- Kannada News Photo gallery Chitradurga Challakere's Tipperudra Swamy Rathotsava: A Lavish Celebration
ಚಿತ್ರದುರ್ಗ: ತಿಪ್ಪೇರುದ್ರಸ್ವಾಮಿ ಅದ್ಧೂರಿ ರಥೋತ್ಸವ, ಕ್ವಿಂಟಾಲ್ ಗಟ್ಟಲೆ ಕೊಬ್ಬರಿ ಸುಟ್ಟು ಹರಕೆ ತೀರಿಸಿದ ಭಕ್ತರು
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಸಂತ ತಿಪ್ಪೇರುದ್ರಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು. ಲಕ್ಷಾಂತರ ಭಕ್ತರು ಭಾಗವಹಿಸಿದರು. 63 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜಾಯಿತು. ಭಕ್ತರು ಕೊಬ್ಬರಿ ಸುಟ್ಟು ಹರಕೆ ತೀರಿಸಿದರು. ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಜಾತ್ರೆ ಸಂತಾನ ಭಾಗ್ಯ ಮತ್ತು ಇತರ ಕಷ್ಟಗಳಿಗೆ ಪರಿಹಾರ ನೀಡುತ್ತದೆ ಎಂಬುದು ಭಕ್ತರ ನಂಬಿಕೆ.
Updated on: Mar 17, 2025 | 8:14 AM

ಕೋಟೆನಾಡು ಚಿತ್ರದುರ್ಗದ ಜನರ ಆರಾಧ್ಯ ದೈವ ಸಂತ ತಿಪ್ಪೇರುದ್ರಸ್ವಾಮಿ ಜಾತ್ರೆ ಸಂಭ್ರಮದಿಂದ ಜರುಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ರವಿವಾರ (ಮಾ.16) ನಡೆದ ಸಂತ ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾದ್ದರು.

15-16ನೇ ಶತಮಾನದಲ್ಲಿ ಲೋಕಸಂಚಾರ ಹೊರಟಿದ್ದ ಸಂತ ತಿಪ್ಪೇರುದ್ರಸ್ವಾಮಿ ನಾಯಕನಹಟ್ಟಿಗೆ ಆಗಮಿಸುತ್ತಾರಂತೆ. ಆಗ ಭೀಕರ ಬರಗಾಲದಿಂದ ಈ ಭಾಗದ ಜನ ತತ್ತರಿಸಿರುವುದು ಕಂಡು ಹಲವು ಪರಿಹಾರ ನೀಡುತ್ತಾರೆ. ಏಳು ಕೆರೆಗಳನ್ನು ನಿರ್ಮಿಸಿ ಜನರಿಗೆ ನೆರವಾಗುತ್ತಾರೆ. ಹಲವು ಪವಾಡಗಳನ್ನು ಸೃಷ್ಠಿಸುತ್ತಾರೆ. 'ಮಾಡಿದಷ್ಟು ನೀಡು ಭೀಕ್ಷೆ' ಎಂದು ಸಾರುವ ಮೂಲಕ ಕಾಯಕ ತತ್ವ ಹೇಳುತ್ತಾರೆ. ಜನರ ಕಷ್ಟಗಳಿಗೆ ಪರಿಹಾರ ನೀಡಿದ ಸಂತ ತಿಪ್ಪೇರುದ್ರಸ್ವಾಮಿ ದೈವತ್ವಕ್ಕೆ ಏರಿದ್ದಾರೆ.

ನೂರಾರು ವರ್ಷಗಳಿಂದ ಪ್ರತಿವರ್ಷ ಪವಾಡ ಪುರುಷ ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯುತ್ತಿದೆ. ಅದರಂತೆ ಈ ವರ್ಷವೂ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ಲಕ್ಷಾಂತರ ಜನ ಭಕ್ತರು ಭಾಗಿಯಾಗಿ ಕೃತಾರ್ಥರಾದರು. ಪ್ರತಿವರ್ಷ ರಥೋತ್ಸವಕ್ಕೂ ಮುನ್ನ 'ಮುಕ್ತಿ ಬಾವುಟ' ಹರಾಜು ಪ್ರಕ್ರಿಯೆ ನಡೆಯುತ್ತದೆ. ಈ ಸಲ ಬೆಂಗಳೂರಿನ ಉದ್ಯಮಿ ತೇಜಸ್ವಿ ಆರಾಧ್ಯ 63ಲಕ್ಷ ರೂಪಾಯಿಗೆ ಸಾಂಪ್ರದಾಯಿಕ ಮುಕ್ತಿ ಬಾವುಟ ಪಡೆದರು.

ಮತ್ತೊಂದು ಕಡೆ ದೇಗುಲದ ಬಳಿಯಲ್ಲಿ ಭಕ್ತರು ಕೊಬ್ಬರಿ ಸುಟ್ಟು ಹರಕೆ ತೀರಿಸಿದರು. ನಾಯಕನಹಟ್ಟಿಗೆ ಸಂತ ತಿಪ್ಪೇರುದ್ರಸ್ವಾಮಿಗಳು ಬರುವ ಸಂದರ್ಭದಲ್ಲಿ ಕತ್ತಲು ಆವರಿಸಿತ್ತಂತೆ. ಹೀಗಾಗಿ, ಕೊಬ್ಬರಿ ಸುಟ್ಟು, ಆ ಬೆಳಕಿನಲ್ಲಿ ಭಕ್ತರು ಸಂತ ತಿಪ್ಪೇರುದ್ರಸ್ವಾಮಿ ಕರೆದುಕೊಂಡು ಬರುತ್ತಾರಂತೆ. ಹೀಗಾಗಿ, ಇಂದಿಗೂ ಜಾತ್ರೆ ವೇಳೆ ಭಕ್ತರು ಕೊಬ್ಬರಿ ಸುಟ್ಟು ಬೆಳಗುವ ಮೂಲಕ ಹರಕೆ ತೀರಿಸುತ್ತಾರೆ. ಸಂತಾನ ಭಾಗ್ಯ, ಕಂಕಣ ಭಾಗ್ಯ ಸೇರಿ ಇತರೆ ಕಷ್ಟ ಕಾರ್ಪಣ್ಯಗಳಿಗೆ ಸಂತ ತಿಪ್ಪೇರುದ್ರಸ್ವಾಮಿ ಇಂದಿಗೂ ಪರಿಹಾರ ನೀಡುತ್ತಾನೆಂಬುದು ಭಕ್ತರ ನಂಬಿಕೆ.

ಇನ್ನು ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು. ಇಷ್ಟೇ ಅಲ್ಲದೇ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅಂತ ಬ್ಯಾನರ್ ಹಾಕಿದರು. ಬಾಳೆಹಣ್ಣಿನ ಮೇಲೆ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅಂತ ಬರೆದು ರಥಕ್ಕೆ ಎಸೆದರು. ರಥೋತ್ಸವದಲ್ಲಿ ಸಚಿವ ಡಿ ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕ ಟಿ ರಘುಮೂರ್ತಿ, ಕೆ ಸಿ ವಿರೇಂದ್ರ, ಮಾಜಿ ಸಚಿವ ಬಿ ಶ್ರೀರಾಮುಲು ಭಾಗಿಯಾಗಿ ದರ್ಶನ ಪಡೆದರು.

ಒಟ್ಟಾರೆಯಾಗಿ ಕೋಟೆನಾಡಿನ ನಾಯಕನಹಟ್ಟಿಯಲ್ಲಿ ಸಾಂಪ್ರದಾಯಿಕ ಅದ್ಧೂರಿ ಜಾತ್ರೆ ನಡೆದಿದೆ. ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆ, ಆಂಧ್ರದಿಂದಲೂ ಭಕ್ತರು ಆಗಮಿಸಿದ್ದರು. ಲಕ್ಷಾಂತರ ಜನರು ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು.



