ಬ್ಯಾಂಕ್ಗಳಲ್ಲಿ ಇರುವ ಠೇವಣಿಗೆ ಇನ್ಷೂರೆನ್ಸ್ ಅನ್ನು 5 ಲಕ್ಷ ರೂಪಾಯಿಗೆ ಏರಿಸಿರುವುದು, ಅದನ್ನು ಈಗ ಕಾನೂನು ಮಾಡಿ, 90 ದಿನದೊಳಗಾಗಿ ಠೇವಣಿದಾರರಿಗೆ ಹಿಂತಿರುಗಿಸಬೇಕು ಎಂದು ಕಟ್ಟಳೆ ಮಾಡಿರುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಮುಂಚೆ ಈ ಮೊತ್ತ 1 ಲಕ್ಷ ರೂಪಾಯಿ ಇತ್ತು. ಯಾವುದಾದರೂ ಬ್ಯಾಂಕ್ಗಳಲ್ಲಿ ಅವ್ಯವಹಾರವೋ ಅಥವಾ ನಿಯಮ ಉಲ್ಲಂಘನೆ ಕಾರಣಕ್ಕೋ ಆರ್ಬಿಐನಿಂದ ನಿರ್ಬಂಧ ಹೇರಿದರು ಅಂತಿಟ್ಟುಕೊಳ್ಳಿ. ಅಂಥ ಸಂದರ್ಭದಲ್ಲಿ ಗ್ರಾಹಕರ ಠೇವಣಿಗೆ ಬಡ್ಡಿಯೂ ಸೇರಿದಂತೆ 5 ಲಕ್ಷ ರೂಪಾಯಿ ತನಕ DICGC (ಡೆಪಾಸಿಟ್ಸ್ ಇನ್ಷೂರೆನ್ಸ್ ಆಫ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್)ಯಿಂದ ಇನ್ಷೂರೆನ್ಸ್ ದೊರೆಯುತ್ತದೆ. ಸಣ್ಣ ಮೊತ್ತದ (5 ಲಕ್ಷ ಖಂಡಿತಾ ತೆಗೆದುಹಾಕುವಂಥ ಮೊತ್ತ ಅಲ್ಲ) ಹೂಡಿಕೆದಾರರ ಪಾಲಿಗೆ ಇದು ಸಂತೋಷದ ಸುದ್ದಿಯೇ. ಆದರೆ ಈ ವಿಚಾರಕ್ಕೆ ಮತ್ತೊಂದು ಮಗ್ಗಲು ಕೂಡ ಇದೆ.
ಈಗ ನಿರ್ದಿಷ್ಟ ಬ್ಯಾಂಕ್ವೊಂದರ ವಿಚಾರವಾಗಿ ನಿಮ್ಮೆದುರು ಹೇಳಬೇಕಿದೆ. ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ಗೆ ಆರ್ಬಿಐನಿಂದ ನಿರ್ಬಂಧ ಹೇರಿದಾಗ ಅಲ್ಲಿನ ಸನ್ನಿವೇಶವನ್ನು ವರದಿ ಮಾಡಲು ಹೋಗಿದ್ದರಿಂದ ಈ ಬಗ್ಗೆ ಹಲವು ಸಂಗತಿಗಳನ್ನು ತಿಳಿಸಬೇಕು ಎಂದೆನಿಸಿ, ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಬ್ಯಾಂಕ್ನ ಅಧ್ಯಕ್ಷರು ಬ್ಯಾಂಕ್ನ ಹೆಸರು (ಶ್ರೀ ಗುರು ರಾಘವೇಂದ್ರ) ಹಾಗೂ ಭಾವನೆಗಳನ್ನು ಬಳಸಿಕೊಂಡು, ಒಂದು ನಿರ್ದಿಷ್ಟ ಸಮುದಾಯದವರಿಂದ ಠೇವಣಿ ಸಂಗ್ರಹ ಮಾಡಿದವರು. ಹೆಚ್ಚಿನ ಬಡ್ಡಿ ಬರುತ್ತದೆ ಹಾಗೂ ಸರಿಯಾಗಿಯೇ ಆ ಮೊತ್ತ ಕ್ರೆಡಿಟ್ ಆಗುತ್ತದೆ (ಆ ಹೊತ್ತಿಗೆ ಅಂಥದ್ದೊಂದು ವರ್ಚಸ್ಸನ್ನು ಬೆಳೆಸಲಾಗಿತ್ತು) ಎಂಬ ಕಾರಣಕ್ಕೆ ಹಣ ಠೇವಣಿ ಮಾಡಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಮೈಕ್ ಮುಂದೆ ಮೊಬೈಲ್ ಫೋನಿಟ್ಟು ಮಾತನಾಡಿಸಲಾಗಿತ್ತು
ಹಗರಣ ಬಯಲಿಗೆ ಬಿದ್ದ ಒಂದೆರಡು ದಿನದಲ್ಲೇ ರಾಮಕೃಷ್ಣಾಶ್ರಮದ ಬಳಿಯ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಹೂಡಿಕೆದಾರರು ಹಾಗೂ ಬ್ಯಾಂಕ್ನ ಸಭೆ ಇತ್ತು. ಆಗ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದವರು ಹೆಚ್ಚು. ತಮ್ಮ ಹಣ ವಾಪಸ್ ಬಂದೇ ಬರುತ್ತದೆ ಆ ರಾಘವೇಂದ್ರ ಸ್ವಾಮಿಗಳು ಕೈ ಬಿಡಲ್ಲ ಹಾಗೂ ಅಧ್ಯಕ್ಷರು ಸುಳ್ಳು ಹೇಳಲ್ಲ ಎಂಬುದು ಎಲ್ಲರ ಭರವಸೆ ಆಗಿತ್ತು. ಅಂದಿನ ಸಭೆಯಲ್ಲಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮೊಬೈಲ್ ಫೋನ್ ಕರೆ ಮಾಡಿ, ಅದನ್ನು ಮೈಕ್ ಮುಂದಿಟ್ಟು ಮಾತನಾಡಿಸಲಾಗಿತ್ತು. “ನಾನು, ನಿಮ್ಮ ಹಣ ಸಿಗೋದಿಕ್ಕೆ ಬೇಕಾದ ಎಲ್ಲ ಪ್ರಯತ್ನ ಮಾಡುತ್ತೇನೆ” ಎಂದು ಅಂದು ಭರವಸೆ ನೀಡಿದ್ದರು ಸಂಸದರು.
10 ಸಾವಿರಕ್ಕೂ ಹೆಚ್ಚು ಮಂದಿಗೆ 5 ಲಕ್ಷಕ್ಕಿಂತ ಜಾಸ್ತಿ ಹಣ ಬರಬೇಕು
ಇವತ್ತಿಗೆ ಆ ದಿನದ ಎಲ್ಲ ಘಟನೆಯನ್ನು ಏಕೆ ನೆನಪಿಸಬೇಕಾಗಿದೆ ಅಂದರೆ, ಯಾರಿಗೆ 5 ಲಕ್ಷ ರೂಪಾಯಿಯೊಳಗೆ ಹಣ ಬರಬೇಕಿದೆಯೋ ಅವರ ಪಾಲಿನದು ನವೆಂಬರ್ 30ರೊಳಗೆ ಬರುತ್ತದೆ. – ಇವಿಷ್ಟೇ ಬರೆದರೆ ಅದು ಅಪೂರ್ಣ ಎನಿಸುತ್ತದೆ. ಏಕೆಂದರೆ, 50 ಲಕ್ಷ, 5 ಕೋಟಿ ರೂಪಾಯಿ ಹೀಗೆ ಎಷ್ಟೇ ಹಣ ಬ್ಯಾಂಕ್ನಿಂದ ಬರಬೇಕಿದ್ದವರಿಗೂ ಬರುವುದು ಅದೇ 5 ಲಕ್ಷ ರೂಪಾಯಿಯೇ. ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ಗೆ 41,804 ಮಂದಿ ಠೇವಣಿದಾರರಿದ್ದಾರೆ. ಇವರ ಪೈಕಿ 31,576 ಮಂದಿ 5 ಲಕ್ಷ ರೂಪಾಯಿ ಒಳಗೆ ಠೇವಣಿ ಇಟ್ಟಿದ್ದಾರೆ ಎಂಬುದು ಅಂಕಿ- ಅಂಶ. ಅಂದರೆ, ಬಾಕಿ 10 ಸಾವಿರಕ್ಕೂ ಹೆಚ್ಚು ಮಂದಿಯ ಪರಿಸ್ಥಿತಿ ಏನು? ಆರಂಭದಲ್ಲೇ ಹೇಳಿದಂತೆ, ನಿರ್ದಿಷ್ಟ ಸಮುದಾಯದ ಜನರನ್ನು ಗುರಿ ಮಾಡಿಕೊಂಡು ದೊಡ್ಡ ಮಟ್ಟದ ವಂಚನೆ ಆಗಿದೆ.
ಲಕ್ಷಗಟ್ಟಲೆ ಹಣ ಹಾಕಿದವರಿದ್ದಾರೆ
ವಂಚನೆಗೆ ಒಳಗಾದವರಲ್ಲಿ ತಮ್ಮ ನಿವೃತ್ತಿ ನಂತರದ ದುಡ್ಡನ್ನು, ಮನೆ ಮಾರಿದ ಹಣವನ್ನು, ಮಕ್ಕಳ ಮದುವೆ, ಶಿಕ್ಷಣ, ಆರೋಗ್ಯದ ಅಗತ್ಯ ಹೀಗೆ ವಿವಿಧ ಉದ್ದೇಶಕ್ಕಾಗಿ ಉಳಿತಾಯ ಮಾಡಿಟ್ಟಿದ್ದ ದೊಡ್ಡ ಮೊತ್ತವೇ. ಎಷ್ಟೋ ಮಂದಿ ತಾವು ಮನೆ ಕಟ್ಟಲೆಂದು, ಸೈಟು ಖರೀದಿಸಲೆಂದು ಕೂಡಿಟ್ಟಿದ್ದ ಹಣವನ್ನೂ ಇಲ್ಲೇ ಹಾಕಿದ್ದರು. 35 ಲಕ್ಷ ರೂಪಾಯಿ, 28 ಲಕ್ಷ ರೂಪಾಯಿ, 50 ಲಕ್ಷ ರೂಪಾಯಿ… ಹೀಗೆ ಬ್ಯಾಂಕ್ನ ಮುಂದೆ ಸಾಲಿನಲ್ಲಿ ನಿಂತಿದ್ದ ಅದೆಷ್ಟೋ ಮಂದಿ ಮೊದಲ ದಿನ ಲೆಕ್ಕ ಹೇಳಿದ್ದರು. ಸಣ್ಣ ಉಳಿತಾಯದಾರರ, ಠೇವಣಿದಾರರ ಹಿತಾಸಕ್ತಿ ಉಳಿಸಲು ಕೇಂದ್ರದಿಂದ ಠೇವಣಿ ಮೇಲಿನ ಇನ್ಷೂರೆನ್ಸ್ ಮೊತ್ತ ಏರಿಸುವುದಾಗಿ ಹೇಳಿದ್ದರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಯಾರ ಜವಾಬ್ದಾರಿ ಎಷ್ಟು?
ಆದರೆ, ತಮ್ಮ ಜೀವಮಾನದ ದುಡಿಮೆಯನ್ನು ಈ ಬ್ಯಾಂಕ್ನಲ್ಲಿ ಹಾಕಿದ್ದವರ ಸ್ಥಿತಿ ಏನು? ಒಂದು ಬ್ಯಾಂಕ್ ಇಂಥ ಸ್ಥಿತಿಯನ್ನು ಏಕಾಏಕಿ ತಲುಪುತ್ತದೆ ಅಂದರೆ, ಅದರ ಹಿಂದಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಉತ್ತರದಾಯಿತ್ವ ಏನು? ಬ್ಯಾಂಕ್ಗಳ ಆಡಿಟಿಂಗ್ ನಿಯಮಿತವಾಗಿ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯಾದಲ್ಲಿ, ಅವ್ಯವಹಾರ ಆದಲ್ಲಿ ಅದು ಗಮನಕ್ಕೆ ಬಾರದೆ ಹೋಗಿ, ಗ್ರಾಹಕರು ನಷ್ಟ ಅನುಭವಿಸಿದಲ್ಲಿ ಸರ್ಕಾರದ ಹಾಗೂ ಆರ್ಬಿಐನ, ಆಡಿಟರ್ಗಳ ಹಾಗೂ ಬ್ಯಾಂಕ್ಗೆ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ಜವಾಬ್ದಾರಿ ಏನು? 5 ಲಕ್ಷ ರೂಪಾಯಿಯೊಳಗೆ ಮೊತ್ತವನ್ನು ಹಿಂತಿರುಗಿಸುವುದೇನೋ ಸರಿ, ಅದಕ್ಕಿಂತ ಹೆಚ್ಚಿನ ಮೊತ್ತ ಇಟ್ಟವರ ಜೀವನ ಏನಾಗಬೇಕು? ಸರ್ಕಾರವು ಈ ನಿಟ್ಟಿನಲ್ಲಿ ಕಾನೂನು, ಕಾಯ್ದೆಗಳನ್ನು ರೂಪಿಸುವುದಕ್ಕೆ ಏಕೆ ಆಲೋಚನೆ ಮಾಡಲ್ಲ.
ಈ ಆಲೋಚನೆ ಹಿಂದಿನ ಧ್ವನಿ ಏನು?
ಇದಕ್ಕೆ ಅದ್ಭುತವಾದ ಸಲಹೆ ಕೂಡ ಕೆಲವು ಬುದ್ಧಿವಂತರು ನೀಡುತ್ತಾರೆ. ನಿಮ್ಮ ಹತ್ತಿರ ಇರುವ 50 ಲಕ್ಷ ರೂಪಾಯಿಯನ್ನು ಠೇವಣಿ ಇಡಬೇಕು ಅಂದುಕೊಂಡಿದ್ದರೆ, 5 ಲಕ್ಷ ರೂಪಾಯಿಯಂತೆ ಮನೆಯ ಎಲ್ಲ ಸದಸ್ಯರ ಹೆಸರಲ್ಲೂ, ನಾನಾ ಬ್ಯಾಂಕ್ಗಳಲ್ಲೂ ಡೆಪಾಸಿಟ್ ಮಾಡಿ. ಆಗ ಈ ಆತಂಕ ಆಗಲ್ಲ ಎನ್ನುತ್ತಾರೆ. ಇನ್ನೂ ಕೆಲವು ಸಲ ರಾಷ್ಟ್ರೀಕೃತ ಅಥವಾ ಬಲಿಷ್ಠ ಖಾಸಗಿ ಬ್ಯಾಂಕ್ಗಳಲ್ಲಿ ಮಾತ್ರ ಹಣ ಇಡಿ ಎನ್ನುತ್ತಾರೆ. ತಪ್ಪು ಆಗುವುದು ಸಹಜ, ನೀವು ಎಚ್ಚರದಿಂದ ಇರಬೇಕು ವಿನಾ ನಾವೇನೂ ಕಾನೂನು ಮಾಡಲ್ಲ ಎಂಬಂಥ ಧ್ವನಿ ಇದರ ಹಿಂದಿದೆ ಎನಿಸಲ್ಲವಾ?
ಗುರು ರಾಘವೇಂದ್ರ ಬ್ಯಾಂಕ್ ಒಂದು ಸಂಕೇತ. ಇಡೀ ದೇಶಕ್ಕೆ ಅನ್ವಯಿಸಿ ಈ ಪ್ರಶ್ನೆಗಳನ್ನು ಕೇಳಬೇಕಾಗಿದೆ:
– 1 ಲಕ್ಷದಿಂದ 5 ಲಕ್ಷ ರೂಪಾಯಿಗೆ ಡೆಪಾಸಿಟ್ ಇನ್ಷೂರೆನ್ಸ್ ಹೆಚ್ಚಾಯಿತು. ಇದು ಅಂತಿಮ ಪರಿಹಾರ ಎಂಬಂತೆ ಬಿಂಬಿಸುತ್ತಿರುವುದು ಸರಿಯೇ?
– 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಠೇವಣಿ ಇಟ್ಟಿದ್ದವರ ಭವಿಷ್ಯ ಏನು?
– ಇಂಥ ಘಟನೆಗಳಿಗೆ ಯಾರು ಜವಾಬ್ದಾರಿ, ಅವರಿಗೇನು ಶಿಕ್ಷೆ?
– ಇಂಥ ಘಟನೆಗಳು ಮರುಕಳಿಸದಿರಲು ಸರ್ಕಾರದ ಕಡೆಯಿಂದ ತೆಗೆದುಕೊಂಡಿರುವ ಕ್ರಮಗಳೇನು?
– ನಮ್ಮ ಉದ್ದೇಶ ಸಣ್ಣ ಠೇವಣಿದಾರರ ರಕ್ಷಣೆ ಮಾಡುವುದು ಎನ್ನುವ ಸರ್ಕಾರವು ಆ ಮೂಲಕ ದೊಡ್ಡ ಮೊತ್ತದ ಠೇವಣಿ ಇಡಬಾರದು ಎಂದು ಹೇಳಲು ಹೊರಟಿದೆಯಾ?
ಇದನ್ನೂ ಓದಿ: ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಬಿಜೆಪಿ ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್ 12 ಕೋಟಿ ಸಾಲ ಕಟ್ಟಿಲ್ಲ -ಠೇವಣಿದಾರರ ಅಳಲು
(What Next For Depositors Who Have Money Of More Than Rs 5 Lakhs In Guru Raghavendra Co Operative Bank)