CPL 2021: ಯುಎಸ್ಎ ವೇಗಿಯ ಮಿಂಚಿನ ಬೌಲಿಂಗ್: ಐಪಿಎಲ್ನಲ್ಲಿ ಮತ್ತೆ ಚಾನ್ಸ್ ಸಿಗುವ ಸಾಧ್ಯತೆ
CPL 2021, Ali Khan: ಈ ಭರ್ಜರಿ ಬೌಲಿಂಗ್ ಅಲಿ ಖಾನ್ಗೆ ಐಪಿಎಲ್ ಬಾಗಿಲು ತೆರೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಅಲಿ ಖಾನ್ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದರು.
Ali Khan
Follow us
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರ ಸಿಡಿಲಬ್ಬರದ ನಡುವೆ ಯುನೈಟೆಡ್ ಸ್ಟೇಟ್ಸ್ ಅಮೆರಿಕದ ವೇಗಿ ಅಲಿ ಖಾನ್ ತಮ್ಮ ಮಿಂಚಿನ ಬೌಲಿಂಗ್ ದಾಳಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 19ನೇ ಪಂದ್ಯದಲ್ಲಿ ಟಾಸ್ ಗೆದ್ದ ಜಮೈಕಾ ತಲ್ಲವಾಸ್ ತಂಡ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಲಿಂಡ್ಲ್ ಸಿಮನ್ಸ್ ಭರ್ಜರಿ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಪೊಲಾರ್ಡ್ 4 ಭರ್ಜರಿ ಸಿಕ್ಸರ್ನೊಂದಿಗೆ 18 ಎಸೆತಗಳಲ್ಲಿ 39 ರನ್ಗಳಿಸಿ ತಂಡದ ಮೊತ್ತವನ್ನು 167ಕ್ಕೆ ತಂದು ನಿಲ್ಲಿಸಿದರು.
ಈ ಸ್ಪರ್ಧಾತ್ಮಕ ಗುರಿ ಪಡೆದ ಜಮೈಕಾ ತಲ್ಲವಾಸ್ ತಂಡಕ್ಕೆ ಎರಡನೇ ಓವರ್ನಲ್ಲೇ ಅಮೆರಿಕ ವೇಗಿ ಅಲಿ ಖಾನ್ ಆಘಾತ ನೀಡಿದರು. ಹೈದರ್ ಅಲಿ ವಿಕೆಟ್ ಉರುಳಿಸಿದ ಅಲಿ ಖಾನ್ ನೈಟ್ ರೈಡರ್ಸ್ ತಂಡಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು. ಇದರ ಬೆನ್ನಲ್ಲೇ ಕೆನ್ನರ್ ಲೆವಿಸ್ಗೂ ಪೆವಿಲಿಯನ್ ಹಾದಿ ತೋರಿಸಿದರು.
ಆರಂಭದಿಂದಲೇ ಮಾರಕ ದಾಳಿ ಸಂಘಟಿಸಿದ ಅಲಿ ಖಾನ್ 3 ಓವರ್ ಗಳಲ್ಲಿ ಕೇವಲ 6 ರನ್ ಮಾತ್ರ ನೀಡಿದರು. ಅಷ್ಟೇ ಅಲ್ಲದೆ ಪ್ರಮುಖ 4 ವಿಕೆಟ್ ಉರುಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅದರಂತೆ ಜಮೈಕಾ ತಲ್ಲವಾಸ್ ತಂಡವು ಕೇವಲ 92 ರನ್ಗಳಿಗೆ ಆಲೌಟ್ ಆಯಿತು. ಇತ್ತ ಟ್ರಿನ್ಬಾಗೊ ನೈಟ್ ರೈಡರ್ಸ್ 75 ರನ್ಗಳ ಭರ್ಜರಿ ಜಯ ಸಾಧಿಸಿತು. ತಮ್ಮ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದ್ದ ಅಲಿ ಖಾನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.
ಇದೀಗ ಈ ಭರ್ಜರಿ ಬೌಲಿಂಗ್ ಅಲಿ ಖಾನ್ಗೆ ಐಪಿಎಲ್ ಬಾಗಿಲು ತೆರೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಅಲಿ ಖಾನ್ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಸಿಪಿಎಲ್ನಲ್ಲಿ ಮತ್ತೊಮ್ಮೆ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಯುಎಸ್ಎ ವೇಗಿಯನ್ನು ಕೆಕೆಆರ್ ತಂಡ ಹೆಚ್ಚುವರಿ ಆಟಗಾರನಾಗಿ ಯುಎಇಗೆ ಕರೆಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಏಕೆಂದರೆ ಟಿಕೆಆರ್ ಹಾಗೂ ಕೆಕೆಆರ್ ತಂಡಗಳು ಒಂದೇ ಫ್ರಾಂಚೈಸಿಯ ಒಡೆತನದಲ್ಲಿದ್ದು, ಹೀಗಾಗಿ ಅಲಿ ಖಾನ್ ಅವರನ್ನು ಅಭ್ಯಾಸಕ್ಕಾಗಿ ಕೆಕೆಆರ್ ಬಳಸಿಕೊಳ್ಳುವ ಸಾಧ್ಯತೆಯಿದೆ.