Updated on: Jul 15, 2022 | 11:35 AM
ಲಂಡನ್ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಆಂಗ್ಲರು ಬರೋಬ್ಬರಿ 100 ರನ್ಗಳ ಜಯ ತನ್ನದಾಗಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂತರದ ಸಮಬಲ ಸಾಧಿಸಿದೆ. ಹೀಗಾಗಿ ಮೂರನೇ ಏಕದಿನ ಪಂದ್ಯ ಕುತೂಹಲ ಕೆರಳಿಸಿದೆ.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಪರ ಓಪನರ್ ಗಳಾಗಿ ಕಣಕ್ಕಿಳಿದ ಜೇಸನ್ ರಾಯ್ 33 ಎಸೆತಗಳಲ್ಲಿ 23 ರನ್ ಗಳಿಸಿ ರಾಯ್ ಔಟಾದರು. ಬೈರ್ ಸ್ಟೋ 38 ರನ್ ಗಳಿಸಿದ್ದಾಗ ಚಹಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರೆ, ಲಿಯಾಮ್ ಲಿವಿಂಗ್ ಸ್ಟೋನ್ 33 ರನ್ ಗಳ ಕಾಣಿಕೆ ನೀಡಿದರು.
ಮೊಯೀನ್ ಅಲಿ ಹಾಗೂ ಡೇವಿಡ್ ವಿಲ್ಲೆ ತಂಡದ ರನ್ ಗತಿಯನ್ನು ಏರಿಸಿ ಮೊತ್ತವನ್ನು 200ರ ಗಡಿ ದಾಟಿಸಿದರು. ಅಲಿ 47 ರನ್ ಹಾಗೂ ವಿಲ್ಲೆ 41 ರನ್ ಬಾರಿಸಿದರು. ಆದರೂ ಇಂಗ್ಲೆಂಡ್ 49 ಓವರ್ ನಲ್ಲಿ 246 ರನ್ ಗೆ ಆಲೌಟ್ ಆಯಿತು. ಭಾರತ ಪರ ಚಹಲ್ 4 ವಿಕೆಟ್ ಕಿತ್ತರೆ ಬುಮ್ರಾ ಮತ್ತು ಪಾಂಡ್ಯ ತಲಾ 2 ವಿಕೆಟ್ ಪಡೆದರು.
ಇಂಗ್ಲೆಂಡ್ ನೀಡಿದ 247 ರನ್ ಗಳ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಆಂಗ್ಲರ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 146ಕ್ಕೆ ಸರ್ವಪತನ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ(0) ಹಾಗೂ ಧವನ್(9) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಇಂಜುರಿಯಿಂದ ಗುಣಮುಖರಾಗಿ ಬಂದ ವಿರಾಟ್ ಕೊಹ್ಲಿ ಆಟ 16 ರನ್ಗೆ ಅಂತ್ಯವಾಯಿತು. ರಿಷಬ್ ಪಂತ್ ಕೂಡ ಸೊನ್ನೆ ಸುತ್ತಿದರು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ (27), ಹಾರ್ದಿಕ್ ಪಾಂಡ್ಯ (29), ರವೀಂದ್ರ ಜಡೇಜಾ (29) ಹಾಗೂ ಮೊಹಮ್ಮದ್ ಶಮಿ (23) ಗೆಲುವಿಗೆ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 38.5 ಓವರ್ನಲ್ಲಿ 146 ರನ್ಗೆ ಆಲೌಟ್ ಆಯಿತು.
ಇಂಗ್ಲೆಂಡ್ ಪರ ರೀಸ್ ಟೋಪ್ಲೆ 9.5 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 6 ವಿಕೆಟ್ ಕಿತ್ತರು. ಡೇವಿಡ್ ವಿಲ್ಲಿ, ಕಾರ್ಸ್, ಮೊಯಿನ್ ಹಾಗೂ ಲಿವಿಂಗ್ಸ್ಟೋನ್ ತಲಾ 1 ವಿಕೆಟ್ ತಮ್ಮದಾಗಿಸಿದರು.