Updated on: Dec 07, 2024 | 8:25 AM
ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 15 ಬಾರಿ 5 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ ಹದಿನೈದನೇ 5 ವಿಕೆಟ್ಗಳು ಮೂಡಿಬಂದಿರುವುದು ಬರೋಬ್ಬರಿ 535 ದಿನಗಳ ನಂತರ ಎಂಬುದು ವಿಶೇಷ.
ಅಂದರೆ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಕಬಳಿಸದೇ ಒಂದು ವರ್ಷದ ಮೇಲಾಗಿತ್ತು. ಕೊನೆಯ ಬಾರಿ ಅವರು 2023 ರಲ್ಲಿ ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದಿದ್ದರು. ಇದಾದ ಬಳಿಕ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿಯೇ ಸ್ಟಾರ್ಕ್ ಅವರ ಸ್ಪಾರ್ಕ್ ಮಾಯವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಅಡಿಲೇಡ್ನಲ್ಲಿ ನಡೆದ ಭಾರತದ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತೆ ಮಿಂಚಿನ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದ ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಪಡೆದು ಶುಭಾರಂಭ ಮಾಡಿದ ಸ್ಟಾರ್ಕ್ 14.1 ಓವರ್ಗಳಲ್ಲಿ 48 ರನ್ ನೀಡಿ 6 ವಿಕೆಟ್ ಉರುಳಿಸಿದ್ದಾರೆ.
ಇದರೊಂದಿಗೆ ಒಂದು ವರ್ಷದಿಂದ ಐದು ವಿಕೆಟ್ಗಳ ಗುಚ್ಛದ ಬರ ಎದುರಿಸುತ್ತಿದ್ದ ಸ್ಟಾರ್ಕ್ ಮತ್ತೆ ಲಯಕ್ಕೆ ಮರಳಿದಂತಾಗಿದೆ. ಈ ಐದು ವಿಕೆಟ್ಗಳೊಂದಿಗೆ ಮಿಚೆಲ್ ಸ್ಟಾರ್ಕ್ ತಮ್ಮ ಟೆಸ್ಟ್ ವಿಕೆಟ್ಗಳ ಸಂಖ್ಯೆಯನ್ನು 367 ಕ್ಕೇರಿಸಿದ್ದು, ಈ ಮೂಲಕ 400 ವಿಕೆಟ್ಗಳ ಸಾಧಕರ ಪಟ್ಟಿಗೆ ದಾಂಗುಡಿ ಇಟ್ಟಿದ್ದಾರೆ.
ಇನ್ನು ಮಿಚೆಲ್ ಸ್ಟಾರ್ಕ್ ಅವರ ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 180 ರನ್ಗಳಿಸಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ. ಈ ಮೂಲಕ ಆಸೀಸ್ ಪಡೆ ಪ್ರಥಮ ಇನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ.