- Kannada News Photo gallery Anekal Ragi Balls Ragi mudde nati koli saaru eating compitation successful Sarjapur
ಸರ್ಜಾಪುರದಲ್ಲಿ ನಾಟಿ ಕೋಳಿ ಸಾರು ಮತ್ತು ಮುದ್ದೆ ತಿನ್ನುವ ಸ್ಪರ್ಧೆ: ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಯುವಕ ಹರೀಶ್ ತಿಂದ ಮುದ್ದೆಗಳೆಷ್ಟು ಗೊತ್ತಾ!?
ಸಂಡೇ ಅಂದ್ರೆ ಜನರಿಗೆ ಏನ್ ನೆನಪಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದ್ರೆ ನಾನ್ವೆಜ್ ಪ್ರಿಯರಿಗೆ ಮಾಂಸದೂಟದ ಗಮ್ಮತ್ತು ಇರ್ಲೇಬೇಕು.. ಅದ್ರಲ್ಲೂ ನಾಟಿ ಕೋಳಿ ಸಾರು ಮತ್ತು ಮುದ್ದೆ ಇದ್ರೆ ಕೇಳೋದೇ ಬೇಡ.. ಹೀಗಾಗಿಯೇ ಇಲ್ಲೊಂದು ಕಡೆ ಹಳ್ಳಿಯ ಸೊಗಡನ್ನ ನೆನಪಿಸುವಂತಹ ನಾಟಿ ಕೋಳಿಯ ಸಾರಿನೊಂದಿಗೆ ಮುದ್ದೆ ತಿನ್ನೋ ಕಾಂಪಿಟೇಷನ್ ಏರ್ಪಡಿಸಿದ್ದು ಸಖತ್ ಎಂಜಾಯ್ ಮೆಂಟ್ ಗೆ ಕಾರಣವಾಗಿತ್ತು.
Updated on: Jul 10, 2023 | 10:49 AM

ಬಿಸಿಬಿಸಿ ರಾಗಿಮುದ್ದೆ-ನಾಟಿ ಕೋಳಿ ಸಾರಿನ ಘಮ ಘಮ... ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ... ನಾಮುಂದು ತಾಮುಂದು ಎಂದು ಹತ್ತಾರು ಮುದ್ದೆ ಮುರಿದ ಸ್ಪರ್ಧಾಳುಗಳು..

ಹೌದು ಹೀಗೆ ನಾಟಿ ಕೋಳಿಯ ಸಾರಿನೊಂದಿಗೆ ಮುದ್ದೆಗಳನ್ನ ನಾಮುಂದು ತಾಮುಂದು ಎಂದು ತಿನ್ನುತ್ತಿರುವ ಈ ದೃಶ್ಯ ಕಂಡು ಬಂದಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ.. ಮಂಥನ ಹೋಟೆಲ್ ಹಾಗೂ ಸರ್ಜಾಪುರದ ಯುವಕರು ಸೇರಿ ಆಯೋಜನೆ ಮಾಡಿದ್ದ ನಾಟಿ ಕೋಳಿ ಸಾರಿನ ಜೊತೆಗೆ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಕುಣಿಗಲ್, ಮಂಡ್ಯ, ಮಾಲೂರು ಸೇರಿದಂತೆ ಬೆಂಗಳೂರಿನ ಹಲವೆಡೆಗಳಿಂದ ಸ್ಪರ್ಧಾಳುಗಳು ಭಾಗಿಯಾಗಿದ್ದರು.

ಮೊದಲನೇ ಬಹುಮಾನವಾಗಿ ಒಂದು ಕುರಿ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ನಾಟಿ ಕೋಳಿ ಕೊಡುವುದಾಗಿ ಆಯೋಜಕರು ತಿಳಿಸಿದ್ದರು.

200 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದು, 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ರು. ಸ್ಪರ್ಧೆಗೆ ಕುಳಿತವ್ರಿಗೆ ಆರಂಭದಲ್ಲಿ ತಲಾ ಅರ್ಧ ಕೆಜಿ ತೂಕದ 2 ಮುದ್ದೆಗಳನ್ನ ನೀಡಲಾಗಿತ್ತು.

ಅದನ್ನ ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡಲಾಗಿತ್ತು. ಸ್ಪರ್ಧೆಗೆ 30 ನಿಮಿಷದವರೆಗೆ ಟೈಂ ನಿಗದಿಪಡಿಸಿದ್ದು, ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ವಿಜೇತರು ಎಂದು ಘೋಷಿಸಲಾಗಿತ್ತು.

ಕೆಲವರು ಮೂರೇ ಮುದ್ದೆಗೆ ಸಾಕಾಯ್ತು ಅಂದ್ರೆ ಇನ್ನೂ ಕೆಲವರು ಆರೇಳು ಮುದ್ದೆ ತಿಂದು ಸುಮ್ಮನಾದ್ರು. ಆದ್ರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಹರೀಶ್ ಅನ್ನೋರು ಮಾತ್ರ ಬರೋಬ್ಬರಿ 13 ಮುದ್ದೆ ಬಾರಿಸಿ ಮೊದಲನೇ ಬಹುಮಾನವಾಗಿದ್ದ ಕುರಿಯನ್ನ ತಮ್ಮದಾಗಿಸಿಕೊಂಡ್ರು.

ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನ ಶ್ರೀನಿವಾಸ್ ಎಂಬುವವರು ಹಾಗೂ ಮೂರನೇ ಬಹುಮಾನವನ್ನ ಆನಂದ್ ಎಂಬುವವರು ಪಡೆದುಕೊಂಡರು. ಈ ಸ್ಪರ್ಧೆ ನೋಡಲೆಂದು ಸರ್ಜಾಪುರದ ಸುತ್ತಮುತ್ತಲ ಕಡೆಗಳಿಂದ ಸಾಕಷ್ಟು ಜನ ಸೇರಿದ್ದರು.

ಬಂದಿದ್ದವರೆಲ್ಲ ನಾಟಿ ಕೋಳಿ ಜೊತೆಗೆ ಮುದ್ದೆಗಳನ್ನ ಬ್ಯಾಟಿಂಗ್ ಮಾಡುತ್ತಿದ್ದ ಸ್ಫರ್ಧಾಳುಗಳಿಗೆ ಕೇಕೆ ಹಾಕಿ ಹುರಿದುಂಬಿಸಿದ್ರು. ಸ್ಪರ್ಧೆಯಲ್ಲಿ ಭಾಗಿಯಾದವ್ರು ಮಾತ್ರ ನಾವು ಗೆಲ್ತೀವೋ ಬಿಡ್ತೀವೋ ಗೊತ್ತಿಲ್ಲ.. ಒಟ್ಟಿನಲ್ಲಿ ಕೊಟ್ಟ ಇನ್ನೂರು ರೂಪಾಯಿ ಎಂಟ್ರಿ ಫೀಸ್ ಗೆ ಮೋಸ ಆಗಬಾರ್ದು ಅಂತ ಸರಿಯಾಗಿ ಬ್ಯಾಟಿಂಗ್ ಮಾಡಿದ್ರು..

ಇತ್ತೀಚೆಗೆ ನಮ್ಮ ದೇಶೀಯ ಅಹಾರ ಪದ್ಧತಿ ಮರೆಯಾಗುತ್ತಿದ್ದು, ಫಾಸ್ಟ್ ಫುಡ್ ನತ್ತ ಜನರು ಮೊರೆ ಹೋಗ್ತಿದ್ದಾರೆ. ಹೀಗಾಗಿ ನಮ್ಮ ಹಳ್ಳಿ ಸೊಗಡಿನ ಆರೋಗ್ಯಕರವಾದ ರಾಗಿ ಮುದ್ದೆಯ ರುಚಿಯನ್ನ ಸಿಲಿಕಾನ್ ಸಿಟಿ ಮಂದಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜನೆ ಮಾಡಿದ್ದ ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನೋ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಭಾಗಿಯಾಗಿ ಭರ್ಜರಿ ಬ್ಯಾಟಿಂಗ್ ಮಾಡಿ ನಾಟಿ ಸ್ಟೈಲ್ ರುಚಿ ಸವಿದಿದ್ದಾರೆ.
























