- Kannada News Photo gallery Cricket photos Arshdeep Singh Unfollows Punjab Kings: Mega Auction Shock & Future Speculation
ಪಂಜಾಬ್ ಕಿಂಗ್ಸ್ ಜೊತೆಗಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಅರ್ಷ್‌ದೀಪ್ ಸಿಂಗ್..!
Arshdeep Singh Unfollows Punjab Kings: ಪಂಜಾಬ್ ಕಿಂಗ್ಸ್ ತಂಡವು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅರ್ಷದೀಪ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಇದರಿಂದಾಗಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅರ್ಷದೀಪ್ ಬೇರೆ ತಂಡ ಸೇರಬಹುದು ಎಂದು ಊಹಿಸಲಾಗುತ್ತಿದೆ. ಈ ನಡುವೆ ಅರ್ಷದೀಪ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಅನ್‌ಫಾಲೋ ಮಾಡಿದ್ದು ಇದಕ್ಕೆ ಪುಷ್ಟಿ ನೀಡುತ್ತದೆ.
Updated on: Nov 07, 2024 | 2:49 PM

ಎಲ್ಲಾ ಐಪಿಎಲ್ ಫ್ರಾಂಚೈಸಿಗಳಂತೆ, ಪಂಜಾಬ್ ಕಿಂಗ್ಸ್ ಕೂಡ ತಮ್ಮ ಧಾರಣ ಪಟ್ಟಿಯನ್ನು ಅಕ್ಟೋಬರ್ 31 ರಂದು ಬಿಡುಗಡೆ ಮಾಡಿತ್ತು. ಆದರೆ ತನ್ನ ಪಟ್ಟಿಯಲ್ಲಿ ಕೇವಲ ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನು ಹೆಸರಿಸಿದ್ದ ಪಂಜಾಬ್, ಇಡೀ ಐಪಿಎಲ್ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈ ಮೊದಲು ತಂಡದಲ್ಲಿ ಯಾರೆಲ್ಲ ಉಳಿದುಕೊಳ್ಳಲಿದ್ದಾರೆ ಎಂಬ ಊಹೆಯನ್ನು ಅಭಿಮಾನಿಗಳು ಮಾಡಿಕೊಂಡಿದ್ದರೋ, ಆ ಊಹೆಯನ್ನು ಪಂಜಾಬ್ ಹುಸಿಗೊಳಿಸಿತ್ತು.

ತನ್ನ ಧಾರಣ ಪಟ್ಟಿಯಲ್ಲಿ ಇಬ್ಬರು ಅನ್ಕ್ಯಾಪ್ಡ್ ಆಟಗಾರರಾದ ಶಶಾಂಕ್ ಸಿಂಗ್ ಅವರನ್ನು ಅತ್ಯಧಿಕ 5.5 ಕೋಟಿ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅವರನ್ನು 4 ಕೋಟಿ ರೂಗಳ ಅಲ್ಪ ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಂಡಿತ್ತು. ಈ ಮೂಲಕ ಪ್ರೀತಿ ಜಿಂಟಾ ಒಡೆತನದ ಫ್ರಾಂಚೈಸಿ ಅತ್ಯಧಿಕ 110.5 ಕೋಟಿ ರೂಪಾಯಿಗಳೊಂದಿಗೆ ಮೆಗಾ ಹರಾಜಿಗೆ ಪ್ರವೇಶಿಸಲಿದೆ.

ಈ ಮೊದಲೇ ತಿಳಿಸಿದಂತೆ ಅರ್ಷದೀಪ್ ಸಿಂಗ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿರುವ ಫ್ರಾಂಚೈಸಿಯ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ ಮೆಗಾ ಹರಾಜಿನಲ್ಲಿ ಅರ್ಷದೀಪ್ ಅವರನ್ನು ಪಂಜಾಬ್, ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮತ್ತೆ ತಂಡಕ್ಕೆ ಆಯ್ಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಅದರ ಭರವಸೆ ಸಂಪೂರ್ಣವಾಗಿ ಹುಸಿಯಾಗಿದೆ.

ಸತ್ಯ ಏನೆಂದರೆ, ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು, ಅರ್ಷದೀಪ್ ಸಿಂಗ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಅನ್‌ಫಾಲೋ ಮಾಡಿದ್ದಾರೆ. ಅರ್ಷದೀಪ್ ಅವರು ಪಂಜಾಬ್‌ನ ಖಾತೆಯನ್ನು ಅನ್‌ಫಾಲೋ ಮಾಡಿರುವುದು ಮಾತ್ರವಲ್ಲದೆ ಈ ಫ್ರಾಂಚೈಸಿಯೊಂದಿಗಿನ ಒಡನಾಟವನ್ನು ಸೂಚಿಸುವ ಎಲ್ಲಾ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ.

ಇದರರ್ಥ ಅರ್ಷದೀಪ್ ಹಾಗೂ ಪಂಜಾಬ್ ಫ್ರಾಂಚೈಸಿ ನಡುವೆ ಯಾವುದು ಸರಿ ಇಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ನವೆಂಬರ್ 24-25 ರಂದು ಸೌದಿ ಅರೇಬಿಯಾದಲ್ಲಿ ನಡೆಯಲ್ಲಿರುವ ಮೆಗಾ ಹರಾಜಿನಲ್ಲಿ ಅರ್ಷದೀಪ್ ಮೇಲೆ ಪಂಜಾಬ್ ಫ್ರಾಂಚೈಸಿ ಯಾವುದೇ ಕಾರಣಕ್ಕೂ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಅವರನ್ನು ಖರೀದಿಸಲು ಹೋಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

2019 ರಲ್ಲಿ ಪಂಜಾಬ್ ಕಿಂಗ್ಸ್ ಸೇರುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್, ಇಲ್ಲಿಯವರೆಗೆ ತಂಡದ ಪರ 65 ಪಂದ್ಯಗಳನ್ನು ಆಡಿದ್ದು, 76 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅಲ್ಲದೆ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ಅರ್ಷದೀಪ್ ಅದೆಷ್ಟೋ ಪಂದ್ಯಗಳಲ್ಲಿ ಪಂಜಾಬ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ.

ವಾಸ್ತವವಾಗಿ ಪಂಜಾಬ್‌ನ ಧಾರಣ ಪಟ್ಟಿಯ ಸಿದ್ಧತೆಯ ವೇಳೆ ಅರ್ಷ್‌ದೀಪ್ ಅವರಿಗೆ 18 ಕೋಟಿ ನೀಡಲು ಫ್ರಾಂಚೈಸಿಗೆ ಇಷ್ಟವಿರಲಿಲ್ಲ. ಹೀಗಾಗಿ ಅರ್ಷದೀಪ್ ಅವರನ್ನು ಇನ್ನು ಕಡಿಮೆ ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ. ಆದರೆ ಅರ್ಷದೀಪ್ ಇದಕ್ಕೆ ಒಪ್ಪದ ಕಾರಣ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂಬ ಸುದ್ದಿ ಇದೆ.

ಆದರೆ ಈಗ ಹರಿದಾಡುತ್ತಿರುವ ವದಂತಿಗಳು ಏನೇ ಇರಲಿ, ಅರ್ಷದೀಪ್ ಸಿಂಗ್ ಪ್ರಸ್ತುತ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಫಾಲೋ ಮಾಡದಿರುವುದು ಮುಂದಿನ ಸೀಸನ್ನಲ್ಲಿ ಅವರು ಬೇರೆ ತಂಡದ ಪರ ಆಡುವುದನ್ನು ಕಾಣಬಹುದು ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.



















