- Kannada News Photo gallery Cricket photos Charlie Dean has replaced Sophie Molineux in the RCB team for WPL 2025
RCB ತಂಡಕ್ಕೆ ಇಂಗ್ಲೆಂಡ್ ಆಟಗಾರ್ತಿ ಎಂಟ್ರಿ
WPL 2025 RCB Squad: ವುಮೆನ್ಸ್ ಪ್ರೀಮಿಯರ್ ಲೀಗ್ 2025 ಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 18 ಸದಸ್ಯರ ಬಳಗವನ್ನು ರೂಪಿಸಿಕೊಂಡಿದೆ. ಈ ಬಾರಿ ಆರ್ಸಿಬಿ ತಂಡಕ್ಕೆ ಒಟ್ಟು 6 ಹೊಸ ಆಟಗಾರ್ತಿಯರು ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ ನಾಲ್ವರು ಹರಾಜಿನ ಮೂಲಕ ಆಯ್ಕೆಯಾದರೆ, ಒಬ್ಬರನ್ನು ಹರಾಜಿಗೂ ಮುನ್ನ ಟ್ರೇಡ್ ಮಾಡಿಕೊಳ್ಳಲಾಗಿದೆ. ಇನ್ನು ಚಾರ್ಲಿ ಡೀನ್ ಬದಲಿ ಆಟಗಾರ್ತಿಯಾಗಿ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Updated on: Jan 16, 2025 | 2:10 PM

ವುಮೆನ್ಸ್ ಪ್ರೀಮಿಯರ್ ಲೀಗ್ (WPL 2025) ಸೀಸನ್-3 ಆರಂಭಕ್ಕೂ ಮುನ್ನವೇ RCB ತಂಡದ ಸ್ಟಾರ್ ಆಟಗಾರ್ತಿ ಸೋಫಿ ಮೊಲಿನಿಯಕ್ಸ್ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೊಲಿನಿಯಕ್ಸ್ ಇಡೀ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಆರ್ಸಿಬಿ ಬದಲಿ ಆಟಗಾರ್ತಿಯನ್ನು ಆಯ್ಕೆ ಮಾಡಿಕೊಂಡಿದೆ.

ಅದರಂತೆ ಇದೀಗ ಸೋಫಿ ಮೊಲಿನಿಯಕ್ಸ್ ಸ್ಥಾನದಲ್ಲಿ ಆರ್ಸಿಬಿ ತಂಡಕ್ಕೆ ಇಂಗ್ಲೆಂಡ್ ಆಟಗಾರ್ತಿ ಚಾರ್ಲಿ ಡೀನ್ ಎಂಟ್ರಿ ಕೊಟ್ಟಿದ್ದಾರೆ. 24 ವರ್ಷದ ಚಾರ್ಲಿ ಡೀನ್ ಈ ಹಿಂದೆ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಇದೀಗ ಸೋಫಿ ಮೊಲಿನಿಯಕ್ಸ್ ಹೊರಬಿದ್ದ ಬೆನ್ನಲ್ಲೇ ಆರ್ಸಿಬಿ, ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್ರೌಂಡರ್ನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಇಂಗ್ಲೆಂಡ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳ ಪರ ಕಣಕ್ಕಿಳಿದಿರುವ ಚಾರ್ಲಿ ಡೀನ್ಗೆ ಇದು ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಎಂಬುದು ವಿಶೇಷ.

ಇಂಗ್ಲೆಂಡ್ ಪರ 36 ಟಿ20 ಪಂದ್ಯಗಳನ್ನಾಡಿರುವ ಚಾರ್ಲಿ ಡೀನ್ ಈವರೆಗೆ 46 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರೊಂದಿಗೆ 12 ಇನಿಂಗ್ಸ್ಗಳಲ್ಲಿ 135 ರನ್ ಕಲೆಹಾಕಿದ್ದಾರೆ. ಹೀಗಾಗಿ ಸೋಫಿ ಮೊಲಿನಿಯಕ್ಸ್ ಬದಲಿಯಾಗಿ ಚಾರ್ಲಿ ಡೀನ್ ಆರ್ಸಿಬಿ ತಂಡದ ಉತ್ತಮ ಆಯ್ಕೆ ಎನ್ನಬಹುದು.

RCB ಮಹಿಳಾ ತಂಡ: ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಡಿವೈನ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಏಕ್ತಾ ಬಿಷ್ತ್, ಕನಿಕಾ ಅಹುಜಾ, ಡೇನಿಯಲ್ ವ್ಯಾಟ್, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘವಿ ಬಿಸ್ತ್, ಜಾಗರವಿ ಪವಾರ್, ಚಾರ್ಲಿ ಡೀನ್.
























