- Kannada News Photo gallery Cricket photos Gautam Gambhir avoids naming Virat Kohli, Rohit Sharma for ODI World Cup 2027
ವಿಶ್ವಕಪ್ಗೆ ರೋಹಿತ್, ವಿರಾಟ್ ಆಯ್ಕೆಯಾಗಲ್ವಾ? ಅಚ್ಚರಿ ಮೂಡಿಸಿದ ಗಂಭೀರ್ ಹೇಳಿಕೆ
Virat Kohli - Rohit Sharma: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದರೆ, ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದಾಗ್ಯೂ ಈ ಇಬ್ಬರು ದಿಗ್ಗಜರ ಏಕದಿನ ವಿಶ್ವಕಪ್ ಕನಸು ಅನಿಶ್ಚಿತತೆಯಿಂದ ಕೂಡಿದೆ. ಇದಕ್ಕೆ ಸಾಕ್ಷಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆ.
Updated on: Dec 08, 2025 | 7:09 AM

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿಯಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆ. ಅದು ಕೂಡ ಇಬ್ಬರು ದಿಗ್ಗಜರ ಅದ್ಭುತ ಪ್ರದರ್ಶನ ಬಳಿಕ ಎಂಬುದೇ ಅಚ್ಚರಿ.

ರೋಹಿತ್ ಶರ್ಮಾ ಕಳೆದ 5 ಇನಿಂಗ್ಸ್ಗಳಲ್ಲಿ ಕಲೆಹಾಕಿದ ಸ್ಕೋರ್ 73, 121*, 57, 14, 75. ಅಂದರೆ ಐದು ಇನಿಂಗ್ಸ್ಗಳಲ್ಲಿ ಒಂದು ಶತಕ ಹಾಗೂ 3 ಅರ್ಧಶತಕಗಳು ಮೂಡಿಬಂದಿವೆ. ಹೀಗಾಗಿ ಹಿಟ್ಮ್ಯಾನ್ ಅವರನ್ನು ಏಕದಿನ ತಂಡದಿಂದ ಸದ್ಯಕ್ಕಂತು ಹೊರಗಿಡಲು ಸಾಧ್ಯವಿಲ್ಲ.

ವಿರಾಟ್ ಕೊಹ್ಲಿ ಕೊನೆಯ 5 ಏಕದಿನ ಇನಿಂಗ್ಸ್ಗಳಿಂದ ಕಲೆಹಾಕಿದ ಸ್ಕೋರ್ 0, 74, 135, 102, 65. ಅಂದರೆ ಕಳೆದ ಐದು ಇನಿಂಗ್ಸ್ಗಳಲ್ಲಿ ಕೊಹ್ಲಿ 2 ಶತಕ ಹಾಗೂ 2 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 302 ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಹೀಗಾಗಿ ಕೊಹ್ಲಿಯನ್ನು ಸಹ ಏಕದಿನ ತಂಡದಿಂದ ಹೊರಗಿಡಲು ಸಾಧ್ಯವೇ ಇಲ್ಲ ಎನ್ನಬಹುದು.

ಇದಾಗ್ಯೂ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಆಡುವ ಬಗ್ಗೆ ಯಾವುದೇ ಸಕರಾತ್ಮಕ ಹೇಳಿಕೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಮಾತನಾಡಿದ ಗಂಭೀರ್ಗೆ ಕೊಹ್ಲಿ-ರೋಹಿತ್ ಅವರ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ಪ್ರಶ್ನೆ ಮುಂದಿಡಲಾಗಿದೆ.

ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ್, 2027ರ ಏಕದಿನ ವಿಶ್ವಕಪ್ಗೆ ಇನ್ನೂ ಸುಮಾರು 2 ವರ್ಷ ಇದೆ. ನಾವು ವರ್ತಮಾನದಲ್ಲಿ ಇರುವುದನ್ನು ಕಲಿಯಬೇಕು. ಟೀಮ್ ಇಂಡಿಯಾಗೆ ಬರುತ್ತಿರುವ ಹೊಸ ಹುಡುಗರು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಶುಭ್ಮನ್ ಗಿಲ್ ಬದಲಿಗೆ ಆಯ್ಕೆಯಾದ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದಾರೆ. ಶ್ರೇಯಸ್ ಅಯ್ಯರ್ ಬದಲಿಗೆ ಬಂದ ರುತುರಾಜ್ ಗಾಯಕ್ವಾಡ್ ಕೂಡ ಸೆಂಚುರಿ ಬಾರಿಸಿದ್ದಾರೆ. ಹೀಗೆ ಯುವ ಆಟಗಾರರು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಭವಿಷ್ಯ ಅವಕಾಶಗಳಿಗಾಗಿ ಈ ಆಟಗಾರರು ಕೂಡ ಸಿದ್ಧರಾಗಿರಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಇದಾಗ್ಯೂ ಗಂಭೀರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ಉತ್ತರಿಸಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಆಡಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.




