಲಿ ಅತ್ಯುತ್ತಮ ಭಾಷಣ ಮಾಡಿದ ಶಾಸಕನನ್ನು ಗುರುತಿಸುವ ಪರಂಪರೆಯೊಂದಕ್ಕೆ ಅವರು ನಾಂದಿ ಹಾಡಿದ್ದರು. ಸರ್ಕಾರವನ್ನು ಅತ್ಯುತ್ತಮವಾಗಿ ಟೀಕಿಸಿದ ವಿರೋಧ ಪಕ್ಷದ ಸದಸ್ಯರೇ ಸಾಮಾನ್ಯವಾಗಿ ಈ ಗೌರವಕ್ಕೆ ಪಾತ್ರರಾಗುತ್ತಿದ್ದರು. ಈ ಗೌರವಕ್ಕೆ ಪಾತ್ರರಾದ ಶಾಸಕರು ದಿನದ ಕೊನೆಯಲ್ಲಿ ಸ್ಪೀಕರ್ ಕೊಠಡಿಯಲ್ಲಿ ಸಿಹಿ ಹಂಚುತ್ತಿದ್ದರು. ಇದು ವಿವಿಧ ಪಕ್ಷಗಳ ಶಾಸಕರ ನಡುವೆ ವೈಷಮ್ಯ ಕಡಿಮೆ ಮಾಡಲು, ವಿಶ್ವಾಸ ವೃದ್ಧಿಸಲು ನೆರವಾಗುತ್ತಿತ್ತು. ಹಗಲಿನಲ್ಲಿ ಪರಸ್ಪರ ವಿರೋಧಿಗಳಂತೆ ಮಾತಿನ ಬಾಣಗಳನ್ನು ಎಸೆದಾಡುತ್ತಿದ್ದ ಆಡಳಿತ-ವಿರೋಧ ಪಕ್ಷಗಳ ಶಾಸಕರು ದಿನದ ಕೊನೆಯಲ್ಲಿ ಪರಸ್ಪರ ಸಿಹಿ ತಿಂದು ಕಹಿ ಮರೆಯುತ್ತಿದ್ದರು. ಸಂಸತ್ತಿನಲ್ಲಿ ಇದೀಗ ನಡೆಯುತ್ತಿರುವ ವಿದ್ಯಮಾನಗಳನ್ನು, ಅದರಲ್ಲಿಯೂ ರಾಜ್ಯಸಭೆಯಿಂದ 12 ಮಂದಿಯನ್ನು ಅಮಾನತು ಮಾಡಿದ್ದನ್ನು ಗಮನಿಸಿದಾಗ ನನಗೆ ರಾಜಸ್ಥಾನದಲ್ಲಿದ್ದ ಈ ಪದ್ಧತಿ ನೆನಪಿಗೆ ಬರುತ್ತದೆ.
ಮುಂದೆ ಶೆಖಾವತ್ ಭಾರತದ ಉಪರಾಷ್ಟ್ರಪತಿಗಳಾದರು. ರಾಜ್ಯಸಭೆಯ ಅಧ್ಯಕ್ಷರಾಗಿ ಸದನವನ್ನು ಅವರು ನಿರ್ವಹಿಸುತ್ತಿದ್ದ ರೀತಿಯೂ ಗಮನ ಸೆಳೆಯುವಂತೆ ಇರುತ್ತಿತ್ತು. ಯಾವುದೇ ಕಾರಣದಿಂದ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಘರ್ಷಣೆ ನಡೆದು ಸದನವನ್ನು ಮುಂದೂಡುವ ಪರಿಸ್ಥಿತಿ ಬಂದರೆ, ವಿರೋಧ ಪಕ್ಷಗಳ ಸದಸ್ಯರು ಮತ್ತು ಸರ್ಕಾರದ ಪ್ರತಿನಿಧಿಗಳನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಬಿಸಿಬಿಸಿ ಗುಲಾಬ್ ಜಾಮೂನ್ ಕೊಡುತ್ತಿದ್ದರು. ವಿರೋಧಪಕ್ಷಗಳಿಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಸರ್ಕಾರದ ಮನವೊಲಿಸಲು ಯತ್ನಿಸುತ್ತಿದ್ದರು. ಸದನದಲ್ಲಿ ಗದ್ದಲ ಎಬ್ಬಿಸದೇ, ತಮ್ಮ ಅಭಿಪ್ರಾಯ ಮಂಡಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ತಿಳಿಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಂಥ ಪ್ರಯತ್ನಗಳೇ ಕಂಡು ಬರುತ್ತಿಲ್ಲ. ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ಸರ್ಕಾರದ ಪ್ರಸ್ತಾವದ ಮೇರೆಗೆ ಮತ್ತು ಸಭಾಧ್ಯಕ್ಷರ ಎದುರು ಪ್ರತಿಭಟನೆ ನಡೆಸಿದ ಕಾರಣದಿಂದ ಅಮಾನತು ಮಾಡಲಾಗಿತ್ತು. ಕ್ಷಮೆ ಕೋರಿದರೆ ಅಮಾನತು ಆದೇಶ ಹಿಂಪಡೆಯುವುದಾಗಿ ಸರ್ಕಾರ ಷರತ್ತು ವಿಧಿಸಿತ್ತು. ಆದರೆ ವಿರೋಧಿ ಸದಸ್ಯರು ಈ ಮಾತಿಗೆ ಸೊಪ್ಪು ಹಾಕಿರಲಿಲ್ಲ.
ಇದೀಗ ರಾಜ್ಯಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆದರೆ ಮೊದಲ ಒಂದು ವಾರದಲ್ಲಿ ಯಾವುದೇ ಮಹತ್ವದ ಸಂಭಾಷಣೆ ನಡೆಯಲೇ ಇಲ್ಲ. ಅಮಾನತಾದ ಸಂಸದರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ವಿರೋಧ ಪಕ್ಷದ ಸದಸ್ಯರ ಧರಣಿ, ಗದ್ದಲದ ಕಾರಣದಿಂದ ಸದನವನ್ನು ಪ್ರತಿದಿನ ಎಂಬಂತೆ ಮುಂದೂಡಬೇಕಾಗುತ್ತಿತ್ತು. ಶುಕ್ರವಾರ ಬಿಜೆಪಿ ಸದಸ್ಯರು ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸಿ ವಿರೋಧ ಪಕ್ಷಗಳ ಸದಸ್ಯರ ನಡವಳಿಕೆಯನ್ನು ಖಂಡಿಸಿದರು. ಕೇಂದ್ರ ಸಂಪುಟದ ಹಿರಿಯ ಸಚಿವ ಪೀಯೂಷ್ ಗೋಯೆಲ್ ಮತ್ತೊಮ್ಮೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿ, ವಿರೋಧ ಪಕ್ಷಗಳ ಸದಸ್ಯರು ಕ್ಷಮೆಯಾಚಿಸಿದರೆ ಅಮಾನತು ಆದೇಶ ಹಿಂಪಡೆಯುವ ಸ್ಪೀಕರ್ ನಿರ್ಧಾರವನ್ನು ಪುನರುಚ್ಚರಿಸಿದರು. ಕ್ಷಮೆಯಾಚಿಸದಿದ್ದರೆ ವಿರೋಧ ಪಕ್ಷದವರು ಮಾರ್ಷಲ್ಗಳ ಜೊತೆಗೆ ನಡೆದುಕೊಂಡ ರೀತಿಯ ಬಗ್ಗೆ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಆದರೆ, ವಿರೋಧ ಪಕ್ಷಗಳ ಸದಸ್ಯರು ಏಕೆ ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಅತಿಮುಖ್ಯ ಅಂಶಗಳ ಬಗ್ಗೆ ಚರ್ಚೆ ನಡೆಯುವುದನ್ನು ತಪ್ಪಿಸಬೇಕೆಂದು ಎರಡೂ ಬಣಗಳು ಇದನ್ನೊಂದು ದೊಡ್ಡ ಪ್ರತಿಷ್ಠೆಯ ವಿಷಯವಾಗಿ ಮಾಡುತ್ತಿವೆ.
ಭಾರತದಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಆರಂಭವಾದ ನಂತರ ಸಂಸತ್ತಿನಲ್ಲಿ ಗಲಭೆ ಎಬ್ಬಿಸುವುದು ಹೆಚ್ಚಾಗುತ್ತಿದೆ. ಸರ್ಕಾರದ ಕಾರ್ಯನಿರ್ವಹಣೆಗೆ ತಡೆಯೊಡ್ಡುವ ಸಾಧನವಾಗಿ ಗಲಭೆ ಎಬ್ಬಿಸುವುದನ್ನು ವಿರೋಧ ಪಕ್ಷಗಳು ಒಂದು ಅಸ್ತ್ರವಾಗಿ ಮಾಡಿಕೊಂಡಿವೆ. ಕಡಿಮೆ ಬಹುಮತ ಇರುವ ಸಮ್ಮಿಶ್ರ ಸರ್ಕಾರಗಳು ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರಲು ಗದ್ದಲ ಎಬ್ಬಿಸುವ ಅಸ್ತ್ರವನ್ನು ಬಳಸಲಾಗುತ್ತಿತ್ತು. ಆದರೆ ಮೋದಿ ಸರ್ಕಾರವು 2014ರಲ್ಲಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಇಂಥ ಒತ್ತಡದ ರಾಜಕಾರಣಗಳಿಗೆ ಮಣೆ ಹಾಕಲು ಒಪ್ಪುತ್ತಿಲ್ಲ.
ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸುತ್ತಾರೆ. ಸದನದಲ್ಲಿ ಭಾಷಣ ಮಾಡುವಾಗಲೂ ಅವರು ಇದೇ ನಿಲುವನ್ನು ಪುನರುಚ್ಚರಿಸಿದ್ದಾರೆ. 2009ರಿಂದ 2014ರ ಅವಧಿಯ ಮನಮೋಹನ್ ಸಿಂಗ್ ಸರ್ಕಾರದ ಅವಧಿಗೆ ಹೋಲಿಸಿದರೆ 2014ರಿಂದ 2019ರ ಮೋದಿ ಸರ್ಕಾರದ ಅವಧಿಯಲ್ಲಿ ಶೇ 32ರಷ್ಟು ಹೆಚ್ಚು ಚರ್ಚೆಗಳು ನಡೆದಿವೆ. ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ. ವಿಸ್ತೃತ ಚರ್ಚೆಯ ನಂತರ ಹಲವು ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ವಿವಾದಿತ ಕೃಷಿ ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳುವ ಸಂದರ್ಭದಲ್ಲಿ ರಾಜ್ಯಸಭೆಯ ಆರು ಸಂಸದರನ್ನು ಅಮಾನತು ಮಾಡಲಾಯಿತು. ಪ್ರತಿಭಟನಾನಿರತರ ಸಂಸದರಿಗೆ ಟೀ ಮತ್ತು ಬಿಸ್ಕೀಟ್ ಕೊಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಅಂದಿನ ಡೆಪ್ಯುಟಿ ಸ್ಪೀಕರ್ ಪ್ರಯತ್ನಿಸಿದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ವಿರೋಧ ಪಕ್ಷಗಳ ಸಂಸದರು ರಾಜ್ಯಸಭೆಯ ಸಭಾಧ್ಯಕ್ಷರು ಪ್ರಜಾಸತ್ತಾತ್ಮಕ ರೀತಿಯಲ್ಲಿ ವರ್ತಿಸುತ್ತಿಲ್ಲ ಎಂದು ಇದೇ ಹೊತ್ತಿನಲ್ಲಿ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಸಭಾಧ್ಯಕ್ಷರು ಗಲಭೆ ಮಾಡುವ ಸದಸ್ಯರನ್ನು ಅಮಾನತು ಮಾಡಿರುವುದು ಇದೇ ಮೊದಲಲ್ಲ. 60ರ ದಶಕದಲ್ಲಿಯೇ ಮೊದಲ ಬಾರಿಗೆ ಅಮಾನತು ಆದೇಶವನ್ನು ಹೊರಡಿಸಲಾಗಿತ್ತು. ಈವರೆಗೆ 11 ಬಾರಿ ಸಂಸದರನ್ನು ಅಮಾನತು ಮಾಡಲಾಗಿದೆ. ಆ ಎಲ್ಲ ಸಭಾಧ್ಯಕ್ಷರು ಪ್ರಜಾಪ್ರಭುತ್ವ ವಿರೋಧಿಗಳೇ ಆಗಿದ್ದರೆ? ಈವರೆಗೆ ಸಂಸತ್ತು ನೋಡಿರುವ ಅತ್ಯಂತ ತೀವ್ರ ಗಲಭೆ ಎಂದು ದಾಖಲಾಗಿರುವುದು 2010ರಲ್ಲಿ 2ಜಿ ತರಂಗಾಂತರ ಹರಾಜು ಹಗರಣದ ಚರ್ಚೆ. ಆ ವರ್ಷ ಲೋಕಸಭೆಯು ಕೇವಲ ಶೇ 2ರಷ್ಟು ಮತ್ತು ರಾಜ್ಯಸಭೆಯು ಶೇ 6ರಷ್ಟು ಮಾತ್ರ ಕೆಲಸ ಮಾಡಿದ್ದವು. ಗಲಭೆ ಮಾಡಿದ್ದವರೆಲ್ಲರೂ ಬಿಜೆಪಿ ಸಂಸದರು. ಕಾಂಗ್ರೆಸ್ ಆಗ ಆಡಳಿತ ಪಕ್ಷವಾಗಿತ್ತು.
– 1963ರಲ್ಲಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಅಮಾನತು ಆದೇಶ ಪ್ರಕಟವಾಯಿತು. ರಾಷ್ಟ್ರಪತಿ ಡಾ.ರಾಧಾಕೃಷ್ಣನ್ ಅವರು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡುತ್ತಿದ್ದಾಗ ಕೆಲ ಸಂಸದರು ಸಭಾತ್ಯಾಗ ಮಾಡುವ ಮೊದಲು ಗಲಾಟೆ ಮಾಡಿದ್ದರು. ಅಂದಿನ ಲೋಕಸಭಾ ಸ್ಪೀಕರ್ ಸಂಸದರ ವಿರುದ್ಧ ಕ್ರಮ ಜರುಗಿಸಿದ್ದರು.
– 1989ರಲ್ಲಿ ಠಕ್ಕರ್ ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಗಲಭೆ ಎಬ್ಬಿಸಿದ 63 ಸಂಸದರನ್ನು ಅಮಾನತು ಮಾಡಲಾಗಿತ್ತು.
– 2010ರಲ್ಲಿ ಕೇಂದ್ರ ಸಚಿವರೊಬ್ಬರು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದರು. ಈ ವೇಳೆ ಸಿಟ್ಟಿಗೆದ್ದ ಕೆಲ ಸಂಸದರು ಮಸೂದೆಯ ಪ್ರತಿಯನ್ನು ಸಚಿವರಿಂದ ಕಸಿದುಕೊಂಡಿದ್ದರು. ಈ ವೇಳೆ 7 ಸಂಸದರನ್ನು ಅಮಾನತು ಮಾಡಲಾಗಿತ್ತು.
– 2013ರಲ್ಲಿ ತೆಲಂಗಾಣ ರಾಜ್ಯ ರಚನೆ ವಿರೋಧಿಸಿದ್ದ 9 ಸಂಸದರನ್ನು ಅಮಾನತು ಮಾಡಲಾಗಿತ್ತು. 12 ಇತರ ಸಂಸದರನ್ನು ನಂತರದ ದಿನಗಳಲ್ಲಿ ಅಮಾನತು ಮಾಡಲಾಯಿತು.
– 2014ರಲ್ಲಿ ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದ ವಿಷಯವೊಂದರ ಬಗ್ಗೆ ಸಂಸತ್ತಿನಲ್ಲಿ ಕಾವೇರಿದ ಚರ್ಚೆ ನಡೆಯುತ್ತಿತ್ತು. ಈ ವೇಳೆ ಕಾಂಗ್ರೆಸ್ ಸದಸ್ಯರೊಬ್ಬರು ಸದನದ ಹೌಸ್ ಜನರಲ್ ಸೆಕ್ರೆಟರಿ ಮೇಜಿನ ಮೇಲೆ ಲೋಟವೊಂದನ್ನು ಎಸೆದಿದ್ದರು. ತೆಲಂಗಾಣ ರಚನೆಯನ್ನು ವಿರೋಧಿಸಿದ್ದ 16 ಸಂಸದರನ್ನೂ ಇಡೀ ಅಧಿವೇಶನದ ಅವಧಿಗೆ ಅಮಾನತು ಮಾಡಲಾಗಿತ್ತು.
– 2015ರಲ್ಲಿ ಕಾಂಗ್ರೆಸ್ನ 25 ಸದಸ್ಯರನ್ನು ಲೋಕಸಭೆ ಸ್ಪೀಕರ್ ಅಮಾನತು ಮಾಡಿದ್ದರು.
– 2019ರಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ 45 ಲೋಕಸಭಾ ಸದಸ್ಯರನ್ನು ಒಂದು ದಿನದ ಅವಧಿಗೆ ಅಮಾನತು ಮಾಡಲಾಗಿತ್ತು.
– 2020ರಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರು ಕೃಷಿ ಕಾಯ್ದೆ ವಿರೋಧಿಸಿದ್ದರು. ಕೆಲ ಸಂಸದರು ಜನರಲ್ ಸೆಕ್ರೆಟರಿ ಮೇಜು ಹತ್ತಿದ್ದರು. ಈ ಸಂದರ್ಭದಲ್ಲಿ 8 ಸಂಸದರನ್ನು ಒಂದು ವಾರದ ಅವಧಿಗೆ ಅಮಾನತು ಮಾಡಲಾಗಿತ್ತು.
– 2021ರ ಮುಂಗಾರು ಅಧಿವೇಶದಲ್ಲಿ ವಿರೋಧ ಪಕ್ಷದ ಸಂಸದರು ಧರಣಿ ಆರಂಭಿಸಿದ್ದರು. ತೃಣಮೂಲ ಕಾಂಗ್ರೆಸ್ನ 6 ಸಂಸದರನ್ನು ಒಂದು ದಿನದ ಅವಧಿಗೆ ಅಮಾನತು ಮಾಡಲಾಯಿತು.
– 2021ರ ಚಳಿಗಾಲದ ಅಧಿವೇಶನದಲ್ಲಿ 12 ರಾಜ್ಯಸಭಾ ಸಂಸದರನ್ನು ಇಡೀ ಅಧಿವೇಶನದ ಅವಧಿಗೆ ಅಮಾನತು ಮಾಡಲಾಯಿತು. ಕೃಷಿ ಕಾಯ್ದೆ ಮತ್ತು ಪೆಗಾಸಸ್ ಹಗರಣದ ಮೇಲಿನ ಚರ್ಚೆಯ ವೇಳೆ ಗಲಭೆ ಎಬ್ಬಿಸಿದ ಆರೋಪ ಇವರು ಎದುರಿಸುತ್ತಿದ್ದಾರೆ. ಈ ಪೈಕಿ ಆರು ಮಂದಿ ಕಾಂಗ್ರೆಸ್ಗೆ ಸೇರಿದ್ದರೆ, ತಲಾ ಇಬ್ಬರು ಟಿಎಂಸಿ ಮತ್ತು ಶಿವಸೇನೆಗೆ ಸೇರಿದವರು. ತಲಾ ಒಬ್ಬರು ಸಿಪಿಐ ಮತ್ತು ಸಿಪಿಎಂಗೆ ಸೇರಿದ್ದವರಿದ್ದರು.
ಸಂಸತ್ತಿನ ಎರಡೂ ಸದನಗಳಲ್ಲಿ ಕಲಾಪಗಳು ಸುಸೂತ್ರವಾಗಿ ನಡೆಯಲು ಹಲವು ನಿಯಮಗಳಿವೆ. ಈ ನಿಯಮಗಳ ಪ್ರಕಾರ ಮತ್ತೊಬ್ಬ ಸದಸ್ಯರು ಭಾಷಣ ಮಾಡುತ್ತಿರುವಾಗ ಇನ್ನೊಬ್ಬ ಸಂಸದ ಅದಕ್ಕೆ ಅಡ್ಡಿಪಡಿಸುವಂತಿಲ್ಲ. 1989ರಲ್ಲಿ ಈ ನಿಯಮಗಳಿಗೆ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಈಗ ಸಂಸದರು ದನಿ ಎತ್ತರಿಸಿ ಘೋಷಣೆಗಳನ್ನು ಕೂಗುವುದು, ಭಿತ್ತಿಪತ್ರಗಳನ್ನು ಪ್ರದರ್ಶಿಸುವುದು, ಸರ್ಕಾರದ ದಾಖಲೆಗಳನ್ನು ಹರಿಯುವುದು, ಕ್ಯಾಸೆಟ್ಗಳನ್ನು ಪ್ಲೇ ಮಾಡುವುದು ಹಾಗೂ ಇನ್ನಿತರ ನಡವಳಿಕೆಗಳನ್ನು ನಿರ್ಬಂಧಿಸಲಾಗಿದೆ. ಸದನದಿಂದ ಸದಸ್ಯನನ್ನು ಅಮಾನತು ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇರುತ್ತದೆ. ಇಂಥ ಸಂದರ್ಭದಲ್ಲಿ ಸಂಸದ ಇಡೀ ದಿನ ಸದನದಿಂದ ಹೊರಗೆ ಇರಬೇಕು. ಹೆಚ್ಚಿನ ಅಸಭ್ಯತೆ ತೋರಿದ ಸಂದರ್ಭದಲ್ಲಿ ಸಭಾಕ್ಷರು ಅಂಥವರ ಹೆಸರು ಕರೆಯಬಹುದು. ನಂತರ ಸಂಸದೀಯ ವ್ಯವಹಾರಗಳ ಸಚಿವರು ಅಂಥವರನ್ನು ಅಮಾನತು ಮಾಡಲು ನಿಲುವಳಿ ಮಂಡಿಸಬಹುದು. ಈ ನಿಲುವಳಿಗೆ ಸದನದ ಅನುಮೋದನೆ ದೊರೆತ ನಂತರ ಅಮಾನತು ಆದೇಶವು ಊರ್ಜಿತಕ್ಕೆ ಬರುತ್ತದೆ.
ಈ ಅಮಾನತು ಆದೇಶವು ಅಧಿವೇಶನದ ಕೊನೆಯ ದಿನದವರೆಗೆ ಊರ್ಜಿತದಲ್ಲಿರುತ್ತದೆ. 2001ರಲ್ಲಿ ಲೋಕಸಭೆಯು 374 ಎ (ಎ) ನಿಯಮಗಳ ಮೂಲಕ ಲೋಕಸಭಾ ಸ್ಪೀಕರ್ಗೆ ಮತ್ತಷ್ಟು ಬಲ ತುಂಬಿತು. ಯಾವುದೇ ಸದಸ್ಯನನ್ನು ಐದು ದಿನಗಳ ಅವಧಿಗೆ ಅಮಾನತು ಮಾಡಲು ಸ್ಪೀಕರ್ಗೆ ಈಗ ಅಧಿಕಾರವಿದೆ. ಯಾವುದೇ ಸದಸ್ಯನ ನಡವಳಿಕೆಯು ಸಂಪೂರ್ಣವಾಗಿ ಅಸಂಸದೀಯ ಅಥವಾ ಆಕ್ರಮಣಕಾರಿ ಎಂದು ಕಂಡು ಬಂದರೆ ಅಂಥವರ ಸದಸ್ಯತ್ವ ರದ್ದುಪಡಿಸಲು ವಿಶೇಷ ಸಮಿತಿಯನ್ನು ರಚಿಸಬಹುದಾಗಿದೆ. ಈ ಸಮಿತಿಯ ವರದಿಯ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಸದನಕ್ಕೆ ಇರುತ್ತದೆ. ಇಂಥ ಮೊದಲ ಪ್ರಕರಣ 50ರ ದಶಕದಲ್ಲಿ ನಡೆದಿತ್ತು. ಆಗ ಸಂಸದ ಎಚ್.ಜಿ.ಮುದಗಲ್ ಅವರನ್ನು ಹಣಕಾಸು ಅವ್ಯವಹಾರ ಮತ್ತು ಸದನದ ಗೌರವಕ್ಕೆ ಕುಂದುಂಟಾಗುವಂತೆ ನಡೆದುಕೊಂಡ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು.
2005ರಲ್ಲಿ ಪ್ರಶ್ನೆಕೇಳಲು ಲಂಚದ ಆರೋಪ ಕೇಳಿಬಂದಿದ್ದ ಅವಧಿಯಲ್ಲಿಯೂ ಇಂಥದ್ದೇ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಶಿಫಾರಸು ಆಧರಿಸಿ 10 ಸಂಸದರ ಸದಸ್ಯತ್ವ ರದ್ದುಪಡಿಸಲಾಗಿತ್ತು. ಆದರೆ, ರಾಜ್ಯಸಭಾ ಸದಸ್ಯರ ಸದಸ್ಯತ್ವವನ್ನು ಈ ರೀತಿ ರದ್ದುಪಡಿಸಲು ಆಗುವುದಿಲ್ಲ. ರಾಜ್ಯಸಭೆಯ ನಿಯಮಗಳ ಪ್ರಕಾರ ಒಬ್ಬ ಸದಸ್ಯನನ್ನು ಕೆಲ ನಿರ್ದಿಷ್ಟ ಅವಧಿಗೆ ಮಾತ್ರ ರದ್ದುಪಡಿಸಬಹುದಾಗಿದೆ.
2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸದನ ಕಲಾಪವನ್ನು ಸುಸೂತ್ರವಾಗಿ ನಡೆಸುವುದು ಹೇಗೆ ಎನ್ನುವ ಬಗ್ಗೆ ರಾಷ್ಟ್ರೀಯ ಅಧಿವೇಶನವನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹಲವು ರಾಜಕಾರಿಣಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಸದನ ಕಲಾಪವನ್ನು ನಿರ್ವಹಿಸುವ ಜವಾಬ್ದಾರಿಯುವ ಆಡಳಿತ ಪಕ್ಷ ಅಥವಾ ಬಹುಮತ ಹೊಂದಿರುವ ಪಕ್ಷದ ಮೇಲೆ ಇರುತ್ತದೆ. ಅವರು ಇತರ ಪಕ್ಷಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಲಾಪ ನಡೆಸಬೇಕು’ ಎಂದು ವಾಜಪೇಯಿ ಅಭಿಪ್ರಾಯಪಟ್ಟಿದ್ದರು. ವಿರೋಧ ಪಕ್ಷಗಳು ಅವರ ದೃಷ್ಟಿಕೋನವನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಕಲಾಪ ನಿರ್ವಹಿಸಲು ನೆರವಾಗಬೇಕು. ಇಂದು ಸಂಸತ್ತಿನ ವಿರೋಧ ಪಕ್ಷದ ನಾಯಕಿಯಾಗಿರುವ ಸೋನಿಯಾ ಗಾಂಧಿ ಸಹ ಚರ್ಚೆಗಳು ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ ಎಂದು ನಂಬಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಗದ್ದಲ ಕಡಿಮೆಯಾಗಬೇಕಿದೆ. ಇನ್ನಷ್ಟು ಉತ್ತಮ ಚರ್ಚೆಗಳು ನಡೆಯಬೇಕಿದೆ. ಸರ್ಕಾರದ ವಿರುದ್ಧ ಇರುವ ವಿಚಾರಗಳನ್ನು ಪ್ರಸ್ತಾಪಿಸಲು ಮತ್ತು ಸರ್ಕಾರದ ನಿಲುವುಗಳನ್ನು ಪ್ರಶ್ನಿಸಲು ಸ್ಪೀಕರ್ ವಿರೋಧ ಪಕ್ಷಗಳಿಗೆ ಅವಕಾಶ ನೀಡಬೇಕು ಎಂದು ಸೋನಿಯಾ ಗಾಂಧಿ ಹೇಳಿದ್ದರು.
ಸಾಮಾನ್ಯವಾಗಿ ಸಂಸತ್ ಅಧಿವೇಶನ ಆರಂಭವಾಗುವ ಮೊದಲು ಸರ್ಕಾರ, ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರು ಸರ್ವಪಕ್ಷ ಸಭೆ ನಡೆಸುವುದು ವಾಡಿಕೆ. ಈ ಸಭೆಗಳಲ್ಲಿ ಸರ್ಕಾರ ಎಲ್ಲ ವಿಚಾರಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಭರವಸೆ ನೀಡುವುದು ಮತ್ತು ವಿರೋಧ ಪಕ್ಷಗಳು ಕಲಾಪವನ್ನು ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಡುವ ಭರವಸೆ ನೀಡುವುದು ವಾಡಿಕೆ. ಆದರೆ ಸದನ ಆರಂಭವಾದ ತಕ್ಷಣ ಈ ಭರವಸೆಗಳನ್ನು ಎಲ್ಲರೂ ಮರೆತುಹೋಗುತ್ತಾರೆ.
ಸಾರ್ವಜನಿಕ ವಿಚಾರಗಳನ್ನು ಚರ್ಚಿಸಲು ಮತ್ತು ಕಾನೂನು ಜಾರಿಮಾಡಲು ಸಂಸತ್ತು ಉತ್ತಮ ವೇದಿಕೆ. ಇತ್ತೀಚೆಗೆ, ಸುಪ್ರೀಂಕೋರ್ಟ್ ಸಹ ದೆಹಲಿಯಲ್ಲಿ ವಾಯುಮಾಲಿನ್ಯದ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಈ ವಿಚಾರ ಸದನದಲ್ಲಿ ಚರ್ಚೆಗೆ ಬರಲೇ ಇಲ್ಲ. ಇದೀಗ ಈ ವಿಷಯದ ಬಗ್ಗೆ ಚರ್ಚಿಸಲು ಸಮ್ಮತಿಸಿದ್ದ ವಿರೋಧಪಕ್ಷವು ಪ್ರತಿಭಟನೆ ಮುಂದುವರಿಸುವುದಾಗಿಯೂ ಹೇಳಿದೆ. ‘ಬೀದಿಗಳು ಮೌನವಾದಾಗ, ಸಂಸತ್ತು ಹದ್ದುಮೀರುತ್ತದೆ’ ಎಂದು ಸಮಾಜವಾದಿ ನಾಯಕ ಡಾ.ರಾಮ್ ಮನೋಹರ್ ಲೋಹಿಯಾ ಒಮ್ಮೆ ಹೇಳಿದ್ದರು. ನಮ್ಮ ಸಂಸದರು ತಾವು ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡಲು ಜನರು ಬೀದಿಗಿಳಿದು ಹೋರಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆಯೇ? ಇದಕ್ಕಿರುವ ಮತ್ತೊಂದು ಪರಿಹಾರವೆಂದರೆ ಚುನಾವಣೆಗಳು. ಆದರೆ ನೆನಪಿರಲಿ, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.
(ಲೇಖಕ ವಿಜಯ್ ತ್ರಿವೇದಿ ಹಿರಿಯ ಸಂಸದೀಯ ವರದಿಗಾರರು. ಎನ್ಡಿಟಿವಿ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಪತ್ರಕರ್ತ)
ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ: ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ದೂರ ಸರಿಯುತ್ತಿದೆ ಬ್ರಾಹ್ಮಣ ಸಮುದಾಯ, ಸೆಳೆಯುವ ಮೇಲಾಟದಲ್ಲಿ ಎಸ್ಪಿ, ಬಿಎಸ್ಪಿ ಇದನ್ನೂ ಓದಿ: ವಿಶ್ಲೇಷಣೆ: 2024ರ ಮಹಾ ಚುನಾವಣೆಗೆ ರಾಜಕೀಯ ಸ್ಥಿತ್ಯಂತರದ ಮುನ್ನುಡಿ ಬರೆಯಲಿದೆಯೇ ಕೇಂದ್ರ ಸಹಕಾರ ಇಲಾಖೆ?
Published On - 9:17 pm, Mon, 6 December 21