ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ತಮ್ಮ ನಿವೃತ್ತಿ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಾರ್ನರ್, ಮುಂದಿನ ವರ್ಷ ನಿವೃತ್ತಿ ನೀಡುವುದಾಗಿ ಘೋಷಿಸಿದ್ದಾರೆ.
2024 ರಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ್ ನಡುವಣ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಒಂದು ಪಂದ್ಯವು ಸಿಡ್ನಿ ಮೈದಾನದಲ್ಲಿ ನಡೆಯಲಿದ್ದು, ಆ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಬಯಸಿದ್ದೇನೆ ಎಂದು ವಾರ್ನರ್ ತಿಳಿಸಿದ್ದಾರೆ.
ಇದಾಗ್ಯೂ ಸೀಮಿತ ಓವರ್ಗಳಲ್ಲಿ ಮುಂದುವರೆಯುವುದಾಗಿ ತಿಳಿಸಿದರುವ ವಾರ್ನರ್, 2024 ರಲ್ಲಿ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿಯುವ ಇರಾದೆ ಹೊಂದಿದ್ದೇನೆ. ಆ ವಿಶ್ವಕಪ್ನ ಆಸ್ಟ್ರೇಲಿಯಾ ತಂಡದ ಕೊನೆಯ ಪಂದ್ಯ ನನ್ನ ಅಂತಿಮ ಪಂದ್ಯವಾಗಿರಲಿದೆ ಎಂದಿದ್ದಾರೆ.
ನಾನು ನನ್ನ ಕುಟುಂಬಕ್ಕೆ ಋಣಿಯಾಗಿದ್ದೇನೆ. ನನಗೆ WTC ನಲ್ಲಿ ಮತ್ತು ಆ್ಯಶಸ್ ಸರಣಿಯಲ್ಲಿ ರನ್ ಗಳಿಸಲು ಸಾಧ್ಯವಾದರೆ ಹಾಗೂ ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ್ ವಿರುದ್ಧ ಆಡಲು ಅವಕಾಶ ಪಡೆದರೆ, ವೆಸ್ಟ್ ಇಂಡೀಸ್ ಸರಣಿಯನ್ನು ಆಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತೇನೆ.
ಈ ಮೂಲಕ ಮುಂದಿನ ಜನವರಿ 3 ರಿಂದ ಶುರುವಾಗಲಿರುವ ಪಾಕ್ ವಿರುದ್ಧದ ಪಂದ್ಯದದೊಂದಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ವಾರ್ನರ್ ಸ್ಪಷ್ಟಪಡಿಸಿದ್ದಾರೆ.
ಸದ್ಯ 36 ವರ್ಷದ ಡೇವಿಡ್ ವಾರ್ನರ್ 102 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 187 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 8158 ರನ್ ಕಲೆಹಾಕಿದ್ದಾರೆ.
ಇದೀಗ ಟೀಮ್ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಸಜ್ಜಾಗುತ್ತಿರುವ ವಾರ್ನರ್ ಅವರ ಮುಂದಿನ ಗುರಿ ಪ್ರತಿಷ್ಠಿತ ಆ್ಯಶಸ್ ಸರಣಿ. ಜೂನ್ 16 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ತಂಡಕ್ಕೆ ಗೆಲುವು ತಂದುಕೊಡುವ ಆತ್ಮ ವಿಶ್ವಾಸದಲ್ಲಿದ್ದಾರೆ ಹಿರಿಯ ಆಟಗಾರ.
Published On - 4:07 pm, Sat, 3 June 23