ಭೈರಪ್ಪ ನಿರ್ಗಮನ: ಸಂತಾಪದ ಬೆಳಕು ಆರಿಸಿದ ಪ್ರಗತಿಪರ ದೀಪಗಳು
ಸಮಾಜದಲ್ಲಿರುವ ಕಟ್ಟರ್ ಬಲಪಂಥೀಯರ ನಡವಳಿಕೆ ಹೇಗಿರುತ್ತದೆ ಎಂಬುದರ ಕುರಿತು ಸಂಶೋಧನೆಯಾಗಿದೆ, ಮಾಹಿತಿ ದಾಖಲಾಗಿವೆ. ಆದರೆ ಪ್ರಗತಿಪರರ ನಡುವಳಿಕೆ ಮತ್ತು ಕೊಡುಗೆಯನ್ನು ಆಳವಾಗಿ ಅಧ್ಯಯನ ಮಾಡುತ್ತಿರುವಂತೆ ಕಾಣುತ್ತಿಲ್ಲ. ಭೈರಪ್ಪನವರ ಸಾವಿನ ನಂತರ ಕರ್ನಾಟಕದ ಸಾರಸ್ವತ ಲೋಕದಲ್ಲಿ ನಡೆದ ಬೆಳವಣಿಗೆ ಇವರ ಮುಖವನ್ನು ಅನಾವರಣಗೊಳಿಸಿದೆ.

ಮನೆಯಲ್ಲಿ ತೀರಿ ಹೋದ ಆಪ್ತರ ಅಂತ್ಯೇಷ್ಟಿ ಮುಗಿಸಿ ತಿರುಗಿ ಮನೆಗೆ ಬಂದಾಗ ಮನೆಯ ಹಜಾರದಿಂದ ಪ್ರಾರಂಭ ಮಾಡಿ ಸ್ನಾನದ ಮನೆವರೆಗೆ ಎಲ್ಲೇ ಹೋದರೂ ಭಣ ಭಣಗುಡುತ್ತದೆ. ಮನೆಯಲ್ಲಿರುವ ವಸ್ತುಗಳೆಲ್ಲ ತೀರಿಹೋದವರ ಬಗ್ಗೆ ಮಾತನಾಡಿದಂತೆ ಭಾಸವಾಗುತ್ತದೆ. ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ (SL Bhyrappa) ನಿಧನ, ಕನ್ನಡದ ಲಕ್ಷಾಂತರ ಓದುಗರ ಮನದಲ್ಲಿ ಇಂತದೇ ಭಾವವೊಂದನ್ನು ಮೂಡಿಸಿದಂತಿದೆ.
ಪ್ಲೇಗ್ನಂತಹ ಮಹಾಮಾರಿಗೆ ಕುಟುಂಬದ ಸದಸ್ಯರನ್ನು ಕಳೆದುಕೊಂಡರೂ, ಕಡುಬಡತನ ಎದುರಿಸಿದರೂ ಅದು ಯಾವುದೂ ಮುಂದೊಂದು ದಿನ ಮಂದ್ರದಂತಹ ಕಾದಂಬರಿ ಬರೆಯಲು ಭೈರಪ್ಪನವರಿಗೆ ಅಡ್ಡ ಬರಲಿಲ್ಲ. ನವ್ಯ ಮತ್ತು ಬಂಡಾಯದ ದಾರಿಯನ್ನು ಮೆಟ್ಟದೇ ತಮ್ಮದೇ ದಾರಿ ಹುಡುಕಿಕೊಂಡವರು ಭೈರಪ್ಪ. ಬಾಲ್ಯದಲ್ಲಿ ಎದುರಿಸಿದ ಬಡತನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಮಾಜವನ್ನೇ ಗುರಿಯಾಗಿಟ್ಟುಕೊಂಡು ಸಾಹಿತ್ಯ ರಚನೆಗೆ (Literature of angst against societal discrimination) ಅವರು ಇಳಿಯಲಿಲ್ಲ. ಸಾಹಿತ್ಯ ಗೋಷ್ಠಿಯಲ್ಲಿ ಯಾವತ್ತೂ ಕಾಣಿಸಿಕೊಳ್ಳದೇ ವಿಮರ್ಶಾವಲಯದಿಂದ ದೂರವಿದ್ದ ಅವರು ತಮ್ಮ ಕೆಲಸ ಮುಗಿಸಿ ಹೊರಟು ಹೋದರು. ಜನಪ್ರಿಯತೆ ಮತ್ತು ಸಿದ್ದಾಂತ ಎರಡನ್ನೂ ಬಿಟ್ಟು ಸಾಹಿತ್ಯದ ಮೂಲಕ ಸತ್ಯದ ಬೆನ್ನು ಹತ್ತಿದ್ದ ಅಪರೂಪದ ಬರಹಗಾರ ಭೈರಪ್ಪ ಎಂದರೆ ತಪ್ಪಾಗಲಿಕ್ಕಿಲ್ಲ. ಭೈರಪ್ಪನವರ ಸಾವು ಹಲವರಿಗೆ ನೋವುಂಟು ಮಾಡಿದೆ. ಇನ್ನೊಂದಿಷ್ಟು ಜನ, ಇದೇ ಸರಿಯಾದ ಸಂದರ್ಭ ಎಂದು ತಮ್ಮ ಮನದಾಳದ ಕೀವು ಹೊರಹಾಕಲು ಪ್ರಯತ್ನಿಸಿದ್ದಾರೆ. ನಿಧನರಾಗಿ ವಾರ ಕಳೆಯುತ್ತ ಬಂದರೂ ಭೈರಪ್ಪನವರ ಬಗ್ಗೆ ಮಾಧ್ಯಮಗಳಲ್ಲಿ ಇವರು ಬರೆಯುತ್ತಿರುವ ಋಣಾತ್ಮಕ ವಿಶ್ಲೇಷಣೆ ಮತ್ತು ಟೀಕೆ ಟಿಪ್ಪಣಿ ನಿಂತಿಲ್ಲ.
ಪಾಶ್ಚಾತ್ಯ ದೇಶಗಳಲ್ಲಿ ಸಾಹಿತಿಯೊಬ್ಬ ಸತ್ತರೆ, ಜನ ಪ್ರತಿಕ್ರಿಯಿಸುವ ವಿಧಾನವೇ ಬೇರೆ. ತೀರಿಹೋದ ಸಾಹಿತಿಯ ವೈಯಕ್ತಿಕ ಜೀವನದ ಬಗ್ಗೆ ಅಲ್ಲಿಯ ಜನರಿಗೆ ಆಸಕ್ತಿಯಿಲ್ಲ. ನಿಧನರಾದ ಸಾಹಿತಿಯ ಕೃತಿಗಳ ಪುನರ್ ವಿಮರ್ಶೆ ಮಾಡುವುದರಲ್ಲಿ ಮಾತ್ರ ಅವರಿಗೆ ಕುತೂಹಲ. ಆದರೆ ಭಾರತದಲ್ಲಿ ಹಾಗಲ್ಲ, ಇಲ್ಲಿ ಸಾಹಿತಿಗಳ ಸಾವಿಗೆ ಎರಡು ರೀತಿಯ ಪ್ರತಿಕ್ರಿಯೆ ಬರುವುದನ್ನು ನಾವು ನೋಡುತ್ತಾ ಬಂದಿದ್ದೇವೆ: ಒಂದು, ಅವರ ಕೃತಿಗಳ ಮರು ವಿಮರ್ಶೆ ಮಾಡುವವರು. ಇನ್ನೊಂದು ಗುಂಪು ಅವರ ಬದುಕು ಮುಂದಿನ ಜನಾಂಗಕ್ಕೆ ಹೇಗೆ ದಾರಿದೀಪವಾಗಬಲ್ಲದು ಎಂಬ ವಿಶ್ಲೇಷಣೆಗಿಳಿಯುವುದನ್ನು ನೋಡಿದ್ದೇವೆ. ಈ ಕೆಲಸಕ್ಕಿಳಿಯುವ ಭರದಲ್ಲಿ, ಅನೇಕರು ಕಟುಶಬ್ದ ಬಳಸದೆ, ಭೈರಪ್ಪನವರನ್ನು ಅನಾವರಣಗೊಳಿಸಿದ್ದಾರೆ.
ಭೈರಪ್ಪ ಬಗ್ಗೆ ಬಾನು ಮುಷ್ತಾಕ್ ಅವರ ವೇದನಾಪೂರ್ಣ ನುಡಿ ನಮನ
ಇವೆಲ್ಲ ಪ್ರಾರಂಭವಾಗಿದ್ದು ಶ್ರೀಮತಿ ಬಾನು ಮುಷ್ತಾಕ್ ಅವರಿಂದ. ಭೈರಪ್ಪನವರ ಶರೀರದಿಂದ ಉಸಿರು ಹೋಗಿ ದೇಹ ಇನ್ನೂ ತಣ್ಣಗಾಗಿತ್ತೋ ಇಲ್ಲವೋ, ಅಷ್ಟರಲ್ಲಿ ಬಂಡಾಯ ಸಾಹಿತ್ಯ ಚಳುವಳಿಯ ಮೂಸೆಯಲ್ಲಿ ಬೆಳೆದು ಹಲವಾರು ಮೌಲಿಕ ಕೃತಿಗಳನ್ನು ನೀಡಿ, ಇತ್ತೀಚೆಗೆ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟಿರುವ ಬಾನು ಮುಷ್ತಾಕ್ ಅವರಿಂದ ನೇರಾನೇರ (unfiltered)ವಾದ ಹೇಳಿಕೆಯೊಂದು ಹೊರಬಿತ್ತು. ‘ಭೈರಪ್ಪನವರು ಬರೆದ ‘ಆವರಣ’ ಕಾದಂಬರಿ ಬರೆಯುವುದಕ್ಕೂ ಮೊದಲು ತಮ್ಮ ಮನೆಯಲ್ಲಿ ತಂಗಿದ್ದರು’ ಎಂಬ ಗುಟ್ಟನ್ನು ರಟ್ಟು ಮಾಡುತ್ತ, ಕೊನೆಯಲ್ಲಿ ‘ಆ ಕಾದಂಬರಿ ಪ್ರಕಟವಾದ ನಂತರ ಭೈರಪ್ಪನವರ ಬರವಣಿಗೆಯಲ್ಲಿ ಯಾವ ಕುತೂಹಲ ಉಳಿಯಲಿಲ್ಲ’ ಎನ್ನುವ ಅರ್ಥ ಬರುವಂತೆ ಅವರು ಪ್ರತಿಕ್ರಿಯಿಸಿದ್ದರು. ಅವರ ಈ ಪ್ರತಿಕ್ರಿಯೆಯನ್ನೇ ಕೆಲ ಮಾಧ್ಯಮಗಳು, ಬಾನು ಅವರು ಭೈರಪ್ಪನವರಿಗೆ ಸಲ್ಲಿಸಿದ ನುಡಿ ನಮನವೆಂದು ಮುದ್ರಿಸಿದರು.
ದೀಪ ಆರಿದವರ ಮನೆಯ ಪ್ರತಿಕ್ರಿಯೆಗಳು
ಬಾನು ಮುಷ್ತಾಕ್ ಅವರೇ ಈ ರೀತಿಯ ನುಡಿ ನಮನ ಸಲ್ಲಿಸಿದ ಮೇಲೆ ಉಳಿದವರು ಬಿಟ್ಟಾರೆಯೇ? ಅವರು ಯಾರು? ಹೇಗೆ ಪ್ರತಿಕ್ರಿಯಿಸಿದರು? ಬಲಪಂಥೀಯರಂತೆ ಇವರು ಯಾವತ್ತು ತೂಕ ತಪ್ಪಿ ಮಾತಾಡುವವರಲ್ಲ, ಪಟಾಕಿ ಹೊಡೆದು ಬೇರೆಯವರ ಸಾವನ್ನು ಸಂಭ್ರಮಿಸಿದವರಲ್ಲ. ಕೂಗುಮಾರಿಗಳಾಗಲು ಇವರಿಗೆ ಇಷ್ಟ ಇಲ್ಲ. ತರ್ಕವಿಲ್ಲದೇ, ಇವರು ಮಾತನಾಡಲ್ಲ. ಒಂದು ಹೆಜ್ಜೆ ಮುಂದೆ ಹೋಗಿ ಇವರು ಹೇಗೆ ಎಂದು ನೋಡುವದಾದರೆ, ಇವರು ಗುಂಪು ಗುಂಪಾಗಿ ಸೇರಿಯೋ ಅಥವಾ ಒಬ್ಬ ಮಾತಾಡಿದ್ದನ್ನು ಇನ್ನೊಬ್ಬ ಅನುಮೋದಿಸುತ್ತ ಜನರನ್ನು ಮೋಡಿ ಮಾಡುವವರು. ಇವರೆಲ್ಲರೂ ಸಹಿಷ್ಣುಗಳು, ಸಮಾಜದ ವಿವಿಧ ಸ್ತರದಲ್ಲಿದ್ದುಕೊಂಡು ಕೊಡುಗೆ ನೀಡಿದವರು. ಭೈರಪ್ಪನವರ ಸಾವಿಗೆ ಇಂತವರ ಪ್ರತಿಕ್ರಿಯೆಗಳು ಹೇಗಿದೆ ನೋಡಿ. ಇವನ್ನು ಆರು ಪ್ರಕಾರದಲ್ಲಿ ವಿಂಗಡಿಸಬಹುದು:
- ಒಂದು ದಿನ ಅವರೆದುರು ಬಂದಾಗ ಅವರಿಗೆ ನಮಸ್ಕರಿಸಿದರೂ ಭೈರಪ್ಪನವರು ತಿರುಗಿ ಇವರನ್ನು ನೋಡಲಿಲ್ಲ- ಹೀಗೆ ಶುರು ಮಾಡಿ, ಭೈರಪ್ಪನವರು ಜನರೊಡನೆ ಬೆರೆಯದ ಮತ್ತು ಕೆಳವರ್ಗದಿಂದ ಬಂದ ಸಾಹಿತ್ಯ ಪ್ರೇಮಿಗಳನ್ನು ಘಾಸಿಗೊಳಿಸಿದ ‘ಪುರೋಹಿತಿಶಾಹಿ’ ವ್ಯಕ್ತಿ ಎಂದು ಅವರ ಜಾತಿಯನ್ನು ತಂದು ಅವರಿಗೆ ಎಡಗೈಲಿ ನಮನ ಸಲ್ಲಿಸಿದವರು.
- ಭೈರಪ್ಪನವರು ತಿಕ್ಕಲು; ಒಂದು ದಿನ ಮೊದಲೇ ಫೋನ್ ಮಾಡಿ ಬರುತ್ತೇನೆ ಎಂದು ಹೇಳಿದಾಗ ಬನ್ನಿ ಎಂದವರು ಆಮೇಲೆ ಅವರ ಮನೆಗೆ ಹೋದಾಗ, ಕಿಟಕಿಯಲ್ಲಿ ತಾವು ಬಂದಿದ್ದನ್ನು ನೋಡಿಯೂ ಮನೆಯ ಬಾಗಿಲು ತೆಗೆಯದ ಮನುಷ್ಯ. ಭೈರಪ್ಪ ಓರ್ವ ಅಸಂಸ್ಕೃತ ವ್ಯಕ್ತಿ.
- ಗೌರಿ ಲಂಕೇಶ್ ಮತ್ತು ಅನಂತಮೂರ್ತಿ ಸತ್ತಾಗ ಪಟಾಕಿ ಹೊಡೆದವರ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಲಿಲ್ಲ. ಅದರೆ ಅವರಿಗೆ ಸಮಾಜಮುಖಿ ಸಂವೇದನೆಗಳಿಲ್ಲ ಎಂದು ಹೇಳಿದವರದ್ದು ಇನ್ನೊಂದು ಗುಂಪು.
- ಅವರ ಉಯಿಲನ್ನು ವಿಶ್ಲೇಷಿಸಿ, ಅವರು ಮಹಿಳಾ ವಿರೋಧಿ ಎಂದವರು.
- ‘ಹೆಸರು ಬೇಡ ಊರು ಬೇಡ’ ಎಂದು ಅನಾಮಿಕರಾಗಿದ್ದುಕೊಂಡು ಭೈರಪ್ಪನವರಿಗೆ ನುಡಿ ನಮನ ಸಲ್ಲಿಸುವ ಭರದಲ್ಲಿ ಯಾರೆಲ್ಲ ಭೈರಪ್ಪನವರನ್ನು ಹೊಗಳಿದ್ದಾರೋ ಅವರನ್ನು ಟೀಕಿಸಿದವರು. ಒಂದು ಹೆಜ್ಜೆ ಮುಂದೆ ಹೋಗಿ, ಭೈರಪ್ಪನವರನ್ನು ಹೊಗಳಿದವರ ಖಾಸಗಿ ಜೀವನ ಜಾಲಾಡಿದವರು. ಉದಾ: ಕತೆಗಾರ ಜೋಗಿಯವರ ಬಗ್ಗೆ ಕೀಳಾಗಿ ಬರೆದಿದ್ದು (ಇದು ಇನ್ನು ಮುಂದೆ ಇನ್ನೂ ಹೆಚ್ಚಾಗುತ್ತದೆ ನೋಡುತ್ತಿರಿ)
- ಅಂತಃಕರಣವೂ ಇಲ್ಲದ ಸಹಾನುಭೂತಿ ಇಲ್ಲದ ಮನುಷ್ಯನೇ ಅಲ್ಲದ ವ್ಯಕ್ತಿ ಭೈರಪ್ಪ ಎಂದು ತೀರ್ಪು ಕೊಟ್ಟು, ಅತ್ಯಂತ ಕೆಟ್ಟದಾಗಿ ಸಮೂಹ ಮಾಧ್ಯಮವನ್ನು ಬಳಸಿ ಸೇಡು ತೀರಿಸಿಕೊಂಡವರು.
ಬಾನು ಅವರ ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ
ಭೈರಪ್ಪನವರು ಮೃತಪಟ್ಟ ದಿನ ತಾವು ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆ ಮತ್ತು ಟೀಕೆಗಳಿಗೆ ಬಾನು ಮುಷ್ತಾಕ್ ನಾಲ್ಕೈದು ದಿನ ಬಿಟ್ಟು ಪ್ರತಿಕ್ರಿಯಿಸಿದರು. ಹೃದಯಾಂತರಾಳದ ಮಾತನ್ನು ಫೇಸ್ ಬುಕ್ನಲ್ಲಿ ಹಂಚಿಕೊಂಡರು.‘ನನ್ನೊಳಗೆ ಪ್ರೀತಿ ಬಿಟ್ಟು ಬೇರೆ ಏನನ್ನೂ ಹುಟ್ಟಿಸಲು ಆಗಲ್ಲ. ನಿಮ್ಮೆಲ್ಲರ ಕುರಿತು ನನ್ನೊಳಗೆ ಪ್ರೀತಿ ಬಿಟ್ಟು ಬೇರೆ ಏನೂ ಇಲ್ಲ’ ಎನ್ನುವ ಅರ್ಥ ಬರುವಂತಿತ್ತು ಅವರ ಧ್ವನಿ. ಭೈರಪ್ಪನವರ ಸಾವಿನ ದಿನ ಅವರು ಹೊರಜಗತ್ತಿಗೆ ನೀಡಿದ ಹೇಳಿಕೆಗೆ ಬಂದ ಪ್ರತಿಕ್ರಿಯೆಯನ್ನೆಲ್ಲ ಅವರು ಟೀಕೆ ಎಂದು ಅರ್ಥೈಸಿಕೊಂಡು, ಅದಕ್ಕೆ ಫೇಸ್ಬುಕ್ಕಿನಲ್ಲಿ ಉತ್ತರ ನೀಡಿದ್ದು ಯಾಕೆ? ಎನ್ನುವುದು ಮೊದಲ ಪ್ರಶ್ನೆ.
ತಮ್ಮ ಸುತ್ತಮುತ್ತಲಿನ ಸಾಹಿತ್ಯ ಪ್ರೇಮಿಗಳಿಂದ ಮತ್ತು ಫೇಸ್ಬುಕ್ ದೋಸ್ತರಿಂದ ಬಂದ ಪ್ರತಿಕ್ರಿಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ನಂತರ ಬಾನು ಅವರು ಹೃದಯಾಂತರಾಳದ ಮಾತೊಂದನ್ನು ಆಡಲು ನಿಶ್ಚಯಿಸಿದ್ದು ಯಾಕೆ ಎಂಬುದು ಕುತೂಹಲಕಾರಿಯಾಗಿದೆ. ಇದೇ ಪ್ರೀತಿ ಮತ್ತು ಹೃದಯ ವೈಶಾಲ್ಯತೆಯನ್ನು ಭೈರಪ್ಪ ಸತ್ತ ದಿನ ತೋರಿಸಬಹುದಿತ್ತು. ಆ ದಿನ ಅವರ ಬಗೆಗಿನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳದೇ, ವಾರ ಕಳೆದ ಮೇಲೆ ಅವರ ಸಾಹಿತ್ಯದ ಬಗ್ಗೆ- ಅದರಲ್ಲಿಯೂ ಮುಖ್ಯವಾಗಿ ಭೈರಪ್ಪನವರ ‘ಆವರಣ’ದ ಬಗ್ಗೆ -ಸಾಹಿತ್ಯಿಕ ಸೂತ್ರಗಳನ್ನಿಟ್ಟುಕೊಂಡು, ತಮ್ಮ ಅಭಿಪ್ರಾಯ ಮಂಡಿಸಬಹುದಿತ್ತಲ್ಲ? ಇಸ್ಲಾಂ ಕುರಿತಾಗಿ ಭೈರಪ್ಪನವರು ಬರೆದಿದ್ದರ ಬಗ್ಗೆ ತಮ್ಮ ರೇಜಿಗೆ, ಸಿಟ್ಟನ್ನು ಇಷ್ಟು ದಿನ ಕಾಪಿಟ್ಟು, ಭೈರಪ್ಪನವರ ಉಸಿರು ಹೋದ ತಾಸೊಳಗೆ ಒಂದು ಹೇಳಿಕೆ ನೀಡಿ ಅದನ್ನು ಹೊರಗೆಡಹಿದರು. ಅಂದರೆ, ಸಾರ್ವಜನಿಕರು ಬಾನು ಮೇಡಂ ಬಗ್ಗೆ ಫೇಸ್ಬುಕ್ನಲ್ಲಿ ಮಾತಾನಾಡಿದರೆ ಅವರಿಗೆ ಸಿಟ್ಟು ಬರಲ್ಲ. ಆಗ ಅವರು ನಿಜವಾಗಿಯೂ ಪ್ರೀತಿಪೂರ್ವಕವಾದ ಹೃದಯ ವೈಶಾಲ್ಯತೆ ತೋರಿಸಿ ಎಲ್ಲರನ್ನೂ ಕ್ಷಮಿಸುತ್ತಾರೆ. ಆದರೆ ಇಸ್ಲಾಂ ವಿರುದ್ದ ಮಾತಾಡಿದವರನ್ನು ಮಾತ್ರ ಅವರು ಎಂದೂ ಕ್ಷಮಿಸಲ್ಲ ಎಂಬ ಅರ್ಥ ಬರುವಂತಿದೆ ಅವರ ನಡವಳಿಕೆ.
ಆವರಣದ ನಂತರ
ಆವರಣ ಬರೆದ ಭೈರಪ್ಪನವರು ಮುಂದೆ ಬಿಜೆಪಿ ಮತ್ತು ನರೇಂದ್ರ ಮೋದಿ ಪರವಾಗಿ ಮಾತನಾಡಿದ್ದರು. ಆಗ ಅವರನ್ನು ಕೋಮುವಾದಿಯ ಪುರೋಹಿತ ಎಂದು ಗುರುತಿಸಲಾಯಿತು. ಅವರ ಮೇಲಿನ ಸಿಟ್ಟು ಮತ್ತು ಕೋಪ ಎಷ್ಟಿತ್ತು ಎಂದರೆ, ಭೈರಪ್ಪನವರು ಇಹಲೋಕದ ಪ್ರಯಾಣ ಮುಗಿಸಿದಾಗ ಹಲವಾರು ಚಿಂತಕರು ಅವರನ್ನು ‘ಜನಪ್ರಿಯ ಕಾದಂಬರಿಕಾರ’ ಎಂಬ ಎರಡೇ ಶಬ್ದದಲ್ಲಿ ನುಡಿ ನಮನ ಮುಗಿಸಿದ್ದರು. ಅವರು ‘ಪಲ್ಪ್ ಫಿಕ್ಷನ್’ ಬರೆಯುವ ಕಾದಂಬರಿಕಾರರೇನೋ ಎನ್ನುವ ಅರ್ಥ ಬರುವ ರೀತಿಯಲ್ಲಿತ್ತು ಆ ನುಡಿ ನಮನಗಳು.
ಭೈರಪ್ಪನವರ ಸಾವಿನ ನಂತರ ನಡೆದ ಬೆಳವಣಿಗೆಯನ್ನು ಕೂಲಂಕುಷವಾಗಿ ಅವಲೋಕಿಸಿದಾಗ ಕೆಲವು ಮೂಲಭೂತ ಪ್ರಶ್ನೆಗಳು ಉದ್ಭವಿಸುತ್ತವೆ .
- ಕತೆ ಕಾದಂಬರಿಗಳಲ್ಲಿ ಹಲವಾರು ಪ್ರಾಕಾರ (Genre)ಗಳಿವೆ. ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಾಮಾಜಿಕ ಕಂದಾಚಾರ, ಮೂಢನಂಬಿಕೆ ಮತ್ತು ಅಮಾನವೀಯ ಪದ್ಧತಿಗಳನ್ನು ಪ್ರಶ್ನಿಸುವ, ಹೋರಾಡಲು ಧ್ವನಿ ನೀಡುವ ಸಾಹಿತ್ಯವನ್ನು ಅಪರೂಪದ ಸಾಹಿತ್ಯವೆಂದು ಪಾಶ್ಚಾತ್ಯ ಪಂಡಿತರು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ, ಲಂಕೇಶ್, ಬಾನು ಮುಷ್ತಾಕ್ ರಂತಹ ದೈತ್ಯ ಪ್ರತಿಭೆಗಳು, ತಮ್ಮ ಕಥೆ ಕಾದಂಬರಿಗಳ ಮೂಲಕ ನಮ್ಮಲ್ಲಿ ಹೊಸ ಚಿಂತನೆಗೆ ತಿದಿ ಒತ್ತಿದ್ದು ನಿಜ. ಅಷ್ಟೇ ಅಲ್ಲ, ಇವರು ಹುಟ್ಟು ಹಾಕಿದ ಚಿಂತನೆ ಮತ್ತು ಯೋಚನೆ ಲಹರಿ ಸಮಾಜದ ಓರೆ ಕೋರೆ ತಿದ್ದಲು ಸಹಾಯಕವಾಗುತ್ತದೆ ಎಂಬುದು ನಮ್ಮೆಲ್ಲರ ಬಲವಾದ ನಂಬಿಕೆ ಕೂಡ. ಇಂಥ ಸಮಾಜಮುಖಿ ಪ್ರತಿಭೆಗಳ ನೆರಳಲ್ಲಿ ಬೆಳೆದ ಹೊಸ ಪೀಳಿಗೆಯ ಸಾಹಿತಿಗಳು, ಪ್ರಗತಿಪರ ಚಿಂತಕರು ಮತ್ತು ಅವರನ್ನು ಅನುಸರಿಸುವ ಓದುಗರು ಮತ್ತು ನಾಗರಿಕರಲ್ಲಿ ಹೃದಯ ವೈಶಾಲ್ಯತೆ ಜಾಸ್ತಿಯಿರುತ್ತದೆ; ಇವರು ಸದಾ ಸಹಿಷ್ಣುಗಳಾಗಿರುತ್ತಾರೆ ಮತ್ತು ಸದಾ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಭೈರಪ್ಪನವರ ಸಾವಿನ ನಂತರ ನಡೆದಿದ್ದೇ ಬೇರೆ. ಅವರ ಸಾವನ್ನು ಸಾರ್ವಜನಿಕವಾಗಿ ಸಂಭ್ರಮಿಸದೆ ಹೋದರೂ ಅವರನ್ನು ಹೀಗಳೆಯುತ್ತ ಮತ್ತು ಅಸಹ್ಯಕರ (distasteful) ಟಿಪ್ಪಣಿ ಮೂಲಕ ಭೈರಪ್ಪನವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಯಿತು ಈ ವರ್ಗ. ಇವರನ್ನು ಸಹಿಷ್ಣುಗಳೆಂದು ಹೇಗೆ ಕರೆಯಬೇಕು? ಭೈರಪ್ಪನವರ ಸಾವಿನ ನಂತರ ಪ್ರಗತಿಪರರ ನಡೆದುಕೊಂಡ ರೀತಿ ನೋಡಿದಾಗ, ಮೇಲೆ ಹೇಳಿದ ಕಾದಂಬರಿ ಮತ್ತು ಕಥಾ ಸಾಹಿತ್ಯ ಪ್ರಾಕಾರದ ಬಗ್ಗೆ ಮತ್ತು ಅದು ಸಮಾಜದಲ್ಲಿ ಬದಲಾವಣೆ ತರಬಲ್ಲದು ಎಂಬ ಕಲ್ಪನೆ ಬಗ್ಗೆ ಶಂಕೆ ಮೂಡುವುದು ಸಹಜ. ಕನಿಷ್ಠ ಪಕ್ಷ ಒಂದು ಸುಸಂಸ್ಕೃತ ಸಂವೇದನೆಯನ್ನು ಕೂಡ ಹುಟ್ಟು ಹಾಕಲು ಈ ಪ್ರಾಕಾರ ಸಹಾಯ ಮಾಡಲಾರದು ಎಂಬ ನಿರ್ಧಾರಕ್ಕೆ ನಾವು ಬರಬೇಕೆ?
- ಭೈರಪ್ಪನವರ ಸಾವಿನ ನಂತರ ಬಾನು ಮುಷ್ತಾಕ್ ಅವರು ನೀಡಿದ ಮೊದಲ ಅಭಿಪ್ರಾಯಕ್ಕೆ ಬಂದ ಪ್ರತಿಕ್ರಿಯೆ, ಟಿಪ್ಪಣಿ, ಟೀಕೆಯನ್ನು, ಅಸಹಿಷ್ಣುತೆಯ ಲಕ್ಷಣ ಎಂದು ವಿಂಗಡಿಸುವುದು ಎಷ್ಟು ಸರಿ?
- ಇಂಗ್ಲಿಷ್ನಲ್ಲಿ ಬರೆಯುತ್ತಿದ್ದ ಕಮಲಾ ದಾಸ್ ಭಾರತದ ಪ್ರಸಿದ್ಧ ಸಾಹಿತಿ. ಜೀವನದ ಕೊನೆಯ ಕಾಲದಲ್ಲಿ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಕಮಲಾ ಸುರಯ್ಯಾ ಎಂಬ ಹೆಸರಿಟ್ಟುಕೊಂಡು, ಬುರ್ಖಾ ಹಾಕಿಕೊಳ್ಳಲು ನಿರ್ಧರಿಸದರು. ಯಾಕೆ ಮತಾಂತರಗೊಂಡೆ ಎನ್ನುವುದನ್ನು ವಿವರಿಸುತ್ತ ಅವರು ಹೇಳಿದ್ದು ಇಷ್ಟು: ಹಿಂದೂ ಧರ್ಮದಲ್ಲಿ ಅತಿಯಾದ ಸ್ವಾತಂತ್ರ್ಯವಿದೆ (Too much freedom in Hinduism). ಆದರೆ ನನಗೆ ಕರುಣಾಮಯಿಯಾದ ದೇವರು ಬೇಕಾಗಿತ್ತು. ಅದು ಇಸ್ಲಾಂನಲ್ಲಿ ಅಲ್ಲಾನ ಮೂಲಕ ಸಿಕ್ಕಿದೆ ಎಂದು ಹೇಳುತ್ತ ಅವರು ತಮ್ಮ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದನ್ನು ನಾವು ನೋಡಿದ್ದೇವೆ. ಈಗ ಕಾಡುವ ಪ್ರಶ್ನೆ: ಅವರ ವೈಯಕ್ತಿಕ ಜೀವನವನ್ನು ನೋಡಿ ಅವರ ಸಾಹಿತ್ಯವನ್ನು ಅಳೆಯಬೇಕೆ? ಅಥವಾ ಕಮಲಾದಾಸ್ ಅವರ ಕೊನೆಯ ಕಾಲದ ನಿರ್ಧಾರ ಮತ್ತು ಅದಕ್ಕವರು ನೀಡಿದ ಸಮರ್ಥನೆಯನ್ನು ನೋಡಿ, ಹಿಂದೂ ಧರ್ಮವನ್ನು ಅಳೆಯಬೇಕೇ? ಹಿಂದೂ ಧರ್ಮದ ಬಗ್ಗೆ ಅವರು ಹೇಳಿದ್ದೇ ಅಂತಿಮ, ಇನ್ನು ಚರ್ಚೆಗೆ ಅವಕಾಶವೇ ಇಲ್ಲ, ಸಂಶೋಧನೆ ಬೇಕಾಗಿಲ್ಲ ಎನ್ನಬೇಕೆ? ಕಮಲಾ ಸುರಯ್ಯಾ ಅವರ ಕೊನೆಯ ದಿನದ ಹೇಳಿಕೆಗಳೆಲ್ಲ ಹಿಂದೂ ಧರ್ಮವನ್ನು ಅಳೆಯುವ ಏಕೈಕ ಮಾನದಂಡವಾಗಬೇಕೆ? ಭೈರಪ್ಪನವರ ಜೀವನದ ಬಗ್ಗೆ, ಕೆಲವರ ಜೊತೆ ಒರಟಾಗಿ ನಡೆದುಕೊಂಡಿದ್ದರು ಎಂಬ ಆರೋಪದ ಬಗ್ಗೆ ಹೀಗೆ ಒಂದು ನಿರ್ಣಯಕ್ಕೆ ಬಂದುಬಿಡಬೇಕೆ?
- ತಮ್ಮ ಕೃತಿಗಳಲ್ಲಿ ಕಥಾ ಹಂದರವನ್ನು ನಿರೂಪಿಸುವಾಗ ಮಹಿಳಾ ಪಾತ್ರಗಳಿಗೆ ನ್ಯಾಯ ಒದಗಿಸಲಿಲ್ಲ ಮತ್ತು ಅವರು, ಯಾವಾಗಲೂ ಸಂಪ್ರದಾಯವನ್ನೇ ಎತ್ತಿ ಹಿಡಿದರು ಎಂಬ ವಾದವೊಂದನ್ನು ಹಲವಾರು ವಿಮರ್ಶಕರು ಮುಂದಿಟ್ಟಿದ್ದಾರೆ. ಈ ವಾದ ಸರಿಯೋ ತಪ್ಪೋ ಎನ್ನುವುದನ್ನು ಓದುಗರೇ ನಿರ್ಧರಿಸಬೇಕು. ಆದರೆ, ತನ್ನ ವೈಯಕ್ತಿಕ ಬದುಕಿನಲ್ಲಿ ಸಚ್ಚಾರಿತ್ರ್ಯದ ಮೂರ್ತಿಯಾಗಿ, ಹುಟ್ಟಿದೂರಿನ ಕೆರೆಯಲ್ಲಿ ನೀರು ಕಡಿಮೆಯಾದಾಗ, ನೀರು ಹರಿಸಲು ಹೋರಾಡಿದ್ದು, ಯಾವುದರ ಲಕ್ಷಣ? ತಾವು ಬರೆದ ಕೃತಿಗಳಲ್ಲಿ ಸ್ತ್ರೀ ವಾದಿ ಸಂವೇದನೆಗೆ ನ್ಯಾಯ ಒದಗಿಸಿದ ಕನ್ನಡದ ಕೆಲ ಬರಹಗಾರರು ತಮ್ಮ ವೈಯಕ್ತಿಕ ಬದುಕಿನಲ್ಲಿ, ಅದರಲ್ಲಿಯೂ ಹೆಂಗಸರ ವಿಚಾರದಲ್ಲಿ ಪ್ರಪಾತಕ್ಕಿಳಿದಿದ್ದನ್ನು ನಾವೇ ನೋಡಿದ್ದೇವೆ. ಸಾಹಿತ್ಯದಲ್ಲಿ ನ್ಯಾಯ ಒದಗಿಸುವ ಬರಹಗಾರ ಅದಕ್ಕೆ ತದ್ವಿರುದ್ದವಾಗಿ ನಿಜ ಜೀವನದಲ್ಲಿ ಬದುಕಿದ್ದರೆ, ಅದನ್ನು ಹೇಗೆ ಸ್ವೀಕರಿಸಬೇಕು?
- ವಿದೇಶಿಯರು ನ್ಯಾಯ, ಸಚ್ಚಾರಿತ್ರ್ಯ, ನೈತಿಕ ತಪ್ಪು ಒಪ್ಪು (moral right or wrong), ಈ ರೀತಿಯ ವಿಚಾರಗಳನ್ನು ಅಕಾಡೆಮಿಕ್ ಶಿಸ್ತಿನ ಅಡಿ ಅಧ್ಯಯನ ಮಾಡಿದ್ದಾರೆ. ಈ ಕುರಿತು ಈಗಲೂ ಸಂಶೋಧನೆ ನಡೆಸುತ್ತಿದ್ದಾರೆ. ಹಾಗೆ ಕಂಡುಕೊಂಡ ಒಳನೋಟವನ್ನು ಅಲ್ಲಿನ ಸರಕಾರಗಳ ಜೊತೆ ಹಂಚಿಕೊಂಡಾಗ, ಅವು ಇಂತಹ ವಿಚಾರಗಳನ್ನು ತಮ್ಮ ನೀತಿಯಲ್ಲಿ ಅಳವಡಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮೈಕಲ್ ಸ್ಯಾಂಡಲ್, ದಿವಂಗತ ಪ್ರೊ ರುಶುವರ್ಥ್ ಕಿಡರ್– ಈ ರೀತಿಯ ಕೆಲಸ ಮಾಡಿ ಬಹಳ ಯಶಸ್ಸು ಗಳಿಸಿದ್ದಾರೆ. ಅದೇಕೆ? ನಮ್ಮ ದೇಶದಲ್ಲಿ ತುಂಬಾ ಹಿಂದೆ ಚಾಣಕ್ಯ ಈ ತರಹದ ಕೆಲಸ ಮಾಡಿದ ದಾಖಲೆಯಿದೆ. ಆನಂತರ ಶಿವಾಜಿಯ ಗುರುವಾದ ಸಮರ್ಥ ರಾಮದಾಸರು ಸಮಾಜಮುಖಿ ಚಿಂತನೆಯನ್ನು ರಾಜನಿಗೆ ನೀಡಿದ್ದರು. ಇಲ್ಲಿರುವ ತಾತ್ವಿಕ ಪ್ರಶ್ನೆ ಏನೆಂದರೆ, ಸಮಾಜಶಾಸ್ತ್ರ ಮಾನವ ಶಾಸ್ತ್ರದಂತಹ ಸಮಾಜ ವಿಜ್ಞಾನದ ಪರಿಕರಗಳ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕೋಬೇಕೋ ಅಥವಾ ಎಲ್ಲರನ್ನೂ ಸೆಳೆಯುವ ಕಥೆ ಕಾದಂಬರಿಗಳ ಮೂಲಕ ಮೌಲ್ಯವನ್ನು ಪ್ರಚುರಪಡಿಸಬೇಕೋ ? ಭೈರಪ್ಪನವರು ಭಾರತೀಯ ತತ್ವಶಾಸ್ತ್ರದ ತಳಹದಿಯ ಮೇಲೆ ಕತೆ ಹೇಳಲು ಹೊರಟಿದ್ದರು. ಮೇಲ್ನೋಟಕ್ಕೆ ಶುಷ್ಕವಾಗಿ ಕಾಣುವ ತತ್ವಶಾಸ್ತ್ರವನ್ನು ಮತ್ತು ಮನುಷ್ಯ ಜೀವನದ ತಾಕಲಾಟವನ್ನು, ಕಾದಂಬರಿ ಪ್ರಾಕಾರದ ಮೂಲಕ ಶೋಧಿಸಿ ಅದನ್ನು ಹೇಳಲು ಪ್ರಯತ್ನಿಸಿದ್ದರು. ಈ ಕೆಲಸವನ್ನು ಸೃಜನಶೀಲವಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಸಾಹಿತ್ಯವನ್ನು, ಸಾಹಿತ್ಯವೇ ಅಲ್ಲ ಎಂದು ಹೇಳುವ ನಿಲುವು ಸರಿಯೇ?
- ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದು ಅಡಿಗರನ್ನು ಹಾಡಿ ಹೊಗಳಿ, ಆಮೇಲೆ ಅಡಿಗರ ಕಾವ್ಯದ ಮೂಲ ಪುರೋಹಿತ ಕಾಳಜಿಗಳು ಮತ್ತು ರಾಜಕೀಯ ಹಿತಾಸಕ್ತಿ ಎಂದು ಹೇಳುತ್ತಾ ಅವರ ವ್ಯಕ್ತಿತ್ವಕ್ಕೆ ಮೊಳೆ ಹೊಡೆದಿದ್ದನ್ನು ತುಂಬಾ ಜನ ಮರೆತಿಲ್ಲ. ಹಾಗೆ ನೋಡಿದರೆ ಅಡಿಗರು ತಮ್ಮ ಜೀವಿತಾವಧಿಯಲ್ಲಿ ಅನೇಕರ ಜೊತೆ ಸಾಹಿತ್ಯದ ವಾಗ್ವಾದದಲ್ಲಿ ತೊಡಗಿದ್ದರು ಎನ್ನುವುದಕ್ಕೆ ಸಾಕ್ಷ್ಯವಿದೆ. ಆದರೆ ಭೈರಪ್ಪ ಹಾಗಲ್ಲ. ಅವರು ತಾನಾಯಿತು ತನ್ನ ಬರವಣಿಗೆಯಾಯಿತು ಎಂದು ಇದ್ದವರು. ಸಾಹಿತ್ಯದ ರಾಜಕೀಯಕ್ಕೆ ಬಲಿಯಾದವರಲ್ಲಿ ಅಡಿಗ, ಭೈರಪ್ಪ ಹೀಗೆ ಈ ಪಟ್ಟಿ ತುಂಬಾ ದೊಡ್ಡದಿದೆ. ಇದನ್ನೆಲ್ಲ ಮಾಡಿದವರು ಯಾರು? ಈ ವರ್ಗದ ಸೋಗಲಾಡಿತನಕ್ಕೆ ಕೊನೆ ಎಂದು? ಅಡಿಗರು ಬದುಕಿದ್ದಾಗ ನೋವುಂಡರು. ಭೈರಪ್ಪ ಬದುಕಿದ್ದಾಗಲೇ ಇಂತಹ ಸವಾಲು ಎದುರಿಸಿದರು. ಸತ್ತ ಮೇಲೆ–ಆಳಿಗೊಂದು ಕಲ್ಲಿನಂತೆ-ಟೀಕೆ ಟಿಪ್ಪಣಿ ಬಂತು ಅವರ ವಿರುದ್ಧ.
- ಭೈರಪ್ಪನವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊರಗೆ ಬಂದು ಮಾಡಿದ ಮೊದಲ ಕೆಲಸವೆಂದರೆ ಭೈರಪ್ಪನವರ ಮೂರ್ತಿಯೊಂದನ್ನು ಸರಕಾರ ಪ್ರತಿಷ್ಠಾಪಿಸುತ್ತದೆ ಎಂದು ಘೋಷಿಸಿದ್ದು. ಇದು ಓರ್ವ ಬುದ್ಧಿವಂತ ರಾಜಕಾರಣಿಯ ಲಕ್ಷಣ. ತಮ್ಮ ಒಂದು ಹೇಳಿಕೆಯ ಮೂಲಕ, ಅವರು ಭೈರಪ್ಪನವರ ಓದುಗರ ಬಾಯಿ ಮುಚ್ಚಿಸಿದರು. ಆದರೆ ಭೈರಪ್ಪನವರನ್ನು ಪ್ರಬಲವಾಗಿ ವಿರೋಧಿಸುವ ತಂಡ ಸಿದ್ದರಾಮಯ್ಯನವರ ಈ ನಿರ್ಧಾರವನ್ನು ಯಾಕೆ ವಿರೋಧಿಸಲಿಲ್ಲ? ‘ಮುಸ್ಲಿಂ ವಿರೋಧಿ ಬರಹಗಾರ’ನ ಮೂರ್ತಿಯೊಂದು ಸಿದ್ದರಾಮಯ್ಯನವರ ಕಾಲದಲ್ಲಿ ಮೈಸೂರಿನಲ್ಲಿ ತಲೆಯೆತ್ತಬಾರದು ಎಂದು ಯಾಕೆ ದನಿ ಎತ್ತುತ್ತಿಲ್ಲ? ಸಿದ್ದರಾಮಯ್ಯನವರ ನಿರ್ಣಯ ತಪ್ಪು ಎಂದು ಖಾಸಗಿಯಾಗಿ ಹೇಳುತ್ತ ಮುಖ್ಯಮಂತ್ರಿಯವರನ್ನು ಸಾರ್ವಜನಿಕವಾಗಿ ಟೀಕಿಸದೇ ಇರುವುದಕ್ಕೆ ಕಾರಣ ಏನು?
ಇದನ್ನೂ ಓದಿ: 1 ವಾರ ಬಾನು ಮುಷ್ತಾಕ್ ಮನೆಯಲ್ಲಿ ತಂಗಿದ್ದ ಭೈರಪ್ಪ, ಮಸೀದಿಗೂ ಹೋಗಿದ್ರು: ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಬಾನು ಮುಷ್ತಾಕ್ ಆಗಲಿ ಅಥವಾ ಪ್ರಗತಿಪರ ಸಾಹಿತಿಗಳು ಯಾರೂ ಈ ರೀತಿಯ ವಿಚಾರ ಎತ್ತಿಲ್ಲವಲ್ಲ. ಅವರಿಗೇಕೆ ಈ ಪ್ರಶ್ನೆಗಳನ್ನು ಕೇಳಬೇಕು? ಆದರೆ ಓರ್ವ ವಕೀಲೆಯಾಗಿ, ಪ್ರತಿಷ್ಠಿತ ಸಾಹಿತಿಯಾಗಿ, ಬಂಡಾಯ ಚಳುವಳಿಯ ನೇತಾರರಾಗಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ, ಅವರ ಮಾತಿಗೆ ತುಂಬಾ ಕಿಮ್ಮತ್ತಿದೆ. ಬಾನು ಅವರು ಈ ರೀತಿಯ ಪ್ರಶ್ನೆಗಳಿಗೆ ಕೊಡುವ ಉತ್ತರವನ್ನು ಕೇಳಿ ಪ್ರಗತಿಪರರು ತಮ್ಮ ವಿಚಾರಧಾರೆಯನ್ನು ಬದಲಿಸಿಕೊಳ್ಳಬಹುದು ಮತ್ತು ಮುಂದಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಚರ್ಚೆಗೆ ಹೊಸ ದಿಕ್ಕೊಂದು ಸಿಗಬಹುದು ಎಂಬುದು ಈ ಲೇಖನದ ಮೂಲ ಆಶಯ. ಈ ಹಿನ್ನೆಲೆಯಲ್ಲಿ ಮುಂದೊಂದು ದಿನ ಅವರು ಸಿಕ್ಕರೆ ಈ ಪ್ರಶ್ನೆಗಳನ್ನು ಕೇಳಬೇಕಿದೆ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Sat, 4 October 25




