- Kannada News Photo gallery Cricket photos Abhishek Sharma Nears Virat Kohli's T20 Record in Asia Cup 2025 Final vs Pakistan
ಏಷ್ಯಾಕಪ್ ಫೈನಲ್‌ನಲ್ಲಿ ಕಿಂಗ್ ಕೊಹ್ಲಿಯ ಶ್ರೇಷ್ಠ ದಾಖಲೆ ಮುರಿಯಲಿದ್ದಾರೆ ಅಭಿಷೇಕ್ ಶರ್ಮಾ
India vs Pakistan final: 2025ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಪಾಕ್ ಎದುರಾಗಿದ್ದು, ಅಭಿಷೇಕ್ ಶರ್ಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸತತ ಮೂರು ಅರ್ಧಶತಕಗಳೊಂದಿಗೆ 309 ರನ್ ಗಳಿಸಿರುವ ಶರ್ಮಾ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ವಿರಾಟ್ ಕೊಹ್ಲಿ ಅವರ 319 ರನ್ ದಾಖಲೆ ಮುರಿಯಲು ಕೇವಲ 11 ರನ್‌ಗಳ ಅಗತ್ಯವಿದ್ದು, ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.
Updated on: Sep 27, 2025 | 5:45 PM

2025 ರ ಏಷ್ಯಾಕಪ್ ಫೈನಲ್ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮೇಲೆ ಎಲ್ಲರ ಕಣ್ಣು ಇರುತ್ತದೆ. ಏಕೆಂದರೆ ಪ್ರಸ್ತುತ ಅವರ ಫಾರ್ಮ್ ಅನ್ನು ಗಮನಿಸಿದರೆ ಪಾಕಿಸ್ತಾನ ವಿರುದ್ಧ ಅವರು ಮತ್ತೊಮ್ಮೆ ಅಬ್ಬರಿಸುವ ಸಾಧ್ಯತೆಗಳಿವೆ. ಇದರ ಜೊತೆಗೆ ದಾಖಲೆ ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಾರೆ.

ಈ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡಿರುವ ಆಟಗಾರನೆಂದರೆ ಅದು ಅಭಿಷೇಕ್ ಶರ್ಮಾ. ಭಾರತಕ್ಕೆ ಮಾತ್ರವಲ್ಲದೆ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಫೈನಲ್‌ಗೆ ಮುನ್ನ ನಡೆದ ಮೂರು ಪಂದ್ಯಗಳಲ್ಲಿಯೂ ಅವರು ಸತತ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.

ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲು ಅಭಿಷೇಕ್ ಶರ್ಮಾ ಕೇವಲ 11 ರನ್‌ಗಳ ದೂರದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ್ದು, ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ 309 ರನ್ ಗಳಿಸಿದ್ದಾರೆ. ಇದೀಗ ಒಂದೇ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಸನಿಹದಲ್ಲಿದ್ದಾರೆ.

ವಾಸ್ತವವಾಗಿ ಒಂದೇ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2014 ರ ಟಿ20 ವಿಶ್ವಕಪ್‌ನಲ್ಲಿ 319 ರನ್ ಬಾರಿಸಿದ್ದ ಕೊಹ್ಲಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ 11 ರನ್ ಗಳಿಸಿದ ತಕ್ಷಣ ಟಿ20 ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಲಿದ್ದಾರೆ.

ಪ್ರಸ್ತುತ, ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ಎರಡನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಹಾಲಿ ಆರಂಭಿಕ ಅಭಿಷೇಕ್ ಮೂರನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಆರೋನ್ ಫಿಂಚ್ 4ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಐದು ಮತ್ತು ಆರನೇ ಸ್ಥಾನದಲ್ಲಿ ಕ್ರಮವಾಗಿ ಬಾಬರ್ ಆಝಂ ಹಾಗೂ ಮಹೇಲ ಜಯವರ್ಧನೆ ಇದ್ದಾರೆ.




