ಹೇ ಸಿರಾಜ್.. ನಿಂಗೆ ಬುದ್ದಿ ಇಲ್ವಾ: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನಿಂದ ವಾಗ್ದಾಳಿ
Mohammed Siraj - Travis Head: ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದ್ದರು. ಅತ್ತ ಔಟ್ ಆಗುತ್ತಿದ್ದಂತೆ ಹೆಡ್ ವೆಲ್ ಬೌಲ್ಡ್ ಎಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಸಿರಾಜ್ ತೊಲಗುವಂತೆ ಕೈ ಸನ್ನೆ ಮಾಡಿದ್ದರು.
Updated on: Dec 10, 2024 | 10:31 AM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ. ಈ ಸರಣಿಯ ಮೊದಲ ಪಂದ್ಯವು ವಾಗ್ದಾಳಿಗೆ ಸೀಮಿತವಾಗಿದ್ದರೆ, ದ್ವಿತೀಯ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಅದರಲ್ಲೂ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು.

ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದ್ದರು. ಅತ್ತ ಔಟ್ ಆಗುತ್ತಿದ್ದಂತೆ ಹೆಡ್ ವೆಲ್ ಬೌಲ್ಡ್ ಎಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಸಿರಾಜ್ ತೊಲಗುವಂತೆ ಕೈ ಸನ್ನೆ ಮಾಡಿದ್ದರು.

ಮೊಹಮ್ಮದ್ ಸಿರಾಜ್ ಅವರ ಈ ನಡೆಯನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಪ್ರಶ್ನಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾತನಾಡಿದ ಶ್ರೀಕಾಂತ್ ಟೀಮ್ ಇಂಡಿಯಾ ವೇಗಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದು ಕೂಡ ಏಕವಚನ ಪ್ರಯೋಗಿಸುವ ಮೂಲಕ ಎಂಬುದು ಅಚ್ಚರಿ.

ಹೇ ಸಿರಾಜ್, ನಿನಗೆ ಬುದ್ದಿ ಇಲ್ಲವೇ? ಹುಚ್ಚೇನಾದ್ರು ಹಿಡಿದಿದೆಯಾ?... ಟ್ರಾವಿಸ್ ಹೆಡ್ ನಿಮ್ಮನ್ನ ಬೆಂಡೆತ್ತಿದ್ದಾರೆ. 140 ಎಸೆತಗಳಲ್ಲಿ ಅನಾಯಾಸವಾಗಿ ಸಿಕ್ಸ್-ಫೋರ್ಗಳನ್ನು ಹೊಡೆದಿದ್ದಾರೆ. ಇದಾಗ್ಯೂ ನೀ ಅವರನ್ನು ಟಾರ್ಗೆಟ್ ಮಾಡ್ತಿದ್ದೀಯಾ ಎಂಬುದೇ ಅಚ್ಚರಿ. ಇದನ್ನೆಲ್ಲಾ ಸ್ಲೆಡ್ಜಿಂಗ್ ಎಂದು ಕರೆಯುತ್ತಾರೆಯೇ? ಎಂದು ಕ್ರಿಸ್ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಒಬ್ಬ ಬ್ಯಾಟರ್ 140 ಸ್ಕೋರ್ ಗಳಿಸಿದ್ದಾರೆ. ಅವರಿಗೆ ಕ್ರೆಡಿಟ್ ನೀಡಿ ಮತ್ತು ಅವರ ಆಟವನ್ನು ಶ್ಲಾಘಿಸಿ. ಅತ್ಯುತ್ತಮ ಬ್ಯಾಟಿಂಗ್ ಎಂದೇಳುವ ಬದಲು ನೀವು ತೊಲಗುವಂತೆ ಸೂಚಿಸುತ್ತಿದ್ದೀರಾ? ನೀವು ಹೆಡ್ನನ್ನು 10 ಅಥವಾ 0 ಕ್ಕೆ ಔಟ್ ಮಾಡಿಲ್ಲ. ನಿಮ್ಮ ವಿರುದ್ಧ ಬರೋಬ್ಬರಿ 141 ಎಸೆತಗಳಲ್ಲಿ 140 ರನ್ ಬಾರಿಸಿದ್ದಾರೆ.

ಅದರಲ್ಲೂ ರವಿಚಂದ್ರನ್ ಅಶ್ವಿನ್ ಅವರನ್ನು ಟ್ರಾವಿಸ್ ಹೆಡ್ ಸ್ಪಿನ್ನರ್ ಎಂದೇ ಪರಿಗಣಿಸಿಲ್ಲ. ಡ್ಯಾನ್ಸ್ ಮಾಡುತ್ತಾ ಅಶ್ವಿನ್ ಅವರ ಎಸೆತಗಳನ್ನು ಚಚ್ಚುತ್ತಿದ್ದರು. ಇಷ್ಟೆಲ್ಲಾ ಆಗಿದ್ದರೂ ನೀವು ಹೆಡ್ ವಿಕೆಟ್ ಪಡೆದ್ಮೇಲೆ ತೊಲಗುವಂತೆ ಸೂಚಿಸುತ್ತಿದ್ದೀರಾ ಎಂದರೆ ಏನಾರ್ಥ? ನಿಮಗೆ ಬುದ್ದಿ ಇಲ್ವಾ? ಎಂದು ಮೊಹಮ್ಮದ್ ಸಿರಾಜ್ ವಿರುದ್ಧ ಕ್ರಿಸ್ ಶ್ರೀಕಾಂತ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈ ಘಟನೆ ಸಂಬಂಧ, ನೀತಿ ಸಂಹಿತೆಯ ಉಲ್ಲಂಘನೆಗಾಗಿ ಮೊಹಮ್ಮದ್ ಸಿರಾಜ್ ಅವರಿಗೆ ಐಸಿಸಿ ಪಂದ್ಯ ಶುಲ್ಕದ 20% ರಷ್ಟು ದಂಡವನ್ನು ವಿಧಿಸಿದೆ. ಹಾಗೆಯೇ ಒಂದು ಡಿಮೆರಿಟ್ ಅಂಕ ನೀಡಿದೆ. ಅತ್ತ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ನಿಯಮ ಉಲ್ಲಂಘನೆಗಾಗಿ ಒಂದು ಡಿಮೆರಿಟ್ ಅಂಕ ನೀಡಲಾಗಿದೆ.









