- Kannada News Photo gallery Bengaluru Chitra Santhe 2024: more than 1500 Artists and 40,000 Paintings
ಕಲಾಸಕ್ತರ ಕಣ್ಮನ ಸೆಳೆದ ಬೆಂಗಳೂರು 22ನೇ ವರ್ಷದ ಚಿತ್ರ ಸಂತೆ: ಫೋಟೋಸ್ ನೋಡಿ
ಬೆಂಗಳೂರಿನಲ್ಲಿ 22ನೇ ವರ್ಷದ ಚಿತ್ರಸಂತೆ ನಡೆಯಿತು. 22 ರಾಜ್ಯಗಳಿಂದ 1500 ಕಲಾವಿದರು ಭಾಗವಹಿಸಿದ್ದರು. 40,000ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಬಾರಿ ಮಹಿಳೆಯರಿಗೆ ಅರ್ಪಿತವಾದ ಈ ಸಂತೆಯಲ್ಲಿ, ಹೆಣ್ಣುಮಕ್ಕಳ ಜೀವನದ ವಿವಿಧ ಅಂಶಗಳನ್ನು ಚಿತ್ರಿಸುವ ಕಲಾಕೃತಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು. ಚಿತ್ರಗಳ ಜೊತೆಗೆ, ಮಣ್ಣಿನ ಮಡಿಕೆ, ಫೇಸ್ ಪೇಂಟಿಂಗ್ ಮುಂತಾದ ಇತರ ಕಲಾಕೃತಿಗಳು ಜನರನ್ನು ಆಕರ್ಷಿಸಿದವು.
Updated on:Jan 06, 2025 | 8:35 AM

ಬೆಂಗಳೂರಿನಲ್ಲಿ 22ನೇ ವರ್ಷದ ಚಿತ್ರ ಸಂತೆ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ದೇಶ ವಿದೇಶಗಳಿಂದ ಬಂದಿರುವ ಕಲಾವಿದರು ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕೆಲವು ಚಿತ್ರಪಟಗಳು ಮಾರಾಟಕ್ಕೂ ಇದ್ದವು.

ಎಲ್ಲಿ ನೋಡಿದರೂ ಕಣ್ಮನ ಸೆಳೆಯುವ ಚಿತ್ರಗಳು. ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳು ಒಂದಕ್ಕಿಂತ ಒಂದು ಚಂದ. ಹಳ್ಳಿಯ ಸೊಗಡು ಸಾರುವ ಚಿತ್ರಗಳು. ಆರ್ಟ್ ವರ್ಕ್, ಆಯಿಲ್ ಪೇಂಟಿಂಗ್‌ನಿಂದ ಮಾಡಿರುವ ಚಿತ್ರಗಳು ನೋಡುತ್ತಿದ್ದರೆ ನೋಡುತ್ತಾ ಇರಬೇಕು ಅನ್ನಿಸುತ್ತದೆ. ಕಲಾವಿದನ ಕಲೆಗೆ ಸಾಟಿಯೇ ಇಲ್ಲ.

ಶಿವಾನಂದ ವೃತ್ತದಿಂದ ವಿಡ್ಸರ್ ಮ್ಯಾನರ್ವರೆಗೂ 22ನೇ ವರ್ಷದ ಚಿತ್ರ ಸಂತೆ ಆಯೋಜಿಸಲಾಗಿತ್ತು. ಚಿತ್ರ ಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ಚಾಲನೆ ನೀಡಿದ್ದರು. ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಅರ್ಪಣೆ ಮಾಡಲಾಗಿತ್ತು. ಈ ಹಿನ್ನೆಲೆ ಚಿತ್ರ ಕಲಾಪರಿಷತ್ತಿನ ಮುಂಭಾಗದಲ್ಲಿ ಪೇಪರ್ ಬೈಂಡಿಂಗ್‌ನಿಂದ ಬೃಹತ್ ಹೆಣ್ಣು ಮಗುವಿನ ಕಲಾಕೃತಿ ಮಾಡಲಾಗಿತ್ತು.

ಜೊತೆಗೆ ಹೆಣ್ಣು ಮಕ್ಕಳ ಕಷ್ಟ, ಅವರು ನಗು, ಅವರ ದುಃಖ, ಆಸೆ ಹೀಗೆ ಅನೇಕ ಭಾವನೆಗಳು ಒಳಗೊಂಡಿರುವ ಭಾವಚಿತ್ರಗಳು ಕಲಾವಿದನ ಕುಂಚದಿಂದ ಅರಳಿದ್ದವು. 5 ಲಕ್ಷ ರೂಪಾಯಿ ಬೆಲೆ ಬಾಳುವ ಇಬ್ಬರು ಹೆಣ್ಣು ಮಕ್ಕಳ ಚಿತ್ರ ಪ್ರಮುಖ ಆಕರ್ಷಣೆಯಾಗಿತ್ತು. ಆಯಿಲ್ ಪೇಂಟಿಂಗ್‌ನಿಂದ ಮಾಡಿದ್ದ ಈ ಚಿತ್ರ ನೈಜತೆಯನ್ನು ತಿಳಿಸುವಂತಿತ್ತು.

ಈ ಬಾರಿ 22 ರಾಜ್ಯಗಳಿಂದ ಸುಮಾರು 1500ಕ್ಕೂ ಹೆಚ್ಚು ಕಲಾವಿದರು ಚಿತ್ರ ಸಂತೆಗೆ ಆಗಮಿಸಿದ್ದರು. ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಚಿತ್ರ ಸಂತೆಯಲ್ಲಿ ಕರ್ನಾಟಕದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ನಂತರದ ಸ್ಥಾನದಲ್ಲಿವೆ.

ಈ ಹಿನ್ನೆಲೆಯಲ್ಲಿ ಕಲಾ ಪ್ರಿಯರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೇವಲ ಚಿತ್ರಗಳಷ್ಟೇ ಅಲ್ಲ, ಮಣ್ಣಿನ ಮಡಿಕೆ ಮಾಡುವುದು, ಫೇಸ್ ಪೈಂಟಿಂಗ್, ಪೆನ್ಸಿಲ್ ಸ್ಕೆಚ್, ಕೈಗಳ ಮೇಲೆ ಚಿತ್ರ ಬಿಡಿಸುವುದು ಜನರನ್ನು ಆಕರ್ಷಿಸಿದವು.

ಸಂತೆಯಲ್ಲಿ 100 ರೂ.ನಿಂದ 1ಲಕ್ಷವರೆಗಿನ ಕಲಾಕೃತಿಗಳು ಮಾರಾಟಕ್ಕಿದ್ದವು. ವಿವಿಧ ಊರುಗಳಿಂದ ಬರುತ್ತಿರುವ ಕಲಾಪ್ರೇಮಿಗಳು ಕಾಲಾಕೃತಿಗಳನ್ನು ಕೊಂಡುಕೊಳ್ಳುತ್ತಿದ್ದರು. ಇಡೀ ದಿನ ಚಿತ್ರ ಸಂತೆಯಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಕಂಡು ಖುಷಿಪಟ್ಟರು.

ಒಟ್ಟಿನಲ್ಲಿ 22ನೇ ವರ್ಷದ ಚಿತ್ರಸಂತೆಯಲ್ಲಿ ಸಾಕಷ್ಟು ಜನರು ಭಾಗಿಯಾಗಿ ಸಂತಸಪಟ್ಟರು. ಜೊತೆಗೆ ಮಹಿಳಾ ಪ್ರಧಾನವಾದ ಈ ಸಂತೆಗೆ ಬಹಳ ಉತ್ತಮ ಪ್ರತಿಕ್ರಿಯೆ ಕೂಡ ಬಂತು.
Published On - 8:26 am, Mon, 6 January 25



