ರನ್ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಡೇವಿಡ್ ವಾರ್ನರ್
T20 World Record: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಇದೀಗ ಗೇಲ್ ಅವರ ದಾಖಲೆ ಮುರಿಯಲು ಆಸ್ಟ್ರೇಲಿಯನ್ ದಾಂಡಿಗ ಡೇವಿಡ್ ವಾರ್ನರ್ ದಾಂಗುಡಿ ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಗೇಲ್ ದಾಖಲೆಯನ್ನು ಮುರಿಯುವುದು ಖಚಿತ ಎಂದೇ ಹೇಳಬಹುದು.
Updated on: Aug 12, 2025 | 11:53 AM

ಟಿ20 ರನ್ ಸರದಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (David Warner) ಐದನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯನ್ನು (Virat Kohli) ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನ 9ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ವಾರ್ನರ್ 71 ರನ್ಗಳಿಸಿದ್ದರು.

ಈ 71 ರನ್ಗಳೊಂದಿಗೆ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈವರೆಗೆ 418 ಟಿ20 ಇನಿಂಗ್ಸ್ ಆಡಿರುವ ವಾರ್ನರ್ ಒಟ್ಟು 13545 ರನ್ ಕಲೆಹಾಕಿದ್ದು, ಈ ಮೂಲಕ ಟಿ20 ರನ್ ಸರದಾರರ ಪಟ್ಟಿಯಲ್ಲಿ ಟಾಪ್-5 ಗೆ ಎಂಟ್ರಿ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಐದನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಕಿಂಗ್ ಕೊಹ್ಲಿ 397 ಟಿ20 ಪಂದ್ಯಗಳ ಮೂಲಕ ಒಟ್ಟು 13543 ರನ್ ಕಲೆಹಾಕಿದ್ದಾರೆ. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ಗಳಿಸಿ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ ಟಿ20 ಟಾಪ್ ರನ್ ಸರದಾರರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದ್ದರು.

ಇದೀಗ 13545 ರನ್ಗಳೊಂದಿಗೆ ಡೇವಿಡ್ ವಾರ್ನರ್ ಐದನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ದಿ ಹಂಡ್ರೆಡ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ವಾರ್ನರ್ ಮುಂದಿನ ಪಂದ್ಯದಲ್ಲಿ 27 ರನ್ಗಳಿಸಿದರೆ ಪಾಕಿಸ್ತಾನದ ಶೊಯೆಬ್ ಮಲಿಕ್ (13571) ಅವರನ್ನು ಹಿಂದಿಕ್ಕಿ ಟಿ20 ರನ್ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಬಹುದು.

ಅಂದಹಾಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಚುಟುಕು ಕ್ರಿಕೆಟ್ನಲ್ಲಿ 455 ಇನಿಂಗ್ಸ್ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.




