Updated on:Jun 25, 2023 | 7:53 AM
ವರ್ಷದ 365 ದಿನಗಳಲ್ಲೂ ದಟ್ಟ ಮಂಜಿನಿಂದ ಕೂಡಿದ ರಾಜ್ಯದ ಏಕೈಕ ಪ್ರವಾಸಿ ತಾಣ ಅಂದರೇ ಅದು ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಚುಮು ಚುಮು ಚಳಿಯ ನಡುವೆ ಗೋಪಾಲಸ್ವಾಮಿ ಬೆಟ್ಟ ಮಂಜಿನಿಂದ ಆವರಿಸಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಎಲ್ಲಿ ನೋಡಿದರು ಹಸಿರು ಹೊದಿಕೆ ಹೊದ್ದಿರುವ ಬೆಟ್ಟ, ಹಸಿರು ಬೆಟ್ಟಕ್ಕೆ ಮುತ್ತಿಡುತ್ತಿರುವ ಮಂಜು. ಚುಮು ಚುಮು ಚಳಿಗೆ ಮೈಯೊಡ್ಡಿ ಖುಷಿಯಲ್ಲಿರುವ ಪ್ರವಾಸಿಗರು. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಈ ಪ್ರಶಾಂತವಾದ ವಾರವರಣಲ್ಲಿ ಒಂದು ಬಾರಿ ಸುತ್ತಾಡಿದರೆ ಸಾಕು ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ತರುತ್ತದೆ. ಇಂತಹ ಪ್ರಶಾಂತವಾದ ವಾತಾವರಣ ನೋಡಬೇಕು ಅಂದರೇ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲೇಬೇಕು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಭಾರತದ ಸ್ವಿಜರ್ಲ್ಯಾಂಡ್ ಎಂದೆ ಕರೆಸಿಕೊಳ್ಳುತ್ತೆ. ಸದ್ಯ ಭಾರತದ ಈ ಸ್ವಿಜರ್ಲ್ಯಾಂಡ್ ನೋಡೋಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 3769 ಅಡಿ ಎತ್ತರದಲ್ಲಿದೆ. ಜೋಳರ ಕಾಲದ ಇತಿಹಾಸ ವಿರುವ ಗೋಪಾಲ ಸ್ವಾಮಿ ದೇವಾಲಯವನ್ನ 1315ರಲ್ಲಿ ನಿರ್ಮಿಸಲಾಗಿದೆ.
ಋತುಮಾನಗಳ ಬೆರಗಿಗೆ ಬೆರಗಾಗುವ ಈ ಪ್ರಕೃತಿ ಸೊಬಗಿನ ಈ ಪುಣ್ಯ ಕ್ಷೇತ್ರದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ವಿಶಾಲ ಹುಲ್ಲುಗಾವಲು, ಸುಂದರವಾದ ಅರಣ್ಯ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಆಕಾಶವನ್ನೇ ಹೊತ್ತು ನಿಂತಿರುವ ಹಾಗೆ ಕಾಣುತ್ತದೆ. ಸದ್ಯ ಪ್ರವಾಸಿಗರು ಬೆಟ್ಟಕ್ಕೆ ಬಂದು ಎಂಜಾಯ್ ಮಾಡುತ್ತಿದ್ದಾರೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ಎಲ್ಲರ ಅಚ್ಚು ಮೆಚ್ಚಿನ ತಾಣ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ.
ವೀಕೆಂಡ್ನಲ್ಲಂತೂ ಪ್ರವಾಸಿಗರಿಂದ ಗೋಪಾಲಸ್ವಾಮಿ ಬೆಟ್ಟ ಫುಲ್ ರಶ್ ಆಗಿರುತ್ತದೆ. ದೂರದೂರಿನಿಂದ ತಮ್ಮ ಖಾಸಗಿ ವಾಹನದಲ್ಲಿ ಬರುವ ಪ್ರವಾಸಿಗರು ಬೆಟ್ಟದ ತಪ್ಪಲಿ ವಾಹನ ಪಾರ್ಕ್ ಮಾಡಿ, ಬಸ್ ಮೂಲಕವೆ ಬೆಟ್ಟಕ್ಕೆ ತೆರಳಬೇಕು.
ಸದ್ಯ ಸಾಕಷ್ಟು ಸಂಖ್ಯೆಯಲ್ಲಿ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸುತಿದ್ದು, ಸದ್ಯ ಆಷಾಡ ಮಾಸದ ಚಳಿಯ ಜೊತೆ ಆಗಾಗ ಮುಂಗಾರಿನ ಸಿಂಚನ ಕೂಡ ಆಗುತ್ತದೆ.
Published On - 7:52 am, Sun, 25 June 23