- Kannada News Photo gallery Cricket photos Champions Trophy 2025 Pat Cummins Josh Hazelwood ruled out due to injury
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾ ತಂಡದಿಂದ ಐವರು ಸ್ಟಾರ್ ಆಟಗಾರರು ಔಟ್
Champions Trophy 2025: 2025 ರ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಟೂರ್ನಿ ಆರಂಭವಾಗುವ ಮುನ್ನ ಆಸ್ಟ್ರೇಲಿಯಾ ತಂಡದ 5 ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಮಾರ್ಷ್, ವೇಗಿ ಜೋಶ್ ಹ್ಯಾಜಲ್‌ವುಡ್, ಕ್ಯಾಮರೂನ್ ಗ್ರೀನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಹೊರಗುಳಿದಿದ್ದಾರೆ.
Updated on: Feb 06, 2025 | 4:11 PM

2025 ರ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು ಎರಡು ವಾರಗಳಿಗಿಂತ ಕಡಿಮೆ ಸಮಯ ಉಳಿದಿದೆ. ಆದರೆ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ ಒಂದಾದ ಮೇಲೆ ಒಂದರಂತೆ ಆಘಾತಗಳು ಎದುರಾಗುತ್ತಿವೆ. ಈ ಐಸಿಸಿ ಟೂರ್ನಿಯಿಂದ ಆಸ್ಟ್ರೇಲಿಯಾ ತಂಡದ ಐವರು ಸ್ಟಾರ್ ಆಟಗಾರರು ಹೊರಗುಳಿದಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಆಸೀಸ್ ಪಡೆ ಸಂಕಷ್ಟಕ್ಕೆ ಸಿಲುಕಿದೆ.

ಆಸ್ಟ್ರೇಲಿಯಾ ತಂಡದ ಐವರು ಸ್ಟಾರ್ ಆಟಗಾರರಾದ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಮಾರ್ಷ್, ವೇಗಿ ಜೋಶ್ ಹ್ಯಾಜಲ್‌ವುಡ್, ಕ್ಯಾಮರೂನ್ ಗ್ರೀನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಇದರಲ್ಲಿ ನಾಲ್ವರು ಆಟಗಾರರು ಇಂಜುರಿಗೊಂಡಿದ್ದರೆ, ಮಾರ್ಕಸ್ ಸ್ಟೊಯಿನಿಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಿಂದ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರನ್ನು ಹೊರಗಿಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತವಾಗಿ ಘೋಷಿಸಿದೆ. ಈ ಇಬ್ಬರೂ ಆಟಗಾರರು ಟೀಂ ಇಂಡಿಯಾ ವಿರುದ್ಧ ಆಡಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಈ ಇಬ್ಬರೂ ಆಟಗಾರರು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿಲ್ಲ.

ನಾಯಕ ಪ್ಯಾಟ್ ಕಮ್ಮಿನ್ಸ್ ಪಾದದ ಗಾಯದಿಂದ ಬಳಲುತ್ತಿದ್ದರೆ, ಹ್ಯಾಜಲ್‌ವುಡ್ ಇನ್ನೂ ತನ್ನ ಕಾಲಿನ ಗಾಯದಿಂದ ಚೇತರಿಸಿಕೊಂಡಿಲ್ಲ. ದುರದೃಷ್ಟವಶಾತ್ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಮಾರ್ಷ್ ಗಾಯಗಳಿಂದ ಬಳಲುತ್ತಿದ್ದು, ಚಾಂಪಿಯನ್ಸ್ ಟ್ರೋಫಿಗೆ ಸಮಯಕ್ಕೆ ಸರಿಯಾಗಿ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ.

ಮತ್ತೊಂದೆಡೆ, ತಂಡದ ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಇಂದು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸ್ಟೊಯಿನಿಸ್ ಅವರು ಟಿ20 ಕ್ರಿಕೆಟ್‌ನತ್ತ ಗಮನ ಹರಿಸಲು ಬಯಸಿದ್ದು, ಈ ಕಾರಣಕ್ಕಾಗಿ ಏಕದಿನ ಮಾದರಿಗೆ ವಿದಾಯ ಹೇಳುತ್ತಿರುವುದಾಗಿ ಸ್ಟೊಯಿನಿಸ್ ಮಾಹಿತಿ ನೀಡಿದ್ದಾರೆ.



















