Bangalore Rains: ಬೆಂಗಳೂರು ಮಳೆ; ವರುಣನಿಂದ ಸೃಷ್ಟಿಯಾದ ಅವಾಂತರಗಳು ಒಂದಾ ಎರಡಾ, 206 ಮರಗಳು ಧರಾಶಾಹಿ
ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಮರಗಳು ಬಿದ್ದಿದ್ದು ವಾಹನಗಳು ಜಖಂಗೊಂಡಿವೆ. ಮಳೆ ನೀರು ರಸ್ತೆಯಲ್ಲಿ ನಿಂತು ನದಿಯಂತಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ನಿದ್ದೆ ಮಾಡದೆ ನೀರು ಹೊರ ಹಾಕಿದ್ದಾರೆ.
Updated on:Jun 03, 2024 | 9:19 AM

ಬೆಂಗಳೂರಲ್ಲಿ ನಿನ್ನೆ ಬೆಳಗ್ಗೆ ಸೂರ್ಯನ ಅಬ್ಬರ ಜೋರಾಗಿತ್ತು. ಇನ್ನೇನು ಮಳೆ ಬರಲ್ಲ ಎಂದು ವೀಕೆಂಡ್ ಮೂಡ್ಗೆ ಜಾರಿದ್ದ ಜನರಿಗೆ ವರುಣರಾಯ ಶಾಕ್ ನೀಡಿದ್ದಾನೆ. ಬೆಂಗಳೂರು ನಗರದಲ್ಲಿ 110.7 ಮಿಲಿ ಮೀಟರ್ ಮಳೆಯಾಗಿದೆ. ಬೆಂಗಳೂರಿನಾದ್ಯಂತ ಮಳೆಯಿಂದ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ 206 ಮರಗಳು ಧರೆಗುರುಳಿವೆ. ನಿನ್ನೆ ರಾತ್ರಿ 8 ಗಂಟೆ ವೇಳೆಗೆ 118 ಮರಗಳು ಧರೆಗುರುಳಿದ್ದವು.

ಬಿರುಗಾಳಿ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಬಸವೇಶ್ವರನಗರದಲ್ಲಿ ಮರದ ಕೊಂಬೆ ಬಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ. ಜಯನಗರದಲ್ಲಿ ಮರದ ಕೊಂಬೆ ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಕೋರಮಂಗಲ ಬಳಿ ವಿದ್ಯುತ್ ಕಂಬ, ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.

ಗಿರಿನಗರದ 13ನೇ ಕ್ರಾಸ್ನಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದ್ದರಿಂದ ಕಾರು ನಜ್ಜುಗುಜ್ಜಾಗಿದ್ವು. ಮರದಡಿ ಸಿಲುಕಿ 2 ಬೈಕ್ಗಳು ಜಖಂ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಾಮಕೃಷ್ಣ ಆಶ್ರಮ ಬಳಿ ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ.

ಮಳೆಯ ಎಫೆಕ್ಟ್ ನಮ್ಮ ಮೆಟ್ರೋಗೂ ತಟ್ಟಿದೆ. ಟ್ರಿನಿಟಿ ನಿಲ್ದಾಣ ಹಾಗೂ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ಟ್ರ್ಯಾಕ್ ಮೇಲೆ ಮರದ ಕೊಂಬೆ ಮುರಿದು ಬಿದಿತ್ತು. ಇದ್ರಿಂದ ಟ್ರಿನಿಟಿ-ಎಂಜಿ ರಸ್ತೆ ನಡುವಿನ ಸಂಪರ್ಕಕ್ಕೆ ಬ್ರೇಕ್ ಬಿದ್ದಿತ್ತು. ಸದ್ಯ ಸಿಬ್ಬಂದಿ ತಡರಾತ್ರಿ ಮರದ ಕೊಂಬೆಗಳನ್ನು ತೆರವು ಮಾಡಿದ್ದಾರೆ. ಇಂದು ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಇರಲಿದೆ. ಎಂದಿನಂತೆ ವೈಟ್ಫೀಲ್ಡ್-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ.

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಗಾಂಧಿ ಬಜಾರ್ ಕೋಆಪರೇಟಿವ್ ಬ್ಯಾಂಕ್ ಬಳಿ ಮರಗಳು ಧರೆಗುರುಳಿವೆ. ತುಮಕೂರು ರಿಜಿಸ್ಟ್ರೇಷನ್ ಹೊಂದಿರುವ ಐ-10 ಕಾರು ಜಖಂಗೊಂಡಿದೆ. ಮಳೆ ಆರ್ಭಟಕ್ಕೆ ಶಿವಾನಂದ ಸರ್ಕಲ್ನ ರೈಲ್ವೆ ಅಂಡರ್ ಪಾಸ್ನಲ್ಲಿ ಜಲಪಾತವೇ ಸೃಷ್ಟಿಯಾಗಿತ್ತು. ಕ್ಷಣಾರ್ಧದಲ್ಲಿ ಅಂಡರ್ ಪಾಸ್ನಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಇದೇ ವೇಳೆ ಬಂದ ಬಿಎಂಟಿಸಿ ಬಸ್ ಒಳಗೆ ನೀರು ನುಗ್ಗಿಕೆಟ್ಟು ನಿಲ್ತು. 20ಕ್ಕೂ ಹೆಚ್ಚು ಪ್ರಯಾಣಿಕರು ಪಾರಾದ್ರು.

ರಣಮಳೆಗೆ ಸ್ಮಾರ್ಟ್ ಸಿಟಿ, ಬ್ರ್ಯಾಂಡ್ ಬೆಂಗಳೂರಿನ ಬಂಡವಾಳ ಬಯಲಾಯ್ತು. ಯಾವ ರಸ್ತೆಗೆ ಕಾಲಿಟ್ರೂ ನೀರು ಪ್ರವಾಹದಂತೆ ಹರೀತಿತ್ತು. ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ ಮಂಡಿಯುದ್ದ ಅಡಿಯಷ್ಟು ನೀರು ನಿಂತಿತ್ತು. ಇಡೀ ರಸ್ತೆಗಳೇ ನದಿಯಂತಾಗಿದ್ವು.

ವರುಣಾರ್ಭಟಕ್ಕೆ ಹೈರಾಣಾಗಿದ್ದು ಬೈಕ್ ಸವಾರರು. ಸೈಲೆನ್ಸರ್ಗೆ ನೀರು ನುಗ್ಗಿ ಹತ್ತಾರು ವಾಹನಗಳು ಕೆಟ್ಟು ನಿಂತಿವು. ಸವಾರರು ಮಳೆಯಲ್ಲೇ ಗಾಡಿಗಳನ್ನ ತಳ್ಳುತ್ತಾ ಹೆಣಗಾಡಿದ್ರು. ಇನ್ನೂ ಕೆ.ಪಿ.ಅಗ್ರಹಾರದ ಕಲ್ಯಾಣಿ ರಸ್ತೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ರು.
Published On - 7:23 am, Mon, 3 June 24




