
ದಶಕಕ್ಕಿಂತ ಹೆಚ್ಚು ಅವಧಿಯ ನಂತರ ಬೆಂಗಳೂರಿನಲ್ಲಿ ವಾರ್ಡ್ ಕಾರ್ಪೊರೇಟರ್ ಚುನಾವಣೆ ನಡೆಯಲು ಸಿದ್ಧತೆಗಳು ಆರಂಭವಾಗಿವೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ರಾಜ್ಯ ಚುನಾವಣಾ ಆಯೋಗ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸಲು ಸಜ್ಜಾಗಿವೆ. ಮೊದಲ ಹಂತವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಪಟ್ಟಿಯಲ್ಲಿ 45,69,193 ಪುರುಷರು, 43,20,583 ಮಹಿಳೆಯರು ಮತ್ತು 1,635 ಇತರೆ ಮತದಾರರ ಹೆಸರುಗಳಿದ್ದು, ವಿವರಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ವಿಧಾನ ಇಲ್ಲಿದೆ. ಹಂತ 1: ಮೊದಲು ವೆಬ್‌ಸೈಟ್‌ನಲ್ಲಿ ಕಾಣಿಸುವ ನೋಟಿಫಿಕೇಶನ್ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.

ಹಂತ 2: ನಂತರ ಹೊಸ ವೆಬ್ ಪುಟ ತೆರೆಯುತ್ತದೆ. ಅಲ್ಲಿ ಮೂರು ಆಯ್ಕೆಗಳು ಕಾಣಿಸುತ್ತವೆ: 1. EPIC (Electors Photo Identity Card) ಸಂಖ್ಯೆ ಮೂಲಕ ಹುಡುಕುವುದು 2. ಹೆಸರಿನ ಮೂಲಕ ಹುಡುಕುವುದು 3. ಮತದಾನ ಕೇಂದ್ರವಾರು ಹುಡುಕುವುದು ಈ ಆಯ್ಕೆಗಳಲ್ಲಿ ಯಾವುದನ್ನಾದರೂ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು.

EPIC ಸಂಖ್ಯೆ ಇಲ್ಲದಿದ್ದರೆ Search by Name (ಹೆಸರು ಬಳಸಿ ಹುಡುಕು) ಆಯ್ಕೆ ಬಳಸಬಹುದು. ಅಲ್ಲಿ ಈ ವಿವರಗಳನ್ನು ನಮೂದಿಸಬೇಕು: 1. ಕಾರ್ಪೊರೇಷನ್ (ಬೆಂಗಳೂರು ನಾರ್ತ್, ಈಸ್ಟ್, ವೆಸ್ಟ್, ಸೌತ್ ಅಥವಾ ಸೆಂಟ್ರಲ್) 2. ವಾರ್ಡ್ ಹೆಸರು 3. ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳು 4. ತಂದೆ/ತಾಯಿ/ಪತಿ ಹೆಸರಿನ ಮೊದಲ ನಾಲ್ಕು ಅಕ್ಷರಗಳು 5. ವಯಸ್ಸು 6. ಜನ್ಮ ದಿನಾಂಕ (ತಿಂಗಳು/ದಿನ/ವರ್ಷ)

ಮೂರನೇ ಆಯ್ಕೆ ಮತದಾನ ಕೇಂದ್ರವಾರು ಹುಡುಕುವುದು ಸ್ವಲ್ಪ ಕಷ್ಟಕರವಾಗಿದೆ. ಈ ವಿಧಾನದಲ್ಲಿ ಹುಡುಕಲು ಮೊದಲು ಕಾರ್ಪೊರೇಷನ್ ಹೆಸರು (ಬೆಂಗಳೂರು ನಾರ್ತ್, ಸೌತ್, ಈಸ್ಟ್, ವೆಸ್ಟ್ ಅಥವಾ ಸೆಂಟ್ರಲ್), ವಾರ್ಡ್ ಹೆಸರು ಹಾಗೂ ಪೋಲಿಂಗ್ ಸ್ಟೇಷನ್ ಹೆಸರು ತಿಳಿದಿರಬೇಕು. ಬಳಿಕ ಪಿಡಿಎಫ್ ರೂಪದಲ್ಲಿ ಮತದಾರರ ಪಟ್ಟಿಯನ್ನು ನೀಡಲಾಗುತ್ತದೆ. ಆ ಪಟ್ಟಿಯಲ್ಲಿ ಬಳಕೆದಾರರು ಪುಟಗಳನ್ನು ಸ್ವತಃ ಸ್ಕ್ರೋಲ್ ಮಾಡಿ ತಮ್ಮ ಹೆಸರನ್ನು ಹುಡುಕಬೇಕಾಗುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸದಿದ್ದರೆ ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ (NVSP) ವೆಬ್‌ಸೈಟ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಹೊಸದಾಗಿ ಹೆಸರು ನೋಂದಾಯಿಸಬಹುದು. ಇದರ ಜೊತೆಗೆ ಸಮೀಪದ ಪಾಲಿಕೆ ಕಚೇರಿ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಫಾರ್ಮ್–4 (ಹೆಸರು ಸೇರ್ಪಡೆ), ಫಾರ್ಮ್–5 (ಆಕ್ಷೇಪಣೆ), ಫಾರ್ಮ್–6 (ತಿದ್ದುಪಡಿ), ಫಾರ್ಮ್–7 (ವಾಸಸ್ಥಳ ಬದಲಾವಣೆ) ಹಾಗೂ ಫಾರ್ಮ್–8 (ಹೆಸರು ಅಳಿಸುವಿಕೆ) ಪಡೆಯಬೇಕು. ವಿವರಗಳನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಮಾರ್ಚ್ ಮಧ್ಯದಲ್ಲಿ ಪ್ರಕಟಿಸುವ ನಿರೀಕ್ಷೆಯಿರುವುದರಿಂದ ಸಾಧ್ಯವಾದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
Published On - 12:40 pm, Mon, 16 March 26