Updated on: Jan 22, 2023 | 5:39 PM
ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮುದ್ದಿನ ಪುತ್ರಿ ಅಥಿಯಾ ಶೆಟ್ಟಿ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಅದ್ದೂರಿಯಾಗಿ ವಿವಾಹ ಸಮಾರಂಭ ನಡೆಯುತ್ತಿದೆ. ಅಥಿಯಾಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಕ್ರಿಕೆಟರ್ ಕೆಎಲ್ ರಾಹುಲ್ ಜೊತೆಗೆ ಅಥಿಯಾ ಶೆಟ್ಟಿ ಅವರು ಹಸೆಮಣೆ ಏರುತ್ತಿದ್ದಾರೆ. ಖಂಡಾಲದಲ್ಲಿ ಇರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ನಲ್ಲಿ ಮದುವೆ ಮಾಡಲಾಗುತ್ತಿದೆ. ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಜನವರಿ 21ರಿಂದಲೇ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಜನವರಿ 23ರಂದು ಈ ಜೋಡಿ ಹಸೆಮಣೆ ಏರಲಿದೆ. ಆಪ್ತರು ಮತ್ತು ಕುಟುಂಬದವರು ಈ ವಿವಾಹಕ್ಕೆ ಸಾಕ್ಷಿ ಆಗಲಿದ್ದಾರೆ.
2015ರಲ್ಲಿ ಅಥಿಯಾ ಶೆಟ್ಟಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ನಟಿಸಿದ ಮೊದಲ ಸಿನಿಮಾ ‘ಹೀರೋ’. ಆದರೆ ಆ ಚಿತ್ರದಿಂದ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ನಂತರದ ದಿನಗಳಲ್ಲಿ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ.
2018ರಿಂದ ಈಚೆಗೆ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಪ್ರೀತಿಸುತ್ತಿದ್ದಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಫೋಟೋಗಳು ಸಾಕ್ಷಿ ಒದಗಿಸಿವೆ. ಈಗ ಈ ಸೆಲೆಬ್ರಿಟಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ.