ಐಪಿಎಲ್ ಸೀಸನ್ 15 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಆದರೆ ಐಪಿಎಲ್ ಆರಂಭದ ಬೆನ್ನಲ್ಲೇ ಕೆಲ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಇನ್ನು ಈಗಾಗಲೇ ಗುಜರಾತ್ ಟೈಟನ್ಸ್ ತಂಡದಿಂದ ಬಯೋಬಬಲ್ ಸಮಸ್ಯೆಯ ಕಾರಣ ನೀಡಿ ಜೇಸನ್ ರಾಯ್ ಹೊರನಡೆದಿದ್ದಾರೆ. ಅವರ ಬದಲಿ ಆಟಗಾರನಾಗಿ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಆಯ್ಕೆಯಾಗಿದ್ದಾರೆ.
ಹೀಗೆ ಐಪಿಎಲ್ ಆರಂಭದ ವೇಳೆಗೆ ಗಾಯದ ಅಥವಾ ಇನ್ನಿತರ ಕಾರಣಗಳನ್ನು ನೀಡಿ ಆಟಗಾರರು ಹೊರಗುಳಿದರೆ, ಮೆಗಾ ಹರಾಜು ಪಟ್ಟಿಯಲ್ಲಿ ಅನ್ಸೋಲ್ಡ್ ಆಗಿರುವ ಆಟಗಾರರನ್ನು ಬದಲಿ ಆಟಗಾರರಾಗಿ ಆಯ್ಕೆ ಮಾಡಬಹುದು. ಅದರಂತೆ ಐಪಿಎಲ್ನಲ್ಲಿ ಬದಲಿ ಆಟಗಾರರಾಗಿ ಕಂಬ್ಯಾಕ್ ಮಾಡಬಲ್ಲ 5 ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ..
1- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 112 ಪಂದ್ಯಗಳಿಂದ 3299 ರನ್ ಗಳಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಎಸ್ಆರ್ಹೆಚ್ ಪರ 13 ಪಂದ್ಯಗಳನ್ನು ಆಡಿದ್ದರು.
2- ರಜತ್ ಪಾಟಿದಾರ್: ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ್ದ ರಜತ್ ಪಾಟಿದಾರ್ ಈ ಬಾರಿ ಅನ್ಸೋಲ್ಡ್ ಆಗಿದ್ದಾರೆ. ದೇಶೀಯ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಪಾಟಿದಾರ್ ಮಧ್ಯಮ ಕ್ರಮಾಂಕದ ಭಾರತೀಯ ಬ್ಯಾಟರ್ ಆಗಿ ಬದಲಿ ಆಯ್ಕೆಯಾಗಬಹುದು.
3- ಡೇವಿಡ್ ಮಲಾನ್: ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟರ್ ಎನಿಸಿಕೊಂಡಿರುವ ಡೇವಿಡ್ ಮಲಾನ್ ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆದರೆ ಈ ಬಾರಿ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಇದಾಗ್ಯೂ ಈ ಬಾರಿ ಪ್ರಮುಖ ಆಟಗಾರರು ಹೊರಬಿದ್ದರೆ, ಎಡಗೈ ಬ್ಯಾಟ್ಸ್ಮನ್ ಡೇವಿಡ್ ಮಲಾನ್ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.
4- ಕ್ರಿಸ್ ಲಿನ್: ಟಿ20 ಕ್ರಿಕೆಟ್ನ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಲಿನ್ ಈ ಬಾರಿ ಹರಾಜಾಗದೇ ಉಳಿದಿರುವುದು ಅಚ್ಚರಿ. ಈಗಾಗಲೇ ಐಪಿಎಲ್ನಲ್ಲಿ ಆರಂಭಿಕನಾಗಿ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿರುವ ಲಿನ್ ಕಳೆದ ಸೀಸನ್ನಲ್ಲಿ ಮುಂಬೈ ಪರ ಆಡಿದ್ದರು. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 42 ಪಂದ್ಯಗಳಿಂದ 1329 ರನ್ ಗಳಿಸಿದ್ದಾರೆ. ಹೀಗಾಗಿ ಬದಲಿ ಆಟಗಾರನಾಗಿ ಕ್ರಿಸ್ ಲಿನ್ ಮತ್ತೊಮ್ಮೆ ಐಪಿಎಲ್ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
5- ಸುರೇಶ್ ರೈನಾ: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಅದರಲ್ಲೂ ಸಿಎಸ್ಕೆ ತಂಡವು ರೈನಾ ಅವರನ್ನು ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿರುವ ರೈನಾ ಅವರು ಮತ್ತೆ ಕಂಬ್ಯಾಕ್ ಮಾಡಬಹುದು. ಏಕೆಂದರೆ ಕಂಪ್ಲೀಟ್ ಟೀಮ್ ಪ್ಲೇಯರ್ ಎನಿಸಿಕೊಂಡಿರುವ ರೈನಾ ಈ ಹಿಂದೆ ಹಲವು ಬಾರಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟ ಆಟಗಾರ. ಅಲ್ಲದೆ ಅನುಭವಿ ಆಟಗಾರನಾಗಿರುವ ಕಾರಣ, ಸುರೇಶ್ ರೈನಾ ಅವರನ್ನು ತಂಡದ ಸಮತೋಲನಕ್ಕಾಗಿ ಬದಲಿ ಆಟಗಾರನಾಗಿ ಯಾವುದಾದರೂ ತಂಡ ಖರೀದಿಸಬಹುದು.