- Kannada News Photo gallery Cricket photos Abhishek Sharma: New ICC T20 Ranking History & Asia Cup Dominance
ICC T20 Ranking: ಟಿ20 ರ್ಯಾಂಕಿಂಗ್ನಲ್ಲಿ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
ICC T20 Ranking: ಏಷ್ಯಾಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅಭಿಷೇಕ್ ಶರ್ಮಾ ಐಸಿಸಿ ಟಿ20 ಶ್ರೇಯಾಂಕದಲ್ಲಿ 900 ರೇಟಿಂಗ್ ಅಂಕಗಳನ್ನು ದಾಟಿದ್ದಾರೆ. ಈ ಮೂಲಕ 900 ಅಂಕಗಳನ್ನು ದಾಟಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ನಂ. 1 ಸ್ಥಾನದಲ್ಲಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರೇಟಿಂಗ್ ಪಡೆದ ಟಿ20 ಬ್ಯಾಟ್ಸ್‌ಮನ್ ಆಗುವ ಸಾಧ್ಯತೆಯಿದೆ.
Updated on: Sep 24, 2025 | 4:13 PM

ಏಷ್ಯಾಕಪ್‌ನಲ್ಲಿ ರನ್ಗಳ ಮಳೆ ಹರಿಸುತ್ತಿರುವ ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಐಸಿಸಿ ಟಿ20 ಶ್ರೇಯಾಂಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಭಿಷೇಕ್ ತಮ್ಮ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೆ ಈಗ ರೇಟಿಂಗ್ ಪಾಯಿಂಟ್‌ಗಳಲ್ಲಿ 900 ಅಂಕಗಳನ್ನು ದಾಟಿದ್ದಾರೆ. ಈ ಮೂಲಕ ಅಭಿಷೇಕ್ ಶರ್ಮಾ 900 ಅಂಕಗಳನ್ನು ದಾಟಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇನ್ನು ಭಾರತದ ಪರ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ 912 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕೂಡ 909 ರೇಟಿಂಗ್ ಪಾಯಿಂಟ್ ಹೊಂದಿದ್ದರು. ಇದೀಗ ಅಭಿಷೇಕ್ 907 ರೇಟಿಂಗ್ ಪಾಯಿಂಟ್ ಕಲೆಹಾಕಿದ್ದಾರೆ.

ಇದು ಮಾತ್ರವಲ್ಲದೆ ಅಭಿಷೇಕ್ ಶರ್ಮಾ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅತಿ ಹೆಚ್ಚು ರೇಟಿಂಗ್ ಅಂಕಗಳನ್ನು ಪಡೆದ ಎಡಗೈ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇನ್ನೂ 13 ರೇಟಿಂಗ್ ಅಂಕಗಳನ್ನು ಗಳಿಸಿದರೆ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಟಿ20 ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಇಂಗ್ಲೆಂಡ್‌ನ ಡೇವಿಡ್ ಮಲನ್ 2020 ರಲ್ಲಿ 919 ರೇಟಿಂಗ್ ಪಾಯಿಂಟ್ ಪಡೆದು ದಾಖಲೆ ಬರೆದಿದ್ದರು. ಇದೀಗ ಅಭಿಷೇಕ್ಗೆ ಆ ದಾಖಲೆ ಮುರಿಯುವ ಅವಕಾಶವಿದೆ.

ಅಭಿಷೇಕ್ ಶರ್ಮಾ ಏಷ್ಯಾಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ 173 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 12 ಸಿಕ್ಸರ್‌ಗಳು ಮತ್ತು 17 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಫಾರ್ಮ್ ಅನ್ನು ಹೀಗೇ ಮುಂದುವರಿಸಿದರೆ ಅತ್ಯಧಿಕ ರೇಟಿಂಗ್ ಪಾಯಿಂಟ್ ಪಡೆದ ದಾಖಲೆ ಬರೆಯಲಿದ್ದಾರೆ.

ಟಿ20 ಶ್ರೇಯಾಂಕದಲ್ಲಿ ಭಾರತ ತಂಡದ ಆಟಗಾರರು ಪಾರುಪತ್ಯ ಮುಂದುವರೆದಿದ್ದು, ಅಭಿಷೇಕ್ ಶರ್ಮಾ ನಂ. 1 ಸ್ಥಾನದಲ್ಲಿದ್ದರೆ, ತಿಲಕ್ ವರ್ಮಾ 3ನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್‌ನಲ್ಲಿ ವರುಣ್ ಚಕ್ರವರ್ತಿ ನಂ. 1 ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.




